ವ್ಯಾಸ ಮಹಾಭಾರತ – ಭಾಗ 36 ಆದಿಪರ್ವ (ಸಂಭವಪರ್ವ)

ವೈಶಂಪಾಯನರು ದೇವತೆಗಳ ಮತ್ತು ಅಸುರರ ಬಗ್ಗೆ ಹೇಳುತ್ತಿರುವಾಗ ಜನಮೇಜಯನಿಗೆ ಅಸುರರ ಮತ್ತು ದೇವತೆಗಳ ಜನ್ಮದ ಬಗ್ಗೆಯೂ ತಿಳಿದುಕೊಳ್ಳುವ ಮನಸ್ಸಾಯಿತು. ಇದನ್ನೇ ಆತ ವೈಶಂಪಾಯನರಲ್ಲಿ ಹೇಳುತ್ತಾನೆ. ಆಗ ವೈಶಂಪಾಯನರು ಅವರೆಲ್ಲರ ಕತೆಯನ್ನ ಹೇಳಲು ಪ್ರಾರಂಭಿಸುತ್ತಾರೆ.

“ಜನಮೇಜಯ

ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು

ಈ ಆರು ಮಹರ್ಷಿಗಳು ಬ್ರಹ್ಮನ ಮಾನಸ ಪುತ್ರರು. ಅವರಲ್ಲಿ ಮರೀಚಿ ಮಹರ್ಷಿಯ ಪುತ್ರನೇ ಕಶ್ಯಪ. ಕಶ್ಯಪನಿಂದಲೇ ಮುಂದಕ್ಕೆ ಈ ಪ್ರಜಾಕೋಟಿಯು ಉತ್ಪತ್ತಿಯಾಯಿತು. ದಕ್ಷಬ್ರಹ್ಮನಿಗೆ ಐವತ್ತು ಮಂದಿ ಹೆಣ್ಣು ಮಕ್ಕಳು. ಅವರಲ್ಲಿ ಅದಿತಿ, ದಿತಿ, ದನು, ಕಾಲಾ, ದನಾಯು, ಸಿಂಹಿಕಾ, ಕ್ರೋಧಾ(ಕ್ರೂರಾ), ಪ್ರಾಧಾ, ವಿಶ್ವಾ, ವಿನತಾ, ಕಪಿಲಾ, ಮುನಿ ಮತ್ತು ಕದ್ರು ಎಂಬ ಹದಿಮೂರು ಹೆಣ್ಣು ಮಕ್ಕಳು ಕಶ್ಯಪನನ್ನ ಮದುವೆಯಾಗಿ ಹಲವಾರು ಮಕ್ಕಳನ್ನ ಪಡೆದರು.

ಕಶ್ಯಪನಿಗೆ ಅದಿತಿಯಿಂದ ಭುವನೇಶ್ವರರಾದ ದ್ವಾದಶಾದಿತ್ಯರು ಹುಟ್ಟಿದರು. ಧಾತಾ, ಮಿತ್ರ, ಆರ್ಯಮಾ, ಶಕ್ರ, ವರುಣ, ಅಂಶ, ಭಗ, ವಿವಸ್ವಂತ, ಪೂಷಾ, ಸವಿತಾ, ತ್ವಷ್ಟಾ, ವಿಷ್ಣು ಇವರೇ ದ್ವಾದಶಾದಿತ್ಯರು. ಕಶ್ಯಪರಿಗೆ ದಿತಿಯಿಂದ ಹುಟ್ಟಿದವರೆಲ್ಲರೂ ದೈತ್ಯರೆಂದು ಕರೆಯಲ್ಪಟ್ಟರು. ಅವರಲ್ಲಿ ಹಿರಣ್ಯಕಶಿಪು ಎನ್ನುವವನೊಬ್ಬ. ಆ ಹಿರಣ್ಯಕಶಿಪುವಿಗೆ ಐವರು ಮಕ್ಕಳಿದ್ದರು. ಅವರಲ್ಲಿ ಪ್ರಹ್ಲಾದನೇ ಜ್ಯೇಷ್ಠನು. ಅವನನ್ನನುಸರಿಸಿ ಸಂಹ್ರಾದ, ಅನುಹ್ರಾದ, ಶಿಬಿ, ಬಾಷ್ಕಲ ಇವರುಗಳು ಹುಟ್ಟಿದರು.

