ವ್ಯಾಸ ಮಹಾಭಾರತ - ಭಾಗ 46 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 46 ಆದಿಪರ್ವ (ಸಂಭವಪರ್ವ)

ನಹುಷ ಅತ್ಯಂತ ಪರಾಕ್ರಮಿ ರಾಜನಾಗಿದ್ದನು. ತನ್ನ ರಾಜ್ಯದ ನಾಲ್ಕೂ ವರ್ಣದ ಜನರನ್ನು ಸಮಾನವಾಗಿ ಕಾಣುತ್ತಿದ್ದನು. ಋಷಿಗಳಿಗೆ ಉಪಟಳ ಕೊಡುತ್ತಿದ್ದ ದಸ್ಯುಗಳೆಂಬ ದರೋಡೆಕೋರರನ್ನ ಸಂಪೂರ್ಣವಾಗಿ ವಿನಾಶ ಮಾಡಿದನು. ತನ್ನ ಪರಾಕ್ರಮದಿಂದ ದೇವತೆಗಳನ್ನೂ ಸೋಲಿಸಿ ಸ್ವಲ್ಪಕಾಲ ಇಂದ್ರ ಪದವಿಯನ್ನೂ ಗಳಿಸಿಕೊಂಡಿದ್ದನು.
ಈತನಿಗೆ
ಯತಿ,
ಯಯಾತಿ,
ಸಂಯಾತಿ,
ಆಯಾತಿ,
ಅಯತಿ
ಧ್ರುವ ಎಂಬ ಆರು ಜನ ಗಂಡು ಮಕ್ಕಳಿದ್ದರು.

ಇದರಲ್ಲಿ ಹಿರಿಯವನಾದ ಯಯಾತಿಯು ಯೋಗಾಭ್ಯಾಸ ನಿರತನಾಗಿ ಬ್ರಹ್ಮ ಸಾಕ್ಷಾತ್ಕಾರ ಪಡೆದನು. ಹಾಗಾಗಿ ನಹುಷನ ನಂತರ ರಾಜ್ಯದ ಅಧಿಕಾರ ಯಯಾತಿಯ ಕೈಗೆ ಸೇರಿತು. ಆತ ಪ್ರಜಾನುರಾಗಿಯಾಗಿದ್ದನು. ತನ್ನ ರಾಜ್ಯವನ್ನು ಧರ್ಮದಿಂದ ಪರಿಪಾಲನೆ ಮಾಡುತ್ತಿದ್ದನು. ಈತನಿಗೆ ದೇವಯಾನಿಯಲ್ಲಿ ಯದು , ತುರ್ವಸು ಎಂಬ ಇಬ್ಬರು ಮಕ್ಕಳೂ ಶರ್ಮಿಷ್ಠೆಯಲ್ಲಿ ದ್ರುಹ್ಯು, ಅನು, ಪೂರು ಎಂಬುವವರು ಹುಟ್ಟಿದರು. ಯಯಾತಿಗೆ ಕಾರಣಾಂತರಗಳಿಂದಾಗಿ ಶುಕ್ಲಾಚಾರ್ಯರಿಂದ ಶಾಪ ರೂಪವಾಗಿ ವೃದ್ಧಾಪ್ಯ ದೊರೆಯಿತು.

