ವ್ಯಾಸ ಮಹಾಭಾರತ – ಭಾಗ 52 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 52 ಆದಿಪರ್ವ (ಸಂಭವಪರ್ವ)

ದೇವಯಾನಿ ಶುಕ್ರಾಚಾರ್ಯರ ಬಳಿ “ವೃಷಪರ್ವನ ಮಗಳಾದ ಶರ್ಮಿಷ್ಠೆಯು ನಿನ್ನನ್ನು ಹೊಗಳು ಭಟ್ಟನೆಂದು ಹೇಳಿದಳು ಇದು ನಿಜವೇ..? ಈ ಮಾತುಗಳನ್ನವಳು ಕುಪಿತಳಾಗಿ ಕಣ್ಣುಗಳನ್ನು ಕೆಂಪಗೆ ಮಾಡುತ್ತಾ ಹತ್ತಾರು ಬಾರಿ ಹೇಳಿದಳು. ಅವಳದೇ ಮಾತಿನಂತೆ ಹೇಳುತ್ತೇನೆ ಕೇಳು

ಸ್ತುವತೋ ದುಹಿತಾ ನಿತ್ಯಂ ಯಾಚತಃ ಪ್ರತಿಗೃಹ್ಣತಃ |
ಅಹಂ ತು ಸ್ತೂಯಮಾನಸ್ಯ ದದತೋ ಪ್ರತಿಗಹ್ಣತಃ ||

ನಿತ್ಯವೂ ಸಿಂಹಾಸನದ ಕೆಳಗೆ ಕೈಕಟ್ಟಿಕೊಂಡು ನಿಂತು ನನ್ನ ತಂದೆಯನ್ನು ಹೊಗಳುವ, ಜೀವಿಕೆಗಾಗಿ ಪದೇ ಪದೇ ಯಾಚನೆ ಮಾಡುವವ ನೀವೆಂದಳು. ತನ್ನ ತಂದೆ ಕರುಣೆಯಿಂದ ಕೊಟ್ಟ ದಾನವನ್ನು ದೈನ್ಯದಿಂದ ಪರಿಗ್ರಹಿಸುವ ಶುಕ್ರನ ಮಗಳು ನೀನು ಎಂದೂ ಸದಾ ನಿಮಗೆ ದಾನ ಕೊಡುವ ವೃಷಪರ್ವನ ಮಗಳು ನಾನೆಂದು ಮೂದಲಿಸಿದಳು.

ಅಪ್ಪಾ ಈಗ ನಾನು ನಿಮ್ಮನ್ನು ಪ್ರಶ್ನಿಸುವುದಿಷ್ಟೇ…. ಶರ್ಮಿಷ್ಠೆಯು ಹೇಳಿದಂತೆ ನಾನು ಹೊಗಳು ಭಟನ ಮಗಳೇ..? ದಾನವನ್ನು ಸ್ವೀಕರಿಸಲು ಸದಾ ಉತ್ಸುಕನಾಗಿರುವಾತನ ಮಗಳೇ..? ಇದನ್ನ ಸ್ಪಷ್ಟ ಪಡಿಸಿ. ಒಂದು ವೇಳೆ ಶರ್ಮಿಷ್ಠೆಯು ಹೇಳಿದ್ದು ನಿಜವಾದರೆ ನಾನೀಗಲೇ ಅವಳಲ್ಲಿಗೆ ಹೋಗಿ ಅವಳನ್ನೇ ಸ್ವಾಮಿನಿ ಎಂದು ಒಪ್ಪಿಕೊಂಡು ಶುಶ್ರೂಷೆ ಮಾಡಿ ಅವಳ ಕೃಪೆಯನ್ನಾದರೂ ಸಂಪಾದಿಸುವೆನು.” ಎನ್ನುತ್ತಾಳೆ.

