ವ್ಯಾಸ ಮಹಾಭಾರತ – ಭಾಗ 56 ಆದಿಪರ್ವ (ಸಂಭವಪರ್ವ) – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 56 ಆದಿಪರ್ವ (ಸಂಭವಪರ್ವ)

ಯಯಾತಿ : ಕೇಳು ಶರ್ಮಿಷ್ಠೆ
ಶರ್ಮಿಷ್ಠೆ : (ನಾಚುತ್ತಾ) ನಾನು ಮತ್ತು ದೇವಯಾನಿಯೂ ಒಟ್ಟಿಗೇ ನಿನ್ನ ಅರಮನೆಗೆ ಬಂದೆವು. ಅವಳೀಗಾಗಲೇ ಮಕ್ಕಳನ್ನ ಪಡೆಯುವ ಮೂಲಕ ತನ್ನ ಯೌವನದ ಪ್ರಯೋಜನ ಪಡೆದುಕೊಂಡಿದ್ದಾಳೆ. ನನ್ನ ಯೌವನವು ವ್ಯರ್ಥವಾಗಿ ಹೋಗುತ್ತಿದೆ. ಆದ್ದರಿಂದ ನನ್ನ ಋತುಕಾಲ ಸಫಲವಾಗುವಂತೆ ಮನಮಾಡಬೇಕಾಗಿ ಪ್ರಾರ್ಥಿಸುತ್ತೇನೆ.

ಸತ್ಕುಲ ಪ್ರಸೂತಳಾದ ಯುವತಿಯೊಬ್ಬಳು ಬಂದು ಧರ್ಮ ಮೂಲಕವಾಗಿ ಪ್ರಣಯಭಿಕ್ಷೆ ಕೇಳಿದರೆ ಇಲ್ಲವೆನುವುದು ಪುರುಷರಿಗೆ ಬಹಳ ಕಷ್ಟಕರವಾದದ್ದೇ. ಒಬ್ಬಳಿರುವಾಗ ಇನ್ನೊಬ್ಬಳನ್ನ ಮದುವೆಯಾಗುವ ಕುರಿತಾಗಿಯೂ ರಾಜನು ಯೋಚಿಸಬೇಕಾದ್ದಿಲ್ಲ. ಯಾಕೆಂದರೆ ‘ರಾಜಾನೋ ಬಹುವಲ್ಲಭಾಃ’ ತಾನೇ. ಆದರೆ ರಾಜನಿಗೆ ಶುಕ್ರರು ಶರ್ಮಿಷ್ಠೆಯೊಂದಿಗೆ ಸಮಾಗಮ ಸಲ್ಲ ಎಂದು ಹೇಳಿದ್ದ ಮಾತು ನೆನಪಾಗುತ್ತದೆ.

ಯಯಾತಿ : ಶರ್ಮಿಷ್ಠೆ, ನಿನ್ನ ಪ್ರಾರ್ಥನೆ ಸಹಜವಾದುದೇ ಆದರೆ ನಾನು ನಿರುಪಾಯನಾಗಿದ್ದೇನೆ. ಶುಕ್ರಾಚಾರ್ಯರ ಆಜ್ಞೆಯನ್ನ ಹೇಗೆ ಮೀರಲಿ ಹೇಳು.

ಶರ್ಮಿಷ್ಠೆ : ಮಹಾರಾಜ ಸತ್ಯಪರಿಪಾಲನೆಯೆಂಬುದು ರಾಜನ ಮುಖ್ಯ ಕರ್ತವ್ಯ. ಆದರೆ ಕೆಲವು ವಿಷಯಗಳಲ್ಲಿ ಅಸತ್ಯವನ್ನಾಡಿದರೆ ದೋಷವಿಲ್ಲವೆಂದು ಜ್ಞಾನಿಗಳು ಹೇಳುತ್ತಾರೆ.