ಆದರೆ ಆತನಿಗೆ ಜೀವನದಲ್ಲಿನ ಸುಖಭೋಗಗಳ ಮೇಲಿನ ಆಸಕ್ತಿ ಕಡಿಮೆಯಾಗಿರಲಿಲ್ಲ. ಹಾಗಾಗಿ ಆತನು ತನ್ನೆಲ್ಲಾ ಮಕ್ಕಳನ್ನು ಕರೆದು “ಮಕ್ಕಳಿರಾ ನನಗೆ ಅಕಾಲವಾಗಿ ವೃದ್ಧಾಪ್ಯ ದೊರೆತಿದೆ. ಆದರೆ ಅನೇಕ ವರ್ಷಗಳ ಕಾಲ ನಾನು ಯಜ್ಞದ ದೀಕ್ಷೆಯಲ್ಲಿದ್ದ ಕಾರಣದಿಂದಾಗಿ ಸಾಂಸಾರಿಕ ಜೀವನದ ಸುಖೋಪಭೋಗಗಳಿಂದ ವಂಚಿತನಾಗಿಬಿಟ್ಟೆ. ಹಾಗಾಗಿ ನನಗೆ ನಿಮ್ಮ ಯೌವನವನ್ನ ವೃದ್ಧಾಪ್ಯದ ಬದಲಿಗೆ ವಿನಿಮಯ ಮಾಡಿಕೊಳ್ಳುವಿರಾ..? ನನ್ನ ವೃದ್ಧಾಪ್ಯ ಪಡೆದು ಈ ರಾಜ್ಯದ ಮೇಲೆ ಶಾಸನ ಮಾಡಿ. ನಾನು ಯೌವನ ಪಡೆದು ಸಾಂಸಾರಿಕ ಸುಖವನ್ನ ಅನುಭವಿಸುತ್ತೇನೆ.” ಎಂದನು. ಆದರೆ ಆತನ ಮಾತಿಗೆ ಯಾವ ಮಕ್ಕಳೂ ಒಪ್ಪಲಿಲ್ಲ, ಕೊನೆಯಲ್ಲಿ ಶರ್ಮಿಷ್ಠೆಯ ಮಗ ಪೂರು ತಂದೆಯ ಆಸೆಯನ್ನು ನೆರವೇರಿಸುವುದಾಗಿ ಹೇಳಿದನು. ಕೂಡಲೇ ಯಯಾತಿಯು ತನ್ನ ತಪಃಶಕ್ತಿಯಿಂದ ಮಗನಾದ ಪೂರುವಿನಿಂದ ಯೌವನವನ್ನ ಪಡೆದು ತನ್ನ ವೃದ್ಧಾಪ್ಯವನ್ನೂ ರಾಜ್ಯಾಡಳಿತವನ್ನೂ ಆತನಿಗೆ ಒಪ್ಪಿಸಿ ಸುಖೋಪಭೋಗಗಳಲ್ಲಿಯೇ ಕಾಲಕಳೆಯತೊಡಗಿದನು.

ಯದಾ ನ ಕುರತೇ ಪಾಪಂ ಸರ್ವಭೂತೇಷು ಕರ್ಹಿಚಿತ್ |
ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ ||

ಪ್ರಪಂಚದಲ್ಲಿರುವ ಯಾವ ಪ್ರಾಣಿಗೂ ಕಾರ್ಯದಿಂದಲೂ ಮನಸ್ಸಿನಿಂದಲೂ ಮಾತಿನಿಂದಲೂ ತೊಂದರೆಯನ್ನುಂಟು ಮಾಡಕೂಡದೆಂಬ ಸಂಕಲ್ಪಮಾಡಿ ಅದರಂತೆಯೇ ನಡೆದರೆ ಪರಬ್ರಹ್ಮ ವಸ್ತುವನ್ನು ಕಂಡುಕೊಳ್ಳಬಹುದು.

ಯದಾ ಚಾಯಂ ನ ಬಿಭೇತಿ ಯದಾ ಚಾಸ್ಮನ್ನ ಬಿಭ್ಯತಿ |
ಯದಾ ನೇಚ್ಛತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ ||

ಆಸೆ ಆಕಾಂಕ್ಷೆಗಳು ಹೆಚ್ಚಿದಷ್ಟು ಮನುಷ್ಯನಿಗೆ ಭಯವೂ ಹೆಚ್ಚುತ್ತದೆ. ಆಸೆಗಳನ್ನ ತೊರೆದವನಿಗೆ ಯಾವ ಭಯವೂ ಇರುವುದಿಲ್ಲ. ಯಾವಾಗ ಮಾನವನು ಯಾರಿಗೂ ಹೆದರುವುದಿಲ್ಲವೋ ಮತ್ತು ಆತನನ್ನು ಕಂಡು ಇತರರು ಯಾರೂ ಭಯ ಪಡುವುದಿಲ್ಲವೋ ಅರ್ಥಾತ್ ಸರ್ವರಿಗೂ ಪ್ರಿಯನಾಗುತ್ತಾನೋ ಅವನು ಬ್ರಹ್ಮನನ್ನು ಕಂಡುಕೊಳ್ಳಬಹುದು.

