ವ್ಯಾಸ ಮಹಾಭಾರತ – ಭಾಗ 42 ಆದಿಪರ್ವ (ಸಂಭವಪರ್ವ)

(ಶಾಕುಂತಲೆಯ ಮಾತು)

ಯಮೋ ವೈವಸ್ವತಸ್ತಸ್ಯ ನಿರ್ಯಾತಯತಿ ದುಷ್ಕೃತಮ್ |
ಹೃದಿ ಸ್ಥಿತಃ ಕರ್ಮಸಾಕ್ಷೀ ಕ್ಷೇತ್ರಜ್ಞೋ ಯಸ್ಯ ತುಷ್ಯತಿ ||

ಹೃದಯಕಮಲದಲ್ಲಿ ನೆಲೆಸಿರುವ, ಸರ್ವ ಕರ್ಮಗಳಿಗೆ ಸಾಕ್ಷಿಯಾದ, ಕ್ಷೇತ್ರಜ್ಞನಾದ ಪರಮಪುರುಷನು ಯಾರ ವಿಷಯದಲ್ಲಿ ಸಂತುಷ್ಟನಾಗಿರುವನೋ ಅಂತಹವನ ಸರ್ವ ಪಾಪವನ್ನೂ ಸೂರ್ಯಪುತ್ರನಾದ ಯಮನು ಪರಿಹರಿಸುತ್ತಾನೆ. ಅರ್ಥಾತ್ ಅಂತಹವನಿಗೆ ಯಮನ ಭಯವಿರುವುದಿಲ್ಲ.

ನ ತು ತುಷ್ಯತಿ ಯಸ್ಮೈಷ ಪುರುಷಸ್ಯ ದುರಾತ್ಮನಃ |
ತಂ ಯಮಃ ಪಾಪಕರ್ಮಾಣಾಂ ವಿಯಾತಯತಿ ದುಷ್ಕೃತಮ್ ||

ಅಂತರಾತ್ಮನು ಯಾರ ವಿಷಯದಲ್ಲಿ ಸಂತುಷ್ಟನಾಗಿರುವುದಿಲ್ಲವೋ….ಅಂತರಾತ್ಮನ ಇರುವಿಕೆಯನ್ನು ಕಡೆಗಣಿಸಿ, ತಿರಸ್ಕರಿಸಿ ಯಾರು ನಿರಂತರವಾಗಿ ಪಾಪ ಕರ್ಮಗಳನ್ನು ಮಾಡುತ್ತಿರುತ್ತಾರೋ ಅಂತವರನ್ನು ಯಮನು ಎಂದಿಗೂ ಕ್ಷಮಿಸಲಾರನು ಮತ್ತು ಅವರಿಗೆ ಸರಿಯಾದ ಶಿಕ್ಷೆಯನ್ನೇ ಕೊಡುತ್ತಾನೆ.

ಯೋವಮನ್ಯಾತ್ಮನಾತ್ಮನಾಮನ್ಯಥಾ ಪ್ರತಿಪದ್ಯತೇ |
ನ ತಸ್ಯ ದೇವಾಃ ಶ್ರೇಯಾಂಸೋ ಯಸ್ಯಾತ್ಮಪಿ ನ ಕಾರಣಮ್ ||

ಯಾವನು ಅಂತರಾತ್ಮನು ಹೇಳುತ್ತಿರುವುದನ್ನು ಅನಾದರಣೆ ಮಾಡಿ ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಾನೋ ಅಂತವನ ಪಾಲಿಗೆ ದೇವತೆಗಳೂ ಅನುಗ್ರಹಬುದ್ಧಿಯವರಾಗುವುದಿಲ್ಲ.. ಆತನಿಗೆ ಶ್ರೇಯಸ್ಸು ಲಭಿಸುವುದಿಲ್ಲ ಮತ್ತು ಆತನ ಆತ್ಮವು ಸಂತುಷ್ಟವಾಗಿರುವುದಿಲ್ಲ.

