ವ್ಯಾಸ ಮಹಾಭಾರತ – ಭಾಗ 53 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 53 ಆದಿಪರ್ವ (ಸಂಭವಪರ್ವ)

ದೇವಯಾನಿ ತನ್ನ ತಂದೆಯ ಬಳಿ, “ಅಪ್ಪಾ ನಾನು ಬಾಲೆಯಾಗಿದ್ದರೂ ತಮ್ಮಂತಹ ಧರ್ಮಾತ್ಮರ ಸಹವಾಸದಿಂದ ಧರ್ಮಾಧರ್ಮಗಳ ಅಂತರವೇನೆಂಬುದನ್ನ ಸಂಪೂರ್ಣವಾಗಿ ತಿಳಿದಿದ್ದೇನೆ. ಕ್ಷಮಾಗುಣ ಮತ್ತು ನಿಂದನೆಯನ್ನ ಅಲಕ್ಷ್ಯ ಮಾಡುವುದರಲ್ಲಿರುವ ಬಲಾಬಲಗಳನ್ನು ತಿಳಿದಿರುತ್ತೇನೆ. ಎಲ್ಲಾ ಸಮಯಗಳಲ್ಲಿ ಎಲ್ಲರ ವಿಷಯದಲ್ಲಿಯೂ ಕ್ಷಮೆಯೇ ಇರಬೇಕೆಂಬುದೂ ಅಸಹಜವಾಗಿ ಕಾಣಿಸುತ್ತದೆ. ಶಿಷ್ಯರಾದವರು ಶಿಷ್ಯವೃತ್ತಿಯನ್ನ ಮೀರಿ ಧೂರ್ತರಾಗಿ ವರ್ತಿಸಿದರೆ ಅಂತಹವರನ್ನ ಖಂಡಿತವಾಗಿಯೂ ಕ್ಷಮಿಸಬಾರದು. ಶಿಕ್ಷಾರ್ಹನಾದ ಶಿಷ್ಯನನ್ನು ಕ್ಷಮಿಸುವುದರಿಂದ ಗುರುವಿಗೂ ಹಿತವಾಗುವುದಿಲ್ಲ. ಶಿಷ್ಯನಿಗೂ ಹಿತವಾಗುವುದಿಲ್ಲ. ಆದುದರಿಂದ ಶುದ್ಧವಾದ ಆಚಾರ ವಿಚಾರಗಳಿಲ್ಲದವರೊಡನೆ ನಾನು ಖಂಡಿತವಾಗಿಯೂ ಇರಲು ಇಚ್ಛಿಸುವುದಿಲ್ಲ.

ಪುಮಾಂಸೋ ಯೇ ಹಿ ನಿಂದತಿ ವೃತ್ತೇನಾಭಿಜನೇನ ಚ |
ನ ತೇಷು ನಿವಸೇತ್ಪ್ರಾಜ್ಞಃ ಶ್ರೇಯೋರ್ಥೀ ಪಾಪಬುದ್ಧಿಷು ||
ಯಾವ ಪುರುಷರು ಇತರರ ಸದಾಚಾರ ಕುಲಗಳನ್ನು ನಿಂದನೆ ಮಾಡುತ್ತಾರೋ ಅಂತಹವರ ಆಶ್ರಯದಲ್ಲಿ ಪ್ರಾಜ್ಞನಾದವನೂ, ಶ್ರೇಯೋಭಿಲಾಷಿಯೂ ಇರಬಾರದು.

