ವ್ಯಾಸ ಮಹಾಭಾರತ – ಭಾಗ 44 ಆದಿಪರ್ವ (ಸಂಭವಪರ್ವ)

ವಿರೂಪೋ ಯಾವದಾದರ್ಶೇ ನಾತ್ಮನಃ ಪಶ್ಯತೇ ಮುಖಮ್ |
ಮನ್ಯತೇ ತಾವದಾತ್ಮ ನಮನ್ಯೇಭ್ಯೋ ರೂಪವತ್ತರಮ್ ||

ಯದಾ ಸ್ವಮುಖಮಾದರ್ಶೇ ವಿಕೃತಂ ಸೋ ಭಿವೀಕ್ಷತೇ |
ತಾದಾಂತರಂ ವಿಜಾನೀತೇ ಆತ್ಮಾನಂ ಚೇತರಂ ಜನಮ್ ||

ಕನ್ನಡಿಯಲ್ಲಿ ತನ್ನ ವಿರೂಪ ಮುಖವನ್ನು ನೋಡುವವರೆಗೂ ಕುರೂಪಿಯು ತಾನು ಎಲ್ಲರಿಗಿಂತಲೂ ರೂಪವಂತನೆಂದೇ ಭಾವಿಸುತ್ತಾನೆ. ತನ್ನ ಸ್ವರೂಪ ದರ್ಶನವಾದ ಮೇಲೆ ಆತ ತನ್ನೊಳಗೂ ಸುರೂಪವಂತರಲ್ಲಿಯೂ ವ್ಯತ್ಯಾಸವನ್ನೇ ಹುಡುಕುತ್ತಿರುತ್ತಾನೆ. ತನ್ನ ಕುರೂಪದ ದರ್ಶನವಾದ ಮೇಲೂ ಕುರೂಪಿಯು ಸಮ್ಮನಿರುವನೆಂದು ಹೇಳಲಾಗುವುದಿಲ್ಲ, ಆತ ಇನ್ನೊಬ್ಬರಲ್ಲಿನ ದೋಷಗಳನ್ನು ಹುಡುಕತೊಡಗುತ್ತಾನೆ.

ಅತೀವರೂಪಸಂಪನ್ನೋ ನ ಕಂಞ್ಚಿದವಮನ್ಯತೇ |
ಅತೀವ ಜಲ್ಪಂದುರ್ವಾಚೋ ಭವತೀಹ ವಿಹೇಠಕಃ ||

ಬಹುರೂಪಸಂಪನ್ನನಾಗಿರುವವನು ತನ್ನ ರೂಪದ ಬಗ್ಗೆ ಹೇಳಿಕೊಳ್ಳುವುದೂ ಇಲ್ಲ ಇನ್ನೊಬ್ಬರ ಕುರೂಪದ ಬಗ್ಗೆ ಆಡಿಕೊಳ್ಳುವುದಿಲ್ಲ ಆದರೆ ಕುರೂಪಿಯು ಇತರರ ಬಗ್ಗೆ ಹೇಳುತ್ತಾ ಸತ್ಪುರುಷರನ್ನ ಪೀಡಿಸುತ್ತಿರುತ್ತಾನೆ.

ಮೂರ್ಖೋ ಹಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಃ |
ಅಶುಭಂ ವಾಕ್ಯಮಾದತ್ತೇ ಪುರೀಷಮಿವ ಸೂಕರಃ ||

ಮಾತನಾಡುವವರು ಸಾಮಾನ್ಯವಾಗಿ ಶುಭವಾದುದನ್ನು ಅಶುಭವಾದುದನ್ನು ಮಾತನಾಡುತ್ತಾರೆ. ಆದರೆ ಮೂರ್ಖನಾದವನ ಸ್ವಭಾವವೇನೆಂದರೆ ಅವರ ನೀತಿ ಭೋದಕ ಮಾತುಗಳಲ್ಲಿ ಕೇವಲ ಅಶುಭವಾದುದನ್ನೆ ಆಯ್ದುಕೊಂಡು ಸದಾ ಅವರನ್ನು ತೆಗಳುತ್ತಾನೆ.