ನ ನರ್ಮಯುಕ್ತಂ ವಚನಂ ಹಿನಸ್ತಿ ನ ಸ್ತ್ರೀಷು ರಾಜನ್ನ ವಿವಾಹಕಾಲೇ |
ಪ್ರಾಣಾತ್ಯಯೇ ಸರ್ವಧನಾಪಹಾರೇ ಪಂಚಾನೃತಾನ್ಯಾಹುರಪಾತಕಾನಿ ||

ಹಾಸ್ಯಕ್ಕಾಗಿ, ಸ್ತ್ರೀಯರೊಡನೆ ವಿಹರಿಸುವಾಗ ಅವರ ಸಂತೋಷಕ್ಕಾಗಿ, ವಿವಾಹ ಸಂದರ್ಭ ದಲ್ಲಿ , ಯಾರಿಗಾದರೂ ಪ್ರಾಣಾಪಾಯವಾದ ಹೊತ್ತಲ್ಲಿ ಆತನನ್ನ ರಕ್ಷಿಸುವುದಕ್ಕಾಗಿ, ಯಾರಿಗಾದರೂ ಅಪಾರ ನಷ್ಟವಾದಾಗ ಅದನ್ನು ತಪ್ಪಿಸಲು ಈ ಐದು ವಿಷಯಗಳಲ್ಲಿ ಸುಳ್ಳಾಡಿದರೆ ದೋಷವಿಲ್ಲ.

ಶರ್ಮಿಷ್ಠೆ : ಹೀಗೆ ಐದು ವಿಧದ ಸುಳ್ಳನ್ನಾಡಬಹುದು. ಆದರೆ ಯಾರಾದರೂ ಏನು ವಿಷಯ ಅಂದಾಗ ಮಾತ್ರ ಸುಳ್ಳನ್ನು ಹೇಳಿದರೆ ಆತ ಮಿಥ್ಯಾವಾದಿಯಾಗುತ್ತಾನೆ.

ಯಯಾತಿ : ಶರ್ಮಿಷ್ಠೆ , ನೀನು ಮಾತಿನಲ್ಲಿ ಬಹುಳ ಚತುರೆಯಾಗಿರುವೆ. ಆದರೆ ನಾನು ರಾಜನಾಗಿರುವವನು ಪ್ರಜೆಗಳಿಗೆ ಸದಾ ಆದರ್ಶಪ್ರಾಯನಾಗಿರಬೇಕು. ಅಸತ್ಯವನ್ನಾಡುವ ರಾಜನು ಸರ್ವನಾಶವಾಗುತ್ತಾನೆ. ಹಾಗಾಗಿ ನನಗೆ ಅದೆಂತಾ ಕಷ್ಟ ಬಂದರೂ ಅಸತ್ಯವನ್ನಾಡಲಾರೆ.

ಶರ್ಮಿಷ್ಠೆ : ಮಹಾರಾಜ ನಾನು ಹಾಗೂ ದೇವಯಾನಿ ಇಬ್ಬರೂ ನಿನ್ನ ಸೇವೆಯನ್ನ ಮಾಡುವುದರಲ್ಲಿ ಸಮಪಾಲನ್ನ ಪಡೆದಿರುವಾಗ ನಿನ್ನಿಂದ ಸಿಗುವ ಸುಖದಲ್ಲೂ ನನಗೆ ಸಮಪಾಲು ಸಿಗಬೇಡವೇ..? ಹಾಗಾಗಿ ಗೆಳತಿಯ ಗಂಡನನ್ನೇ ನಾನು ನನ್ನ ಗಂಡನೆಂದು ತಿಳಿದುಕೊಳ್ಳುವುದರಲ್ಲಿ ತಪ್ಪೇನಿದೆ..? ನಾನಂತೂ ನಿನ್ನನ್ನೇ ನನ್ನ ಪತಿಯೆಂದು ಮನದಲ್ಲಿ ನಿಶ್ಚಯಿಸಿಯಾಗಿದೆ.

