ವ್ಯಾಸ ಮಹಾಭಾರತ - ಭಾಗ 47 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 47 ಆದಿಪರ್ವ (ಸಂಭವಪರ್ವ)

ದೇವತೆಗಳ ಪ್ರಾರ್ಥನೆಯನ್ನಾಲಿಸಿದ ಕಚ ನೇರವಾಗಿ ಶುಕ್ರಾಚಾರ್ಯರ ಬಳಿ ಬಂದು, “ಪೂಜ್ಯರೇ ನಾನು ಅಂಗೀರಸ ಮಹರ್ಷಿಯ ಪೌತ್ರನೂ ಬೃಹಸ್ಪತಿಯ ಪುತ್ರನೂ ಆಗಿರುವೆನು. ಕಚ ಎನ್ನುವುದಾಗಿ ನನ್ನ ಹೆಸರು. ತಾವು ದಯಮಾಡಿ ನನ್ನನ್ನ ಶಿಷ್ಯನನ್ನಾಗಿ ಸ್ವೀಕರಿಸಬೇಕು. ನಿಮ್ಮಲ್ಲಿ ವಿಧ್ಯಾಭ್ಯಾಸ ಮಾಡುವ ಆಶಯವನ್ನಿಟ್ಟು ಬಂದಿದ್ದೇನೆ. ದಯಮಾಡಿ ನನ್ನನ್ನ ತಮ್ಮ ಶಿಷ್ಯನನ್ನಾಗಿಸಿ .” ಎಂದು ಕೇಳಿಕೊಂಡನು.

ಆಗ ಶುಕ್ರಾಚಾರ್ಯನು, “ಮಗು ನಿನ್ನ ಇಚ್ಛೆಯಂತೆಯೇ ನಿನ್ನನ್ನ ಪುರಸ್ಕರಿಸುತ್ತೇನೆ. ನಿನ್ನನ್ನ ಪುರಸ್ಕರಿಸುವುದು ನಿನ್ನ ತಂದೆಯಾದ ಬೃಹಸ್ಪತಿಯವರನ್ನ ಪುರಸ್ಕರಿಸಿದಂತೆಯೇ…” ಎನ್ನುತ್ತಾ ಆತನನ್ನ ಶಿಷ್ಯನನ್ನಾಗಿ ಸ್ವೀಕರಿಸಿದನು.

ಕಚನು ಶಿಷ್ಯಧರ್ಮವನ್ನ ಯಥಾವತ್ತಾಗಿ ಪಾಲಿಸುತ್ತಿದ್ದನು. ಬ್ರಹ್ಮಚರ್ಯವ್ರತವನ್ನ ಪಾಲಿಸುತ್ತಾ ಗುರುಗಳ ಶುಶ್ರೂಷೆಯನ್ನು ಗುರುಪುತ್ರಿಯ ಶುಶ್ರೂಷೆಯನ್ನೂ ಯಥಾವತ್ತಾಗಿ ಮಾಡತ್ತಿದ್ದನು. ಗುರುಪುತ್ರಿಯಾದ ದೇವಯಾನಿಗೂ ಕಚನ ಸಂಗ ಖುಷಿಯನ್ನೇ ಕೊಡುತ್ತಿತ್ತು. ವಿರಾಮದ ವೇಳೆಯಲ್ಲಿ ಕಚನಿಂದ ಹಾಡುಗಳನ್ನು ಹಾಡಿಸುತ್ತಾ, ನೃತ್ಯ ಮಾಡಿಸುತ್ತಾ ಆನಂದ ಹೊಂದುತ್ತಿದ್ದಳು, ಹಲವಾರು ಬಾರಿ ಆತನನ್ನ ಆರಾಧ್ಯ ಮೂರ್ತಿಯನ್ನಾಗಿಸಿ ನಿಲ್ಲಿಸಿ ಅವನ ಸುತ್ತಾ ಹಾಡುತ್ತಾ ನಲಿಯುತ್ತಾ ತನ್ಮಯಳಾಗಿರುತ್ತಿದ್ದಳು. ಆದರೆ ಎಂದಿಗೂ ಕಚನ ಬ್ರಹ್ಮಚರ್ಯವ್ರತಕ್ಕೆ ಭಂಗವನ್ನುಂಟು ಮಾಡುತ್ತಿರಲಿಲ್ಲ. ಕಚನಿಗೋ ದೇವಯಾನಿಯು ಗುರುಪುತ್ರಿ ಎನ್ನುವ ಪೂಜ್ಯ ಭಾವ. ಹೀಗೆ ಕಾಲಕಳೆಯುತ್ತಿರಲು ಕಚನು ಶುಕ್ಲಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯನಾದನು.

