ವ್ಯಾಸ ಮಹಾಭಾರತ - ಭಾಗ 54 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 54 ಆದಿಪರ್ವ (ಸಂಭವಪರ್ವ)

ರಾಜಾ ವೃಷಪರ್ವನು ಕೂಡಲೇ ದೇವಯಾನಿಯ ಬಳಿ ಹೋಗಿ ಕೈಜೋಡಿಸಿ “ಗುರುಪುತ್ರಿಯೇ ನನ್ನ ರಾಜ್ಯದ ಸಂಪತ್ತೆಲ್ಲವೂ ನಿನ್ನ ತಂದೆಯವರದ್ದೇ ಆಗಿದೆ. ನೀನು ಅವರ ಪುತ್ರಿಯಾಗಿರುವುದರಿಂದ ನಮ್ಮೆಲ್ಲರಿಗೂ ನೀನು ಸನ್ಮಾನ್ಯಳೇ ಆಗಿರುವೆ. ನಿನ್ನ ಇಚ್ಛೆಯು ಏನೆಂಬುದನ್ನು ತಿಳಿಸು. ಅದೆಷ್ಟೇ ಕಷ್ಟವಾಗಿದ್ದರೂ ಅದನ್ನ ನೆರವೇರಿಸುವೆನು. ಶಿಷ್ಯರಾಗಿರುವ ನಮ್ಮ ಮೇಲೆ ಕೋಪಿಸಿಕೊಳ್ಳಬೇಡ ತಾಯೇ”

“ಮಹಾರಾಜ ನಿಶ್ಚಯವಾಗಿಯೂ ನಾನು ಹೇಳುವುದನ್ನು ಮಾಡಲು ಸಿದ್ಧನಾಗಿರುವೆಯಾ..?”
“ಸಂಶಯವೇಕೆ ಗುರುಪುತ್ರಿ… ನಿನ್ನ ಇಚ್ಛೆಯನ್ನ ತಿಳಿಸಿ ನೋಡು.”
“ಹಾಗಾದರೆ ಕೇಳು, ಮಹಾರಾಜ ನಿನ್ನ ಮಗಳಾದ ಶರ್ಮಿಷ್ಠೆಯು ಎರಡು ಸಾವಿರ ದಾಸಿಯರೊಡನೆ ನನ್ನ ಕಿಂಕರಳಾಗಿರಬೇಕು. ಎರಡನೆಯದಾಗಿ ನನ್ನ ತಂದೆಯವರು ನನ್ನನ್ನ ವಿವಾಹ ಮಾಡಿಕೊಟ್ಟ ಕೂಡಲೇ ಅವಳೂ ನನ್ನ ಜೊತೆ ಬರಬೇಕು.”

ಆ ಮಾತುಗಳನ್ನ ಕೇಳಿದ ಕೂಡಲೇ ವೃಷಪರ್ವನೂ ಒಂದಿನಿತೂ ಯೋಚಿಸದೇ ಸೇವಕಿಯೊಡನೆ ಶರ್ಮಿಷ್ಠೆಗೆ ಹೇಳಿ ಕಳುಹಿದನು. ಸೇವಕಿಯು ಅತ್ಯಂತ ದುಃಖದಿಂದ ಶರ್ಮಿಷ್ಠೆಯ ಬಳಿ ಬಂದು, “ರಾಜಕುಮಾರಿ, ರಾಜಗುರುಗಳನ್ನ ಉಳಿಸಿಕೊಳ್ಳುವ ಸಲುವಾಗಿ ನಿನ್ನನ್ನ ಮಹರಾಜರು ದೇವಯಾನಿಯ ದಾಸಿಯನ್ನಾಗಿಸಲು ಒಪ್ಪಿಕೊಂಡಿದ್ದಾರೆ. ದೇಶದ ಸುಖಕ್ಕಾಗಿ ತಮಗೆ ಈ ಕಷ್ಟ ಅನಿವಾರ್ಯವಾಗಿದೆ.” ಎಂದು ಕಣ್ಣೀರು ಹಾಕಿದಳು.