ಯಯಾತಿ : ರಾಜಕುಮಾರಿ, ಬೇಡಿದವರಿಗೆ ಇಲ್ಲ ಎನುವುದಿಲ್ಲ ಎನ್ನುವ ವ್ರತವನ್ನ ನಾನು ಪಾಲಿಸಿಕೊಂಡು ಬಂದಿದ್ದೇನೆ ಹಾಗಾಗಿ ನಿನಗೇನು ಬೇಕು… ಕೇಳಿಕೋ.

ಶರ್ಮಿಷ್ಠೆ : ಮಹಾರಾಜ ನನ್ನ ಸ್ವಾಮಿನಿಯಾದ ದೇವಯಾನಿಗೆ ನೀನು ಸ್ವಾಮಿಯಾಗಿರುವೆ ಹಾಗಾಗಿ ನನಗೂ ನೀನು ಸ್ವಾಮಿಯಾದಂತೆ. ನನ್ನ ಯೌವನದ ಐಶ್ವರ್ಯವನ್ನ ಉಪಭೋಗಿಸಲು ನೀನೇ ಅರ್ಹನಾಗಿರುವೆ. ಹಾಗಾಗಿ ನನಗೂ ಪುತ್ರವತಿಯಾಗುವ ಸೌಭಾಗ್ಯವನ್ನ ಒದಗಿಸಿಕೊಡು. ಇದೇ ನನ್ನ ಬೇಡಿಕೆ.

ಯಯಾತಿಗೂ ಆಕೆಯ ದುಃಖದ ಅರಿವಾಯಿತು. ಹಾಗಾಗಿ ಆಕೆಯ ಬೇಡಿಕೆಯನ್ನ ಮನ್ನಿಸಿ ಯಾರಿಗೂ ಅರಿವಾಗದಂತೆ ಶರ್ಮಿಷ್ಠೆಯನ್ನ ಕೂಡುತ್ತಾನೆ. ಕಾಲವುರುಳಿ ಆಕೆಯೂ ಒಂದು ಗಂಡು ಮಗುವಿಗೆ ಜನ್ಮವನ್ನೀಯುತ್ತಾಳೆ.

ಶರ್ಮಿಷ್ಠೆಗೆ ಮಗುವಾಗಿರುವ ಸುದ್ದಿ ದೇವಯಾನಿಯನ್ನೂ ತಲುಪುತ್ತದೆ. ಶರ್ಮಿಷ್ಠೆಯ ಈ ವ್ಯವಹಾರದಿಂದ ಆಕೆಗೆ ಬೇಸರವಾಗುತ್ತದೆ. ಆಕೆ ನೇರವಾಗಿ ಶರ್ಮಿಷ್ಠೆ ಇದ್ದ ಕಡೆ ಹೋಗಿ,

“ಸಖೀ, ಇದೆಂಥಾ ಕೆಲಸ ಮಾಡಿಬಿಟ್ಟೆ..? ನಿನ್ನೊಳಗಿನ ಕಾಮಭಾವನೆಯನ್ನ ಹತ್ತಿಕ್ಕಲಾರದೇ ಹೋದೆಯಾ..?”

