ವ್ಯಾಸ ಮಹಾಭಾರತ – ಭಾಗ 39 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 39 ಆದಿಪರ್ವ (ಸಂಭವಪರ್ವ)

ಕ್ರೋಧವಶರೆಂಬ ರಾಕ್ಷಸರು ಪ್ರಪಂಚದಲ್ಲಿ ಈ ಹೆಸರಿನಿಂದ ಹುಟ್ಟಿದರು. ಮದ್ರಕ, ಕರ್ಣವೇಷ್ಟಿ, ಸಿದ್ದಾರ್ಥ, ಕೀಟಕ, ಸುವೀರ, ಸುಬಾಹು, ಮಹಾವೀರ, ಬಾಹ್ಲಿಕ, ಕ್ರಥ, ವಿಚಿತ್ರ, ಸುರಥ, ನೀಲ, ಚೀರವಾಸ, ಭೂಮಿಪಾಲ, ದಂತವಕ್ತ್ರ ದುರ್ಜಯ, ರುಕ್ಮೀ, ಜನಮೇಜಯ, ಆಷಾಢ, ವಾಯುವೇಗ, ಭೂರಿತೇಜಸ್, ಏಕಲವ್ಯ, ಸುಮಿತ್ರ, ವಾಟಧಾನ, ಗೋಮುಖ, ಕಾರೂಷಖ, ಕ್ಷೇಮಧೂರ್ತಿ, ಶ್ರುತಾಯುಷ, ಅದ್ವಹ, ಬೃಹತ್ಸೇನ, ಕ್ಷೇಮೋಗ್ರತೀರ್ಥ, ಕುಹರ ಮತ್ತು ಈಶ್ವರ. ಕಾಲನೇಮಿ ಎಂಬ ಅಸುರ ಕಂಸನಾಗಿ ಜನಿಸಿದನು.

ಬೃಹಸ್ಪತಿಯ ಅಂಶದಿಂದ ಭಾರದ್ವಾಜನ ಮಗನಾಗಿ ದ್ರೋಣ
ಮಹಾದೇವ ಮತ್ತು ಯಮದೇವನ ಅಂಶದಿಂದ ಅಶ್ವತ್ಠಾಮ
ಅಷ್ಟವಸುಗಳು ಗಂಗೆಯ ಮಕ್ಕಳಾಗಿ ಹುಟ್ಟಿದರು ಅವರಲ್ಲಿ ಕೊನೆಯವನೇ ಭೀಷ್ಮ.
ರುದ್ರಗಣದ ಅಂಡದಿಂದ ಕೃಪ
ದ್ವಾಪರ -ಶಕುನಿ
ಮರುತ್ತಗಳ ಅಂಶದಿಂದ -ಸಾತ್ಯಕಿ, ದ್ರುಪದ, ಕೃತವರ್ಮ, ವಿರಾಟ
ಹಂಸ ಎನ್ನುವ ಗಂಧರ್ವರಾಜ – ಧೃತರಾಷ್ಟ್ರ
ಹಂಸನ ತಮ್ಮನೇ ಪಾಂಡುವಾಗಿ ಜನಿಸಿದನು
ಯಮಧರ್ಮನ ಅಂಶದಿಂದ ವಿದುರ ಹುಟ್ಟಿದನು.

ಕಲಿ – ದುರ್ಯೋಧನ
ಪೌಲಸ್ತ್ಯರೆಂಬ ರಾಕ್ಷಸರು – ದುರ್ಯೋಧನನ ತಮ್ಮಂದಿರು.
