ವ್ಯಾಸ ಮಹಾಭಾರತ - ಭಾಗ 48 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 48 ಆದಿಪರ್ವ (ಸಂಭವಪರ್ವ)

ಹೀಗೆ ಸಂಜೀವಿನಿ ವಿದ್ಯೆಯಿಂದಾಗಿ ಬದುಕಿದ ಕಚನನ್ನ ದೇವಯಾನಿ ಇನ್ನು ಮುಂದೆ ಜಾಗರೂಕನಾಗಿರುವಂತೆ ಕೇಳಿಕೊಳ್ಳುತ್ತಾಳೆ. ಆತನು ಜಾಗರೂಕನಾಗಿದ್ದರೂ ಮತ್ತೊಮ್ಮೆ ದಾನವರ ಕೈಗೆ ಸಿಕ್ಕಿ ಬೀಳುತ್ತಾನೆ. ಈ ಬಾರಿ ದಾನವರು ಆತನನ್ನ ಕೊಂದು, ಕೊಚ್ಚಿ ಹಾಕಿ, ಚೂರು ಚೂರು ಮಾಡಿ ಸಮುದ್ರಕ್ಕೆಸೆದು ಬಿಡುತ್ತಾರೆ. ಈ ಬಾರಿಯೂ ದೇವಯಾನಿಯ ಬೇಡಿಕೆಯ ಮೇರೆಗೆ ಶುಕ್ರಾಚಾರ್ಯರು ಮತ್ತೆ ತಮ್ಮ ವಿದ್ಯೆಯಿಂದ ಆತ ಬದುಕುವಂತೆ ಮಾಡುತ್ತಾರೆ. ಕಚ ಮತ್ತೆ ಬದುಕಿದ್ದನ್ನ ಕಂಡು ದಾನವರ ಹಠ ಇನ್ನಷ್ಟು ಹೆಚ್ಚಾಗುತ್ತದೆ. ಹೀಗೆ ಮತ್ತೊಮ್ಮೆ ಅವಕಾಶ ಸಿಗಲಾಗಿ ದಾನವರು ಕಚನನ್ನ ಕೊಂದು ಸುಟ್ಟು ಹಾಕಿ ಉಳಿದ ಅವಶೇಷವನ್ನೆಲ್ಲಾ ಅರೆದು ಹುಡಿ ಮಾಡಿ ಶುಕ್ರಾಚಾರ್ಯರು ಸ್ವೀಕರಿಸೋ ಸುರೆಯಲ್ಲಿ ಬೆರೆಸಿ ಅವರಿಗೇ ಕುಡಿಸುತ್ತಾರೆ. ಕಚನನ್ನ ಕಾಣದಾದಾಗ ದೇವಯಾನಿ ಮತ್ತೆ ಗೋಳಾಡುತ್ತಾಳೆ.

ಆದರೆ ಈ ಬಾರಿ ಶುಕ್ರಾಚಾರ್ಯರು ಮಗಳ ಬಳಿ, “ಮಗಳೇ ಆತ ಸತ್ತರೆ ಸಾಯಲಿ. ನಾನು ಬದುಕಿಸಿದಷ್ಟು ಸಮಯವೂ ದಾನವರು ಕೊಲ್ಲುತ್ತಾರೆ. ಎಷ್ಟು ಬಾರಿ ಎಂದು ನಾನಾತನನ್ನ ಬದುಕಿಸಲಿ. ನಿನ್ನಂತವಳು ಈ ರೀತಿ ವ್ಯಕ್ತಿಯೋರ್ವನ ಸಾವಿಗೆ ಮರುಗಬಾರದು. ಆತನನ್ನ ಬದುಕಿಸಿವುದು ವ್ಯರ್ಥ” ಎನ್ನುತ್ತಾನೆ. ಆದರೆ ದೇವಯಾನಿಯೂ ಸುಮ್ಮನಿರದೆ “ಅಪ್ಪಾ ಆತ ಅಂಗೀರಸ ಮಹರ್ಷಿಯ ಪೌತ್ರ, ಬೃಹಸ್ಪತಿಗಳ ಪುತ್ರ ಅಲ್ಲದೆ ಬ್ರಹ್ಮಾಚಾರಿಯೂ ಆಗಿದ್ದಾನೆ. ನಮ್ಮ ಆಶ್ರಯದಲ್ಲಿದ್ದಾಗ ಆತನ ರಕ್ಷಣೆ ನಮ್ಮ ಹೊಣೆಯಲ್ಲವೇ…? ಅಲ್ಲದೆ ಆತ ತನ್ನ ನಡವಳಿಕೆಯಿಂದ ನನ್ನ ಮನವನ್ನ ಗೆದ್ದಿದ್ದಾನೆ. ಆತನೇನಾದರೂ ಬದುಕದಿದ್ದರೆ ನಾನು ಉಪವಾಸವ್ರತ ಕೈಗೊಂಡು ಪ್ರಾಣ ತೊರೆಯುತ್ತೇನೆ.” ಎನ್ನುತ್ತಾಳೆ.

ಆಗ ಶುಕ್ರಾಚಾರ್ಯರು ಮತ್ತೆ ತನ್ನ ಮಗಳಿಗಾಗಿ ಸೋಲೊಪ್ಪುತ್ತಾ, ಆತನನ್ನ ಮಂತ್ರಪುರಸ್ಸರವಾಗಿ ಆಹ್ವಾನಿಸಿದರು. ಆಗ ಅವರ ಬಾಯಿಯಿಂದ ಈ ಮಾತುಗಳು ಹೊರಟಿತು “ಹೌದು ಮಗಳೇ ಆತನನ್ನ ಉಳಿಸದಿದ್ದರೆ ಬ್ರಹ್ಮ ಹತ್ಯಾ ದೋಷವು ನನ್ನನ್ನ ಕಾಡೀತು. ಈ ದಾನವರು ನನಗೆ ವಿರುದ್ಧವಾದ ಕಾರ್ಯಗಳನ್ನೇ ಮಾಡುತ್ತಿದ್ದಾರೆ. ಇಂತಹ ಪಾಪಕಾರ್ಯಗಳು ಅಂತ್ಯವಾಗಲೇಬೇಕು”

ಹೀಗೆ ಅವರು ಹೇಳುತ್ತಿರುವಾಗಲೇ “ಗುರುದೇವಾ ಗುರುದೇವಾ” ಎನ್ನುವ ಮಾತುಗಳು ಅವರ ಉದರದಿಂದಲೇ ಕೇಳಿಸತೊಡಗುತ್ತದೆ.

ಕಚನು ತನ್ನ ಹೊಟ್ಟೆಯಲ್ಲಿರುವುದನ್ನ ಅರಿತ ಶುಕ್ರಾಚಾರ್ಯರು
“ಹೇ ಕಚನೆ ನೀನು ನನ್ನ ಉದರವನ್ನ ಹೇಗೆ ಸೇರಿದೆ…?” ಎಂದು ಪ್ರಶ್ನಿಸುತ್ತಾರೆ.
ಆಗ ಕಚನು
“ಗುರುಗಳೇ ತಮ್ಮ ದಯೆಯಿಂದಾಗಿ ನಾನಾಗಾವುದೂ ಮರೆತು ಹೋಗುವುದಿಲ್ಲ. ಈ ಬಾರಿ ದಾನವರು ನನ್ನನ್ನ ಕೊಂದು, ಸುಟ್ಟು , ಅವಶೇಷವನ್ನ ಅರೆದು ನೀವು ಕುಡಿಯುವ ಸುರೆಯಲ್ಲಿ ಬೆರೆಸಿಬಿಟ್ಟರು. ಹೀಗಾಗಿ ನಾನು ತಮ್ಮ ಉದರ ಸೇರಿದೆ. ನಾನು ಹೊರಬಂದರೆ ನೀವು ನಾಶವಾಗಿ ಗುರುವಧೆಗೆ ನಾನೇ ಕಾರಣನಾಗಿ ನನ್ನೆಲ್ಲಾ ತಪಸ್ಸು ವ್ಯರ್ಥವಾಗವ ಭಯದಿಂದ ಹೊರಬರದೆ ಇಲ್ಲೇ ಉಳಿದುಕೊಂಡಿದ್ದೇನೆ.” ಎಂದನು.

ಈಗ ಈ ಸಮಸ್ಯೆ ಶುಕ್ರಾಚಾರ್ಯರನ್ನೂ ಕಾಡತೊಡಗಿತು. ಅವರು ಕೂಡಲೇ ದೇವಯಾನಿಯ ಬಳಿ, “ಮಗಳೇ ನಾನೇನು ಮಾಡಬೇಕೆಂಬುದನ್ನ ನೀನೇ ಹೇಳು. ಕಚ ಹೊರಬಂದರೆ ನನ್ನ ವಧೆಯಾಗುತ್ತದೆ, ಕಚ ಬಾರದೆ ಇದ್ದರೆ ನಿನಗೆ ಕಚ ದೊರಕಲಾರ. ಈಗ ನಾನೇನು ಮಾಡಲಿ ಹೇಳು ಯಾರ ವಿಯೋಗವನ್ನ ಸಹಿಸುವೆ…?” ಎನ್ನುತ್ತಾರೆ.

ದೇವಯಾನಿಯೂ ಬಹು ದುಃಖಿತೆಯಾಗಿ, “ಅಪ್ಪಾ ನೀವಿಬ್ಬರೂ ನನಗೆ ಅತ್ಯಂತ ಪ್ರಿಯರು. ಇಬ್ಬರಲ್ಲಿ ಯಾರೊಬ್ಬರಿಲ್ಲದಿದ್ದರೂ ನನಗೆ ಅದು ದುಃಖದಾಯಕವೇ” ಎಂದು ಅಳತೊಡಗಿದಳು. ಶುಕ್ರಾಚಾರ್ಯರು ಮತ್ತೆ ಸ್ವಲ್ಪ ಹೊತ್ತು ಆಲೋಚಿಸಿ ಒಂದು ಉಪಾಯವನ್ನ ಕಂಡುಕೊಂಡರು. ಅವರು ಕಚನನ್ನ ಉದ್ದೇಶಿಸುತ್ತಾ…

“ಕಚನೇ ನಿನ್ನ ಕಾರ್ಯ ಸಿದ್ಧಿಯಾಯಿತು. ದೇವಯಾನಿಯು ನಿನ್ನ ಮೇಲಿಟ್ಟಿರುವ ವಿಶೇಷವಾದ ಮೋಹವೇ ಇದಕ್ಕೆ ಕಾರಣ. ಇಗೋ ನಿನಗೆ ನಾನು ಮೃತಸಂಜೀವಿನಿ ವಿದ್ಯೆಯನ್ನ ಉಪದೇಶಿಸುತ್ತೇನೆ. ನಾನು ಊಹಿಸಿದಂತೆ ನೀನು ಕಚನ ರೂಪದಲ್ಲಿ ಬಂದಿರುವ ಇಂದ್ರನಾಗಿರದಿದ್ದರೆ ನಿನಗೆ ಈ ವಿದ್ಯೆಯು ಫಲಿಸುತ್ತದೆ. ಅದೂ ಅಲ್ಲದೆ ಬ್ರಾಹ್ಮಣನೊಬ್ಬನ ಹೊರತಾಗಿ ನನ್ನ ಹೊಟ್ಟೆಯನ್ನ ಸೀಳಿ ಬರಲು ಯಾರಿಗೂ ಸಾಧ್ಯವಿಲ್ಲ. ನನ್ನ ಹೊಟ್ಟೆಯನ್ನ ಸೀಳಿ ಬರುವ ನೀನು ನನ್ನನ್ನ ತಂದೆಯೆಂದೇ ತಿಳಿ. ಆಮೇಲೆ ನನ್ನಿಂದ ಉಪದೇಶಿತನಾದ ನಿನಗೆ ಹೇಗೆ ಸರಿಯೆನಿಸುವುದೋ ಹಾಗೆ ನಡೆದುಕೋ. ಯಾವುದು ಧರ್ಮವೋ ಅದರಂತೆ ನಡೆದುಕೋ” ಎಂದು ಹೊಟ್ಟೆಯೊಳಗಿರುವ ಕಚನಿಗೆ ಮಂತ್ರೋಪದೇಶ ಮಾಡುತ್ತಾನೆ.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!