ವ್ಯಾಸ ಮಹಾಭಾರತ – ಭಾಗ 40 ಆದಿಪರ್ವ (ಸಂಭವಪರ್ವ)

ಮೊದಲ ನೋಟದಲ್ಲೇ ಶಾಕುಂತಲೆಯ ಮೋಹಕ್ಕೊಳಗಾಗಿದ್ದ ದುಷ್ಯಂತನಿಗೆ ಆಕೆ ಕ್ಷತ್ರಿಯ ಕನ್ಯೆ ಎನ್ನುವ ಅರಿವಾದ ಕೂಡಲೇ ಮನಸ್ಸಿಗೆ ಆನಂದವಾಯಿತು. ಆತ ಸಂತಸದಿಂದ ” ಹೇ ಕನ್ಯಾಮಣಿ ನಿನ್ನ ಆತ್ಮಕಥೆಯಿಂದ ನೀನೊಬ್ಬ ಕ್ಷತ್ರಿಯ ಕನ್ಯೆ ಎನ್ನುವುದು ಸಿದ್ಧವಾಗುತ್ತದೆ. ಹಾಗಾಗಿ ನೀನು ನನ್ನ ಪತ್ನಿಯಾಗಲು ಅರ್ಹಳಾಗಿರುವೆ. ನಿನ್ನನ್ನ ವಿವಾಹವಾಗಲು ನಾನೇನು ಮಾಡಬೇಕು ಹೇಳು. ನಿನ್ನ ಗಾಂಧರ್ವ ವಿವಾಹವಾಗಬೇಕೆಂದಿದ್ದೇನೆ… ಅನುಮತಿ ನೀಡುವೆಯಾ “ಎಂದು ಆಕೆಯಲ್ಲಿ ವಿವಾಹ ಪ್ರಸ್ತಾವನೆಯನ್ನಿಡುತ್ತಾನೆ. ಅದಕ್ಕೆ ಆಕೆಯು” ಮಹರಾಜ ನನ್ನ ತಂದೆಯವರು ಖಂಡಿತವಾಗಿಯೂ ನಿನಗೆ ನನ್ನನ್ನ ಕೊಟ್ಟು ವಿವಾಹ ಮಾಡಿಯಾರು ನೀನು ಅವರು ಬರುವವರೆಗೆ ಕಾಯುವೆಯಾ…? ಎನ್ನುತ್ತಾಳೆ. ಆಗ ದುಷ್ಯಂತನು. “ನಿನ್ನ ವಿವಾಹದ ವಿಷಯವನ್ನು ನೀನೇ ನಿರ್ಧರಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆ.

ಆತ್ಮನೋ ಬಂಧುರಾತ್ಮೈವ ಗತಿರಾತ್ಮೈವ ಚಾತ್ಮನಃ |
ಆತ್ಮನೋ ಮಿತ್ರಮಾತ್ಮೈವ ತಥಾತ್ಮಾ ಚಾತ್ಮನಃ ಪಿತಾ |
ಆತ್ಮನೈವಾತ್ಮನೋ ದಾನಂ ಕರ್ತುಮರ್ಹಸಿ ಧರ್ಮತಃ ||

ಬೇರೊಬ್ಬರನ್ನು ಅವಲಂಬಿಸದೇ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳಬೇಕು. ನಮಗೆ ಬಂಧುಗಳು ನಾವೇ. ನಮ್ಮ ಆತ್ಮವೇ ನಮಗೆ ಗತಿ. ನಮ್ಮ ಆತ್ಮವೇ ನಮಗೆ ಮಿತ್ರ. ತಂದೆಯೂ ಸಹ ನಮ್ಮ ಆತ್ಮವೇ ಆಗಿದ್ದಾನೆ. ಆದುದರಿಂದ ಶಕುಂತಲೇ ಬೇರೆಯವರಿಂದ ದಾನ ಮಾಡಿಸಿಕೊಳ್ಳದೇ ನೀನೇ ಸ್ವತಃ ಧರ್ಮದ ಮೂಲಕವಾಗಿ ಅರ್ಪಿಸಿಕೊಳ್ಳುವುದೇ ಸಾಧುವಾಗಿದೆ.

ಅಷ್ಟಾವೇವ ಸಮಾಸೇನ ವಿವಾಹಾ ಧರ್ಮತಃ ಸ್ಮೃತಾಃ |
ಬ್ರಾಹ್ಮೋ ದೈವಸ್ತಥೈವಾರ್ಷಃ ಪ್ರಾಜಾಪತ್ಯಸ್ತಥಾಸುರಃ ||
ಗಾಂಧರ್ವೋ ರಾಕ್ಷಸಶ್ಚೈವ ಪೈಶಾಚಷ್ಟಮಃ ಸ್ಮೃತಃ |
ತೇಷಾಂಧರ್ಮ್ಯಾನ್ಯಥಾಪೂರ್ವಂ ಮನುಃ ಸ್ವಾಯಂಭುವೋಬ್ರವೀತ್ ||

ಶಕುಂತಲೇ ಧರ್ಮಶಾಸ್ತ್ರದ ದೃಷ್ಟಿಯಿಂದ ಎಂಟು ಪ್ರಕಾರವಾಗಿ ವಿವಾಹವಾಗುವ ಸಾಧ್ಯತೆಯಿದೆ.

೧.ವಸ್ತ್ರಾಭರಣಗಳಿಂದ ಅಲಂಕೃತೆಯಾದ ಕನ್ಯೆಯನ್ನು ಸ್ವಜಾತಿಯಲ್ಲಿ ಯೋಗ್ಯನಾದ ವರನನ್ನು ಹುಡುಕಿ ಪಾಣಿಗ್ರಹಣ ಮಾಡಿಕೊಡುವುದಕ್ಕೆ ಬ್ರಾಹ್ಮವಿವಾಹವೆಂದೂ,
೨.ದೇವತೆಗಳ ಸಂಬಂಧವಾದ ಯಜ್ಞಮಾಡಿ ಯಜ್ಞದ ಕೊನೆಯಲ್ಲಿ ಋತ್ವಿಜರಿಗೆ ಕನ್ಯೆಯನ್ನ ದಾನವಾಗಿ ಕೊಡುವುದಕ್ಕೆ ದೈವವಿವಾಹವೆಂದೂ,
೩.ವರನಿಂದ ಒಂದು ಹಸು ಅಥವಾ ಒಂದು ಎತ್ತನ್ನು ಕನ್ಯಾಶುಲ್ಕವಾಗಿ ಪಡೆದು ಕನ್ಯಾದಾನ ಮಾಡುವುದಕ್ಕೆ ಆರ್ಷವಿವಾಹವೆಂದೂ,
೪.ವಧೂವರರು ಜೊತೆಯಲ್ಲಿದ್ದು ಧರ್ಮಾಚಾರಿಗಳಾಗಿರಬೇಕೆಂಬ ಸಂಕಲ್ಪದಿಂದ ಕನ್ಯಾದಾನ ಮಾಡುವುದಕ್ಕೆ ಪ್ರಾಜಾಪತ್ಯವೆಂದೂ,
೫. ಕನ್ಯೆಗೆ ಇಷ್ಟು ಮೌಲ್ಯವೆಂಬುದನ್ನು ನಿರ್ಧರಿಸಿ ಅಷ್ಟು ಮೌಲ್ಯವನ್ನು ವಿಕ್ರಯ ರೂಪವಾಗಿ ಪಡೆದು ಮಾಡುವ ವಿವಾಹಕ್ಕೆ ಅಸುರವಿವಾಹವೆಂದೂ,
೬. ಯುವಯುವತಿಯರು ಸ್ವೇಚ್ಛೆಯಿಂದ ಮಾಡಿಕೊಳ್ಳುವ ವಿವಾಹಕ್ಕೆ ಗಾಂಧರ್ವವಿವಾಹವೆಂದೂ,
೭.ಯುದ್ಧಮಾಡಿ ಕನ್ಯೆಯ ಬಂಧುಬಂಧವರನ್ನು ಸಂಹರಿಸಿ ಅವಳನ್ನ ಎತ್ತಿಕೊಂಡು ಬಂದು ವಿವಾಹವಾಗುವುದಕ್ಕೆ ರಾಕ್ಷಸವಿವಾಹವೆಂದೂ,
೮. ಮನೆಯಲ್ಲಿ ಎಲ್ಲರೂ ಮಲಗಿರುವ ಹೊತ್ತಿನಲ್ಲಿ ಕನ್ಯೆಯನ್ನು ಕದ್ದುಕೊಂಡು ಬಂದು ವಿವಾಹವಾಗುವುದಕ್ಕೆ ಪೈಶಾಚವಿವಾಹವೆಂದೂ ಸ್ವಾಯಂಭುವ ಮನುವು ಹೇಳಿದ್ದಾನೆ. ಅವುಗಳಲ್ಲಿ ಯಾರಿಗೆ ಯಾವುದು ಹಿತವೆಂಬುದನ್ನೂ ಹೇಳಿದ್ದಾನೆ.

