ವ್ಯಾಸ ಮಹಾಭಾರತ – ಭಾಗ 55 ಆದಿಪರ್ವ (ಸಂಭವಪರ್ವ) – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 55 ಆದಿಪರ್ವ (ಸಂಭವಪರ್ವ)

ಯಯಾತಿಯು ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ದೇವಯಾನಿಯು ಆತನನ್ನ ತಡೆದು.

“ಮಹಾರಾಜ, ಎರಡು ಸಾವಿರ ಸಖಿಯರೊಡಗೂಡಿ, ಶರ್ಮಿಷ್ಠೆಯನ್ನೂ ಸೇರಿಸಿ ನಿನ್ನ ಆಜ್ಞೆಯನ್ನ ಪಾಲಿಸಲು ನಾವು ಸಿದ್ಧರಿದ್ದೇವೆ. ನೀನು ಇನ್ನು ಮುಂದೆ ನನ್ನ ಸಖ ಮಾತ್ರನಾಗಿರದೇ ನನ್ನ ಪ್ರಾಣೇಶ್ವರನೂ ಆಗಿರುತ್ತೀಯೆ” ಎಂದಳು.

ಯಯಾತಿ ಆಶ್ಚರ್ಯಚಕಿತನಾಗಿ,

“ಹೇ ಬ್ರಾಹ್ಮಣ ಪುತ್ರಿಯೇ ನೀನಾಡುತ್ತಿರುವ ಮಾತು ಸರ್ವಥಾ ಸಾಧುವಲ್ಲ. ಶುಕ್ರಾಚಾರ್ಯರ ಮಗಳಾದ ನೀನು ನನಗಿಂತ ಶ್ರೇಷ್ಠಳಾಗಿರುವೆ. ನನಗಿಂತ ಶ್ರೇಷ್ಠನಾದ ಚಕ್ರವರ್ತಿಯೇ ಬಂದರೂ ನಿನ್ನ ತಂದೆ ನಿನ್ನನ್ನ ಅವನಿಗೆ ಧಾರೆ ಎರೆದು ಕೊಡಲಾರರು.”

“ಮಹಾರಾಜ ಚಿಂತಿಸಬೇಡ, ಈ ಹಿಂದೆಯೂ ಕ್ಷತ್ರಿಯ ಮತ್ತು ಬ್ರಾಹ್ಮಣರ ನಡುವೆ ವಿವಾಹಗಳಾಗಿವೆ. ಅದೂ ಅಲ್ಲದೆ ನೀನೊಬ್ಬ ರಾಜರ್ಷಿಯ ಮಗನಾಗಿದ್ದು ಸ್ವತಃ ರಾಜರ್ಷಿಯೇ ಆಗಿರುವೆ. ಹಾಗಿದ್ದುದರಿಂದಲೇ ನನಗೆ ನಿನ್ನ ಮೇಲೆ ಮನಸಾಯಿತೋ ಏನೋ.?. ಹಾಗಾಗಿ ನನ್ನ ಕೈ ಹಿಡಿಯಲು ಹಿಂಜರಿಯಬೇಡ”

ಏಕದೇಹೋದ್ಭವಾ ವರ್ಣಾಶ್ಚತ್ವಾರೋಪಿ ವರಾಂಗನೇ |
ಪೃಥಗ್ಧರ್ಮಾಃ ಪೃಥಕ್ಚೌಚಾಸ್ತೇಷಾಂ ತು ಬ್ರಾಹ್ಮಣೋ ವರಃ ||

ನಾಲ್ಕು ವರ್ಣಗಳೂ ಪರಮಪುರುಷನ ದೇಹದಿಂದಲೇ ಉದ್ಭವಿಸಿದ್ದೆನ್ನುವುದು ನಿಶ್ಚಿತ. ಹಾಗಿದ್ದೂ ಅವರವರ ಗುಣಕರ್ಮಗಳಲ್ಲಿ ಶೌಚಾಚಾರಗಳಲ್ಲಿ ವ್ಯತ್ಯಾಸಗಳಿರುತ್ತದೆ. ಈ ಗುಣಕರ್ಮಗಳ ಆಧಾರದಲ್ಲಿ ಬ್ರಾಹ್ಮಣರು ಉಳಿದ ವರ್ಣಗಳವರಿಗಿಂತ ಶ್ರೇಷ್ಠ ಎನ್ನುವುದೂ ನಿಶ್ಚಿತ.

