ವ್ಯಾಸ ಮಹಾಭಾರತ – ಭಾಗ 5 – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 5

ಈ ಹಿಂದೆ ಜನಮೇಜಯನಿಗೆ ದೇವಲೋಕದ ನಾಯಿಯಾದ ಸುರಮೆ ಬಂದು ಶಾಪ ಕೊಡುವ ಕಥೆ ಕೇಳಿದ್ದಿರಿ… ಮುಂದೆ ಏನಾಯಿತು…?

ಶಾಪದಿಂದಾಗಿ ಬೇಸರಗೊಂಡ ಜನಮೇಜಯ ಒಬ್ಬ ಶಾಪನಿರಸನ ಸಮರ್ಥನಾದ ಒಬ್ಬ ಪುರೋಹಿತನನ್ನು ಹುಡುಕಲು ಪ್ರಯತ್ನಿಸತೊಡಗಿದನು.

ಅವನೊಮ್ಮೆ ಬೇಟೆಯಾಡುವ ಸಲುವಾಗಿ ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ, ರಾಜ್ಯಕ್ಕೆ ಸೇರಿದ ಅರಣ್ಯ ಪ್ರದೇಶವೊಂದರಲ್ಲಿ ಪ್ರಶಾಂತವಾಗಿದ್ದ ಆಶ್ರಮವೊಂದನ್ನು ಕಂಡನು. ಆ ಆಶ್ರಮ ಶ್ರುತಶ್ರವ ಎನ್ನುವ ಮಹರ್ಷಿಯದಾಗಿತ್ತು. ಅವನ ಪುತ್ರನ ಹೆಸರು ಸೋಮಶ್ರವ, ಅವನು ಯಾವಾಗಲೂ ತಪಸ್ಸು ಮಾಡುವುದರಲ್ಲಿಯೇ ನಿರತನಾಗಿರುತ್ತಿದ್ದನು. ಇದನ್ನು ಕಂಡ ಜನಮೇಜಯ ಸೋಮಶ್ರವನನ್ನು ನನ್ನ ಯಾಗದ ಪುರೋಹಿತನನ್ನಾಗಿಸುವಿರಾ ಎಂದು ಶ್ರುತಶ್ರವನಲ್ಲಿ ಕೇಳಿಕೊಳ್ಳುತ್ತಾನೆ.

ಆಗ ಶ್ರುತಶ್ರವ ಹೇಳುತ್ತಾನೆ.
“ಮಹಾರಾಜ ಈ ನನ್ನ ಮಗನು ಸರ್ಪಿಯ ಹೊಟ್ಟೆಯಲ್ಲಿ ಹುಟ್ಟಿದವನು. ( ಶ್ರುತಶ್ರವರ ರೇತಸ್ಸನ್ನು ಪ್ರಾಶನ ಮಾಡಿದ ಹೆಣ್ಣು ಹಾವಿನ ಹೊಟ್ಟೆಯೊಂದರಲ್ಲಿ ಹುಟ್ಟಿದವನು ) ಇವನನ್ನು ನಾನು ನನ್ನ ತಪಶಕ್ತಿ ಯಿಂದ ಬೆಳೆಸುತ್ತಿದ್ದೇನೆ. ಈಗಲೇ ಈತ ಮಹಾ ತಪಸ್ವಿಯಾಗಿರುವನು. ಸ್ವಾಧ್ಯಾಯ ಸಂಪನ್ನನಾಗಿರುವನು. ಇವನಿಗೆ ನಿನ್ನ ಶಾಪದ ಹೊರತಾಗಿಯೂ ಯಾಗ ನಡೆಸೋ ಶಕ್ತಿ ಸಾಮರ್ಥ್ಯಗಳಿದೆ. ಆದರೆ ಶಂಕರನ ಸಂಬಂಧವಾದ ಉಪದ್ರವಗಳನ್ನ ಮಾತ್ರ ನಿವಾರಿಸಲು ಸಾಧ್ಯವಿಲ್ಲ. ಇವನಿಗೊಂದು ಗುಪ್ತ ನಿಯಮವಿದೆ. ಯಾವನಾದರೂ ಬ್ರಾಹ್ಮಣ ಯಾವಾಗಲಾದರೂ ಬಂದು ಇವನಲ್ಲೇನಾದರೂ ಯಾಚಿಸಿದರೆ ಏನೂ ಯೋಚಿಸದೆ ಕೊಟ್ಟು ಬಿಡುತ್ತಾನೆ. ಈ ನಿಯಮಕ್ಕೆ ನೀನೊಪ್ಪುವಿಯಾದರೆ ಖಂಡಿತ ಇವನನ್ನು ಕರೆದುಕೊಂಡು ಹೋಗು.

ಅದಕ್ಕೊಪ್ಪಿದ ಜನಮೇಜಯ ಸೋಮಶ್ರವನನ್ನು ತನ್ನ ರಾಜಧಾನಿಗೆ ಕರೆದುಕೊಂಡು ಹೋದನು ಮತ್ತು ತನ್ನ ತಮ್ಮಂದಿರಲ್ಲಿ ಅವರ ನಿಯಮದ ಕುರಿತಾಗಿ ವಿವರಿಸಿದನು. ಅವರೂ ಅದಕ್ಕೊಪ್ಪಿಕೊಂಡು ಅದರಂತೆಯೇ ನಡೆದುಕೊಳ್ಳುತ್ತಿದ್ದರು.

ಜನಮೇಜಯನ ಆಜ್ಞೆಯಂತೆ ಅವನ ಅನುಜರು ಸೋಮಶ್ರವರಲ್ಲಿ ವಿಧೇಯತೆಯಿಂದ ನಡೆದುಕೊಳ್ಳುತ್ತಿದ್ದರು. ಜನಮೇಜಯ ತನ್ನ ತಮ್ಮಂದಿರಿಗೆ ನಿರ್ದೇಶನ ಕೊಟ್ಟು ತಕ್ಷಶಿಲೆಯ ಕಡೆಗೆ ದಂಡೆತ್ತಿ ಹೋದನು. ಈ ಜನಮೇಜಯನ ಕಾಲದಲ್ಲಿ ಅಯೋಧದೌಮ್ಯ ಅನ್ನುವ ಗುರುಗಳಿದ್ದರು ಅವರಿಗೆ ಮೂವರು ಶಿಷ್ಯರಿದ್ದರು ಅವರಲ್ಲೊಬ್ಬ ವೇದ. ಈ ವೇದ ಅನ್ನುವ ಗುರುವಿನ ಶಿಷ್ಯನೇ ಉತ್ತಂಕ…. ಈ ಉತ್ತಂಕನೇ ಜನಮೇಜಯನಲ್ಲಿ ಸರ್ಪಯಾಗ ಮಾಡುವಂತೆ ಹೇಳುವುದು. ಆತ ಹಾಗೆ ಹೇಳಲು ಕಾರಣವೇನು…? ಈ ಉತ್ತಂಕನ ಕಥೆ ಏನು….? ಮುಂದೆ ನೋಡೋಣ…

ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!