ಶಾಕುಂತಲೆ ಮುಂದುವರಿದು ಹೇಳುತ್ತಾಳೆ… “ನೀನಾಗಿ ಕರೆಸಿಕೊಳ್ಳದೇ ನಾನಾಗಿ ಬಂದುದಕ್ಕಾಗಿ ಈ ರೀತಿ ನೀನು ನನ್ನನ್ನ ತಿರಸ್ಕರಿಸುತ್ತಿರುವೆಯಾ…?? ಮಹಾರಾಜ ಚತುರಂಗ ಬಲವನ್ನು ಕಳುಹಿಸಿ ಕರೆಸಿಕೊಳ್ಳುತ್ತೇನೆಂದು ಹೇಳಿದ ನೀನು ನಾಲ್ಕಾರು ವರ್ಷವೂ ಬಾರದೆ ಇದ್ದುದನ್ನ ನೋಡಿ ಮತ್ತು ನನ್ನ ಮಗ ಯುವರಾಜನಾಗಲು ಈಗಲೇ ಸಮರ್ಥನಾದುದನ್ನ ನೋಡಿ ನನ್ನ ತಂದೆ ನಿನ್ನಲ್ಲಿಗೆ ಕಳುಹಿಸಿದ್ದಾರೆ. ಪತಿವ್ರತೆಯಾದ ನನ್ನನ್ನ ಪುರಸ್ಕರಿಸುವುದಿರಲಿ , ಹೀನವಾದ ಮಾತುಗಳನ್ನಾಡಿ ಅವಮಾನಿಸುತ್ತಿರುವೆ.” ಇಷ್ಟು ಹೇಳಿ ಶಾಕುಂತಲೆ ಸ್ವಲ್ಪ ಹೊತ್ತು ಮೌನವಾಗುತ್ತಾಳೆ…. ಆ ಹೊತ್ತಿನಲ್ಲೂ ದುಷ್ಯಂತನಿಂದ ಉತ್ತರವೇನೂ ಬರಲಿಲ್ಲ… ಆತ ತನಗೇನೂ ತಿಳಿದೇ ಇಲ್ಲವೆಂಬಂತೆ ಕುಳಿತುಕೊಂಡಿರುತ್ತಾನೆ. ಆಗ ಶಾಕುಂತಲೆ…” ನಾನು ಜನರಿಲ್ಲದ ಅರಣ್ಯದಲ್ಲಿ ಕೂಗುತ್ತಿಲ್ಲ ತಾನೇ…? ನಾನು ಮಾತನಾಡುತ್ತಿರುವುದು ನಿನಗೆ ಕೇಳುತ್ತಿದೆಯಲ್ಲವೇ…? ಪತ್ನಿಯಾದವಳನ್ನ “ಜಾಯಾ” ಎಂದು ಕರೆಯುವರು. ಜಾಯಾ ಶಬ್ದದ ನಿರುಕ್ತಿಯಾದರೂ ನಿನಗೆ ತಿಳಿದಿರುವುದೇ….?

ಭಾರ್ಯಾಂ ಪತಿಃ ಸಂಪ್ರವಿಶ್ಯ ಸ ಯಸ್ಮಾಜ್ಜಾಯತೇ ಪುನಃ |
ಜಾಯಾಯಾಸ್ತದ್ಢಿ ಜಾಯಾತ್ವಂ ಪೌರಾಣಾಃ ಕವಯೋ ವಿದುಃ ||

ಪತಿಯು ಭಾರ್ಯೆಯ ಗರ್ಭಾಂಬುಧಿಯನ್ನು ಶುಕ್ಲರೂಪವಾಗಿ ಪ್ರವೇಶಿಸಿ ಮಗನೆಂಬ ಅಭಿಧಾನದಿಂದ ಪುನಃ ಅವಳಲ್ಲಿಯೇ ಹುಟ್ಟುತ್ತಾನೆ. ಈ ಕಾರಣದಿಂದಲೇ ಪತ್ನಿಗೆ ಜಾಯಾ ಶಬ್ದವು ಸಿದ್ಧವಾಗುವುದೆಂದು ಹಿಂದಿನ ವಿದ್ವಾಂಸರ ಅಭಿಮತವಾಗಿದೆ.

