ವ್ಯಾಸ ಮಹಾಭಾರತ – ಭಾಗ 41 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 41 ಆದಿಪರ್ವ (ಸಂಭವಪರ್ವ)

ದಿನಗಳು ಉರುಳತೊಡಗಿತು. ಆದರೆ ರಾಜಾ ದುಷ್ಯಂತನ ಕಡೆಯಿಂದ ಯಾವ ಸ್ವಾಗತದ ಪಡೆಯೂ ಕಣ್ವರ ಆಶ್ರಮಕ್ಕೆ ಬರಲಿಲ್ಲ. ಶಾಕುಂತಲೆಯೋ ದುಷ್ಯಂತನಿಗೆ ರಾಜ್ಯಾಡಳಿತದ ತುರ್ತು ಕೆಲಸವಿದ್ದಿರಬಹುದೆಂದು ತಿಳಿದು ಸುಮ್ಮನಿದ್ದಳು. ಹೀಗಿರುವಾಗಲೇ ಆಕೆಯು ಗರ್ಭವತಿಯಾಗುತ್ತಾಳೆ. ಅವಳ ಗರ್ಭ ನವಮಾಸದ ಗರ್ಭವಾಗಿರದೆ ಮೂವತ್ತಾರು ಮಾಸದ ಪೂರ್ಣ ಗರ್ಭವಾಗಿತ್ತಂತೆ. ಮೂವತ್ತಾರು ಮಾಸಗಳ ತರುವಾಯ ಆಕೆ ತೇಜಸ್ವೀ ಪುತ್ರನಾದ ದೌಷ್ಯಂತಿಗೆ ಜನ್ಮನೀಡುತ್ತಾಳೆ. ದೇವತಾ ವರ್ಚಸ್ಸಿನ ಆ ಬಾಲಕನ ದೇಹವು ಸಿಂಹದಂತೆ ಬಲಿಷ್ಠವಾಗಿತ್ತಂತೆ. ಆತನ ಹಸ್ತದಲ್ಲಿ ಚಕ್ರದ ಗುರುತಿತ್ತಂತೆ. ಹುಟ್ಟಿದ ಸ್ವಲ್ಪಕಾಲದಲ್ಲಿಯೇ ಆತನಿಗೆ ಜಾತಕರ್ಮ ಸಂಸ್ಕಾರಗಳನ್ನೆಲ್ಲಾ ಮಹರ್ಷಿ ಕಣ್ವರು ನೆರವೇರಿಸುತ್ತಾರೆ. ಆತನ ಬೆಳವಣಿಗೆ ಶುಕ್ಲ ಪಕ್ಷದ ಚಂದ್ರನಂತಿತ್ತಂತೆ. ಹೀಗೆ ಆತ ಆರು ವರ್ಷದ ಪ್ರಾಯದವನಾಗುವಷ್ಟರಲ್ಲೇ ಕಾಡಿನ ಕ್ರೂರ ಮೃಗಗಳಾದ ಸಿಂಹ ಹುಲಿ ಇವುಗಳನ್ನೆಲ್ಲಾ ಆಶ್ರಮದ ಸುತ್ತಲಿನ ಮರಕ್ಕೆ ಕಟ್ಟಿಹಾಕತೊಡಗುತ್ತಿದ್ದನು. ಅದರ ಬೆನ್ನನ್ನೇರಿ ಸವಾರಿ ಮಾಡುತ್ತಿದ್ದನು. ಅವುಗಳೇನಾದರೂ ದಾಳಿ ಮಾಡಲು ಪ್ರಾರಂಭಿಸಿದರೆ ಅದರ ದವಡೆಯನ್ನ ಹಿಡಿದು ಜಗ್ಗಿ ಅದರ ಸೊಕ್ಕಡಗಿಸುತ್ತಿದ್ದನು. ಅಂತಹ ಧೈರ್ಯ ಆತನದಾಗಿತ್ತು. ಹೀಗೆ ಆತ ಎಲ್ಲ ಪ್ರಾಣಿಗಳನ್ನು ದಮನ ಮಾಡುತ್ತಿದ್ದುದರಿಂದ ” ಸರ್ವದಮನ ” ಅನ್ನುವುದು ಆತನ ಅನ್ವರ್ಥ ನಾಮವಾಯಿತು.