ಮೂರ್ಖನು ಹಂದಿಯಂತೆ. ಹಂದಿಯ ಎದುರಿಗೆ ಉತ್ತಮವಾದ ಫಲವಸ್ತು ಮತ್ತಿತರ ಭೋಜ್ಯ ವಸ್ತುಗಳನ್ನಿಟ್ಟರೂ ಸ್ವೀಕರಿಸದೆ ಮನುಷ್ಯನ ಮಲವನ್ನೇ ಬಯಸುತ್ತದೆ.

ಇದಕ್ಕೆ ಬದಲಾಗಿ ಪ್ರಾಜ್ಞರು ಏನು ಮಾಡುತ್ತಾರೆ ಗೊತ್ತೇ…??

ಪ್ರಾಜ್ಞಸ್ತು ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಃ |
ಗುಣವದ್ವಾಕ್ಯಮಾದತ್ತೇ ಹಂಸಃ ಕ್ಷೀರಮಿಮಾಂಭಸಃ ||

ಬೆರಸಿಟ್ಟ ಹಾಲು ನೀರಿನಲ್ಲಿ ಹಂಸವು ಹೇಗೆ ಕೇವಲ ಹಾಲನ್ನು ಮಾತ್ರ ಸ್ವೀಕರಿಸುತ್ತೋ ಹಾಗೇ ಪ್ರಾಜ್ಞರು ಆಡುವವರ ಮಾತಿನಲ್ಲಿನ ಶುಭವಾದ ಮಾತುಗಳನ್ನಷ್ಟೇ ಆಯ್ದುಕೊಂಡು ಅವರನ್ನು ಪ್ರಶಂಸಿಸುತ್ತಾರೆ.

ನಿನ್ನನ್ನು ಹಂದಿಗೆ ಹೋಲಿಸಲು ಹೇಳಿದ ಮಾತಿದಲ್ಲ, ಲೋಕದಲ್ಲಿ ಮೂರ್ಖರಿಗೂ ಪ್ರಾಜ್ಞರಿಗೂ ಇರುವ ವ್ಯತ್ಯಾಸ ತೋರಿಸಲು ಹಿರಿಯರು ಹೇಳಿದ್ದ ಮಾತನ್ನೇ ಉದಾಹರಿಸಿದ್ದೇನೆ. ಸತ್ಪುರುಷರು ಪರನಿಂದೆಯನ್ನೆಂದೂ ಮಾಡುವುದಿಲ್ಲ , ಬದಲಾಗಿ ದುರ್ಜನರು ಪರನಿಂದನೆಯಲ್ಲೇ ಕಾಲಕಳೆದು ಆನಂದ ಹೊಂದುತ್ತಾರೆ. ತಾವೇ ನಿಂದ್ಯರಾಗಿದ್ದರೂ ಪರರನ್ನು ನಿಂದಿಸುವುದರಲ್ಲೇ ಸುಖವನ್ನ ಹೊಂದುತ್ತಾರೆ.

ಮಹಾರಾಜ ನೀನು ನನ್ನನ್ನು ತೆಗಳಿದ್ದರಿಂದ ನನ್ನನ್ನು ವಂಚಕಿ ಎಂದುದಕ್ಕಾಗಿ ಕೋಪಿಸಿಕೊಳ್ಳುವ ಪ್ರಮೇಯವಿಲ್ಲ. ನನಗಿದು ನಗುವನ್ನು ತರಿಸುವ ವಿಷಯವಾಗಿದೆ. ಇದಕ್ಕಿಂತಲೂ ಹಾಸ್ಯಾಸ್ಪದವಾದ ವಿಷಯವೇ ಇನ್ನೊಂದಿರಲಿಕ್ಕಿಲ್ಲ.

ಅತೋ ಹಾಸ್ಯತರಂ ಲೋಕೇ ಕಿಂಚಿದನ್ಯನ್ನ ವಿದ್ಯತೇ |
ಯತ್ರ ದುರ್ಜನಮಿತ್ಯಾಹ ದುರ್ಜನಃ ಸಜ್ಜನಂ ಸ್ವಯಮ್ ||

ದುಷ್ಟನೊಬ್ಬ ತಾನೇ ದುರ್ಜನನಾಗಿದ್ದು, ಆತ್ಮದ್ರೋಹಿಯಾಗಿದ್ದು, ವಂಚಕನಾಗಿದ್ದು ಇತರರನ್ನು ದುಷ್ಟನೆಂದು ಕರೆದರೆ ಅದಕ್ಕಿಂತ ಹಾಸ್ಯದ ವಿಷಯ ಮತ್ತೇನಿದೆ..?