ದೇವಯಾನಿ : ಮಹಾರಾಜ ನಾನೇ ನಿನ್ನನ್ನು ವರಿಸುವ ಇಚ್ಛೆ ವ್ಯಕ್ತಪಡಿಸಿರುವೆನಾದ್ದರಿಂದ ನಿನಗಾವ ದೋಷವೂ ಬಾರದು. ಅಲ್ಲದೇ ನನ್ನ ತಂದೆಯವರೇ ಕನ್ಯಾದಾನ ಮಾಡಿದರೆ ನೀನು ನನ್ನನ್ನ ವರಿಸುವೆ ತಾನೇ….. ಸರಿ ಹಾಗಾದರೆ…

ಎಂದು ತನ್ನ ಸೇವಕಿಯ ಜೊತೆ ತನ್ನ ತಂದೆಯನ್ನ ಅವರಿರುವಲ್ಲಿಗೆ ಬರಮಾಡಿಕೊಂಡಳು. ಶುಕ್ರಾಚಾರ್ಯರು ದೂರದಲ್ಲಿ ಆಗಮಿಸುತ್ತಿದ್ದುದ್ದನ್ನ ಕಂಡೊಡನೆ ಯಯಾತಿಯು ಭಕ್ತಿಯಿಂದ ಅವರಿಗೆ ನಮಸ್ಕರಿಸಿ ಗೌರವಿಸಿದನು.

ಆಗ,
ದೇವಯಾನಿ : ಅಪ್ಪಾ ಈತ ರಾಜರ್ಷಿಯಾದ ನಹುಷನ ಮಗ ಯಯಾತಿ ಎನ್ನುವವನಾಗಿದ್ದಾನೆ. ನನ್ನ ಕಷ್ಟಕಾಲದಲ್ಲಿ ಈತನೇ ನನ್ನ ಕೈ ಹಿಡಿದು ಸಹಾಯ ಮಾಡಿದವನು. ಹಾಗಾಗಿ ನಾನು ಈತನನ್ನೇ ಮದುವೆಯಾಗಬೇಕೆಂದಿದ್ದೇನೆ.

ಶುಕ್ರಾಚಾರ್ಯರು : ನಿನ್ನಿಚ್ಛೆಯಂತೆಯೇ ಆಗಲಮ್ಮಾ, ಮಹಾರಾಜ ನನ್ನ ಮಗಳ ಇಚ್ಛಾನುಸಾರವಾಗಿ ಅವಳನ್ನ ನಿನಗೆ ಧಾರೆ ಎರೆದುಕೊಡುತ್ತಿದ್ದೇನೆ. ಆಕೆಯನ್ನ ನೀನು ನಿನ್ನ ಪಟ್ಟಮಹಿಷಿಯನ್ನಾಗಿಸಿಕೋ..

ಯಯಾತಿ : ಬ್ರಾಹ್ಮಣೋತ್ತಮರೇ ತಮ್ಮ ಮಾತನ್ನ ನಿರಾಕರಿಸುವ ಧೈರ್ಯ ನನಗಿಲ್ಲವಾದರೂ ತಾವು ನನಗೊಂದು ವರವನ್ನ ದಯಪಾಲಿಸಬೇಕು.

ಶುಕ್ರಾಚಾರ್ಯ : ನನ್ನ ಮಗಳ ಹಿತಚಿಂತನೆಗೆ ಪೂರಕವಾಗಿರುವ ಯಾವ ವರವನ್ನಾದರೂ ನೀಡುತ್ತೇನೆ. ಕೇಳಿಕೋ.

ಯಯಾತಿ : ತಮ್ಮ ಮಗಳನ್ನ ಮದುವೆಯಾಗುವುದರಿಂದ ಉಂಟಾಗುವ ವರ್ಣಸಂಕರದೋಷವು ನನ್ನ ಭಾಧಿಸಬಾರದು. ನಾನು ಧರ್ಮವಿಹೀನನಾಗಬಾರದು.

