ವ್ಯಾಸ ಮಹಾಭಾರತ – ಭಾಗ 51 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 51 ಆದಿಪರ್ವ (ಸಂಭವಪರ್ವ)

ದೇವಯಾನಿ ಕೋಪಗೊಂಡು,
“ನನ್ನ ತಂದೆಯ ಶಿಷ್ಯೆಯಾಗಿರುವ ನೀನು ನನ್ನ ವಸ್ತ್ರ ತೊಟ್ಟುಕೊಂಡಿರುವೆಯಲ್ಲಾ ನಾಚಿಕೆಯಾಗುವುದಿಲ್ಲವೇ..? ನಿನಗೇನಾದರೂ ಆಚಾರ ವ್ಯವಹಾರ ಜ್ಞಾನ ಇದೆಯಾ… ಅಸುರ ಪುತ್ರಿಯೇ. ಇದರಿಂದ ನಿನಗೆ ಖಂಡಿತ ಒಳ್ಳೆಯದಾಗುವುದಿಲ್ಲ.” ಎಂದು ಶರ್ಮಿಷ್ಠೆಯನ್ನ ನಿಂದಿಸುತ್ತಾಳೆ.

ಇದರಿಂದ ಕೋಪಗೊಂಡ ಶರ್ಮಿಷ್ಠೆಯು, “ಸಾಕು… ಬಾಯಿ ಮುಚ್ಚು, ನಿನ್ನ ತಂದೆಯಾದರೂ ಯಾರು…?? ನನ್ನ ತಂದೆಯ ಆಸ್ಥಾನದಲ್ಲಿ ರಾಜ ಗದ್ದುಗೆಯ ಕೆಳಭಾಗದಲ್ಲಿ ಕುಳಿತುಕೊಳ್ಳುವವರು. ಸದಾ ನನ್ನ ತಂದೆಯನ್ನ ಹೊಗಳುವ ಹೊಗಳು ಭಟರು. ನಾನೋ ನಿನ್ನ ತಂದೆಯಿಂದ ಹೊಗಳಿಸಿಕೊಳ್ಳುವವನ ಮಗಳು. ನಿಮ್ಮಂತಹ ದರಿದ್ರರ ಮಾತುಗಳೆಲ್ಲಾ ಹೀಗೆಯೇ ಇರುತ್ತದೆ. ಇಂತಹವನ್ನೆಲ್ಲಾ ಕೇಳಿಯೂ ಕೇಳದಂತಿರಬೇಕು.” ಎಂದು ಸಿಡುಕಿ ಅಲ್ಲಿಂದ ಹೊರಟಳು. ಆಕೆಯ ಚುಚ್ಚು ಮಾತಿನಿಂದ ಕೋಪಗೊಂಡ ದೇವಯಾನಿ ಶರ್ಮಿಷ್ಠೆ ಉಟ್ಟಿದ್ದ ತನ್ನ ಸೀರೆ ಕಸಿದುಕೊಳ್ಳಲು ಪ್ರಯತ್ನಿಸುತ್ತಾಳೆ. ಆಗ ಶರ್ಮಿಷ್ಠಯೂ ಕೋಪದಲ್ಲಿ ಆಕೆಯನ್ನ ದೂಡುತ್ತಾ ಪಕ್ಕದಲ್ಲಿದ್ದ ಸಣ್ಣ ಬಾವಿಯೊಂದಕ್ಕೆ ತಳ್ಳಿ, ತಾನೇನೂ ಮಾಡಿಲ್ಲವೆಂಬಂತೆ ಅಲ್ಲಿಂದ ಹೊರಟುಹೋಗುತ್ತಾಳೆ.