ಹೀಗೆ ಸಹಸ್ರ ವರ್ಷದ ಅನುಭವದಿಂದ ಈ ಸತ್ಯವನ್ನು ಕಂಡುಕೊಂಡ ಯಯಾತಿಯು ತನ್ನ ವೃದ್ಧಾಪ್ಯ ವನ್ನು ತನ್ನ ಮಗನಿಂದ ಮರಳಿ ಪಡೆದು ಯೌವನವನ್ನೂ ರಾಜ್ಯವನ್ನು ಮಗನಾದ ಪೂರುವಿಗೆ ಕೊಟ್ಟು ನಿನ್ನಿಂದಲೇ ಹೊಸದೊಂದು ವಂಶ ಉದಯವಾಗಲಿ.. ಆ ವಂಶವು ಪೌರವ ವಂಶವೆಂದು ಪ್ರಸಿದ್ಧಿ ಪಡೆಯಲಿ ಎಂದು ಆತನನ್ನು ಹರಸುತ್ತಾನೆ. ಆಮೇಲೆ ಸಪತ್ನೀಕನಾಗಿ ಭೃಗುತುಂಗವೆಂಬ ಪರ್ವತದ ತಪ್ಪಲಿಗೆ ಹೋಗಿ ಸತ್ಕರ್ಮಗಳನ್ನು ಮಾಡುತ್ತಾ ಜೀವನ ಕಳೆದು ಸ್ವರ್ಗ ಸೇರುತ್ತಾನೆ.

ಹೀಗೆ ವೈಶಂಪಾಯನರು ಯಯಾತಿಯ ಕತೆಯನ್ನು ಹೇಳುತ್ತಿರಬೇಕಾದರೆ ಜನಮೇಜಯನು
“ಮಹರ್ಷಿಗಳೇ ನಮ್ಮ ಪೂರ್ವಜರೂ, ಕ್ಷತ್ರಿಯರೂ ಆದ ಯಯಾತಿಗೆ, ಬ್ರಾಹ್ಮಣರಾದ ಶುಕ್ಲಾಚಾರ್ಯರ ಪುತ್ರಿಯಾದ ದೇವಯಾನಿಯ ಜೊತೆ ಮದುವೆ ಹೇಗಾಯಿತು…? ಈ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲವಾಗುತ್ತಿದೆ , ದಯವಿಟ್ಟು ತಿಳಿಸುವಿರಾ…?” ಎನ್ನುತ್ತಾನೆ.