ಶುಕ್ರಾಚಾರ್ಯರು : ಮಹಾರಾಜ ನಿನ್ನ ಅಪೇಕ್ಷೆಯಂತೆಯೇ ಕ್ಷತ್ರಿಯನೋರ್ವನು ಬ್ರಾಹ್ಮಣ ಕನ್ಯೆಯನ್ನ ಮದುವೆಯಾದಾಗ ಉಂಟಾಗುವ ವರ್ಣಸಂಕರ ದೋಷವನ್ನು ನಾನು ನನ್ನ ತಪಃಶಕ್ತಿಯಿಂದ ಪರಿಹರಿಸುವೆನು. ಹಾಗಾಗಿ ನೀನು ನಿಶ್ಚಿಂತೆಯಿಂದ ನನ್ನ ಮಗಳನ್ನ ವರಿಸು. ಅದೂ ಅಲ್ಲದೆ ನನ್ನ ಮಗಳ ಜೊತೆ ಶರ್ಮಿಷ್ಠೆಯೂ ನಿನ್ನ ಅರಮನೆಗೆ ಬರುತ್ತಾಳೆ. ಅವಳನ್ನ ಸಾಮಾನ್ಯಳೆಂದು ತಿಳಿಯಬೇಡ. ಆಕೆ ರಾಜಕುಮಾರಿ. ಅವಳನ್ನೂ ನೀನು ಗೌರವದಿಂದ ಕಾಣಬೇಕು. ಆದರೆ ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲೂ ನಿನ್ನ ಮತ್ತು ಅವಳ ಸಮಾಗಮ ಆಗಕೂಡದು, ಎಚ್ಚರಿಕೆ.

ಇದಾದ ಬಳಿಕ ಯಯಾತಿ ಮತ್ತು ದೇವಯಾನಿಯ ವಿವಾಹ ನಡೆಯುತ್ತದೆ. ತರುವಾಯ ಯಯಾತಿ ತನ್ನ ಪತ್ನೀ ಸಹಿತನಾಗಿ ಶರ್ಮಿಷ್ಠೆ ಮತ್ತು ಎರಡು ಸಾವಿರ ದಾಸಿಯರ ಜೊತೆ ಆತನ ರಾಜ್ಯಕ್ಕೆ ತೆರಳುತ್ತಾನೆ.

ಹೀಗೆ ಯಯಾತಿ ದೇವಯಾನಿಯರ ದಾಂಪತ್ಯ ಜೀವನದ ದಿನಗಳು ಸುಖ ಸಂತೋಷಗಳಿಂದ ಕಳೆಯತೊಡಗಿತು. ಅವರ ದಾಂಪತ್ಯ ದೇವತೆಗಳಿಗೂ ಮಾತ್ಸರ್ಯವನ್ನುಂಟು ಮಾಡುವಂತಿತ್ತಂತೆ. ಹೀಗೆ ವರುಷಗಳುರುಳಿದ ಹಾಗೆ ಅವರಿಬ್ಬರ ದಾಂಪತ್ಯದ ಫಲವಾಗಿ ದೇವಯಾನಿ ಗಂಡು ಮಗುವಿನ ತಾಯಿಯಾದಳು. ಈಕೆ ವಿವಾಹವಾಗಿ ಮಗುವನ್ನ ಹೆತ್ತರೂ ಶರ್ಮಿಷ್ಠೆ ಮಾತ್ರ ಅವಿವಾಹಿತಳಾಗೇ ಇದ್ದಳು. ಆದರೆ ದೇವಯಾನಿಗೆ ಮಕ್ಕಳಾಗುವವರೆಗೆ ಶರ್ಮಿಷ್ಠೆಗೆ ಯಾವುದೇ ದುಃಖ ಕಾಡಿರಲಿಲ್ಲ. ದೇವಯಾನಿಗೆ ಮಗುವಾದಾಗ ತನ್ನ ಯೌವನ ವ್ಯರ್ಥವಾಗುತ್ತಿದೆಯಲ್ಲಾ…? ಎನ್ನುವ ಭಾವ ಆಕೆಯನ್ನ ಕಾಡತೊಡಗಿತು. ದಾಸ್ಯದಲ್ಲಿರುವ ತನ್ನನ್ನ ದೇವಯಾನಿ ದಾಸಿಯಂತೆ ಕಾಣುತ್ತಿರಲಿಲ್ಲ ಆದರೂ ತನಗೆ ರಾಜಕುಮಾರಿಯಂತೆ ವೈಭವದಿಂದ ವಿವಾಹವಾಗುವ ಯೋಗವಿಲ್ಲವಲ್ಲ ಎಂದು ಮನಸ್ಸಿನಲ್ಲಿಯೇ ರೋಧಿಸುತ್ತಿದ್ದಳು. ಹಾಗಂತ ತನ್ನ ಜೀವನದಲ್ಲಿ ವಿವಾಹವಾಗುವ ಯೋಗವೇ ಇಲ್ಲವೇ…? ದಾಸಿಯರೇನು ವಿವಾಹವಾಗಬಾರದೇ..? ಎನ್ನುವ ಆಲೋಚನೆ ಆಕೆಯನ್ನ ಕಾಡುತ್ತಿತ್ತು.