ಇದೇ ಸಮಯದಲ್ಲಿ ಬೇಟೆಯಾಡಿ ಮರಳುತ್ತಿದ್ದ ಯಯಾತಿಯು ಅದೇ ಮಾರ್ಗದಲ್ಲಿ ಸಾಗುತ್ತಿದ್ದಾಗ ಬಾಯಾರಿಕೆಯಾಯಿತೆಂದು ಅದೇ ಬಾವಿಯ ಪಕ್ಕ ಬಂದು ತನ್ನ ಬಾಯಾರಿಕೆ ತಣಿಸುವ ಸಲುವಾಗಿ ಬಾವಿಯನ್ನ ಇಣುಕಿದಾಗ ಅಲ್ಲಿ ಆತನಿಗೆ ದೇವಯಾನಿ ಕಾಣಿಸುತ್ತಾಳೆ. ಆಗ ಯಯಾತಿಯು, “ಹೇ ತರುಣಿ, ಸುಕೋಮಲೆಯಾದ ನೀನು ಈ ಬಾವಿಯೊಳಗೇನು ಮಾಡುತ್ತಿರುವೆ. ನೀನು ಯಾರ ಮಗಳು. ನಿನ್ನ ಹೆಸರೇನು..? ಈ ಬಾವಿಯೊಳಗೆ ಬಿದ್ದಿರುವೆಯೆಂದರೆ ನಿನಗೇನು ಜೀವನದಲ್ಲಿ ಜಿಗುಪ್ಸೆಯೇ…?” ಎಂದು ಕೇಳುತ್ತಾನೆ.

ಶರ್ಮಿಷ್ಠೆಯ ಮಾತುಗಳು ದೇವಯಾನಿಯ ಹೃದಯವನ್ನ ಚುಚ್ಚುತ್ತಿದ್ದರೂ ಅದನ್ನ ಮುಖದಲ್ಲಿ ತೋರಗೊಡದೆ, “ಹೇ ಪುರುಷೋತ್ತಮನೇ, ನಾನು ಅಸುರರ ಕುಲ ಗುರುಗಳಾದ ಶುಕ್ರಾಚಾರ್ಯರ ಪುತ್ರಿ ದೇವಯಾನಿ. ನಾನೀ ಬಾವಿಗೆ ಬಿದ್ದಿರುವುದು ನನ್ನ ತಂದೆಗೆ ತಿಳಿದಿಲ್ಲ. ನೋಡಲು ನೀನು ಸತ್ಕುಲನಾಗಿಯೂ ಯಶೋವಂತನಾಗಿಯೂ ಕಾಣಿಸುತ್ತಿರುವೆ. ಇದೋ ನಾನು ನನ್ನ ಹಸ್ತವನ್ನ ಚಾಚಿದ್ದೇನೆ. ನನ್ನನ್ನ ಮೇಲೆತ್ತಿ ಉದ್ಧರಿಸು” ಎಂದು ಕೇಳಿಕೊಳ್ಳುತ್ತಾಳೆ. ಯಯಾತಿಯೂ ಶುಕ್ರಾಚಾರ್ಯರ ಮಗಳೆಂದು ತಿಳಿದ ಕೂಡಲೇ ಆಕೆಯನ್ನ ಬಾವಿಯಿಂದ ಮೇಲಕ್ಕೆಳೆದು ಪಕ್ಕದಲ್ಲಿ ಕೂರಿಸಿ, ಅವಳ ಅನುಮತಿ ಪಡೆದು ತನ್ನ ರಾಜಧಾನಿಗೆ ಮರಳುತ್ತಾನೆ.

