ವ್ಯಾಸ ಮಹಾಭಾರತ – ಭಾಗ 50 ಆದಿಪರ್ವ (ಸಂಭವಪರ್ವ)

ಕಚನ ಮಾತಿಗೆ ಅಸಮಾಧಾನ ಗೊಂಡ ದೇವಯಾನಿ ತುಸು ಕೋಪದಿಂದ,
“ಹೇ ಕಚನೇ, ಒಮ್ಮೆ ನೆನೆಸಿಕೋ, ದಾನವರು ಬಂದು ನಿನ್ನನ್ನು ಕೊಂದು ಹಾಕಿದಾಗಲೆಲ್ಲಾ ನಾನೇ ನನ್ನ ತಂದೆಯವರ ಬಳಿ ಅತ್ತು ಗೋಳಾಡಿ ನಿನಗೆ ಮರುಜೀವ ಬರುವಂತೆ ಮಾಡಿದ್ದು. ಇದರಿಂದಲೇ ನಿನ್ನ ಮೇಲೆ ನನಗದೆಷ್ಟು ಅನುರಾಗವಿದೆ ಎಂಬುದನ್ನ ಊಹಿಸಲಾರೆಯಾ…? ದಯವಿಟ್ಟು ನನ್ನನ್ನ ಪರಿತ್ಯಜಿಸದಿರು.” ಎಂದಳು.

ಆಗ ಕಚನು, “ಹೌದು ನನಗೆ ಮರು ಜೀವ ನಿನ್ನಿಂದಲೇ ಸಿಕ್ಕಿದ್ದು, ಆದರೆ ನಾವಿಬ್ಬರೂ ಶುಕ್ರಾಚಾರ್ಯರ ಹೊಟ್ಟೆಯಿಂದಲೇ ಬಂದವರಲ್ಲವೇ..? ಶುಕ್ರಾಚಾರ್ಯರ ಹೊಟ್ಟೆ ಸೀಳಿ ಬರುವ ಮುನ್ನ ಗುರುಗಳು ಏನು ಹೇಳಿದ್ದರೆನ್ನುವುದನ್ನ ಜ್ಞಾಪಿಸಿಕೊ. ನೀನು ನನ್ನನ್ನ ತಂದೆಯಂತೆಯೇ ಕಂಡು ಆ ಧರ್ಮದಂತೆಯೇ ನಡೆದುಕೊಳ್ಳು ಎಂದಿದ್ದರಲ್ಲವೆ. ಹಾಗಾಗಿ ನಮ್ಮೊಳಗೆ ಸಹೋದರತೆಯ ಸಂಬಂಧವೇ ಇದ್ದಂತಾಯಿತಲ್ಲ. ಹಾಗಾಗಿ ವಿವಾಹದ ಮಾತನ್ನಾಡಿ ಧರ್ಮಕ್ಕೆ ಚ್ಯತಿಯನ್ನುಂಟು ಮಾಡದಿರು.” ಎಂದು ಕೇಳಿಕೊಳ್ಳುತ್ತಾನೆ.
ಆಗ ದೇವಯಾನಿಯು ಕೋಪಗೊಂಡು, “ಕಚನೇ ನಾನು ನಿನ್ನ ಮೇಲಿಟ್ಟಿರುವ ಪ್ರೇಮವನ್ನು ಕಂಡೂ ಸಲ್ಲದ ಕಾರಣಗಳನ್ನು ಕೊಟ್ಟು ನನ್ನನ್ನ ವಿವಾಹ ಮಾಡಿಕೊಳ್ಳುತ್ತಿಲ್ಲವಲ್ಲ… ಇದೋ ನಿನಗೆ ಶಾಪವನ್ನೀಯುತ್ತೇನೆ. ನನ್ನ ತಂದೆಯವರಿಂದ ಪಡೆದ ವಿದ್ಯೆಯು ನಿನಗೆ ಸಿದ್ಧಿಸದೇ ಇರಲಿ.”