ಆರು ವರ್ಷ ಪ್ರಾಯದಲ್ಲೇ ಸರ್ವದಮನ ಮಾಡಿ ತೋರುತ್ತಿದ್ದ ಸಾಹಸ ಕಾರ್ಯಗಳನ್ನು ಕಂಡ ಮಹರ್ಷಿ ಕಣ್ವರು ಈತ ಈಗಲೇ ಯುವರಾಜನಾಗಲು ಯೋಗ್ಯ ಎನ್ನುವುದನ್ನು ಮನಗಾಣಿ ತನ್ನ ಶಿಷ್ಯರನ್ನು ಬಳಿ ಕರೆದು,

“ನಾರೀಣಾಂ ಚಿರವಾಸೋ ಹಿ ಬಾಂಧವೇಷು ನ ರೋಚತೇ |
ಕೀರ್ತಿಚಾರಿತ್ರ ಧರ್ಮಘ್ನಸ್ತಸ್ಮಾನ್ನಯತ ಮಾ ಚಿರಮ್ ||

ವಿವಾಹಿತೆಯಾದ ಸ್ತ್ರೀಯರು ತಂದೆಯ ಮನೆಯಲ್ಲಿ ಹೆಚ್ಚು ಕಾಲ ಇರುವುದು ಕೀರ್ತಿಗೆ ಕಳಂಕವನ್ನು ತರುತ್ತದೆ. ಅವರ ಚಾರಿತ್ರ್ಯ ಕಲುಷಿತವಾಗುತ್ತದೆ. ತಂದೆಯ ಮನೆಯಲ್ಲಿಯೇ ಇರುವುದು ಧರ್ಮ ಸಮ್ಮತವೂ ಅಲ್ಲ. ಅದೂ ಅಲ್ಲದೆ ಸರ್ವದಮನನು ಯುವರಾಜ ಪಟ್ಟಾಭಿಷಿಕ್ತನಾಗಲು ಯೋಗ್ಯನಾಗಿದ್ದಾನೆ. ಹಾಗಾಗಿ ಅವರೀರ್ವರನ್ನೂ ರಾಜ ದುಷ್ಯಂತನ ಬಳಿ ಬಿಟ್ಟು ಬನ್ನಿ” ಎನ್ನುತ್ತಾನೆ. ಅದಕ್ಕೊಪ್ಪಿದ ಶಿಷ್ಯರು ಶಾಕುಂತಲೆ ಮತ್ತು ಸರ್ವದಮನನನ್ನು ಕರೆದುಕೊಂಡು ಹೋಗಿ ರಾಜನ ಆಸ್ಥಾನದಲ್ಲಿ ಬಿಟ್ಟು ಬರುತ್ತಾರೆ.

ಆಸ್ಥಾನದಲ್ಲಿ ಶಾಕುಂತಲೆಯು ರಾಜ ದುಷ್ಯಂತನ ಬಳಿ,
“ಹೇ ಪುರುಷೋತ್ತಮನೇ, ಈತ ಸರ್ವದಮನ ನನ್ನಲ್ಲಿ ಹುಟ್ಟಿದ ನಿಮ್ಮ ಸುಪುತ್ರ. ಈ ಹಿಂದೆ ನಮ್ಮ ಗಾಂಧರ್ವ ವಿವಾಹ ಸಮಯದಲ್ಲಿ ನೀವು ಕೊಟ್ಟ ಮಾತಿನಂತೆ ಈ ದೇಶದ ಯುವರಾಜನಾಗಲು ಯೋಗ್ಯನಾಗಿದ್ದಾನೆ. ಈಗ ನೀವು ನಿಮ್ಮ ಮಾತನ್ನು ನೆರವೇರಿಸಿ ” ಎನ್ನುತ್ತಾಳೆ.