ಸತ್ಯಧರ್ಮಚ್ಯುತಾತ್ಪುಂಸಃ ಕ್ರುದ್ಧಾದಾಶೀವಿಷಾದಿವ |
ಅನಾಸ್ತಿಕೋಪ್ಯುದ್ವಿಜತೇ ಜನಃ ಕಿಂ ಪುನರಾಸ್ತಿಕಃ ||

ಕೋಪಗೊಂಡಿರುವ ವಿಷಸರ್ಪಕ್ಕಿಂತಲೂ… ಸತ್ಯ ಮತ್ತು ಧರ್ಮಚ್ಯತನಾದ ವ್ಯಕ್ತಿಯ ಬಗ್ಗೆ ಜನ ಭಯಗೊಳ್ಳುತ್ತಾರೆ. ವಿಷಸರ್ಪವು ತನಗೆ ಉಪಟಳಕೊಟ್ಟವರಿಗೆ ಮಾತ್ರ ಕಚ್ಚುತ್ತದೆ. ಆದರೆ ಸತ್ಯ ಧರ್ಮ ವಿಹೀನ ವ್ಯಕ್ತಿಯು ತನಗೆ ಉಪಟಳ ನೀಡದ ವ್ಯಕ್ತಿಯನ್ನೂ ಪೀಡಿಸುತ್ತಾನೆ. ಆತನಿಗೆ ಯಾವ ಪಾಪದ ಭಯವೂ ಇರುವುದಿಲ್ಲ. ಅಂತಹವನಿಗೆ ನಾಸ್ತಿಕರೂ ಭಯಪಡುತ್ತಾರೆ, ಹಾಗಿರುವಾಗ ಆಸ್ತೀಕರು ಭಯಪಡದೆ ಇರುತ್ತಾರೆಯೇ..

ಮಹಾರಾಜ ಇಡಿಯ ಭೂಮಂಡಲವನ್ನು ಸತ್ಯ ಧರ್ಮದಿಂದ ಆಳುತ್ತಿರುವ ನೀನು ಈ ಸಂಧರ್ಭದಲ್ಲಿ ಕಪಟಿ ವಂಚಕ ಅನ್ನುವ ದುಷ್ಕೀರ್ತಿಗೆ ಪಾತ್ರನಾಗುವುದು ಸಾಧುವಲ್ಲ. ನೀನೆಂದಿಗೂ ಸತ್ಯವನ್ನು ಪರಿತ್ಯಜಿಸಬಾರದು. ಸತ್ಯಕ್ಕೆ ಸಮನಾದ ಬೇರೊಂದು ಧರ್ಮವಿಲ್ಲ.

ವರಂ ಕೂಪಶತದ್ವಾಪಿ ವರಂ ವಾಪೀಶತಾತ್ಕೃತುಃ |
ವರಂ ಕ್ರತುಶತಾತ್ಪುತ್ರಃ ಸತ್ಯಂ ಪುತ್ರಶತಾದ್ವರಮ್ ||

ನೂರು ಹಳ್ಳಗಳಿಗಿಂತ ಒಂದು ಬಾವಿ ಶ್ರೇಷ್ಠ, ನೂರು ಬಾವಿ ತೋಡಿಸುವುದಕ್ಕಿಂತ ಒಂದು ಯಜ್ಞ ಮಾಡುವುದು ಶ್ರೇಷ್ಠ. ನೂರು ಯಜ್ಞ ಮಾಡಿದ ಪುಣ್ಯವು ಒಬ್ಬ ಸತ್ಪುತ್ರನನ್ನು ಪಡೆದುದಕ್ಕೆ ಸಮ, ನೂರು ಸತ್ಪುತ್ರರನ್ನು ಪಡೆದ ಪುಣ್ಯವನ್ನು ಸತ್ಯ ಧರ್ಮವನ್ನು ಪರಿಪಾಲಿಸುವುದರಿಂದ ಪಡೆಯಬಹುದು. ಆದ್ದರಿಂದ ಸತ್ಯವನ್ನೆಂದೂ ತ್ಯಜಿಸಬಾರದು.

ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್ |
ಅಶ್ವಮೇಧಸಹಸ್ರಾದ್ಧಿ ಸತ್ಯಮೇವ ವಿಶಿಷ್ಯತೇ ||

ನೂರು ಅಶ್ವಮೇಧ ಯಾಗ ಮಾಡಿದಾಗ ಪಡೆದ ಪುಣ್ಯವನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಸತ್ಯ ಪರಿಪಾಲನೆಯಿಂದ ಪಡೆದ ಪುಣ್ಯವನ್ನು ಇನ್ನೊಂದು ತಟ್ಟೆಯಲ್ಲಿಟ್ಟು ತೂಗಿದರೆ, ಸತ್ಯ ಪರಿಪಾಲನೆಯಿಂದ ಪಡೆದ ಪುಣ್ಯವಿಟ್ಟ ತಟ್ಟೆಯೇ ಭಾರದಿಂದ ಕೆಳಕ್ಕಿಳಿಯುತ್ತದೆ.

ನಾಸ್ತಿ ಸತ್ಯಸಮೋ ಧರ್ಮೋ ನ ಸತ್ಯಾದ್ವಿದ್ಯತೇ ಪರಮ್ |
ನ ಹಿ ತೀವ್ರತರಂ ಕಿಂಚಿದನೃತಾದಿಹ ವಿದ್ಯತೇ ||

ಸತ್ಯಧರ್ಮಕ್ಕೆ ಸಮನಾದುದು ಬೇರೊಂದಿಲ್ಲ. ಸತ್ಯಕ್ಕಿಂತ ಶ್ರೇಷ್ಠವಾದುದು ಬೇರಿಲ್ಲ. ಅಂತೆಯೇ ಸುಳ್ಳು ಹೇಳುವುದಕ್ಕಿಂತ ಅತ್ಯಂತ ಪಾಪಕರವಾದದ್ದು ಬೇರಿಲ್ಲ.

ರಾಜನ್ಸತ್ಯಂ ಪರಂ ಬ್ರಹ್ಮ ಸತ್ಯಂ ಸಮಯಂ ಪರಃ |
ಮಾ ತ್ಯಾಕ್ಷೀಃ ಸಮಯಂ ರಾಜನ್ಸತ್ಯಂ ಸಂಗತಮಸ್ತು ತೇ ||

ಸತ್ಯವೇ ಪರಬ್ರಹ್ಮವಸ್ತುವು, ಸತ್ಯ ಪರಿಪಾಲನೆಯೇ ಶ್ರೇಷ್ಠವಾದ ವ್ರತ. ಅದಕ್ಕಿಂತ ಮಿಗಿಲಾದ ವ್ರತವಿಲ್ಲ. ಹಾಗಾಗಿ ನೀನು ಪರಿಪಾಲಿಸಿಕೊಂಡು ಬಂದಿರುವ ಸತ್ಯವ್ರತವನ್ನ ಪರಿತ್ಯಜಿಸಬೇಡ. ನಿನಗೆ ಸುಳ್ಳಿನಲ್ಲಿ ಆಸಕ್ತಿ ಇದ್ದರೆ. ನನ್ನಲ್ಲಿ ವಿಶ್ವಾಸ ಇಲ್ಲದಿದ್ದರೆ ನಿನ್ನ ಸಹವಾಸವೇ ನನಗೆ ಬೇಡ. ನಾನೀಗಲೇ ಇಲ್ಲಿಂದ ಹೊರಟು ಹೋಗುತ್ತೇನೆ. ಅದರೆ ಹೋಗುವ ಮುನ್ನ ಒಂದು ಮಾತನ್ನು ಹೇಳಬಯಸುತ್ತೇನೆ. ನಿನ್ನ ಸಂಬಂಧವೇ ಇಲ್ಲದೇ ಹೋದರೂ ನನ್ನ ಪುತ್ರ ಈ ಇಡಿಯ ಭೂಮಂಡಲವನ್ನೇ ಆಳುವುದರಲ್ಲಿ ನನಗಾವ ಸಂದೇಹವೂ ಇಲ್ಲ.

ಎಂದು ರಾಜಸಭೆಯಿಂದ ಹೊರನಡೆಯನುವಾಗುತ್ತಾಳೆ….

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