ಪುನ್ನಾಮ್ನೋ ನರಕಾದ್ಯಸ್ಮಾತ್ಪಿತರಂ ತ್ರಾಯತೇ ಸುತಃ |
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ ||

ಮಹಾರಾಜ ಪುತ್ರನಿಲ್ಲದವನಿಗೆ ” ಪುತ್ ” ಎಂಬ ಹೆಸರಿನ ನರಕವು ಪ್ರಾಪ್ತವಾಗುವುದು. ಮಗನು ಹುಟ್ಟಿ ಅಂತಹ ಪುತ್ ಎಂಬ ಹೆಸರಿನ ನರಕದಿಂದ ತಂದೆಯನ್ನು ಪಾರುಮಾಡುವನಾದ್ದರಿಂದ ಅವನು ಪುತ್ರನೆಂದು ಕರೆಯಲ್ಪಡುತ್ತಾನೆಂದು ಸ್ವಯಂಭುವೇ ಹೇಳಿದ್ದಾನೆ. ಆದರೆ ನಿನ್ನೆದುರು ಅಂತಹ ಪುತ್ರನು ನಿಂತಿದ್ದರೂ ನೀನು ಏನೂ ತಿಳಿಯದವನಂತೆ ನಟಿಸುತ್ತಿರುವೆ.

ನಾನು ನಿನ್ನ ಧರ್ಮಪತ್ನಿ…. ಪತ್ನಿ ಮಹತ್ವವೇನೆಂಬುದನ್ನು ನೀನು ತಿಳಿದಿರುವೆಯಾ…? ಅದನ್ನು ಅರಿತಿದ್ದರೆ ನೀನಿಂದು ನನ್ನನ್ನ ಅವಮಾನಿಸುತ್ತಿರಲಿಲ್ಲ.

ಸಾ ಭಾರ್ಯಾ ಯಾ ಗೃಹೇ ದಕ್ಷಾ ಸಾ ಭಾರ್ಯಾ ಯಾ ಪ್ರಜಾವತೀ |
ಸಾ ಭಾರ್ಯಾ ಯಾ ಪತಿಪ್ರಾಣಾ ಸಾ ಭಾರ್ಯಾ ಯಾ ಪತಿವ್ರತಾ ||

ಗೃಹಕೃತ್ಯಗಳಲ್ಲಿ ದಕ್ಷಳಾಗಿರಬೇಕು. ಪುತ್ರವತಿಯಾಗಿರಬೇಕು. ಪತಿಯೇ ತನ್ನ ಪ್ರಾಣವೆಂದು ಭಾವಿಸಿರಬೇಕು. ಪತಿಯು ಮಾಡುವ ಕೆಲಸ ಕಾರ್ಯಗಳಿಗೆ ಅನುಕೂಲಳಾಗಿರಬೇಕು. ಇವುಗಳು ಭಾರ್ಯೆಯಾದವಳ ಮುಖ್ಯ ಲಕ್ಷಣಗಳು.

ಅರ್ಧಂ ಭಾರ್ಯಾ ಮನುಷ್ಯಸ್ಯ ಭಾರ್ಯಾ ಶ್ರೇಷ್ಠತಮಃ ಸಖಾ |
ಭಾರ್ಯಾ ಮೂಲಂ ತ್ರಿವರ್ಗಸ್ಯ ಭಾರ್ಯಾ ಮೂಲಂ ತರಿಷ್ಯತಃ ||

ಭಾರ್ಯೆಯು ಪತಿಯ ಅರ್ಧಾಂಗಿ. ಭಾರ್ಯೆಯು ಶ್ರೇಷ್ಠತಮಳಾದ ಮಿತ್ರಸ್ವರೂಪಳು. ಧರ್ಮಾರ್ಥಕಾಮಗಳ ಪ್ರಾಪ್ತಿಗಾಗಿ ಭಾರ್ಯೆಯೇ ಕಾರಣಳಾಗುತ್ತಾಳೆ. ಸಂಸಾರಸಾಗರವನ್ನು ದಾಟಲಿಚ್ಛಿಸುವವನು ಭಾರ್ಯೆಯ ನೆರವನ್ನು ಪಡೆಯಲೇಬೇಕು.