ಶರ್ಮಿಷ್ಠೆ : ಗೆಳತಿ ಹಾಗನ್ನಬೇಡ, ವೇದಪಾರಂಗತರಾದ ತೇಜಸ್ವೀ ಮಹಾನುಭಾವರಾದ ಋಷಿಯೊಬ್ಬರು, ಸುಯೋಗದಿಂದ ನನ್ನ ಅರಮನೆಗೆ ಬಂದಿದ್ದರು. ಅವರ ಸೇವೆಯನ್ನ ಶ್ರದ್ಧೆಯಿಂದ ಮಾಡಿದುದರ ಫಲವಾಗಿ ವರವೊಂದನ್ನ ನೀಡಿದರು. ಧರ್ಮಕ್ಕೆ ಚ್ಯುತಿ ಬಾರದಂತೆ ನನ್ನ ಮನೋಕಾಮನೆಯನ್ನ ಈಡೇರಿಸಬೇಕೆಂದು ಅವರಲ್ಲಿ ಕೇಳಿಕೊಂಡನು. ಆವರ ಅನುಗ್ರಹದಿಂದಲೇ ನನಗೆ ಗಂಡು ಮಗುವಾಯಿತು. ನನ್ನನ್ನ ಅನ್ಯಥಾ ಭಾವಿಸಬೇಡ.
ಮಹಾತೇಜಸ್ವೀ ಋಷಿಯು ಕಾರಣ ಎಂದು ತಿಳಿದ ಕೂಡಲೇ ದೇವಯಾನಿಯ ಕೋಪ ಇಳಿಯಿತು. ಅಂತಹ ತಪಸ್ವಿಗಳು ಅಧರ್ಮ ಕಾರ್ಯ ಮಾಡಲಾರರು ಎನ್ನುವ ವಿಶ್ವಾಸ ಅವಳಿಗೆ. ಕೂಡಲೇ ಆಕೆ ಮೃದುವಾದ ಧ್ವನಿಯಲ್ಲಿ, “ಸಖೀ, ಆ ಬ್ರಾಹ್ಮಣ ಶ್ರೇಷ್ಠನ ಕುಲ ಗೋತ್ರವನ್ನೇನಾದರೂ ನೀನು ಕೇಳಿದೆಯಾ…?” ಎಂದು ಕೇಳಿದಳು.

ಆಗ ಶರ್ಮಿಷ್ಠೆ, “ಸೂರ್ಯನನ್ನೇ ಮೀರಿಸುತ್ತಿದ್ದ ಆತನ ತೇಜಸ್ಸನ್ನ ನೋಡುವಾಗ ನೀವು ಯಾರು..? ನಿಮ್ಮದು ಯಾವ ಕುಲ ಯಾವ ಗೋತ್ರ ಇದಾವುದನ್ನೂ ಕೇಳಬೇಕೆಂದೆನಿಸಲಿಲ್ಲ. ತಪಸ್ವಿಗಳನ್ನ ಪ್ರಶ್ನಿಸದೆ ಮೌನದಿಂದಲೇ ಉಪಚರಿಸುವುದು ಶ್ರೇಯಸ್ಕರವಲ್ಲವೇ ಸಖೀ” ಎಂದಳು.

ಆಗ ದೇವಯಾನಿಯೂ ತಲೆದೂಗುತ್ತಾ,
“ನಿಜ ಮಹಾತಪಸ್ವಿಗಳ ಕೋಪಕ್ಕೆ ನಾವು ಗುರಿಯಾಗಬಾರದು. ನಿನ್ನ ಮಗನು ವರ್ಣಜ್ಯೇಷ್ಠನಾದ, ಶ್ರೇಷ್ಠನಾದ ಬ್ರಾಹ್ಮಣನಿಂದ ಉಂಟಾಗಿದ್ದಲ್ಲಿ ನನಗಾವ ಮುನಿಸೂ ಇಲ್ಲ ಸಖಿ.” ಎಂದು ಅವಳ ಜೊತೆ ಕುಶಲೋಪಚಾರ ಮಾತನಾಡಿ ತನ್ನ ಅರಮನೆಗೆ ತೆರಳಿದಳು.

ವಾಸ್ತವದಲ್ಲಿ ಶರ್ಮಿಷ್ಠೆ ಋಷಿ ಎಂದು ಹೇಳಿದ್ದಳಷ್ಟೇ. ಆತ ಬ್ರಾಹ್ಮಣನೆಂದೇನೂ ಹೇಳಲಿಲ್ಲ. ಯಯಾತಿಯೂ ರಾಜರ್ಷಿಯಾಗಿದ್ದರಿಂದಲೇ ಈ ರೀತಿಯಾಗಿ ಹೇಳಿ ಅಸತ್ಯ ನುಡಿಯದಂತೆ ನೋಡಿಕೊಂಡಳು. ಆದರೆ ಋಷಿ ಎಂದ ಕೂಡಲೇ ಬ್ರಾಹ್ಮಣನೇ ಎಂದು ದೇವಯಾನಿ ತಪ್ಪಾಗಿ ಭಾವಿಸಿಕೊಂಡಳು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...
error: Content is protected !!