ಬ್ರಾಹ್ಮಣರಿಗೆ ಬ್ರಾಹ್ಮ, ದೈವ, ಆರ್ಷ ಮತ್ತು ಪ್ರಾಜಾಪತ್ಯ ವಿವಾಹಗಳೂ, ಕ್ಷತ್ರಿಯನಿಗೆ ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಆಸುರ, ಗಾಂಧರ್ವ ವಿವಾಹಗಳೂ ಉಕ್ತವಾಗಿದೆ. ವೈಶ್ಯ ಶೂದ್ರರು ಪ್ರಾಜಾಪತ್ಯ ಆಸುರ ಗಾಂಧರ್ವ ವಿವಾಹವು ಧರ್ಮಸಮ್ಮತವಾಗಿದೆ. ನಾವಿಬ್ಬರೂ ಗಾಂಧರ್ವರೀತಿಯ ವಿವಾಹಕ್ಕೆ ಯೋಗ್ಯರಾಗಿದ್ದೇವೆ. ನಾನು ನಿನ್ನ ಮೇಲೆ ಅನುರಾಗವುಳ್ಳವನಾಗಿದ್ದೇನೆ ನಿನಗೂ ನನ್ನ ಬಗೆಗೆ ಪ್ರೇಮ ಭಾವ ಇರುವಂತೆ ನನಗೆ ಭಾಸವಾಗುತ್ತಿದೆ. ಆದ್ದರಿಂದ ಗಾಂಧರ್ವರೀತಿಯಲ್ಲಿ ನನ್ನನ್ನ ಮದುವೆಯಾಗುವೆಯಾ…?

ಆಗ ಶಾಕುಂತಲೆಯು,
“ಮಹಾರಾಜ ನೀನು ಹೇಳಿದಂತೆ ನಮ್ಮ ವಿವಾಹವೂ ಧರ್ಮಸಮ್ಮತವಾಗಿದ್ದಲ್ಲಿ ನನ್ನನ್ನ ನಾನು ನಿನಗೆ ಸಮರ್ಪಿಸುತ್ತೇನೆ. ಆದರೆ ನನ್ನದೊಂದು ನಿಬಂಧನೆಯಿದೆ. ನಮ್ಮ ಪ್ರೇಮ ವಿವಾಹದ ಫಲಸ್ವರೂಪವಾಗಿ ನಮಗೆ ಪುತ್ರ ಪ್ರಾಪ್ತಿಯಾದರೆ ಆತನಿಗೇ ನಿನ್ನ ರಾಜ್ಯ ದೊರೆಯಬೇಕು ಆತನೇ ನಿನ್ನ ಉತ್ತರಾಧಿಕಾರಿಯಾಗಬೇಕು. ಈ ಮಾತನ್ನ ಈಡೇರಿಸುವೆ ಎಂದು ಪ್ರತಿಜ್ಞೆ ಮಾಡುವೆಯಾದರೆ ನಾನು ನಿನ್ನನ್ನ ವಿವಾಹವಾಗುವೆ” ಎನ್ನುತ್ತಾಳೆ.

ಆಗ ದುಷ್ಯಂತನು ಒಂದುಕ್ಷಣವೂ ಯೋಚಿಸದೆ “ಏವಮಸ್ತು” ಅನ್ನುತ್ತಾ…. “ಶಾಕುಂತಲೆ, ನಿನ್ನನ್ನ ಇಲ್ಲಿಯೇ ಬಿಟ್ಟು ಹೋಗುತ್ತೇನೆ ಎಂದು ತಿಳಿಯಬೇಡ. ನೀನು ನನ್ನ ಅಂತಃಪುರದಲ್ಲಿ ವಾಸಿಸಲು ಯೋಗ್ಯಳು. ನಾನು ರಾಜ್ಯ ತಲುಪಿದ ಬಳಿಕ ಅದ್ಧೂರಿ ಸ್ವಾಗತದ ಮೂಲಕ ನಿನ್ನನ್ನ ನನ್ನಲ್ಲಿಗೆ ಕರೆಯಿಸಿಕೊಳ್ಳುತ್ತೇನೆ.” ಎಂದನು ಅದಾದ ಬಳಿಕ ಅವರ ಗಾಂಧರ್ವವಿವಾಹವಾಗಿ ಅವರು ಸ್ವಲ್ಪಕಾಲ ಸುಖದಿಂದ ಕಾಲಕಳೆದರು. ಮಹಾರಾಜನಿಗೆ ಪ್ರಜಾಪಾಲನೆಯ ಜವಾಬ್ದಾರಿಯಿದ್ದುದರಿಂದ ತನ್ನ ರಾಜ್ಯಕ್ಕೆ ತೆರಳಲೇಬೇಕಿತ್ತು. ಅತಿ ಶೀಘ್ರದಲ್ಲಿ ನಿನ್ನನ್ನ ಕರೆಯಿಸಿಕೊಳ್ಳುವೆ ಎನ್ನುವ ಭರವಸೆಯನ್ನ ಅವಳಿಗೆ ಕೊಟ್ಟು ಆತ ತನ್ನ ರಾಜಧಾನಿಯನ್ನ ಸೇರುತ್ತಾನೆ.