ವಾಸ್ತವದಲ್ಲಿ ಶಾಕುಂತಲೆ ರಾಜಾ ದುಷ್ಯಂತನಿಂದ ಬೇರೆಯೇ ರೀತಿಯ ವರ್ತನೆಯನ್ನು ನಿರೀಕ್ಷಿಸಿದ್ದಳು. ತನ್ನನ್ನು ಕಂಡಾಗ ಆತನ ಮೊಗದಲ್ಲಿ ಯಾವ ಸಂತಸ, ಅಚ್ಚರಿಯನ್ನ ನಿರೀಕ್ಷಿಸಿದ್ದಳೋ ಆ ಸಂತಸ, ಅಚ್ಚರಿ ದುಷ್ಯಂತನ ಮುಖದಲ್ಲಿ ಆಕೆಗೆ ಕಾಣಿಸಿಯೇ ಇರಲಿಲ್ಲ. ಹಾಗಾಗಿ ಆಕೆ ಮತ್ತೆ ಮುಂದುವರಿದು… “ಹೇ ರಾಜಾ ಅಂದು ಮಹರ್ಷಿ ಕಣ್ವರ ಆಶ್ರಮದಲ್ಲಿ… ನನಗೆ ಹುಟ್ಟುವ ಮಗನಿಗೆ ರಾಜ್ಯಾಧಿಕಾರ ಕೊಡುವುದಾದಲ್ಲಿ ನಿನ್ನನ್ನು ಗಾಂಧರ್ವ ವಿವಾಹವಾಗುತ್ತೇನೆ ಎನ್ನುವ ನನ್ನ ನಿಬಂಧನೆಗೆ ಒಪ್ಪಿಗೆಯಿತ್ತು, ವಿವಾಹವಾಗಿದ್ದನ್ನು ನೆನಪಿಸಿಕೋ… ಆ ಗಾಂಧರ್ವ ವಿವಾಹನಂತರದ ನಮ್ಮ ದಾಂಪತ್ಯದ ಫಲಸ್ವರೂಪವೇ ನನ್ನ ಮಗ ಸರ್ವದಮನ.”

ಶಾಕುಂತಲೆಯನ್ನ ಕಂಡೊಡನೆ ದುಷ್ಯಂತನಿಗೆ ಹಳೆಯದೆಲ್ಲವೂ ಜ್ಞಾಪಕವಾಗಿತ್ತು. ಆದರೂ ಏನೂ ತಿಳಿಯದವನಂತೆ…. “ನಿನ್ನ ಸಾಂಗತ್ಯವೇ..? ಅದರ ಫಲಸ್ವರೂಪ ಈ ಬಾಲಕನೇ…? ನಿನ್ನ ಮುಖವನ್ನೇ ನೋಡಿದ ನೆನಪು ನನಗಾಗುತ್ತಿಲ್ಲ. ತಾಪಸಿಯ ವೇಷದಲ್ಲಿದ್ದರೂ ನಿನ್ನೊಳಗೆ ದುಷ್ಟತನ ತುಂಬಿರುವಂತೆ ಗೋಚರವಾಗುತ್ತಿದೆ. ನಿನ್ನ ವ್ಯರ್ಥ ಆಲಾಪವನ್ನ ನಿಲ್ಲಿಸು. ಇಲ್ಲಿಂದ ತೆರಳು, ಇದೇ ನಿನಗೆ ಯೋಗ್ಯವಾದುದು.” ಎನ್ನುತ್ತಾನೆ.