ಭಾರ್ಯಾವಂತಃ ಕ್ರಿಯಾವಂತಃ ಸಭಾರ್ಯಾ ಗೃಹ ಮೇಧಿನ |
ಭಾರ್ಯಾವಂತಃ ಪ್ರಮೋದಂತೇ ಭಾರ್ಯಾವಂತಃ ಶ್ರಿಯಾನ್ವಿತಾಃ ||

ಸಪತ್ನೀಕರಾಗಿದ್ದರೆ ಮಾತ್ರ ಯಜ್ಞಯಾಗಾದಿಗಳಲ್ಲಿ ಭಾಗವಹಿಸಲು ಅರ್ಹನಾಗುತ್ತಾನೆ. ( ಅಥವಾ ಪತ್ನಿಯನ್ನು ಸಾಕಿ ಸಲಹುವ ಜವಾಬ್ದಾರಿ ಬಿದ್ದಾಗಲೇ ಮನುಷ್ಯನು ಕಾರ್ಯೋನ್ಮುಖನಾಗುತ್ತಾನೆ.) ಸಪತ್ನೀಕರು ಮಾತ್ರವೇ ಗೃಹಸ್ಥ ಎಂದು ಕರೆಯಲ್ಪಡುತ್ತಾನೆ. ( ಮನೆಯೊಳಗೆ ವಾಸಮಾಡುವ ಎಲ್ಲರನ್ನೂ ಗೃಹಸ್ಥ ಎಂದು ಕರೆಯುವುದಿಲ್ಲ.)

ಸಖಾಯಃ ಪ್ರವಿವಿಕ್ತೇಷು ಭವಂತ್ಯೇತಾಃ ಪ್ರಿಯಂವದಾಃ |
ಪಿತರೋ ಧರ್ಮಕಾರ್ಯೇಷು ಭವಂತ್ಯಾರ್ತಸ್ಯ ಮಾತರಃ |

ಪತ್ನಿಯಾದವಳು ತಂದೆ,ತಾಯಿ,ಮಿತ್ರ ದಾಸಿ ಈ ಎಲ್ಲರ ಪಾತ್ರವನ್ನು ವಹಿಸುತ್ತಾಳೆ. ಏಕಾಂತದಲ್ಲಿ ಭಾರ್ಯೆಯು ಸನ್ಮಿತ್ರನಂತೆ ಪತಿಗೆ ಪ್ರಿಯವಾದ ಮಾತುಗಳನ್ನ ಆಡುತ್ತಾಳೆ. ಧರ್ಮಕಾರ್ಯಗಳಲ್ಲಿ ತಂದೆಯು ಮಗನಿಗೆ ಮಾರ್ಗದರ್ಶನ ನೀಡುವಂತೆ ಹಿತವಾದ ಮಾತುಗಳನ್ನಾಡುತ್ತಾಳೆ. ರೋಗರುಜಿನಗಳು ಬಂದಾಗ ತಾಯಿಯಂತೆ ಸೇವೆಯನ್ನೂ ಮಾಡುತ್ತಾಳೆ.

ಪುರುಷನೊಬ್ಬ ತೀರ್ಥಯಾತ್ರಗೆ ಹೋದಲ್ಲಿ ಪತ್ನೀ ಸಹಿತನಾಗಿದ್ದಾಗ ಮಾತ್ರ ಜನರು ಆಶ್ರಯ ಕೊಡುತ್ತಾರೆ. ಅರ್ಥಾತ್ ಸಪತ್ನೀಕನ ಮೇಲೆ ಲೋಕ ವಿಶ್ವಾಸವನ್ನಿರಿಸುತ್ತದೆ. ಕಷ್ಟದ ಸಮಯದಲ್ಲಿ ಎಲ್ಲರೂ ಕೈ ಬಿಟ್ಟರೂ ಪತ್ನಿಯಾದವಳು ಪತಿಯ ಜೊತೆಗೇ ನಿಲ್ಲುತ್ತಾಳೆ. ಇಹಪರಗಳೆರಡರಲ್ಲೂ ಜೊತೆ ನೀಡುತ್ತಾಳೆನ್ನುವ ಕಾರಣಕ್ಕೆ ಸದ್ಗುಣೆಯಾದ ಹೆಣ್ಣನ್ನು ಜನ ವಿವಾಹವಾಗಬಯಸುತ್ತಾರೆ.