ಇದಾದ ಬಳಿಕ ಆಶ್ರಮಕ್ಕೆ ಮಹರ್ಷಿಕಣ್ವರ ಆಗಮನವಾಗುತ್ತದೆ. ಆದರೆ ಶಾಕುಂತಲೆಯು ನಾಚಿಕೆಯಿಂದ ಅವರನ್ನ ಎದುಗೊಳ್ಳುವುದೇ ಇಲ್ಲ. ಯಾಕೆ ಶಾಕುಂತಲೆ ಈ ರೀತಿ ವ್ಯವಹರಿಸಿದಳೂ ಎನ್ನುವುದನ್ನ ಕಣ್ವರು ತಮ್ಮ ದಿವ್ಯದೃಷ್ಟಿಯಿಂದ ನೋಡಿ ತಿಳಿದುಕೊಂಡು ಆಕೆಯ ಬಳಿ ಹೋಗಿ “ಪುತ್ರೀ, ಕ್ಷತ್ರಿಯರಿಗೆ ಗಾಂಧರ್ವವಿವಾಹವು ಶಾಸ್ತ್ರಸಮ್ಮತವೇ ಆಗಿದೆ. ಅದೂ ಅಲ್ಲದೆ ನಿನ್ನ ಕೈಹಿಡಿದವ ಮಹಾನ್ ಧರ್ಮಾತ್ಮ ಹಾಗಾಗಿ ನೀನೇನೂ ಚಿಂತೆ ಪಡದಿರು. ನಿಮ್ಮಿಬ್ಬರ ಸಮಾಗಮವು ಧರ್ಮವಿನಾಶಕವಲ್ಲ. ನಿಮ್ಮಿಬ್ಬರ ದಾಂಪತ್ಯದ ಫಲವಾಗಿ ಮಹಾನ್ ಕ್ಷತ್ರಿಯನೋರ್ವನ ಜನನವಾಗುತ್ತದೆ ಆತ ಇಡಿಯ ಭೂಮಂಡಲದಲ್ಲಿ ಚಕ್ರವರ್ತಿ ಎಂದೆನಿಸಿಕೊಳ್ಳುತ್ತಾನೆ.” ಎನ್ನುತ್ತಾರೆ. ಆಗ ಶಾಕುಂತಲೆಯು “ಅಪ್ಪಾ ನನ್ನ ಪತಿಯ ವಿಚಾರವಾಗಿ ತಾವು ಕೋಪಿಸಿಕೊಳ್ಳದೆ ಕರುಣೆ ತೋರಬೇಕು” ಅನ್ನುತ್ತಾಳೆ ಆಗ ಕಣ್ವರು “ಇಲ್ಲ ಮಗೂ ದುಷ್ಯಂತನ ವಿಚಾರದಲ್ಲೂ ನಾನು ಪ್ರಸನ್ನನಾಗಿಯೇ ಇದ್ದೇನೆ. ನಿನಗೇನಾದರೂ ವರ ಬೇಕಿದ್ದರೆ ಕೇಳಿಕೋ” ಎನ್ನುತ್ತಾರೆ. ಆಗ ಶಾಕುಂತಲೆಯು “ತನ್ನ ಪತಿಯು ಸದಾ ಧರ್ಮಿಷ್ಠನಗಿಯೇ ಇರಲಿ” ಎನ್ನುವ ವರ ಕೇಳುತ್ತಾಳೆ. ಕಣ್ವರು ತಥಾಸ್ತು ಅನ್ನುತ್ತಾರೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