ಕಚನು ಶುಕ್ರಾಚಾರ್ಯರಲ್ಲಿ ವಿಧ್ಯಾಭ್ಯಾಸಕ್ಕಾಗಿ ಬಂದಿರುವ ವಿಚಾರ ಮತ್ತು ಅದರ ಹಿಂದಿನ ಮೂಲ ಉದ್ದೇಶ ಎರಡೂ ಕೂಡಾ ದಾನವರಿಗೆ ತಿಳಿದು ಬಿಡುತ್ತದೆ. ಆದರೆ ನೇರವಾಗಿ ಶುಕ್ರಾಚಾರ್ಯರ ಬಳಿ ಆತನಿಗೆ ಸಂಜೀವಿನಿ ವಿದ್ಯೆ ಕಲಿಸಬೇಡಿ ಅನ್ನುವ ಧೈರ್ಯ ದಾನವರಿಗೂ ಇರಲಿಲ್ಲ. ಅದಕ್ಕಾಗಿ ದಾನವರು ಕಚನನ್ನೇ ಕೊಲ್ಲುವ ಯೋಜನೆ ಹಾಕಿಕೊಂಡರು. ಒಮ್ಮೆ ಕಚ ಹಸುಗಳನ್ನ ಮೇಯಿಸಲು ಹೋದ ಸಂದರ್ಭದಲ್ಲಿ ದಾನವರು ಅವನನ್ನ ಒಯ್ದು ಕೊಂದು ಅವನ ದೇಹವನ್ನು ತುಂಡರಿಸಿ ಕಾಡುಪ್ರಾಣಿಗಳಿಗೆ ಆಹಾರವಾಗಿ ಕೊಟ್ಟು ನಿರಾಳವಾಗಿ ಹಿಂದಿರುಗುತ್ತಾರೆ. ಇತ್ತ ಹಸುಗಳೆಲ್ಲ ಆಶ್ರಮವನ್ನ ಸೇರಿದರೂ ಕಚನ ಸುಳಿವೇ ಇರುವುದಿಲ್ಲ.

ಕಚ ಬಾರದೇ ಇರುವುದು ದೇವಯಾನಿಗೆ ಆತಂಕವನ್ನ ತರುತ್ತದೆ. ಕೂಡಲೇ ಆಕೆ ತಂದೆಯ ಬಳಿಗೋಡಿ “ಅಪ್ಪಾ ಹಸುಗಳೆಲ್ಲವೂ ಆಶ್ರಮ ಸೇರಿದರೂ ಕಚ ಮರಳಿ ಬರಲೇ ಇಲ್ಲ. ನನಗೇಕೋ ಆತಂಕವಾಗುತ್ತಿದೆ. ಆತನಿಗೆ ಅದೇನು ಅನಾಹುತವಾಯಿತೋ… ಇಷ್ಟು ಹೊತ್ತು ಬಾರದೇ ಇರುವುದು ಆತ ಬದುಕಿಲ್ಲ ಅನ್ನುವುದನ್ನೇ ಸೂಚಿಸುತ್ತದೆ. ಅಪ್ಪಾ ಕಚನಿಲ್ಲದೇ ನನಗೆ ಬದುಕಲು ಸಾಧ್ಯವೇ ಇಲ್ಲ. ಹೇಗಾದರೂ ಆತನನ್ನು ನನಗೆ ಮರಳಿ ಒದಗಿಸಿಕೊಡಿ.” ಎಂದು ಗೋಗರೆಯುತ್ತಾಳೆ.

ತನ್ನ ಮಗಳಿಗೆ ಕಚನ ಮೇಲೆ ಅನುರಾಗವಿರುವುದು ಶುಕ್ರಾಚಾರ್ಯರಿಗೂ ಗೊತ್ತಿತ್ತು. ಅವರು ಮಗಳನ್ನು ಸಂತೈಸುತ್ತಾ ” ಪುತ್ರೀ , ದುಃಖಿಸಬೇಡ ಏಹಿ (ಆಗಮಿಸು) ಎನ್ನುವ ಒಂದು ಶಬ್ದವನ್ನು ಹೇಳಿ ಕಚ ಸತ್ತುಹೋಗಿದ್ದರೂ ಮರಳಿ ಕರೆದು ತರುತ್ತೇನೆ. ” ಎಂದು ಆಚಮನ ಮಾಡಿ ಮಹಾಮಂತ್ರವನ್ನು ಜಪಿಸಿ ” ಭೋಃ ಕಚ ಏಹಿ (ಕಚನೇ ಆಗಮಿಸು) ” ಎಂದು ಉದ್ಗಾರಮಾಡಿದರು. ಅವರು ಆ ರೀತಿ ಹೇಳುತ್ತಿದ್ದಂತೆ ಚೂರು ಚೂರಾಗಿದ್ದ ಕಚನ ದೇಹದ ಭಾಗಗಳು ಕಾಡುಪ್ರಾಣಿಗಳ ಹೊಟ್ಟೆಯನ್ನು ಸೀಳಿ ಹೊರಬಂದು ಒಂದುಗೂಡತೊಡಗುತ್ತದೆ. ಹೀಗೆ ನೋಡುನೋಡುತ್ತಿದ್ದಂತೆ ನಾಶವಾದ ಶರೀರವನ್ನೂ ಪ್ರಾಣವನ್ನೂ ಕಚನು ಮರಳಿ ಪಡೆದನು.

ಕಚನು ಮತ್ತೆ ಪ್ರಾಣ ಪಡೆದ ಕೂಡಲೇ ದೇವಯಾನಿಯು ಕಚನ ಬಳಿ” ನಿನಗೇನಾಗಿತ್ತು …? ಎಲ್ಲಿ ಹೋಗಿದ್ದೆ ..? “ಎಂದು ಆತಂಕದಿಂದ ಕೇಳತೊಡಗಿದಳು. ಆಗ ಕಚನು ದಾನವರು ತನ್ನನ್ನು ಕೊಂದು ಹಾಕಿದ ವಿಷಯವನ್ನು ವಿಸ್ತಾರವಾಗಿ ಹೇಳಿದನು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!