ಯಯಾತಿ ಹೊರಟು ಹೋದರೂ ದೇವಯಾನಿ ತನ್ನ ಆಶ್ರಮಕ್ಕೆ ಹೊರಡದೆ ಅಲ್ಲೇ ಕುಳಿತಿದ್ದಳು. ಇದನ್ನ ಘೂರ್ಣಿಕೆ ಎಂಬ ಆಕೆಯ ದಾಸಿಯು ಕಂಡು ಆಕೆಯನ್ನು ಮಾತನಾಡಿಸುತ್ತಾ ಮರಳಿ ಆಶ್ರಮಕ್ಕೆ ತೆರಳೋಣವೇ ಎಂದು ಕೇಳಲು ದೇವಯಾನಿಯು “ಇಲ್ಲ ಸಖಿ, ವೃಷಪರ್ವನ ಪಟ್ಟಣಕ್ಕೆ ನಾನು ಬರುವುದಿಲ್ಲ. ಈ ವಿಚಾರವನ್ನ ನನ್ನ ತಂದೆಯವರಿಗೆ ತಿಳಿಸಿ ಬಿಡು” ಎನ್ನುತ್ತಾ ನಡೆದಿರುವ ಘಟನೆಯನ್ನೆಲ್ಲಾ ವಿವರಿಸಿ ಆಕೆಯನ್ನ ತನ್ನ ತಂದೆಯ ಬಳಿ ಕಳುಹಿಸುತ್ತಾಳೆ. ಈ ವಿಷಯ ತಿಳಿದ ಶುಕ್ರಾಚಾರ್ಯರು ಆತಂಕದಿಂದ ದೇವಯಾನಿಯ ಬಳಿ ಬಂದು “ಅಳಬೇಡ ಮಗಳೇ” ಎನ್ನುತ್ತಾ ತಬ್ಬಿಕೊಂಡು ಸಂತೈಸುತ್ತಾ….

ಆತ್ಮದೋಷೈರ್ನಿಯಚ್ಛಂತಿ ಸರ್ವೇ ದುಃಖಸುಖೇ ಜನಾಃ |
ಮನ್ಯೇ ದುಶ್ಚರಿತಂ ತೇಸ್ತಿ ಯಸ್ಯೇಯಂ ನಿಷ್ಕೃತಿಃ ಕೃತಾ ||

ಮಗು, ಪ್ರಪಂಚದಲ್ಲಿರುವ ಎಲ್ಲ ಜನರೂ ತಮಗೆ ಒದಗುವ ಸುಖ ದುಃಖಗಳನ್ನು ತಮ್ಮ ಕರ್ಮಾನುಸಾರವಾಗಿಯೇ ಪಡೆಯುವರು. ನಮ್ಮ ಸುಖದುಃಖಗಳಿಗೆ ಇತರರೆಂದಿಗೂ ಕಾರಣರಾಗುವುದಿಲ್ಲ‌. ಆದುದರಿಂದ ಈ ವಿಧವಾದ ದುಃಖವನ್ನು ಅನುಭವಿಸಲು ನೀನು ಯಾವುದೋ ಅಪರಾಧವನ್ನು ಮಾಡಿರಲೇಬೇಕೆಂದು ನಾನು ಭಾವಿಸುತ್ತೇನೆ.

ಶುಕ್ರಾಚಾರ್ಯರು ಹೇಳಿದ ಮಾತುಗಳು ಪರಮಸತ್ಯವೇ ಆಗಿದ್ದರೂ, ಅದು ದೇವಯಾನಿಗೆ ರುಚಿಸಲಿಲ್ಲ. ಆಕೆ ಗಡುಸಾದ ಧ್ವನಿಯಲ್ಲಿಯೇ “ಅಪ್ಪಾ, ಈಗ ನಾನು ಅನುಭವಿಸುತ್ತಿರುವ ಕಷ್ಟವು ನಾನು ಮಾಡಿದ ದುಷ್ಕರ್ಮದ ಫಲವೇ..? ಅಥವಾ ಅಲ್ಲವೇ? ಎಂಬುದರ ಚರ್ಚೆ ಈಗ ಬೇಕಿಲ್ಲ. ನಾನು ಹೇಳುವುದನ್ನ ಕೇಳು. ಇದರಲ್ಲಿನ ಸತ್ಯಾಂಶವನ್ನ ಮರೆ ಮಾಚದೇ ಹೇಳು. ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮುಂದೇನು ಮಾಡಬೇಕೆಂಬುದನ್ನು ನಾನೇ ನಿರ್ಧರಿಸುತ್ತೇನೆ.” ಎನ್ನುತ್ತಾಳೆ.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...