ಆದೀತೆಂದು ತಲೆದೂಗುತ್ತಾ ವೈಶಂಪಾಯನರು ಆ ಕತೆಯನ್ನು ಹೇಳಲಾರಂಭಿಸುತ್ತಾರೆ.
“ದೇವತೆಗಳ ಗುರು ಬೃಹಸ್ಪತಿ ಮತ್ತು ದಾನವರ ಗುರು ಶುಕ್ಲಾಚಾರ್ಯ, ಇಬ್ಬರೂ ಬ್ರಾಹ್ಮಣರೇ.. ಮೂರು ಲೋಕಗಳ ಮೇಲೆ ಹತೋಟಿ ಸಾಧಿಸುವ ಸಲುವಾಗಿ ಈ ದೇವ ದಾನವರ ನಡುವೆ ಆಗಿಂದಾಗ್ಗೆ ಯುದ್ಧಗಳು ನಡೆಯುತ್ತಲೇ ಇದ್ದವು. ದೇವತೆಗಳು ಅಸುರರನ್ನ ಸಂಹರಿಸುತ್ತಿದ್ದರೂ ಶುಕ್ಲಾಚಾರ್ಯರು ತಮ್ಮ ಸಿದ್ಧಿಯಾದ ಸಂಜೀವಿನಿ ವಿದ್ಯೆಯ ಮೂಲಕ ಸತ್ತ ಅಸುರರನ್ನ ಮತ್ತೆ ಬದುಕಿಸಿ ದೇವತೆಗಳೊಡನೆ ಯುದ್ಧಕ್ಕೆ ಕಳುಹಿಸುತ್ತಿದ್ದರು ಇದು ದೇವತೆಗಳಿಗೆ ಚಿಂತೆಯನ್ನುಂಟು ಮಾಡಿತ್ತು. ಬೃಹಸ್ಪತಿಗಳು ಮಂತ್ರವಿಶಾರದರಾದರೂ ಅವರಿಗೆ ಸಂಜೀವಿನಿ ವಿದ್ಯೆ ಗೊತ್ತಿರಲಿಲ್ಲ. ಹಾಗಾಗಿ ದೇವತೆಗಳು ಒಂದಾಗಿ ಸಮಾಲೋಚಿಸಿ ಶುಕ್ಲಾಚಾರ್ಯರಿಂದ ಸಂಜೀವಿನಿ ವಿದ್ಯೆಯನ್ನು ಕಲಿತು ಬರುವ ಯೋಜನೆ ರೂಪಿಸಿದರು. ಆದರೆ ಇದನ್ನ ಮಾಡುವವರ್ಯಾರು ಅನ್ನುವುದೇ ಸಮಸ್ಯೆ ಯಾಗಿತ್ತು. ಆಗ ದೇವತೆಗಳ ಚಿತ್ತ ಬೃಹಸ್ಪತಿ ಆಚಾರ್ಯರ ಪುತ್ರನಾದ “ಕಚ”ನೆಡೆಗೆ ಹರಿಯಿತು. ದೇವತೆಗಳೆಲ್ಲರೂ ಕಚ ನೇ ಈ ಕಾರ್ಯಕ್ಕೆ ಸೂಕ್ತನಾದವ ಎಂದು ನಿರ್ಣಯಿಸಿ ನೇರವಾಗಿ ಕಚನ ಬಳಿ ಹೋಗಿ “ಹೇ ಬ್ರಾಹ್ಮಣೋತ್ತಮನೇ ನಿನ್ನಿಂದ ನಮಗೊಂದು ಉಪಕಾರವಾಗಬೇಕಾಗಿದೆ. ದೇವ ದಾನವರ ಯುದ್ಧವಾದಗಲೆಲ್ಲ ನಾವು ಅಸುರರನ್ನ ಸಂಹರಿಸಿದರೂ ಅವರ ಗುರುಗಳಾದ ಶುಕ್ಲಾಚಾರ್ಯರು ಅವರನ್ನು ಮತ್ತೆ ಬದುಕಿಸುತ್ತಾರೆ. ಈ ವಿದ್ಯೆ ಅವರಿಗೆ ಮಾತ್ರ ಗೊತ್ತಿರುವುದು. ಈ ವಿದ್ಯೆಯನ್ನು ನೀನು ಕಲಿತು ಬರಬೇಕು. ಇದಕ್ಕೆ ನೀನೊಬ್ಬನೇ ಸಶಕ್ತನು. ಅಲ್ಲಿಗೆ ಹೋಗುವ ಮುನ್ನ ಇನ್ನೊಂದು ವಿಚಾರ ನೆನಪಿನಲ್ಲಿಡು. ಶುಕ್ಲಾಚಾರ್ಯರಿಗೆ ದೇವಯಾನಿ ಎನ್ನುವ ಮಗಳಿದ್ದಾಳೆ. ಶುಕ್ಲಾಚಾರ್ಯರಿಗೆ ಅತ್ಯಂತ ಪ್ರಿಯಳು. ಅವಳ ಒಲವನ್ನು ಗಳಿಸಿದಲ್ಲಿ ನಿನಗೀ ವಿದ್ಯೆ ಒಲಿಸಿಕೊಳ್ಳುವುದು ಸುಲಭವಾಗಲಿದೆ.” ಎಂದರು.
ಇದಕ್ಕೊಪ್ಪಿದ ಕಚ ಅಲ್ಲಿಂದ ನೇರವಾಗಿ ಶುಕ್ಲಾಚಾರ್ಯರ ಆಶ್ರಮದತ್ತ ಹೊರಟನು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!