ಆಗ ಕಚನೂ ವ್ಯಾಕುಲನಾಗಿ, “ಹೇ ದೇವಯಾನಿ ನಮ್ಮಿಬ್ಬರ ಮಿಲನ ಧರ್ಮಸಮ್ಮತವಲ್ಲ ಎಂದು ನಿನ್ನ ತಂದೆಯವರ ಮಾತಿನ ಮೂಲಕವೇ ನಿರೂಪಿಸಿ ತೋರಿಸಿದ್ದರೂ ನಿನ್ನ ಕಾಮುಕತೆಯಿಂದ ನನಗೆ ಶಾಪವನ್ನಿತ್ತಿದ್ದೀಯ. ಗುರುಪುತ್ರಿಯಾದ ನಿನ್ನ ಶಾಪ ಫಲಿಸಿದರೂ ಕಾಮಪೂರಿತ ಉದ್ದೇಶದಿಂದ ಶಾಪವಿತ್ತ ಕಾರಣ ನಿನ್ನ ಶಾಪದ ಉದ್ದೇಶವು ಈಡೇರುವುದಿಲ್ಲ. ಯಾಕೆಂದರೆ ನಿನ್ನ ಶಾಪದಿಂದ ನನಗೆ ಈ ವಿದ್ಯೆ ಸಿದ್ಧಿಸದೇ ಇರಬಹುದು, ಆದರೆ ನಾನು ಯಾರಿಗೆ ಇದನ್ನ ಉಪದೇಶಿಸುತ್ತೇನೋ ಅವನಿಗೆ ಈ ವಿದ್ಯೆ ಖಂಡಿತ ಸಿದ್ಧಿಸುತ್ತದೆ. ಧರ್ಮದ ಕುರಿತಾಗಿ ಇಷ್ಟು ಹೇಳಿಯು ಕಾಮ ಭಾವನೆಯಿಂದ ನೀನು ನನಗೆ ಶಾಪವನ್ನಿತ್ತೆ ಹಾಗಾಗಿ ನಿನ್ನನ್ನ ಯಾವ ಋಷಿಪುತ್ರನೂ ಪರಿಗ್ರಹಿಸದಿರಲಿ.” ಎಂದು ದೇವಯಾನಿಗೆ ಶಾಪವನ್ನಿತ್ತು ಸ್ವರ್ಗಕ್ಕೆ ತೆರಳುತ್ತಾನೆ.

ಕಚ ಸ್ವರ್ಗಕ್ಕಾಗಮಿಸಿದ ಕೂಡಲೇ ದೇವತೆಗಳಿಂದ ಅದ್ಧೂರಿ ಸ್ವಾಗತ ದೊರೆಯಿತು.. ದೇವತೆಗಳು ನೀಡಿದ ವಾಗ್ದಾನದಂತೆ ಕಚನಿಗೂ ಯಜ್ಞದಲ್ಲಿ ಹವಿರ್ಭಾಗ ಸಿಗತೊಡಗಿತು. ದೇವತೆಗಳಿಗೆ ಕಚನಿಗೆ ಮೃತ ಸಂಜೀವಿನಿ ವಿದ್ಯೆ ಸಿದ್ಧಿಸುವುದಿಲ್ಲ ಎನ್ನುವುದರ ಅರಿವಿದ್ದರೂ ಅವರು ಆತಂಕಿತರಾಗಲಿಲ್ಲ… ಕಚನು ಆ ವಿದ್ಯೆಯನ್ನ ತನ್ನ ಶಿಷ್ಯರಿಗೆ ಉಪದೇಶಿಸಿದರೆ ಆ ವಿದ್ಯೆ ತಮ್ಮದೇ ಬಳಗದಲ್ಲಿರುತ್ತದೆ ಎನ್ನುವುದನ್ನ ದೇವತೆಗಳು ಅರಿತಿದ್ದರು. ಈ ವಿದ್ಯೆಯು ದೊರೆತದ್ದು ದೇವತೆಗಳಲ್ಲಿ ಅಮಿತೋತ್ಸಾಹ ಉಂಟು ಮಾಡಿ ಅವರೆಲ್ಲಾ ಇಂದ್ರನನ್ನ ಜೈತ್ರಯಾತ್ರೆಗೆ ಹೊರಡುವಂತೆ ಕೇಳಿಕೊಳ್ಳುತ್ತಾರೆ. ಇಂದ್ರನೂ ಒಪ್ಪಿ ದಿಗ್ವಿಜಯಕ್ಕೆ ಹೊರಡುತ್ತಾನೆ.