ಪ್ರಹ್ಲಾದನಿಗೆ ವಿರೋಚನ, ಕುಂಭ, ನಿಕುಂಭ ಎಂಬ ಮೂವರು ಮಕ್ಕಳು. ವಿರೋಚನನ ಏಕಮಾತ್ರ ಪುತ್ರ ಪ್ರತಾಪಶಾಲಿಯಾದ ಬಲಿ. ಬಲಿಯ ಮಗ ಬಾಣಾಸುರ.

ಕಶ್ಯಪನಿಗೆ ದನುವಿನಲ್ಲಿ ಮೂವತ್ತನಾಲ್ಕು ಮಂದಿ ಮಕ್ಕಳು ಹುಟ್ಟಿದರು. ಅವರೇ ವಿಪ್ರಚಿತ್ತಿ, ಶಂಬರ, ನಮುಚಿ, ಪುಲೋಮಾ, ಅಸಿಲೋಮಾ, ಕೇಶೀ, ದುರ್ಜಯ, ಅಯಃಶಿರ, ಅಶ್ವಶಿರ, ಅಶ್ವಶಂಕು, ಗಗನಮೂರ್ಧಾ, ವೇಗವಂತ, ಕೇತುಮಂತ, ಸ್ವರ್ಭಾನು, ಅಶ್ವ, ಅಶ್ವಪತಿ, ವೃಷಪರ್ವಾ, ಅಜಕ, ಅಶ್ವಗ್ರೀವ, ಸೂಕ್ಷ್ಮ, ತುಹುಂಡ, ಇಷುಪಾದ, ಏಕಚಕ್ರ, ವಿರೂಪಾಕ್ಷ, ಹರ, ಅಹರ, ನಿಚಂದ್ರ, ನಿಕುಂಭ, ಕುಪಟ, ಕಪಟ, ಶರಭ, ಶಲಭ, ಸೂರ್ಯ ಮತ್ತು ಚಂದ್ರ. ಇವರೇ ದಾನವ ಪ್ರಮುಖರು. (ಸೂರ್ಯ ಚಂದ್ರ ಎನ್ನುವ ಹೆಸರಿನವರು ದೇವತೆಗಳಲ್ಲೂ ಇದ್ದಾರೆ ದಾನವರಲ್ಲೂ ಇದ್ದಾರೆ). ಕಶ್ಯಪನಿಗೆ ಸಿಂಹಿಕೆಯಲ್ಲಿ ರಾಹು, ಸುಚಂದ್ರ, ಚಂದ್ರಹರ್ತೃ, ಚಂದ್ರಪ್ರಮರ್ಧನ ಎಂಬ ನಾಲ್ವರು ಮಕ್ಕಳು ಹುಟ್ಟಿದರು. ದನಾಯುವಿನಲ್ಲಿ ವಿಕ್ಷರ, ಬಲ, ವೀರ, ವೃತ್ರ ಎಂಬ ನಾಲ್ಕು ಜನ ಅಸುರರು ಹುಟ್ಟಿದರು. ಕಾಲಾ ಎಂಬುವವಳಲ್ಲಿ ವಿನಾಶನ, ಕ್ರೋಧ, ಕ್ರೋಧಹಂತಾ, ಕ್ರೋಧಶತ್ರು ಎಂಬ ನಾಲ್ವರು ಮಕ್ಕಳು ಹುಟ್ಟಿದರು.