ಯಮಧರ್ಮರಾಯ – ಯುಧಿಷ್ಠಿರ
ವಾಯುದೇವ – ಭೀಮ
ಇಂದ್ರ – ಅರ್ಜುನ
ಅಶ್ವಿನೀಕುಮಾರರು – ನಕುಲ ಸಹದೇವ
ಚಂದ್ರನ ಮಗ ವರ್ಚಸ – ಅಭಿಮನ್ಯು
ಅಗ್ನಿ – ಧೃಷ್ಟದ್ಯುಮ್ನ
ವಿಶ್ವೇದೇವತೆಗಳ ಅಂಶ – ದ್ರೌಪದೇಯರು ( ಪ್ರತಿವಿಂಧ್ಯ, ಶ್ರುತಸೋಮ, ಶ್ರುತಕೀರ್ತಿ, ಶಾತನೀಕ, ಶ್ರುತಸೇನ )
ಸೂರ್ಯ – ಕರ್ಣ
ಶೇಷ – ಬಲರಾಮ
ಶ್ರೀಮನ್ನಾರಾಯಣ – ಶ್ರೀಕೃಷ್ಣ
ಸನತ್ಕುಮಾರ – ಪ್ರದ್ಯುಮ್ನ
ಸಿದ್ಧಿ – ಕುಂತಿ
ಸ್ಮೃತಿ – ಮಾದ್ರಿ
ಶಚೀದೇವಿ( ಪ್ರಧಾನ ಅಂಶ) – ದ್ರೌಪದಿ
ಮತಿ – ಗಾಂಧಾರಿ
ಹದಿನಾರು ಸಾವಿರ ಅಪ್ಸರೆಯರು – ಶ್ರೀಕೃಷ್ಣನ ಪತ್ನಿಯರು

ದೇವದಾನವರ ಅಂಶಾವತಾರದ ಬಗ್ಗೆ ಕೇಳಿದ ನಂತರ ಜನಮೇಜಯನು ವೈಶಂಪಾಯನರಲ್ಲಿ ತಮ್ಮ ವಂಶದ ಮೂಲಪುರುಷನಾದ ಭರತನ ಕತೆಯನ್ನೂ ದುಷ್ಯಂತ ಶಕುಂತಲೆಯರ ಕತೆಯನ್ನೂ ಹೇಳುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೊಪ್ಪಿದ ವೈಶಂಪಾಯನರು ಆ ಕತೆಯನ್ನ ಹೇಳತೊಡಗುತ್ತಾರೆ….

“ಮಹಾರಾಜ ಈ ವಂಶಜ ಹಿರಿಯನಾದ ದುಷ್ಯಂತ ಅತ್ಯಂತ ವೀರನಾದ ಸಮರ್ಥನಾದ ರಾಜನಾಗಿದ್ದು , ಧರ್ಮದಿಂದ ತನ್ನ ರಾಜ್ಯವನ್ನಾಳುತ್ತಿದ್ದನು. ಅವನ ಆಳ್ವಿಕೆಯಲ್ಲಿ ರಾಜ್ಯವು ಅತ್ಯಂತ ಸುಭಿಕ್ಷವಾಗಿತ್ತು. ಹೀಗಿರಲು ಒಮ್ಮೆ ಆತ ಬೇಟೆಯಾಡುವ ಸಲುವಾಗಿ ಕಾಡಿಗೆ ತೆರಳಿದ್ದನು. ಅಲ್ಲಿ ಜಿಂಕೆಯೊಂದನ್ನು ಅಟ್ಟಿಸಿಕೊಂಡು ಹೋಗಿ ಹಾದಿ ತಪ್ಪಿ ಮಹರ್ಷಿ ಕಣ್ವರ ಆಶ್ರಮದ ಬಳಿ ಹೋಗಿಬಿಡುತ್ತಾನೆ. ಆ ಆಶ್ರಮವು ಅತ್ಯಂತ ಶಾಂತವಾಗಿದ್ದಿತ್ತು. ಕ್ರೂರ ಮೃಗಗಳೂ ಅಲ್ಲಿ ಸಾಧುಸ್ವಭಾವವನ್ನ ಹೊಂದಿದ್ದವು. ಆ ಆಶ್ರಮದ ಸೊಬಗಿಗೆ ಬೆರುಗಾಗಿ ಮಹರ್ಷಿ ಕಣ್ವರನ್ನ ಮಾತಾಡಿಸಿಯೇ ಹೋಗೋಣ ಎಂದು ಯೋಚಿಸಿದ ದುಷ್ಯಂತ ಆಶ್ರಮವನ್ನ ಪ್ರವೇಶಿಸಿ…. “ಯಾರಿದ್ದೀರಿ…?” ಎಂದು ಪ್ರಶ್ನಿಸುತ್ತಾನೆ. ಆಗ ಆ ಆಶ್ರಮದೊಳಗಿಂದ ತಪಸ್ವಿನಿಯ ಉಡುಗೆ ತೊಟ್ಟಿದ್ದ ಅತ್ಯಂತ ರೂಪಸಿಯಾಗಿದ್ದ ಕನ್ಯೆಯೊಬ್ಬಳು ಹೊರಬಂದು ರಾಜನನ್ನ ಸ್ವಾಗತಿಸಿ ಕುಳಿತುಕೊಳ್ಳಲು ಆಸನವನ್ನಿತ್ತು ಹಣ್ಣು ಹಂಪಲುಗಳನ್ನು ಕೊಟ್ಟು ಉಪಚರಿಸುತ್ತಾಳೆ…ಆದಾದ ಬಳಿಕ ರಾಜನು ತಾನು ಬಂದ ವಿಚಾರವನ್ನು ಪ್ರಸ್ತಾಪಿಸುತ್ತಾ… ಮಹರ್ಷಿ ಕಣ್ವರ ಭೇಟಿಯ ಬಯಕೆಯನ್ನ ತಿಳಿಸುತ್ತಾನೆ. ಅದಕ್ಕೆ ಆ ಕನ್ಯೆಯು ಮಹರ್ಷಿಗಳು ಫಲಪುಷ್ಪಾದಿಗಳನ್ನು ತರಲು ಹೊರಹೋಗಿರುವ ವಿಚಾರ ತಿಳಿಸಿ ಸ್ವಲ್ಪ ಹೊತ್ತು ಕಾತರೆ ಭೇಟಿ ಸಾಧ್ಯವಾದೀತು ಅನ್ನುತ್ತಾಳೆ. ಆಗ ರಾಜನು ಅವಳ ಬಳಿ “ಹೇ ಯುವತಿ ನೀನು ಯಾರು….? ನೀನು ಈ ಆಶ್ರಮದಲ್ಲೇನು ಮಾಡುತ್ತಿರುವೆ… ನೀನು ಮೊದಲ ನೋಟದಲ್ಲೇ ಮನವನ್ನ ಅಪಹರಿಸಿರುವೆ… ಆದುದರಿಂದ ನೀನಾರು ಎಂದು ಹೇಳುವೆಯಾ” ಎನ್ನುತ್ತಾನೆ. ಆಗ ಆಕೆ “ಮಹಾರಾಜ ನಾನು ಕಣ್ವ ಮಹರ್ಷಿಗಳ ಮಗಳು” ಎಂದುತ್ತರಿಸುತ್ತಾಳೆ. ಆಗ ಮಹಾರಾಜನು “ಹೇ ಸುಂದರಿ, ಮಹರ್ಷಿಗಳಾದ ಕಣ್ವರು ಊರ್ಧ್ವರೇತಸ್ಕರೆಂದು ನಾನು ಕೇಳಿದ್ದೇನೆ. ಕಠಿಣವ್ರತಿಗಳಾದ ಅವರು ತಮ್ಮ ನಿಷ್ಠೆಯಿಂದ ಹಿಂದೆ ಸರಿಯುವುದೇ…? ಕಣ್ವರಿಗೆ ಮಗಳಿರಲು ಹೇಗೆ ಸಾಧ್ಯ…? ನನ್ನ ಈ ಸಂಶಯಕ್ಕೆ ಉತ್ತರ ನೀಡುವೆಯಾ …?” ಎಂದು ಕೇಳುತ್ತಾನೆ..
ಆಗ ಆಕೆ ತನ್ನ ಜನ್ಮ ವೃತ್ತಾಂತವನ್ನ ರಾಜನಿಗೆ ಹೇಳಲು ಆರಂಭಿಸುತ್ತಾಳೆ…..

ದುಷ್ಯಂತನು ಆಶ್ರಮನಿವಾಸಿ ಕನ್ಯೆಯ ಬಗ್ಗೆ ಕೇಳಿದಾಗ “ನನಗೂ ನನ್ನ ತಂದೆಯವರಾದ ಕಣ್ವರು ನನ್ನ ಜನ್ಮವೃತ್ತಾಂತವನ್ನ ಹೇಳಿದ್ದಿಲ್ಲ ಆದರೆ ಇನ್ನೊಬ್ಬ ಮಹರ್ಷಿಗೆ ಕಣ್ವರೇ ನನ್ನ ಜನ್ಮವೃತ್ತಾಂತದ ಕತೆ ಹೇಳುವಾಗ ನಾನು ಕೇಳಿಸಿಕೊಂಡಿದ್ದೆ ಅದನ್ನೇ ನಿಮಗೆ ಹೇಳುತ್ತೇನೆ” ಎಂದು ತನ್ನ ಹುಟ್ಟಿನ ಕತೆಯನ್ನ ಹೇಳತೊಡಗುತ್ತಾಳೆ. ಮಹಾತಪಸ್ವಿಗಳಾದ ವಿಶ್ವಾಮಿತ್ರರೊಮ್ಮೆ ಘೋರವಾದ ತಪಸ್ಸನ್ನಾರಂಭಿಸಿದ್ದರಂತೆ. ಅವರ ತಪಸ್ಸಿನ ತಾಪ ಇಂದ್ರನನ್ನೂ ತಟ್ಟಿತು. ಇಂದ್ರನು ಈ ವಿಶ್ವಾಮಿತ್ರ ಅದೆಲ್ಲಿ ತನ್ನ ದೇವೇಂದ್ರ ಪಟ್ಟವನ್ನು ಬಯಸುತ್ತಾನೋ ಎನ್ನುವ ಆತಂಕದಿಂದ ವಿಶ್ವಾಮಿತ್ರರ ತಪಸ್ಸನ್ನ ಭಂಗಗೊಳಿಸಲು ತನ್ನ ಅಪ್ಸರೆಯಲ್ಲೋರ್ವಳಾದ “ಮೇನಕೆ”ಯನ್ನ ಕಳುಹಿಸುತ್ತಾನೆ. ಆಕೆಯು ವಾಯುದೇವ ಮತ್ತು ಮನ್ಮಥನ ಸಹಾಯ ಕೇಳುತ್ತಾಳೆ. ಅದನ್ನ ಇಂದ್ರ ಅವಳಿಗೆ ಒದಗಿಸುತ್ತಾನೆ. ಆ ನಂತರ ಮೇನಕೆಯು ವಿಶ್ವಾಮಿತ್ರರು ತಪಸ್ಸು ಮಾಡುತ್ತಿರುವ ಸ್ಥಳಕ್ಕೆ ಹೋಗಿ ವಿಶ್ವಾಮಿತ್ರರಿಗೆ ವಂದಿಸಿ ಅವರೆದುರು ನೃತ್ಯ ಮಾಡಲು ಆರಂಭಿಸುತ್ತಾಳೆ. ಸರಿಯಾದ ಸಮಯಕ್ಕೆ ವಾಯುದೇವ ಮೇನಕೆಯ ಬಟ್ಟೆಯನ್ನ ಹಾರಿಸಿಬಿಡುತ್ತಾನೆ. ತನ್ನ ಬಟ್ಟೆಯನ್ನ ಹಿಡಿದುಕೊಳ್ಳಲು ಜಿಂಕೆಯಂತೆ ಆಕೆ ಓಡಾಡುತ್ತಿರುವಾಗಲೇ ಮನ್ಮಥನು ತನ್ನ ಹೂವಿನ ಬಾಣವನ್ನು ವಿಶ್ವಾಮಿತ್ರರೆಡೆ ಪ್ರಯೋಗಿಸುತ್ತಾನೆ. ಆ ಸಮಯ ವಿಶ್ವಾಮಿತ್ರರು ಕಾಮಪರವಶರಾಗಿ ಮೇನಕೆಯನ್ನ ಕೂಡುತ್ತಾರೆ. ಹೀಗೆ ಆಕೆಯೊಂದಿಗೆ ಬಹುಕಾಲ ಒಟ್ಟಿಗಿರಲು ಅವರಿಬ್ಬರಿಗೆ ಒಂದು ಹೆಣ್ಣು ಮಗುವಾಗುತ್ತದೆ. ಅದನ್ನ ಅಲ್ಲಿನ ಮಾಲೀನೀ ನದೀತೀರದಲ್ಲಿಟ್ಟು ಮೇನಕೆ ದೇವಲೋಕ ಸೇರುತ್ತಾಳೆ. ಇತ್ತ ವಿಶ್ವಾಮಿತ್ರರು ತನ್ನ ತಪ್ಪನ್ನ ತಿಳಿದು ಮತ್ತೆ ತಪಸ್ಸಿಗೆ ತೆರಳುತ್ತಾರೆ. ಆಗ ಕ್ರೂರ ಮೃಗಗಳು ಆ ಸಣ್ಣ ಮಗುವಿಗೆ ಏನೂ ಹಾನಿ ಮಾಡದಿರಲಿ ಎನ್ನುವ ಕಾರಣಕ್ಕೆ ಅಲ್ಲಿನ ಪಕ್ಷಿಗಳು ಗುಂಪುಗೂಡಿ ಆ ಮಗುವನ್ನ ಕಾಪಾಡುತ್ತಿದ್ದವಂತೆ. ಅದೇ ಹೊತ್ತಿಗೆ ಮಾಲೀನೀ ನದೀ ತೀರಕ್ಕೆ ಹೋದ ಕಣ್ವರು ಮಗುವನ್ನ ಕಂಡು ಅದನ್ನ ತಮ್ಮ ಬಳಿ ತಂದು ಸಾಕತೊಡಗಿದರು ಆ ಮಗುವೇ ನಾನು. ಶಕುಂತಗಳು ಅಂದರೆ ಪಕ್ಷಿಗಳು ನನ್ನನ್ನ ಸಂರಕ್ಷಿಸಿದ್ದ ಕಾರಣಕ್ಕಾಗಿ ನನಗೆ ಶಾಕುಂತಲಾ ಅನ್ನುವ ಹೆಸರಿಟ್ಟಿದ್ದಾರೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.