ಈ ಮಧ್ಯೆ ಇಂದ್ರ ಸಾಗುತ್ತಿದ್ದ ಮಾರ್ಗದ ನಡುವೆ ನಯನ ಮನೋಹರವಾದ ಉದ್ಯಾವನವೊಂದು ಸಿಗುತ್ತದೆ.. ಅಲ್ಲಿನ ಕೆರೆಯೊಂದರಲ್ಲಿ ರಾಕ್ಷಸರಾಜ ವೃಷಪರ್ವನ ಮಗಳಾದ ಶರ್ಮಿಷ್ಠೆ ಮತ್ತು ಅವಳ ಗೆಳತಿ ದೇವಯಾನಿ ಮತ್ತಿತ್ತರ ಸಖಿಯರು ಜಲಕ್ರೀಡೆಯಾಡುತ್ತಿದ್ದರು. ಇದನ್ನ ಕಂಡ ಇಂದ್ರ ಕುಚೋದ್ಯಕ್ಕಾಗಿ ವಾಯು ರೂಪದಲ್ಲಿ ಬಂದು ಅವರು ತೆಗೆದಿಟ್ಟ ಬಟ್ಟೆಗಳನ್ನೆಲ್ಲಾ ಅಸ್ತವ್ಯಸ್ತಗೊಳಿಸಿ ಏನೂ ಅರಿಯದವನಂತೆ ಹೊರಟು ಹೋಗುತ್ತಾನೆ.

ಜಲಕ್ರೀಡೆ ಮುಗಿದ ಕೂಡಲೆ ರಾಜಪುತ್ರಿ ಮತ್ತು ಸಖಿಯರು ಬಂದು ನೋಡುತ್ತಾರೆ ಬಟ್ಟೆಗಳು ಕೈಗೆಟುಕದಷ್ಟು ದೂರದಲ್ಲಿರುತ್ತದೆ… ಸಹಜವಾಗಿ ನಾಚಿಕೆಯಿಂದ ಅವರೆಲ್ಲಾ ಓಡಿ ಬಂದು ತಮ್ಮ ಕೈ ಸಿಕ್ಕಿದ ಬಟ್ಟೆಯನ್ನ ಬೇಗಬೇಗನೆ ಉಟ್ಟುಕೊಳ್ಳುತ್ತಾರೆ. ಹೀಗೆ ಶರ್ಮಿಷ್ಠೆಯು ಗೊತ್ತಾಗದೆ ದೇವಯಾನಿಯ ಸೀರೆಯನ್ನುಡುತ್ತಾಳೆ. ಗೆಳತಿಯರಾದರೂ ಬಟ್ಟೆ ಬದಲಾದ ಕಾರಣದಿಂದಾಗಿ ಶರ್ಮಿಷ್ಠೆ ಮತ್ತು ದೇವಯಾನಿಯರ ನಡುವೆ ಜಗಳವಾರಂಭವಾಗುತ್ತದೆ. ಈ ಜಗಳಕ್ಕೆ ಸೀರೆಯ ಬದಲಾವಣೆಯೊಂದೇ ಕಾರಣವಾಗಿರಲಿಲ್ಲ. ಅವರಿಬ್ಬರಿಗೂ ತಾವೇ ಹೆಚ್ಚು ಎನ್ನುವ ಭಾವವೊಂದು ಮನಸ್ಸಿನೊಳಗಿಂದ ಇದ್ದೇ ಇದ್ದಿತ್ತು. ಈ ಸೀರೆ ಬದಲಾದ ಪ್ರಕರಣ ಅವರ ಸ್ವಪ್ರತಿಷ್ಠೆಯ ಅಹಂಕಾರವನ್ನ ಪ್ರಕಟಗೊಳಿಸಿತು ಅಷ್ಟೇ..

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