ಆತ್ಮನೋ ಜನ್ಮನಃ ಕ್ಷೇತ್ರಂ ಪುಣ್ಯಂ ರಾಮಾಃ ಸನಾತನಮ್ |
ಋಷೀಣಾಮಪಿ ಕಾ ಶಕ್ತಿಃ ಸ್ರಷ್ಟುಂ ರಾಮಾಮೃತೇ ಪ್ರಜಾಮ್ ||

ಸ್ತ್ರೀಯು ಮಾನವನ ಜನ್ಮ ಕ್ಷೇತ್ರ. ಜನ್ಮಭೂಮಿಯು ಪವಿತ್ರವಾದುದಾದರೆ ಜನ್ಮಕ್ಷೇತ್ರವೂ ಪವಿತ್ರವಾದುದೇ ಆಗಿದೆ. ಮಹಾತಪಸ್ವಿಗಳು ಕೂಡಾ ಸ್ತ್ರೀ ರಹಿತವಾಗಿ ಪ್ರಜೋತ್ಪತ್ತಿ ಮಾಡಲಾರರು. ಬದಲಾಗಿ ಮಹಾತಪಸ್ವಿಗಳ, ತೇಜೋವಂತರ ಜನನವು ಸ್ತ್ರೀ ಯರಿಂದಲೇ ಆಗಿದೆ.

ಮಹಾರಾಜ ಮಕ್ಕಳ ಸುಖವೆಂದರೇನು..? ಮಕ್ಕಳಿಂದ ಹೇಗೆ ಸುಖ ಪಡೆಯುವುದು. ? ತಂದೆಯಾದವನು ತನ್ನ ಮಕ್ಕಳಿಂದ ಹೇಗೆ ಸುಖ ಪಡೆಯುವುದು ಅನ್ನುವುದು ನಿನಗಿನ್ನೂ ಗೊತ್ತಿಲ್ಲವೆಂದು ತೋರುತ್ತದೆ. ಹೊರಗೆ ಹೋಗಿದ್ದ ತಂದೆಯು ಮನೆಗೆ ಬಂದನೆಂದು ತಾಯಿಯಿಂದ ಕೇಳಿ ತಿಳಿದಾಗ ಮಣ್ಣಿನಲ್ಲಿ ಆಡುತ್ತಿದ್ದ ಪುಟ್ಟ ಕಂದನು ” ಅಪ್ಪಾ ಅಪ್ಪಾ ” ಎಂದು ಓಡಿ ಬಂದು ತಂದೆಯ ತೊಡೆಯ ಮೇಲೆ ಹೊರಾಳಾಡುವಾಗಿನ ಆನಂದ ಅನುಭವಿಸಿಯೇ ತೀರಬೇಕು. ಅಂತಹ ಮಗ ನಿನ್ನ ಕಣ್ಣೆದುರಿಗಿರಬೇಕಾದರೆ ಅವನನ್ನೇಕೆ ಅನಾದರ ಮಾಡುತ್ತಿರುವೆ..?

ನಾ ವಾಸಸಾಂ ನಾ ರಾಮಾಣಾಂ ನಾಪಾಂ ಸ್ಪರ್ಶಸ್ತಥಾವಿಧಃ |
ಶಿಶೋರಾಲಿಂಗಮಾನಸ್ಯ ಸ್ಪರ್ಶಃ ಸೂನೋರ್ಯಥಾ ಸುಖಃ ||

ಪುರುಷನಿಗೆ ಸ್ಪರ್ಶ ದಲ್ಲಿ ಹಿತವನ್ನುಂಟು ಮಾಡುವ ಮೂರು ವಸ್ತುಗಳಿವೆ. ಸ್ತ್ರೀ , ಬಟ್ಟೆ ಮತ್ತು ನೀರು ಆದರೆ ಧೂಳಿನಿಂದ ಕೂಡಿದ ಪುತ್ರ ತನ್ನ ತಂದೆಯನ್ನ ಆಲಿಂಗಿಸುವಾಗ ಸಿಗುವ ಸ್ಪರ್ಶಕ್ಕೆ ಈ ಮೂರೂ ಸಾಟಿಯಲ್ಲ. ಇದು ಕೊಡುವ ಆನಂದ ಶ್ರೇಷ್ಠವಾದುದು. ಪುತ್ರನ ಆಲಿಂಗನವು ಅಷ್ಟೊಂದು ಆನಂದದಾಯಕವಾದುದು.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...

Leave a Reply

Your email address will not be published.

error: Content is protected !!