ಆಗ ಶರ್ಮಿಷ್ಠೆಯು, “ದುಃಖಿಸಬೇಡ ಸಖಿ. ನಾನು ಅತ್ಯಾನಂದದಿಂದ ದೇವಯಾನಿಯ ದಾಸ್ಯವನ್ನು ಸ್ವೀಕರಿಸುವೆನು. ನಾನು ದೇವಯಾನಿಯ ದಾಸ್ಯವನ್ನು ಸ್ವೀಕರಿಸುತ್ತಿರುವುದು ದೇವಯಾನಿಯ ಅಪೇಕ್ಷೆಯಿಂದಲ್ಲ. ನಮ್ಮ ಗುರುಗಳೇ ನನ್ನನ್ನು ದೇವಯಾನಿಯ ದಾಸ್ಯಕ್ಕೆ ನಿಯೋಜಿಸುತ್ತಿದ್ದಾರೆ. ಗುರುಗಳ ಆಜ್ಞೆಯನ್ನ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೇ. ನನ್ನೊಬ್ಬಳ ತಪ್ಪಿಗಾಗಿ ಗುರುಗಳು ಈ ನಾಡನ್ನ ತೊರೆಯಬಾರದು. ನಡಿ.. ದೇವಯಾನಿಯ ಬಳಿ ಹೋಗೋಣ” ಎಂದು ಎರಡು ಸಾವಿರ ಸಖಿಯರೊಡನೆ ದೇವಯಾನಿ ಇದ್ದ ಕಡೆ ಪಲ್ಲಕಿಯಲ್ಲಿ ಹೊರಟಳು. ದೇವಯಾನಿಯನ್ನ ಸೇರುವ ಕೊಂಚ ದೂರದಲ್ಲೇ ಪಲ್ಲಕಿಯನ್ನ ನಿಲ್ಲಿಸಿ ನಡೆದುಕೊಂಡೇ ಹೊರಟಳು. ದೇವಯಾನಿಯ ಎದುರು ನಿಂತು, “ದೇವಿ , ನನ್ನೊಡನೆ ಇರುವ ಎರಡು ಸಾವಿರ ಸೇವಕಿಯರೊಡನೆ ನಿನ್ನ ಸೇವೆಮಾಡಲು ಬಂದಿದ್ದೇನೆ. ನಿಮ್ಮ ಆಜ್ಞೆಯಂತೆ ನಿಮ್ಮ ವಿವಾಹದ ತರುವಾಯ ನೀವಿರುವಲ್ಲಿಗೇ ಬರುತ್ತೇವೆ.”

“ರಾಜಕುಮಾರಿಯಾದ ಶರ್ಮಿಷ್ಠೆಯ ಬಾಯಲ್ಲಿ ಇಂಥಾ ಮಾತೇ…?”
“ನಿಜ ವೃಷಪರ್ವನ ಮಗಳಾದ ನಾನೇ ಹೇಳುತ್ತಿರುವುದು.”
“ಹೊಗಳು ಭಟ್ಟನ ದಾಸಿಯಾಗುವೆಯಾ.. ರಾಜಕುಮಾರಿ…? ದೀನನ ಮಗಳ ದಾಸಿಯಾಗಿರಲು ನಿನ್ನಿಂದ ಸಾಧ್ಯವೇ…?

ಇಂತಹ ಚುಚ್ಚುಮಾತಿನಿಂದ ಶರ್ಮಿಷ್ಠೆ ಬೇಸರಗೊಳ್ಳಲಿಲ್ಲ ಬದಲಿಗೆ ಸೌಮ್ಯವಾಗಿಯೇ…” ಬಂಧುಬಾಂಧವರ ಮತ್ತು ದೇಶದ ಹಿತಕ್ಕಾಗಿ ಸ್ವಾರ್ಥತ್ಯಾಗವನ್ನು ಮಾಡಲೇಬೇಕು, ದೇವಯಾನಿ ನಿನ್ನ ಸೇವೆಯನ್ನ ಮಾಡಬೇಕೆಂದು ನಿಶ್ಚಯಿಸಿರುವೆನು.” ಎಂದಳು.
ದೇವಯಾನಿಗೆ ಪರಮಾನಂದವಾಯಿತು. ಆಕೆ ತನ್ನ ತಂದೆಯ ಜೊತೆ ವೃಷಪರ್ವನ ಪಟ್ಟಣಕ್ಕೆ ಹೋಗಲು ಸಮ್ಮತಿಸಿದಳು. ಎಲ್ಲರೂ ಪಟ್ಟಣದೆಡೆ ಹೊರಟರು.

ಹೀಗೆ ಕಾಲ ಕಳೆಯತೊಡಗಿತು. ಶರ್ಮಿಷ್ಠೆಯ ದಾಸ್ಯ ಜೀವನ ಸಾಗತೊಡಗಿತು. ದೇವಯಾನಿಗೆ ಶರ್ಮಿಷ್ಠೆಯ ಅಹಂಕಾರ ಮುರಿಯಬೇಕೆನ್ನುವ ಉದ್ದೇಶವಿತ್ತೇ ಹೊರತು ಆಕೆಯನ್ನ ದಾಸಿಯಂತೆಯೇ ನೋಡಿಕೊಳ್ಳುವ ಉದ್ದೇಶವಿರಲಿಲ್ಲ. ಆದರೆ ಶರ್ಮಿಷ್ಠೆ ದಾಸ್ಯವನ್ನ ವ್ರತದಂತೆ ಆಚರಿಸತೊಡಗಿದಳು.