ಆಗ ಶುಕ್ರರು ತುಸು ಮುನಿಸಿನಿಂದಲೇ, “ಮಗಳೇ ನೀನು ನಿಶ್ಚಿತವಾಗಿಯೂ ಹೊಗಳು ಭಟನ ಮಗಳಲ್ಲ, ಯಾಚಕನ ಮಗಳೂ ಅಲ್ಲ, ದಾನವನ್ನ ಸ್ವೀಕರಿಸಲು ಸದಾ ಹಂಬಲಿಸುವವನೂ ಮಗಳೂ ಅಲ್ಲ ಈ ವಿಚಾರ ಶರ್ಮಿಷ್ಠೆಯ ತಂದೆಯಾದ ವೃಷಪರ್ವನಿಗೂ ಗೊತ್ತು. ನಾನೇನು ಅನ್ನುವುದು ದೇವತೆಗಳಲ್ಲಿ ಶ್ರೇಷ್ಠನಾದ ಇಂದ್ರನಿಗೂ ಗೊತ್ತು ಮಾನವರಲ್ಲಿ ಶ್ರೇಷ್ಠನಾದ ಯಯಾತಿಗೂ ಗೊತ್ತು. ಅದನ್ನ ನಾನಾಗಿ ಹೇಳಿಕೊಳ್ಳುವ ಅಗತ್ಯವಿಲ್ಲ. ಆದರೂ ಮಗಳೇ…

ಯಃ ಪರೇ಼ಷಾಂ ನರೋ ನಿತ್ಯಮತಿವಾದಾಂಸ್ತಿತಿಕ್ಷತೇ |
ದೇವಯಾನಿ ವಿಜಾನೀಹಿ ತೇನ ಸರ್ವಮಿದಂ ಜಿತಮ್ ||

ಇತರರಾಡಿಕೊಳ್ಳುವ ನಿಂದೆಯ ಮಾತುಗಳನ್ನು ಯಾವನು ಸಹಿಸಿಕೊಳ್ಳುವನೋ , ಲಕ್ಷಿಸುವುದಿಲ್ಲವೋ ಅಂತಹವನು ಜಗತ್ತನ್ನೇ ಜಯಿಸಲು ಸಮರ್ಥನಾಗುತ್ತಾನೆ.

ಕೋಪಕ್ಕೆ ಎಂದಿಗೂ ಆಶ್ರಯವನ್ನು ನೀಡದಿರು ಮಗಳೇ,

ಯಃ ಸಮುತ್ಪತಿತಂ ಕ್ರೋಧಂ ನಿಗೃಹ್ಣಾತಿ ಹಯಂ ಯಥಾ |
ಸ ಯಂತೇತ್ಯುಚ್ಯತೇ ಸದ್ಭಿರ್ನ ಯೋ ರಶ್ಮಿಷು ಲಂಭತೇ ||

ಕುದುರೆಗಳು ಓಡುತ್ತಿರುವಾಗ ಕಡಿವಾಣಗಳನ್ನು ಬಿಗಿಯಾಗಿ ಹಿಡಿದು ಕುದುರೆಗಳನ್ನು ನಿಯಂತ್ರಿಸುವವನೇ ಸಾರಥಿ, ರಥಿಕನಾಗಲು ಯೋಗ್ಯನಾಗುತ್ತಾನೆ. ಕುದುರೆಗಳನ್ನ ಅಂಕೆಯಲ್ಲಿಡಲಾಗದವ ಶ್ರೇಷ್ಠ ಸಾರಥಿಯೋ ರಥಿಕನೋ ಆಗಲಾರ. ಅಂತೆಯೇ ಕೋಪವನ್ನ ನಾವು ಅಂಕೆಯಲ್ಲಿಟ್ಟುಕೊಳ್ಳಬೇಕು ಇಲ್ಲವಾದಲ್ಲಿ ಕಡಿವಾಣ ತಪ್ಪಿದ ಕುದುರೆಗಳುಳ್ಳ ರಥದ ಸಾರಥಿಯ ಪರಿಸ್ಥಿತಿಯೇ ನಮ್ಮ ಪರಿಸ್ಥಿತಿಯಾಗುತ್ತದೆ.