ಒಮ್ಮೆ ಋತುಸ್ನಾನ ಮಾಡಿ ಅರಮನೆಯ ಪಕ್ಕದ ಸರೋವರದ ಬದಿಯಲ್ಲಿ ಶರ್ಮಿಷ್ಠೆ ಯೋಚಿಸುತ್ತಾ ಕುಳಿತಿದ್ದಳು. ತನ್ನ ಯೌವನ ವ್ಯರ್ಥವಾಗಲು ಬಿಡಬಾರದು ಎಂದು ಯೋಚಿಸುತ್ತಾ ಕುಳಿತಿದ್ದಾಕೆಗೆ ಯಯಾತಿಯನ್ನೇ ಯಾಕೆ ತಾನು ವಿವಾಹವಾಗಬಾರದು…? ಎನ್ನುವ ಆಲೋಚನೆ ಬಂತು. ಆತ ತನಗೆ ಸಂತಾನ ಭಾಗ್ಯ ಕೊಡದೇ ಇರಲಿಕ್ಕಿಲ್ಲ, ತನ್ನ ಪ್ರಾರ್ಥನೆಯನ್ನ ಕಡೆಗಣಿಸಲಿಕ್ಕಿಲ್ಲ ಎನ್ನುವ ಆಶಾಭಾವನೆ ಆಕೆಯಲ್ಲಿ ಮೂಡಿತು.. ಆಕೆಯ ಅದೃಷ್ಟವೋ ಎಂಬಂತೆ ಅದೇ ಹೊತ್ತಲ್ಲಿ ಯಯಾತಿಯೂ ಅದೇ ಸರೋವರದ ಬಳಿ ಬಂದನು.

ಆತನನ್ನ ಆದರದಿಂದ ಸ್ವಾಗತಿಸಿ ಅಲ್ಲಿಯೇ ಇದ್ದಾ ಲತಾಗೃಹಕ್ಕೆ ಆಹ್ವಾನಿಸಿ ಆತನನ್ನ ಉಪಚರಿಸುತ್ತಾ, “ಮಹಾರಾಜಾ, ನಿನ್ನ ಅರಮನೆಯಲ್ಲಿ ನಾನು ಅತ್ಯಂತ ಸುರಕ್ಷಿತಳಾಗಿದ್ದೇನೆ. ನನ್ನ ರೂಪ, ಗುಣ, ಶೀಲ ಮನೆತನಗಳ ಬಗ್ಗೆ ನಿನಗರಿವಿದ್ದೇ ಇದೆ. ನನ್ನ ಜೀವನಕ್ಕೇನೂ ಇಲ್ಲಿ ಕುಂದು ಕೊರತೆಯಿಲ್ಲ. ಆದರೂ ನಿಮ್ಮ ಬಳಿ ನನ್ನ ಪ್ರಾರ್ಥನೆಯೊಂದಿದೆ. ಇದನ್ನ ತಾವು ನೆರವೇರಿಸುತ್ತೀರಿ ಅನ್ನುವ ಭರವಸೆಯೂ ನನಗಿದೆ. ನನ್ನ ಮನದಾಸೆಯನ್ನ ಹೇಳಿಕೊಳ್ಳಲೇ….?” ಎಂದಳು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...
error: Content is protected !!