ಆತನ ಮಾತುಗಳನ್ನ ಕೇಳಿ ಶಾಕುಂತಲೆಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ಕೋಪದಿಂದ ಆತನನ್ನು ಶಪಿಸುವ ಮನಸ್ಸಾದರೂ ತನ್ನ ತಪಶ್ಶಕ್ತಿಯನ್ನ ಕೋಪಕ್ಕೆ ಆಹುತಿಯನ್ನಾಗಿಸಿ ವ್ಯರ್ಥ ಮಾಡಿಕೊಳ್ಳದೇ ರಾಜನನ್ನು ಉದ್ದೇಶಿಸಿ ಏರು ಧ್ವನಿಯಲ್ಲಿ ಹೇಳತೊಡಗುತ್ತಾಳೆ. ಮಹಾರಾಜ ನಿನಗೆ ನಾನು ಗೊತ್ತಿದ್ದರೂ… ಅದೆಷ್ಟು ಸುಲಭವಾಗಿ ನೀನಾರೆಂದು ಗೊತ್ತಿಲ್ಲ ಎಂದು ಹೇಳಿದೆ..? ಈ ರೀತಿ ಸುಳ್ಳು ಹೇಳುವಾಗ ನಿನಗೆ ಸಂಕೋಚವಾಗಲಿಲ್ಲವೇ..? ಸಾಮಾನ್ಯ ಮನುಷ್ಯ ರೂ ತಮ್ಮ ಪತ್ನಿಯನ್ನು ಮರೆಯಲಾರರು… ಒಂದು ವೇಳೆ ಅವರು ಮರೆತರೂ ಅದಕ್ಕೊಂದು ವಿನಾಯಿತಿ ಇದೆ. ಆದರೆ ದೇಶವನ್ನಾಳೋ ದೊರೆ ಹೀಗೆ ಮಾಡಬಹುದೇ..? ನಿನ್ನ ಹೃದಯಕ್ಕೆ ತಿಳಿದಿದ್ದರೂ ಅದನ್ನ ಮುಚ್ಚಿಟ್ಟು ಏಕೆ ಮಾತನಾಡುತ್ತಿರುವೆ..? ಆತ್ಮಸಾಕ್ಷಿಗೆ ವಿರುದ್ಧ ವಾಗಿ ಮಾತನಾಡಬೇಡ. ಆತ್ಮಸಾಕ್ಷಿಗೆ ವಿರುದ್ಧ ನಡೆದುಕೊಳ್ಳುವವ ಯಾವ ತಪ್ಪನ್ನು ಬೇಕಿದ್ದರೂ ಮಾಡಬಲ್ಲ.

ಮಹಾರಾಜಾ ಯಾರೂ ಇಲ್ಲದಾಗ ನಡೆದ ಘಟನೆಗೆ ಸಾಕ್ಷಿ ಯಾರೂ ಇಲ್ಲ ಎನ್ನುವ ಧೈರ್ಯ ದಿಂದ ಮಾತನಾಡುತ್ತಿರುವೆಯಾ..? ಆದರೆ ಪರಮಾತ್ಮನು ಎಲ್ಲ ಕಾರ್ಯಗಳಿಗೂ ಸಾಕ್ಷಿಯಾಗಿ ಎಲ್ಲರ ಹೃದಯಾಂತರಾಳದಲ್ಲಿ ಸರ್ವದಾ ನೆಲೆಸಿರುತ್ತಾನೆ. ಹಾಗಾಗಿ ನಿನ್ನೊಳಗಿರುವ ಪರಮಾತ್ಮನನ್ನು ನೀನು ವಂಚಿಸಲು ಸಾಧ್ಯವಿಲ್ಲ.

ಆದಿತ್ಯಚಂದ್ರಾವನಿಲಾನಲೌ ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ |
ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್ ||

ಸೂರ್ಯ, ಚಂದ್ರ, ವಾಯು, ಅಗ್ನಿ, ಅಂತರಿಕ್ಷ, ಭೂಮಿ, ಜಲ, ಹೃದಯ(ಆತ್ಮ) ಯಮ, ಹಗಲುರಾತ್ರಿಗಳು,ಎರಡು ಸಂಧ್ಯೆಗಳು ಮತ್ತು ಧರ್ಮ ಇವರೆಲ್ಲರೂ ಮನುಷ್ಯ ಮಾಡುವ ಎಲ್ಲ ಕಾರ್ಯಗಳನ್ನು ಎಲ್ಲ ಸಮಯಗಳಲ್ಲೂ ತಿಳಿಯುತ್ತಿರುತ್ತಾರೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.