ಯಃ ಸಮುತ್ಪತಿತಂ ಕ್ರೋಧಂ ಕ್ಷಮಯೇಹ ನಿರಸ್ಯತಿ |
ಯಥೋರಗಸ್ತ್ವಚಂ ಜೀರ್ಣಾಂ ಸ ವೈ ಪುರುಷ ಉಚ್ಯತೇ ||

ಕೋಪಕ್ಕೆ ಆಶ್ರಯವಿತ್ತವನು ಕ್ರೂರವಾಗಿ ವರ್ತಿಸಿದರೂ ಅವನನ್ನು ಪುರುಷನೆಂದು ಹೇಳುವ ಸಾಧ್ಯತೆಯಿಲ್ಲ. ಸಂಧರ್ಭಾನುಸಾರವಾಗಿ ಉಂಟಾಗುವ ಕೋಪವನ್ನು ಕ್ಷಮಾಗುಣದಿಂದ ತ್ಯಜಿಸುವವನೇ ಪುರುಷನೆನಿಸಿಕೊಳ್ಳುತ್ತಾನೆ. ಜೀರ್ಣವಾದ ಪೊರೆಯನ್ನು ಕಳಚಿದ ಹಾವಿನಂತೆ ಅಂತಹವನು ಶೋಭಿಸುತ್ತಾನೆ.

ಯಃ ಸಂಧಾರಯತೇ ಮನ್ಯುಂ ಯೋತಿವಾದಾಂಸ್ತಿತಿಕ್ಷತೇ |
ಯಶ್ಚ ತಪ್ತೋ ನ ತಪತಿ ದೃಢಂ ಸೋರ್ಥಸ್ಯ ಭಾಜನಮ್ ||

ಯಾವನು ಸಂದರ್ಭಾನುಸಾರವಾಗಿ ಬಂದ ಕೋಪವನ್ನು ತಡೆಹಿಡಿಯುತ್ತಾನೋ ಯಾವನು ನಿಂದೆಗೆ ಲಕ್ಷ್ಯ ಕೊಡುವುದಿಲ್ಲವೋ ಮತ್ತು ಯಾವನು ಇತರರಿಂದ ತೊಂದರೆಯನ್ನೇ ಅನುಭವಿಸಿದರೂ ಮನಸ್ಸಿಗೆ ಯಾವ ವಿಧವಾದ ತಾಪವನ್ನೂ ತಂದುಕೊಳ್ಳದೇ ಸೈರಣೆಯಿಂದ ಇರುತ್ತಾನೆಯೋ ಅಂತಹವನಿಗೆ ನಾಲ್ಕು ಪುರುಷಾರ್ಥಗಳ ಸಿದ್ಧಿಯೂ ಆಗುತ್ತದೆ.

ಯೋ ಯಜೇದಪರಿಶ್ರಾಂತೋ ಮಾಸಿ ಮಾಸಿ ಶತಂ ಸಮಾ |
ನ ಕ್ರುಧ್ಯೇದ್ಯಶ್ಚ ಸರ್ವಸ್ಯ ತಯೋರಕ್ರೋಧನೋಧಿಕಃ ||

ಯಾವನು ವಿಶ್ರಾಂತಿಯಿಲ್ಲದೆ ನೂರು ವರ್ಷಗಳ ಕಾಲ ಪ್ರತೀ ಮಾಸವೂ ಯಾಗಮಾಡುವನೋ ಅವನಿಗೆ ಲಭ್ಯವಾಗುವ ಫಲಕ್ಕಿಂತಲೂ ಅಧಿಕವಾದ ಫಲವು ಯಾವ ವಿಷಯಕ್ಕೂ ಯಾವ ಕಾರಣದಿಂದಲೂ ಕೋಪಿಸಿಕೊಳ್ಳದ ಕ್ಷಮಾಶೀಲನಿಗೆ ಲಭ್ಯವಾಗುತ್ತದೆ.
ಹೀಗೆ ಶುಕ್ರಚಾರ್ಯರು ತಮ್ಮ ಮಗಳ ಕೋಪವನ್ನ ಶಾಂತಗೊಳಿಸುವ ನಾನಾ ವಿಧದ ಪ್ರಯತ್ನ ಮಾಡಿದರೂ ದೇವಯಾನಿಗೆ ಕೋಪವು ಕಡಿಮೆಯಾಗಲಿಲ್ಲ.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...