ಕಾಲಕೇಯರೆಂಬ ರಾಕ್ಷಸರು ಕಾಲಾ ಎಂಬುವವಳಲ್ಲಿ ಹುಟ್ಟಿದರು. ವಿನತೆಯಲ್ಲಿ ತಾರ್ಕ್ಷ್ಯ, ಅರಿಷ್ಟನೇಮಿ, ಗರುಡ, ಅರುಣ, ಆರುಣಿ, ವಾರುಣಿ ಎಂಬ ಆರು ಮಕ್ಕಳು ಹುಟ್ಟಿದರು. ಶೇಷ, ಅನಂತ, ವಾಸುಕಿ, ತಕ್ಷಕ, ಕೂರ್ಮ, ಕುಲಿಕ ಹೀಗೆ ಸಹಸ್ರಾರು ಮಕ್ಕಳು ಕದ್ರುವಿನಲ್ಲಿ ಹುಟ್ಟಿದರು. ಮುನಿ ಎಂಬುವವಳಿಂದ ಭೀಮಸೇನ, ಉಗ್ರಸೇನ, ಸುಪರ್ಣ, ವರುಣ, ಗೋಪತಿ, ಧೃತರಾಷ್ಟ್ರ, ಸೂರ್ಯವರ್ಚಸ, ಸತ್ಯವಾಕ್, ಅರ್ಕಪರ್ಣ, ಪ್ರಯುತ, ಭೀಮ, ಚಿತ್ರರಥ, ಶಾಲಿಶಿರಸ, ಪರ್ಜನ್ಯ, ಕಲಿ, ನಾರದ ಈ ಹದಿನಾರು ಜನ ಹುಟ್ಟಿದರು. ಅವರಿಗೆ ದೇವಗಂಧರ್ವರೆಂದು, ಮೌನೇಯರೆಂದೂ ಹೆಸರು.

ಪ್ರಾಧಾ ಎಂಬುವವಳಿಂದ ಅನವದ್ಯಾ, ಅರೂಪಾ, ಮನು, ವಂಶಾ, ಅಸುರಾ, ಮಾರ್ಗಣಪ್ರಿಯಾ, ಸುಭಗಾ, ಭಾಸೀ ಎಂಬ ಎಂಟು ಕನ್ಯೆಯರು ಹುಟ್ಟಿದರು ಮತ್ತು ಸಿದ್ಧ, ಪೂರ್ಣ, ಬರ್ಹಿ, ಪೂರ್ಣಾಯು, ಬ್ರಹ್ಮಚಾರೀ, ರತಿಗುಣ, ಸುಪರ್ಣ, ವಿಶ್ವಾವಸು, ಭಾನು, ಸುಚಂದ್ರ ಎಂಬ ಹತ್ತು ಗಂಡು ಮಕ್ಕಳು ಹುಟ್ಟಿದರು. ಎವರು ಪ್ರಾಧೇಯರೆಂದು ಕರೆಸಿಕೊಂಡರು.

ವಿಶ್ವಾ ಎಂಬುವವಳಿಂದ ಅಲಂಬುಷಾ, ಮಿಶ್ರಕೇಶೀ, ವಿದ್ಯುತ್ಪರ್ಣಾ, ತಿಲೋತ್ತಮಾ, ಅರುಣಾ, ರಕ್ಷಿತಾ, ರಂಭಾ, ಮನೋರಮಾ, ಕೇಶಿನೀ, ಸುಬಾಹು, ಸುರತಾ, ಸುರಜಾ, ಸುಪ್ರಿಯಾ ಎನ್ನುವ ಹದಿಮೂರು ಅಪ್ಸರೆಯರೂ ಅತಿಬಾಹು, ಹಾಹಾ, ಹೂಹೂ ಮತ್ತು ತುಂಬುರು ಎಂಬ ನಾಲ್ವರು ಗಂಧರ್ವರು ಹುಟ್ಟಿದರು.

ಕಪಿಲಾ ಎಂಬುವವಳಲ್ಲಿ ಅಮೃತವೂ, ಬ್ರಾಹ್ಮಣರೂ, ಹಸುಗಳೂ, ಗಂಧರ್ವಾಪ್ಸರೆಯರೂ ಹುಟ್ಟಿದರು.” ಎಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಇದನ್ನ ಆಲಿಸುವುದು ಆಯುರ್ವಧಕವಾಗಿದೆ. ಈ ಕಥಾನಕವನ್ನು ಯಾರು ಅಸೂಯಾರಹಿತರಾಗಿ ಕೇಳುತ್ತಾರೋ ಅಂತಹವರು ಬಹುಪುತ್ರರನ್ನ ಪಡೆದು ಇಹದಲ್ಲಿ ಸಂಪತ್ತು ಗಳಿಸಿ ಅವಸಾನಾನಂತರ ಸದ್ಗತಿಯನ್ನು ಪಡೆಯುತ್ತಾರೆ “ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿ ಮತ್ತಷ್ಟು ಜನರ ಕುರಿತಾಗಿ ಹೇಳಲನುವಾಗುತ್ತಾರೆ.

ಮುಂದುವರೆಯುತ್ತದೆ
ಗುರುಪ್ರಸಾದ್ ಆಚಾರ್ಯ