ವ್ಯಾಸ ಮಹಾಭಾರತ – ಭಾಗ 43 ಆದಿಪರ್ವ (ಸಂಭವಪರ್ವ)

ಬ್ರಾಹ್ಮಣೋ ದ್ವಿಪದಾಂ ಶ್ರೇಷ್ಠೋ ಗೌರ್ವರಿಷ್ಠಾ ಚತುಷ್ಪಾದಮ್ |
ಗುರುರ್ಗರೀಯಸಾಂ ಶ್ರೇಷ್ಠಃ ಪುತ್ರಃ ಸ್ಪರ್ಶವತಾಂ ವರಃ ||

ಎರಡು ಕಾಲುಗಳ ಪ್ರಾಣಿಗಳಲ್ಲಿ ಬ್ರಾಹ್ಮಣನು ಶ್ರೇಷ್ಠನಾದವನು. ನಾಲ್ಕು ಕಾಲುಗಳ ಪ್ರಾಣಿಗಳಲ್ಲಿ ಹಸುವು ಶ್ರೇಷ್ಠವಾದುದು. ಪೂಜಾರ್ಹರಲ್ಲಿ ಗುರುವು ಶ್ರೇಷ್ಠನೆನಿಸುತ್ತಾನೆ. ಹಾಗೆಯೇ ಸ್ಪರ್ಶ ಮಾಡಲು ಯೋಗ್ಯರಾದವರಲ್ಲಿ ಮಗನು ಶ್ರೇಷ್ಠನೆನಿಸುತ್ತಾನೆ.

ಪುತ್ರನೆಂದರೆ ಯಾರು…? ಅವನ ನಿಜಸ್ವರೂಪವೇನು….? ಎಂಬ ವಿಷಯ ವೇದಗಳಲ್ಲಿಯೂ ಉಲ್ಲೇಖಿತವಾಗಿದೆ. ಬ್ರಾಹ್ಮಣರು ಮಕ್ಕಳಿಗೆ ಜಾತಕರ್ಮ ಸಂಸ್ಕಾರ ಮಾಡುವ ವೇಳೆಯಲ್ಲಿ ಈ ಮಂತ್ರವನ್ನ ಹೇಳುತ್ತಾರೆ.

ಅಂಗಾದಂಗತ್ಸಮ್ಭವಸಿ ಹೃದಯಾದಧಿಯಜಾಯಸೇ |
ಆತ್ಮಾ ವೈ ಪುತ್ರನಾಮಾಸಿ ಸ ಜೀವ ಶರದಃ ಶತಮ್ ||
ಬಾಲಕನೇ ನನ್ನ ಅಂಗಾಂಗಗಳಿಂದಲೂ ಹೃದಯದಿಂದಲೂ ನೀನು ಹುಟ್ಟಿರುವೆ. ಅರ್ಥಾತ್ ನೀನು ನನ್ನ ಆತ್ಮವೇ ಆಗಿರುವೆ.ಆದರೆ ಪುತ್ರನೆಂಬ ಹೆಸರು ಪಡೆದಿರುವೆ. ನೀನು ನೂರು ವರ್ಷಗಳ ಪರ್ಯಂತ ಜೀವಿಸಿರು…. ಇದೇ ಆ ಮಂತ್ರದ ಅರ್ಥ

ಯಥಾ ಹ್ಯಾಹವನೀಯೋಗ್ನಿರ್ಗಾರ್ಹಪತ್ಯಾತ್ಪ್ರಣೀಯತೇ |
ತಥಾ ತ್ವತ್ತಃ ಪ್ರಸೂತೋಯಂ ತ್ವಮೇಕಃ ಸನ್ ದ್ವಿಧಾಕೃತಃ ||