ಯೇ ತ್ವೇನಮಭಿಜಾನಂತಿ ವೃತ್ತೇನಾಭಿಜನೇನ ವಾ |
ತೇಷು ಸಾಧುಷು ವಸ್ತವ್ಯಂ ಸ ವಾಸಃ ಶ್ರೇಷ್ಠ ಉಚ್ಯತೇ ||
ಸದಾಚಾರಸಂಪನ್ನರೆಂದೂ ಸತ್ಕುಲಪ್ರಸೂತರೆಂದೂ ಯಾರನ್ನು ಗೌರವಿಸುತ್ತಾರೆಯೋ ಅಂತಹ ಸಾಧುಗಳ ಮಧ್ಯದಲ್ಲಿ ವಾಸ ಮಾಡಬೇಕು. ಅಂತಹ ವಾಸವು ಶ್ರೇಷ್ಠವೆನಿಸುತ್ತದೆ.
ಅಗ್ನಿಯನ್ನ ಅಪೇಕ್ಷಿಸುವವನು ಮಥನದಂಡದಿಂದ ಅರುಣಿಯನ್ನು ಕಡೆಯುವಂತೆ ನಿನ್ನ ಶಿಷ್ಯನಾದ ವೃಷಪರ್ವನ ಮಗಳು ಹೇಳಿದ ಕರ್ಣಕಠೋರವಾದ ಮಾತುಗಳು ನನ್ನ ಮನಸನ್ನ ಈಗಲೂ ಮಥಿಸುತ್ತಿದೆ. ಶ್ರೀಮಂತರ ಸೇವೆ ಮಾಡಿಕೊಂಡು ಜೀವನವನ್ನು ಹೊರೆಯುವುದಕ್ಕಿಂತ ಮರಣವೇ ಲೇಸು ಅಪ್ಪಾ. ವಿದ್ವಜ್ಜನರ ಅಭಿಪ್ರಾಯವೂ ಇದೇ ಆಗಿದೆ.
ನಹ್ಯತೋ ದುಷ್ಕರತರಂ ಮನ್ಯೇ ಲೋಕೇಷ್ವಪಿ ತ್ರಿಷು |
ಯಃ ಸಪತ್ನಶ್ರಿಯಂ ದೀಪ್ತಾಂ ಹೀನಶ್ರೀಃ ಪರ್ಯುಪಾಸತೇ |
ಮರಣಂ ಶೋಭನಂ ತಸ್ಯ ಇತಿ ವಿದ್ವಜ್ಜನಾ ವಿದುಃ ||

ದರಿದ್ರನಾದವನು ಐಶ್ವರ್ಯವಂತನಾದ ತನ್ನ ಶತ್ರುವಿನ ಸೇವೆ ಮಾಡುವುದಕ್ಕಿಂತಲೂ ದುಷ್ಕರವಾದುದು ಮತ್ತು ಸಹಿಸಲಸಾಧ್ಯವಾದುದು ಈ ಮೂರು ಲೋಕಗಳಲ್ಲಿಯೂ ಮತ್ತೊಂದಿಲ್ಲವೆಂದು ನಾನು ಭಾವಿಸುತ್ತೇನೆ. ದರಿದ್ರನಾದವನು ಐಶ್ವರ್ಯವಂತನಾದ ಶತ್ರುವಿನ ಸೇವೆ ಮಾಡಿಕೊಂಡು ಹೊಟ್ಟೆ ಹೊರೆಯುವುದಕ್ಕಿಂತಲೂ ಸಾಯುವುದೇ ಶ್ರೇಷ್ಠವೆನ್ನುವುದು ವಿದ್ವಾಂಸರ ಅಭಿಪ್ರಾಯವಾಗಿದೆ. ಆದುದರಿಂದ ನೀನು ನನಗೆ ಈ ವಿಷಯದಲ್ಲಿ ಎಷ್ಟೇ ಬುದ್ಧಿ ಹೇಳಿದರೂ ನಿನ್ನ ಶಿಷ್ಯನ ಪಟ್ಟಣಕ್ಕೆ ನಾನೆಂದಿಗೂ ಬರಲಾರೆ.” ಎಂದು ಹೇಳುತ್ತಾಳೆ.

ದೇವಯಾನಿಯ ಮಾತುಗಳ ಕುರಿತಾಗಿ ಶುಕ್ರಾಚಾರ್ಯರೂ ಸ್ವಲ್ಪ ಹೊತ್ತು ಯೋಚಿಸಿದರು. ಅವರಿಗೂ ತಮ್ಮ ಮಗಳ ಮಾತು ಸರಿ ಅನ್ನಿಸಿತು ಕೂಡಲೇ ಅವರು ವೃಷಪರ್ವನ ಆಸ್ಥಾನಕ್ಕೆ ಹೋಗಿ

“ಮಹಾರಾಜ ಬಿತ್ತಿದ ಬೀಜವು ಫಲಕೊಡಬೇಕಾದರೆ ಹೇಗೆ ಸಮಯ ಹಿಡಿಯುವುದೋ, ಹುಲ್ಲನ್ನ ತಿಂದ ಹಸುವು ಹಾಲನ್ನ ಕೊಡಲು ಹೇಗೆ ಸಮಯ ಬೇಕಾಗುವುದೋ ಅದೇ ರೀತಿ ಮಾಡಿದ ಕರ್ಮದ ಫಲವೂ ಕೂಡಲೇ ಸಿಗುವುದಿಲ್ಲ. ಆದರೆ ಅದನ್ನ ಅನುಭವಿಸದೇ ಇರಲೂ ಆಗುವುದಿಲ್ಲ. ನನ್ನ ಶಿಷ್ಯನಾದ ಕಚನನ್ನ ಕೊಂದು ಬ್ರಹ್ಮ ಹತ್ಯಾ ದೋಷವನ್ನೇ ನೀನು ಮಾಡಿರುವೆ. ಅದಲ್ಲದೆ ನಿನ್ನ ಮಗಳು ನನ್ನ ಮಗಳನ್ನ ಜರೆದು ಹೊಡೆದು ಅವಳನ್ನ ಘಾಸಿಗೊಳಿಸಿದ್ದಾಳೆ. ಇಷ್ಟಾದರೂ ಈ ಕೃತ್ಯಗಳಿಗೆಲ್ಲಾ ನಿನ್ನಲ್ಲಿ ಪಶ್ಚಾತ್ತಾಪವಿಲ್ಲ. ಹಾಗಾಗಿ ಇಂತಹ ಸ್ಥಳದಲ್ಲಿ ಖಂಡಿತ ನಾನಿರಲಾರೆ. ಇದೋ ನಿನ್ನ ರಾಜ್ಯವನ್ನ ತೊರೆದು ಹೋಗುತ್ತಿದ್ದೇನೆ.” ಎಂದು ಗುಡುಗಿದರು.