ಅದೊಂದು ವಸಂತ ಋತುವಿನಲ್ಲಿ ದೇವಯಾನಿ ಶರ್ಮಿಷ್ಠೆಯ ಸಹಿತ ಉಳಿದ ದಾಸಿಯರೊಡನೆ ವನವಿಹಾರಕ್ಕೆಂದು ಹೊರಟಳು. ಅಲ್ಲಿ ಜಲಕ್ರೀಡೆಯನ್ನಾಡಿ ಬಸವಳಿದರು. ಹಾಗಾಗಿ ವಿಶ್ರಾಂತಿಗಾಗಿ ಅಲ್ಲೇ ಪಕ್ಕದಲ್ಲಿ ದೇವಯಾನಿ ಮಲಗಿದಾಗ ಶರ್ಮಿಷ್ಠೆಯು ದೇವಯಾನಿಯ ಕಾಲು ಒತ್ತತೊಡಗಿದಳು. ಹೀಗೆ ಇವರೆಲ್ಲಾ ವಿಶ್ರಾಂತಿ ಪಡೆಯುತ್ತಿರುವ ಹೊತ್ತಲ್ಲಿ ಬೇಟೆಗೆಂದು ಬಂದ ಯಯಾತಿ ಇವರಿರುವಲ್ಲಿಗೆ ಬರುತ್ತಾನೆ. ಯಯಾತಿ ಮತ್ತು ದೇವಯಾನಿಯರ ಭೇಟಿ ಇದು ಮೊದಲನೆಯದಾಗಿರಲಿಲ್ಲ. ಆದರೆ ಯಯಾತಿ ದೇವಯಾನಿಯನ್ನ ಮೊದಲ ಬಾರಿ ಕಂಡಾಗ ಅವಳ ಮುಖ ಕಾಂತಿಹೀನವಾಗಿದ್ದಿತ್ತು. ಜಿಗುಪ್ಸೆ ಅವಳನ್ನಾವರಿಸಿತ್ತು. ಆದರೆ ಈ ಬಾರಿ ಆಕೆ ಚಕ್ರವರ್ತಿನಿಯಂತೆ ಕಂಗೊಳಿಸುತ್ತಿದ್ದಳು. ಆಕೆಯ ಮುಖದ ತೇಜಸ್ಸನ್ನ ಕಂಡ ಯಯಾತಿ ಆಕೆಯ ಬಳಿ, “ವನದಲ್ಲಿ ವಿರಮಿಸುತ್ತಿರುವ ನೀವುಗಳು ಯಾರು…? ನಿಮ್ಮ ಕುಲ ಯಾವುದು ಹೇಳುವಿರಾ…? ಇಷ್ಟೊಂದು ಜನ ಸೇವಕಿಯರೊಡನೆ ಇರುವ ನೀವೀಬ್ಬರೂ ರಾಜಕುಮಾರಿಯರೇ ಆಗಿರಬೇಕು …? ಅಲ್ಲವೇ .” ಎಂದನು. ಆಗ ದೇವಯಾನಿಯು, “ಅಯ್ಯಾ, ನಾನು ಅಸುರಗುರು ಶುಕ್ರಾಚಾರ್ಯರ ಮಗಳು ದೇವಯಾನಿ. ಈಕೆ ಅಸುರರಾಜ ವೃಷಪರ್ವನ ಮಗಳಾದ ಶರ್ಮಿಷ್ಠೆ ನನ್ನ ಸಖಿಯೂ ಹೌದು, ದಾಸಿಯೂ ಹೌದು.”

“ಏನು..? ಅಸುರರಾಜನ ಮಗಳು ನಿಮಗೆ ದಾಸಿಯೇ ಕೇಳಲು ವಿಚಿತ್ರವಾಗಿದೆಯಲ್ಲಾ..? ಇದಕ್ಕೆ ಕಾರಣವೇನೆಂಬುದನ್ನ ತಿಳಿದುಕೊಳ್ಳಬಹುದೇ..?

“ಇದೆಲ್ಲವೂ ವಿಧಿಯಾಟದಂತೆ ನಡೆದುಹೋಯಿತು. ಇದರಲ್ಲಿ ಅಚ್ಚರಿ ಪಡುವಂಥಾದ್ದೇನಿಲ್ಲ. ಅಷ್ಟಕ್ಕೂ ಇದನ್ನೆಲ್ಲಾ ಕೇಳುತ್ತಿರುವ ನೀನಾರು..? ನೋಡಲು ರಾಜಕುಮಾರನಂತಿರುವೆ..?”
“ನಿಜ ನಾನೊಬ್ಬ ಕ್ಷತ್ರಿಯ. ರಾಜರ್ಷಿ ನಹುಷನ ಮಗ. ಯಯಾತಿ ಎನ್ನುವುದು ನನ್ನ ಹೆಸರು. ಹಲವು ರಾಜ್ಯಗಳಿಗೆ ದೊರೆ ನಾನು.”

“ಇತ್ತ ಬಂದ ಕಾರಣ..?”

“ಬೇಟೆಗಾಗಿ ವನಪ್ರವೇಶ ಮಾಡಿದ್ದೆ. ಬೇಟೆಯಿಂದಾದ ಆಯಾಸ ತೀರಿಸಲು ನೀರು ಕುಡಿಯುವುದಕ್ಕಾಗಿ ಇತ್ತ ಬಂದೆ. ನನ್ನ ದಾಹ ತೀರಿದ ಬಳಿಕ ನಿಮ್ಮನ್ನ ಮಾತನಾಡಿಸಿದೆ. ಇನ್ನು ಅಪ್ಪಣೆ ಇತ್ತಲ್ಲಿ ತೆರಳುತ್ತೇನೆ.” ಎಂದು ಹೊರಡಲನುವಾದನು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!