ಗಾರ್ಹಪತ್ಯಾಗ್ನಿಯಿಂದ ಆಹವನೀಯಾಗ್ನಿಯು ಸಿದ್ಧವಾಗಿರುವಂತೆ ನಿನ್ನಿಂದಿವನು ಹುಟ್ಟಿದ್ದಾನೆ. ಗಾರ್ಹಪತ್ಯಾಗ್ನಿಯಿಂದ ಆಹವನೀಯಾಗ್ನಿಯು ಹುಟ್ಟಿದರೂ ಎರಡೂ ಅಗ್ನಿಗಳಿಗೂ ಯಾವ ವಿಧವಾದ ವ್ಯತ್ಯಾಸವೂ ಇರದಂತೆ ನಿನಗೂ ನಿನ್ನ ಮಗನಿಗೂ ಯಾವ ವಿಧವಾದ ವ್ಯತ್ಯಾಸವೂ ಇಲ್ಲ. ನೀನೇ ನಿನ್ನ ಆತ್ಮವನ್ನು ಎರಡು ಮಾಡಿಕೊಂಡಿರುವೆ.

ಇಷ್ಟೆಲ್ಲಾ ಹೇಳುತ್ತಿದ್ದರೂ ದುಷ್ಯಂತ ಮೂಕನಂತೆ, ಶಿಲೆಯಂತೆ ಹಾಗೇ ಕುಳಿತಿದ್ದ. ಆಗ ಶಾಕುಂತಲೆಯು… ” ನೀನು ಮರೆತಿದ್ದರೆ ಅನ್ನುವ ಕಾರಣಕ್ಕಾಗಿ ಮತ್ತೊಮ್ಮೆ ಹಿಂದಿನದೆಲ್ಲಾ ವಿವರಿಸುತ್ತೇನೆ. ಹಿಂದೊಮ್ಮೆ ನೀನು ಬೇಟೆಗಾಗಿ ಕಾಡಿಗೆ ಬಂದಿದ್ದಾಗ ದಿಕ್ಕು ತಪ್ಪಿ ನಮ್ಮ ಆಶ್ರಮಕ್ಕೆ ಬಂದಿದ್ದಿ. ಏಕಾಂತದಲ್ಲಿದ್ದ ನನ್ನ ಬಳಿ ನನ್ನ ಜನ್ಮ ವೃತ್ತಾಂತವನ್ನ ಕೇಳಿ, ನಾನು ವಿಶ್ವಾಮಿತ್ರ ಮತ್ತು ಮೇನಕೆಯ ಮಗಳು ಎಂದು ಹೇಳಿದ ಬಳಿಕ ನಾನೊಬ್ಬ ಕ್ಷತ್ರಿಯ ಹೆಣ್ಣು ಎನ್ನುವುದು ತಿಳಿದ ಕೂಡಲೇ ನನ್ನನ್ನು ಗಾಂಧರ್ವ ವಿವಾಹವಾಗುವ ಬಯಕೆಯನ್ನು ಮುಂದಿಟ್ಟೆ.. ನನ್ನ ನಿಬಂಧನೆ ಗೆ ಒಪ್ಪಿ ನನ್ನನ್ನ ಗಾಂಧರ್ವ ವಿವಾಹವಾಗಿದ್ದೆ…. ಬಾಲ್ಯದಲ್ಲಿ ನನ್ನ ತಂದೆತಾಯಿಯರು ನನ್ನನ್ನು ತ್ಯಜಿಸಿದರು. ಈಗ ಕೈ ಹಿಡಿದ ನೀನೂ ಈ ರೀತಿ ಪರಿತ್ಯಜಿಸುವುದು ಸಾಧುವೇ…? ಬಹುಶಃ ಹಿಂದಿನ ಜನ್ಮದಲ್ಲಿ ನಾನು ದೊಡ್ಡ ಪಾಪವನ್ನೇ ಮಾಡಿದ್ದಿರಬೇಕು ಅದಕ್ಕಾಗಿಯೇ ಈ ಶಿಕ್ಷೆ ನನಗೊದಗಿ ಬರುತ್ತಿದೆ. … ಮಹಾರಾಜ ನನ್ನನ್ನು ಪರಿತ್ಯಜಿಸಿದರೂ ಚಿಂತೆಯಿಲ್ಲ ನಾನು ಮತ್ತೆ ನನ್ನ ತಂದೆಯಾದ ಕಣ್ವರ ಆಶ್ರಮ ಸೇರುತ್ತೇನೆ. ಆದರೆ ನಿನ್ನ ಆತ್ಮಜನಾಗಿರುವ ನಿನ್ನ ಮಗನನ್ನು ಪರಿತ್ಯಜಿಸಬೇಡ. ” ಎನ್ನುತ್ತಾಳೆ.

ಆಗ ದುಷ್ಯಂತನು, ” ನಿನ್ನ ಪುತ್ರನ ಜನನದ ಬಗ್ಲೆ ನನಗೇನೂ ತಿಳಿಯದು. ಹೆಂಗಸರು ಸದಾ ಸುಳ್ಳನ್ನೇ ಹೇಳುತ್ತಾರೆ. ಹಾಗಿರುವಾಗ ನಿನ್ನ ಮಾತನ್ನು ಹೇಗೆ ನಂಬಲಿ..? ನಿನ್ನ ಹುಟ್ಟೇ ನಿನ್ನ ಚಾರಿತ್ರ್ಯವನ್ನ ಹೇಳುತ್ತದೆ. ನಿನ್ನ ತಾಯಿ ವೇಶ್ಯೆ.. ನಿನ್ನ ತಂದೆಯೋ ಕ್ಷತ್ರಿಯನಾಗಿದ್ದವ ಕಾಲಾಂತರದಲ್ಲಿ ಬ್ರಾಹ್ಮಣನಾದವ.. ತಪಸ್ಸನ್ನಾಚರಿಸುವಾಗ ಕಾಮಾಭಿಭೂತನಾಗಿ ಮೇನಕೆಯನ್ನ ಸಂಸೇವಿಸಿದಾಗ ನಿನ್ನ ಜನನವಾಯ್ತು. ಅಂತವರ ಮಗಳಾದ ನಿನ್ನ ಸ್ವಭಾವ ಹೇಗಿದ್ದೀತು..?

ದುಷ್ಯಂತ ಮುಂದುವರೆಸುತ್ತಾ….