ಒಂದು ಕ್ಷಣ ವೃಷಪರ್ವನಿಗೆ ಸಿಡಿಲು ಬಡಿದ ಅನುಭವವಾಯಿತು. ಕೂಡಲೇ ಎಚ್ಚೆತ್ತ ವೃಷಪರ್ವ ಓಡಿ ಹೋಗಿ ಗುರುಗಳ ಕಾಲು ಹಿಡಿದು

“ಮನ್ನಿಸಬೇಕು ಗುರುದೇವಾ, ನನ್ನಿಂದಾದ ಅಪರಾಧವನ್ನ ಮನ್ನಿಸಬೇಕು. ನೀವು ಈ ರಾಜ್ಯವನ್ನ ತೊರೆದರೆ ನಮಗೆ ರಕ್ಷಕರೇ ಇಲ್ಲದಂತಾಗಿ ಪಾತಾಳವೇ ಗತಿಯಾದೀತು.” ಎಂದು ಹೇಳಿದನು. ಆಗ ಶುಕ್ರಾಚಾರ್ಯರು, “ನೀನು ಪಾತಾಳಕ್ಕಾದರೂ ಹೋಗು ಎಲ್ಲಾದರೂ ಹೋಗು ಅದರಿಂದ ನನಗೇನಾಗಬೇಕು. ಈ ಕ್ಷಣಕ್ಕೆ ನನ್ನ ಮಗಳ ದುಃಖವನ್ನ ನನ್ನಿಂದ ನೋಡಲಾಗುತ್ತಿಲ್ಲ. ನನಗೆ ನನ್ನ ಮಗಳು ಮುಖ್ಯ. ಅವಳು ನನಗೆ ಪ್ರಾಣಸಮಾನಳು. ನಿನಗೆ ಗುರುವಾಗಿ ಉಳಿಯಬೇಕಾದಲ್ಲಿ ಆಕೆಯನ್ನ ಸಂತೈಸು.” ಎಂದನು.

ಆಗ ವೃಷದೇವನು, “ಗುರುದೇವ ನಾನು ಹೇಗೆ ಹೇಳಲಿ. ನನ್ನೆಲ್ಲ ಸಂಪತ್ತಿಗೆ ನೀವೇ ಒಡೆಯರು. ಇವೆಲ್ಲವೂ ನಿಮ್ಮ ಕೃಪೆ. ಅಷ್ಟೇ ಏಕೆ ನಾನು ಕೂಡಾ ನಿಮ್ಮ ಸೇವಕನೇ ಆಗಿದ್ದೇನೆ. ಹಾಗಾಗಿ ತಾವು ಹೇಗೆ ಹೇಳುತ್ತೀರೋ ಹಾಗೆ ನಡೆದುಕೊಳ್ಳುತ್ತೇನೆ. ಆದರೆ ನಮ್ಮನ್ನ ತೊರೆಯುವ ಮಾತನ್ನ ಮಾತ್ರ ಆಡದಿರಿ” ಎನ್ನುತ್ತಾನೆ.

ಆಗ ಶುಕ್ರಾಚಾರ್ಯರು, “ನಾನು ಹೇಳಿದ್ದನ್ನ ಕೇಳುವ ಸೇವಕ ನೀನು ಅಂತಾದಲ್ಲಿ ಮೊದಲಿಗೆ ನನ್ನ ಮಗಳನ್ನ ಸಂತೈಸು. ಅವಳೇನಾದರೂ ಸಮಾಧಾನ ಗೊಂಡರೆ ನಾನು ಇಲ್ಲೇ ಉಳಿಯುತ್ತೇನೆ.” ಎಂದರು. ಅವರ ಮಾತಿಗೆ ವೃಷಪರ್ವನೂ ಒಪ್ಪಿದನು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...