ವ್ಯಾಸ ಮಹಾಭಾರತ – ಭಾಗ 49 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 49 ಆದಿಪರ್ವ (ಸಂಭವಪರ್ವ)

ಶುಕ್ರಾಚಾರ್ಯರು ಉಪದೇಶಿಸಿದ ಮಂತ್ರವನ್ನ ಅವರ ಜಠರದಲ್ಲಿಯೇ ಕುಳಿತು ಕಲಿತು ಮಂತ್ರವನ್ನ ಸಿದ್ಧಿಸಿಕೊಂಡು ನಿಮಿಷಾರ್ಧದಲ್ಲಿ ಕಚನು ಹೊರಬರುತ್ತಾನೆ. ಆತ ಹೊರಬಂದ ಕೂಡಲೇ ಶುಕ್ರಾಚಾರ್ಯರ ಅವಸಾನವಾಗುತ್ತದೆ. ಆಗ ಕಚನು ತಾನು ಕಲಿತ ಮೃತ ಸಂಜೀವಿನೀ ವಿದ್ಯೆಯಿಂದ ತನ್ನ ಗುರುಗಳ ಬದುಕಿಸಿ, “ಗುರುದೇವ ಮೃತಸಂಜೀವಿನಿ ವಿದ್ಯೆಯೆಂಬ ಅಮೃತಧಾರೆಯನ್ನ ನನ್ನೆರಡು ಕಿವಿಗಳಿಗೆ ಧಾರೆಯೆರಿದಿರಿ. ಅದರಿಂದಲೇ ನಾನು ಬದುಕಿದೆ. ನಿಮ್ಮ ಉದರದಿಂದ ಬಂದ ನಾನು ನಿಮ್ಮನ್ನೇ ತಂದೆಯೆಂದೂ ತಾಯಿಯೆಂದೂ ಭಾವಿಸುತ್ತೇನೆ. ಗುರುವೆಂಬ ಪ್ರಭುವಿಗೆ ಮನಸ್ಸಿನಲ್ಲಿಯೂ ದ್ರೋಹವೆಸಗುವುದಿಲ್ಲ.”

ಋತಸ್ಯ ದಾತಾರಮನುತ್ತಮಸ್ಯ ನಿಧಿಂ ನಿಧೀನಾಮಪಿ ಲಬ್ಧವಿದ್ಯಾಃ |
ಯೇ ನಾದ್ರಿಯಂತೇ ಗುರುಮರ್ಚನೀಯಂ ಪಾಪಾಲ್ಲೋಕಾಂಸ್ತೇ ವ್ರಜಂತ್ಯಪ್ರತಿಷ್ಠಾಃ ||

ಉತ್ತಮೋತ್ತಮವಾದ ಜ್ಞಾನವನ್ನು ದಯಪಾಲಿಸುವ, ಸಕಲವಿದ್ಯೆಗಳಿಗೂ ನಿಧಿಪ್ರಾಯನಾಗಿರುವ, ಪರಮಪೂಜ್ಯ ಗುರುವನ್ನು ಅವನಿಂದ ವಿದ್ಯೆಗಳನ್ನು ಕಲಿತವರು ಸರ್ವಕಾಲಗಳಲ್ಲಿಯೂ ಗೌರವಿಸಬೇಕು. ಅವನಿಂದ ವಿದ್ಯೆಗಳನ್ನು ಕಲಿತು ಯಾರು ಗುರುವನ್ನು ಗೌರವಿಸುವುದಿಲ್ಲವೋ ಪೂಜಿಸುವುದಿಲ್ಲವೋ ಅವರು ಇಹದಲ್ಲಿ ದುಷ್ಕೀರ್ತಿಯನ್ನು ಪಡೆದು ಅವಸಾನಾನಂತರದಲ್ಲಿ ಪಾಪಿಷ್ಠರು ಹೋಗುವ ನರಕಕ್ಕೆ ಹೋಗುತ್ತಾರೆ.
ಎನ್ನುತ್ತಾನೆ.

ಆಗ ಶುಕ್ರಾಚಾರ್ಯರು ಆತ್ಮೀಯವಾಗಿ ಆತನನ್ನ ಆಲಿಂಗಿಸಿ ಆತನ ನೆತ್ತಿಯನ್ನ ಆಘ್ರಾಣಿಸಿ ಹರಸುತ್ತಾರೆ.

ಕಚನನ್ನ ಆಶೀರ್ವದಿಸಿದ ಬಳಿಕ ಶುಕ್ರಾಚಾರ್ಯರು ಮನದಲ್ಲಿಯೇ ಆಲೋಚಿಸತೊಡುಗುತ್ತಾರೆ. ಕಚನನ್ನ ಅರೆದು ಬೆರೆಸಿದ ಸುರೆಯನ್ನು ಕುಡಿದು ಅದೆಷ್ಟೋ ಹೊತ್ತು ತಾನು ಪ್ರಜ್ಞೆ ಇಲ್ಲದೆ ಬಿದ್ದಿದ್ದನ್ನ ನೆನೆಸುತ್ತಾರೆ. ತಾನು ಸುರೆಯನ್ನು ಕುಡಿದುದರಿಂದ ಎಂತಹಾ ಅನಾಹುತವಾಯಿತು ಎಂದು ದುಃಖಿಸುತ್ತಾರೆ. ಬ್ರಾಹ್ಮಣ ವಟುವಾದ ಕಚನನ್ನ ನುಂಗುವಂತಾದದ್ದಕ್ಕೆ ಅತ್ಯಂತ ಬೇಸರಪಡುತ್ತಾರೆ. ಸುರಾಪಾನದಿಂದ ಆಗಬಾರದ್ದೆಲ್ಲಾ ಆಗಿ ಹೋಯಿತಲ್ಲ ಎಂದು ಮರುಗುತ್ತಾ ಇನ್ನು ಮುಂದೆ ಸುರಾಪಾನವನ್ನು ನಿಷೇಧಿಸಬೇಕೆಂದು ನಿಶ್ಚಯಿಸುತ್ತಾರೆ.

ಯೋ ಬ್ರಾಹ್ಮಣೋದ್ಯಪ್ರಭೃತೀಹ ಕಶ್ಚಿನ್ಮೋಹಾತ್ಸುರಾಂ ಪಾಸ್ಯತಿ ಮಂದಬುದ್ಧಿಃ |
ಅಪೇತಧರ್ಮಾ ಬ್ರಹ್ಮಹಾ ಚೈವ ಸ ಸ್ಯಾದಸ್ಮಿಲ್ಲೋಕೇ ಗರ್ಹಿತಃ ಸ್ಯಾತ್ಪರೇ ಚ ||

ಇನ್ನು ಮುಂದೆ ಮಂದ ಬುದ್ಧಿಯವನಾದ ಯಾವ ಬ್ರಾಹ್ಮಣನು ಸುರಾಪಾನ ಮಾಡುತ್ತಾನೋ ಅವನು ಧರ್ಮಭ್ರಷ್ಟನಾಗುತ್ತಾನೆ‌. ಸುರಾಪಾನ ಮಾಡುವ ಬ್ರಾಹ್ಮಣನಿಗೆ ಬ್ರಹ್ಮಹತ್ಯಾ ದೋಷವು ಪ್ರಾಪ್ತವಾಗುತ್ತದೆ. ಅವನು ಇಹಪರಗಳೆರಡರಲ್ಲೂ ಬಹುನಿಂದ್ಯನಾಗುತ್ತಾನೆ.

“ಬ್ರಾಹ್ಮಣ ಧರ್ಮದ ವಿಷಯವಾಗಿ ಧರ್ಮಶಾಸ್ತ್ರಗಳಲ್ಲಿ ಯಾವೆಲ್ಲಾ ನಿಯಮಗಳಿವೆಯೋ ಅವುಗಳ ಜೊತೆ ನಾನು ಮಾಡಿರುವ ಈ ನಿಯಮವೂ ಸೇರ್ಪಡೆಯಾಗಲಿ. ಅಖಂಡ ಪ್ರಪಂಚಕ್ಕೂ ಈ ನಿಯಮ ಅನ್ವಯವಾಗಲಿ. ನಾನು ವಿಧಿಸಿರುವ ಈ ನಿಯಮವನ್ನು ಸತ್ಪುರುಷರು, ಬ್ರಾಹ್ಮಣರು, ಆಚಾರ್ಯರು, ಆಚಾರ್ಯರ ಶಿಷ್ಯರು, ಪ್ರಜೆಗಳು ಕೇಳಿಸಿಕೊಳ್ಳಲಿ ಮತ್ತು ಅದರ ಪಾಲನೆ ಮಾಡಲಿ” ಎನ್ನುತ್ತಾರೆ.

ಅದಾದ ಬಳಿಕ ತನ್ನ ಶಿಷ್ಯರಾದ ದಾನವರನ್ನು ಕರೆಯಿಸಿ, “ಅದೆಂತಾ ಮೂರ್ಖತನದ ಕೆಲಸ ಮಾಡಿಬಿಟ್ಟಿರಿ. ನಿಮ್ಮ ಮೂರ್ಖತನದಿಂದ ಇಂದು ಕಚ ಮೃತಸಂಜೀವಿನಿ ವಿದ್ಯೆ ಕಲಿಯುವಂತಾಯಿತು. ಈಗ ಅವನು ನನಗೆ ಸರಿಸಮಾನನಾಗಿದ್ದಾನೆ. ಇನ್ನಾದರೂ ಇಂತಹ ಮೂರ್ಖತನದ ಕೆಲಸ ಮಾಡುವುದನ್ನ ಬಿಟ್ಟು ಬಿಡಿ.” ಎಂದು ಬುದ್ಧಿ ಹೇಳಿ ಕಳುಹಿಸುತ್ತಾನೆ.

ಮೃತಸಂಜೀವಿನಿ ವಿದ್ಯೆಯನ್ನ ಸಿದ್ಧಿಸಿಕೊಳ್ಳುವ ಹೊತ್ತಿಗೆ ಕಚನು ಶುಕ್ರಾಚಾರ್ಯರಲ್ಲಿ ಐನೂರು ವರ್ಷಗಳ ಬ್ರಹ್ಮಚರ್ಯ ವ್ರತವನ್ನ ಪೂರೈಸಿದ್ದನು. ಆತನ ಸಂಕಲ್ಪದಂತೆ ಮತ್ತೆ ಐನೂರು ವರ್ಷಗಳ ಬ್ರಹ್ಮಚರ್ಯ ವ್ರತವನ್ನೂ ಶುಕ್ರಾಚಾರ್ಯರ ಶಿಷ್ಯನಾಗಿ ಕಳೆದು ಗುರುಗಳಲ್ಲಿ ಮರಳಿ ತನ್ನ ಲೋಕವಾದ ಸ್ವರ್ಗಕ್ಕೆ ತೆರಳಲು ಅನುಮತಿಯನ್ನ ಪಡೆದುಕೊಂಡನು.

ಈ ಹೊತ್ತಿಗೆ ಮನಸ್ಸಿನಲ್ಲಿಯೇ ಕಚನನ್ನ ಪ್ರೀತಿಸುತ್ತಿದ್ದ ದೇವಯಾನಿಯು ಸ್ವರ್ಗಕ್ಕೆ ಹೊರಟು ನಿಂತ ಕಚನ ಬಳಿ, “ಹೇ ಸಖ ಇದುವರೆಗೆ ಬ್ರಹ್ಮಚರ್ಯವ್ರತದಲ್ಲಿದ್ದ ನಿನ್ನ ಬಳಿ ನನ್ನ ಮನದ ಆಸೆಯನ್ನ ಹೇಳಿಕೊಂಡಿರಲಿಲ್ಲ. ನಿನ್ನ ಗುಣ ಸನ್ನಡತೆಯಿಂದ ನನ್ನ ಮನವನ್ನ ಗೆದ್ದಿರುವೆ. ಈಗ ಸ್ವರ್ಗಕ್ಕೆ ಹೋಗುತ್ತಿರುವ ಹೊತ್ತಿನಲ್ಲಿ ನನ್ನನ್ನ ವಿವಾಹವಾಗಿ ನನ್ನನ್ನೂ ಸ್ವರ್ಗಕ್ಕೆ ಕರೆದುಕೊಂಡು ಹೋಗು. ನಾನೆಂದಿಗೂ ನಿನ್ನ ಕೈಬಿಡಲಾರೆನು” ಎನ್ನುತ್ತಾಳೆ.

ಆಗ ಕಚನು ಅಸಮಾಧಾನಗೊಂಡು, “ದೇವಯಾನಿ, ಎಂತಹಾ ಅಧರ್ಮದ ಮಾತಾಡುತ್ತಿರುವೆ…? ನಾನೆಂದಿಗೂ ನಿನ್ನನ್ನ ಪತ್ನಿಯ ರೂಪದಲ್ಲಿ ಗ್ರಹಿಸಿಯೇ ಇರಲಿಲ್ಲ. ಯಾವ ರೀತಿ ನಿನ್ನ ತಂದೆ ನನಗೆ ಪೂಜ್ಯರೋ ಅದೇ ರೀತಿ ನೀನು ಪೂಜ್ಯಳು. ನಿನ್ನನ್ನೂ ನಾನು ಅದೇ ಪೂಜ್ಯ ಭಾವದಿಂದ ನೋಡಿಕೊಂಡಿದ್ದೆನು. ಹಾಗಾಗಿ ಈ ರೀತಿಯ ಮಾತುಗಳನ್ನಾಡಬೇಡ. ನನ್ನ ಅಧರ್ಮಕಾರ್ಯ ಮಾಡುವಂತೆ ಪ್ರೇರೇಪಿಸಬೇಡ” ಎನ್ನುತ್ತಾನೆ.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...