“ಒಂದು ವೇಳೆ ಮೇನಕೆ ಅಪ್ಸರೆಯಲ್ಲಿಯೇ ಶ್ರೇಷ್ಠ ಎಂದಿಟ್ಟುಕೊಳ್ಳೋಣ…. ವಿಶ್ವಾಮಿತ್ರರು ಶ್ರೇಷ್ಠ ಮಹರ್ಷಿ ಎಂದಿಟ್ಟುಕೊಳ್ಳೋಣ… ಅವರಿಬ್ಬರ ಸಮಾಗಮದಿಂದ ಹುಟ್ಟಿದ ನೀನೇಕೆ ವ್ಯಭಿಚಾರಿಣಿಯಂತೆ ವರ್ತಿಸುತ್ತಿರುವೆ. ನನ್ನೊಡನೆ ನಿನಗೆ ಸಂಬಂಧವಿದೆಯೆಂದು ಯಾರಿಂದಲೂ ನಂಬಲು ಸಾಧ್ಯವಿಲ್ಲ… ಈ ನಿನ್ನ ಮಗನಾದರೂ ಅತ್ಯಂತ ಸ್ಥೂಲಕಾಯನಾಗಿದ್ದಾನೆ. ಬಾಲನಾಗಿದ್ದರೂ ಮಹಾಬಲಿಷ್ಠನಂತೆ ಕಾಣುತ್ತಿದ್ದಾನೆ. ಅತ್ಯಲ್ಪಕಾಲದಲ್ಲಿ ಇಷ್ಟು ಬಲಿಷ್ಠನಾಗಿ ಬೆಳೆದುದಾದರೂ ಹೇಗೆ…? ನೀನು ಹೇಳುತ್ತಿರುವ ನಮ್ಮ ಸಮಾಗಮ ಕಾಲವನ್ನೂ ಮತ್ತು ಇವನ ಬೆಳವಣಿಗೆಯನ್ನೂ ನೋಡಿದರೆ ನೀನು ಹೇಳುವುದರಲ್ಲಿ ಸತ್ಯಾಂಶ ಇಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಆರು ವರ್ಷಗಳಲ್ಲಿ ಇಷ್ಟು ಮಹಾಕಾಯನಾಗಿ ಬೆಳೆಯಲು ಸಾಧ್ಯವೇ…? ಈತ ಯಾರ ಮಗನೋ ಏನೋ… ಒಬ್ಬ ವೇಶ್ಯೆಯ ಮಗಳಾದ್ದರಿಂದ ಆ ಗುಣ ನಿನ್ನಲ್ಲಿದೆಯೋ ಏನೋ… ಹಾಗಾಗಿ ನಿನ್ನ ಮಗುವಿಗೂ ನನಗೂ ಯಾವುದೇ ಸಂಬಂಧವಿಲ್ಲ ನೀನು ಎತ್ತ ಬೇಕಿದ್ದರೂ ತೆರಳಬಹುದು…” ಎನ್ನುತ್ತಾನೆ.
ಮಹಾರಾಜನ ಈ ಚುಚ್ಚು ಮಾತಿಗೆ ಶಾಂಕುತಲೆಯು ಅನುರೂಪವಾಗಿಯೇ ಉತ್ತರಿಸತೊಡಗುತ್ತಾಳೆ.” ಮಹಾರಾಜ ತನ್ನೊಳಗೆ ಬಿಲ್ವಫಲದಷ್ಟು ದೊಡ್ಡದಾದ ದೋಷವನ್ನಿಟ್ಟುಕೊಂಡು ಇತರರ ಸಾಸಿವೆಕಾಳಿನಷ್ಟರ ದೋಷವನ್ನ ಬೊಟ್ಟು ಮಾಡುವುದು ನೀಚರ ಸ್ವಭಾವವಾಗಿದೆ. ಅಂತಹ ಕಾರ್ಯವನ್ನೇ ನೀನೀಗ ಮಾಡುತ್ತಿರುವೆ. ನೀನು ನನ್ನ ತಾಯಿಯನ್ನ ವೇಶ್ಯೆಯೆಂದು ತೆಗಳಿದೆ. ಚಿಂತೆಯಿಲ್ಲ ಆದರೆ ಅವಳು ಸ್ವರ್ಗದಲ್ಲಿರತಕ್ಕವಳು ಎನ್ನುವುದನ್ನ ಮರೆಯಬೇಡ. ದೇವತೆಗಳೂ ಅವಳನ್ನು ಪುರಸ್ಕರಿಸುತ್ತಾರೆ. ನಾನು ಅಂತಹ ಸ್ವರ್ಗವಾಸಿ ಮೇನಕೆಯ ಮಗಳು. ನೀನಾದರೋ ಭೂಮಿಯಲ್ಲಿ ಜನ್ಮ ತಾಳಿದವ ಇಷ್ಟರಿಂದಲೇ ನಿನ್ನ ಜನ್ಮಕ್ಕಿಂತ ನನ್ನ ಜನ್ಮವು ಅತ್ಯುಚ್ಛ ಎನ್ನುವುದು ಸಿದ್ಧವಾಗುತ್ತದೆ. ಮೇನಕೆ ಮಗಳಾದ ನಾನು ಈ ಕ್ಷಣದಲ್ಲಿಯೇ ಯಾವ ಲೋಕಕ್ಕೂ ಸಂಚರಿಸಬಲ್ಲೆ ಅಂತಹ ಸಾಮರ್ಥ್ಯ ನನಗಿದೆ ಆದರೆ ಆ ಸಾಮರ್ಥ್ಯ ನಿನಗಿಲ್ಲ.

ಮುಂದುವರೆಯುತ್ತದೆ…

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache