ವ್ಯಾಸ ಮಹಾಭಾರತ – ಭಾಗ 57 ಆದಿಪರ್ವ (ಸಂಭವಪರ್ವ)

ಕಾಲ ಉರುಳತೊಡಗುತ್ತದೆ. ದೇವಯಾನಿಗೆ ಮತ್ತೊಂದು ಗಂಡು ಮಗುವಾಗುತ್ತದೆ. ಶರ್ಮಿಷ್ಠೆಗೆ ಮತ್ತೆ ಎರಡು ಗಂಡು ಮಕ್ಕಳಾಗುತ್ತದೆ. ಹೀಗಿರುವಾಗ ಒಮ್ಮೆ ದೇವಯಾನಿ ಮತ್ತು ಯಯಾತಿ ವಿಹರಿಸುತ್ತಾ ಬಲು ದೂರ ಬರುತ್ತಾರೆ. ಅಲ್ಲಿ ಶರ್ಮಿಷ್ಠೆ ಯ ಮಕ್ಕಳು ಆಟವಾಡುತ್ತಿರುತ್ತಾರೆ. ಆ ಮಕ್ಕಳ ಕಾಂತಿಯನ್ನ ರೂಪವನ್ನ ನೋಡಿ ಆಶ್ಚರ್ಯಚಕಿತಳಾದ ದೇವಯಾನಿ,

“ಪ್ರಾಣಕಾಂತ ಆ ಮಕ್ಕಳನ್ನ ನೋಡಿದಿರಾ, ಅವರ ಕಾಂತಿ ಮುಖದ ರೂಪ ನಿಮ್ಮನ್ನೇ ಹೋಲುತ್ತಿದೆಯಲ್ಲವೇ…?” ಎನ್ನುತ್ತಾ ಮಕ್ಕಳ ಬಳಿಗೋಡಿ… “ಮುದ್ದು ಕಂದಮ್ಮಗಳಿರಾ, ನಿಮ್ಮ ಹೆಸರೇನು..? ನಿಮ್ಮ ತಂದೆ ತಾಯಿಯರು ಯಾರು…? ನಿಮ್ಮ ವಂಶ ಯಾವುದು..? ಹೇಳುವಿರಾ..? ” ಎಂದು ಪ್ರಶ್ನಿಸುತ್ತಾಳೆ. ಆ ಕೂಡಲೇ ಮಕ್ಕಳು ತಮ್ಮ ತೋರು ಬೆರಳಿನಿಂದ ಯಯಾತಿಯನ್ನ ತೋರಿಸುತ್ತಾ ಇವರೇ ನಮ್ಮಪ್ಪ, ಶರ್ಮಿಷ್ಠೆ ಯೇ ನಮ್ಮ ತಾಯಿ “ಎಂದು ತಂದೆಯನ್ನ ಆಲಿಂಗಿಸಲು ಹೋಗುತ್ತಾರೆ. ಆದರೆ ದೇವಯಾನಿ ಇದ್ದುದರಿಂದಾಗಿ ಯಯಾತಿ ಮಕ್ಕಳನ್ನ ಅಭಿನಂದಿಸುವುದಿಲ್ಲ. ತಂದೆಯ ಈ ವಿಚಿತ್ರ ನಡವಳಿಕೆಯನ್ನ ಕಂಡ ಮಕ್ಕಳು ಅಳುತ್ತಾ ಶರ್ಮಿಷ್ಠೆ ಯ ಬಳಿಗೋಡುತ್ತಾರೆ.

ಇವೆಲ್ಲವನ್ನೂ ಕಂಡ ದೇವಯಾನಿ ಒಂದು ಕ್ಷಣ ದಿಗ್ಭ್ರಾಂತಳಾಗುತ್ತಾಳೆ. ವಾಸ್ತವದ ಅರಿವಾದ ಕೂಡಲೇ ಕೋಪಗೊಂಡು ನೇರವಾಗಿ ಶರ್ಮಿಷ್ಠೆಯ ಬಳಿ ಹೋಗಿ, “ನನ್ನ ದಾಸಿಯಾಗಿದ್ದರೂ ನನಗೇ ಮೋಸ ಮಾಡಿದೆಯಲ್ಲವೇ… ಹುಟ್ಟಿನಿಂದ ಬಂದ ಅಸುರೀ ಗುಣ ನನ್ನಲ್ಲಿನ ಭಯವನ್ನ ಅಳಿಸಿಹಾಕಿತೇ..? ಬ್ರಾಹ್ಮಿಣಿಯಾದ ನನ್ನ ಕುರಿತು ನಿನಗೆಲ್ಲಿಯ ಭಯ ಅಲ್ಲವೇ..? ” ಎನ್ನುತ್ತಾಳೆ. ಆಗ ಶರ್ಮಿಷ್ಠೆ, “ಸಖೀ ನಾನು ಋಷಿಯ ವಿಚಾರವಾಗಿ ನಿನ್ನ ಬಳಿ ಹೇಳಿದ್ದೆನಲ್ಲವೆ. ಮಹಾರಾಜರೂ ರಾಜರ್ಷಿಯೇ ತಾನೇ. ನಾನೆಲ್ಲಿಯ ಸುಳ್ಳನ್ನಾಡಿದಂತಾಯಿತು..? ನೀನು ನನ್ನ ಸ್ವಾಮಿನಿಯೂ ಹೌದು ಸಖಿಯೂ ಹೌದು ನಿನ್ನ ಸ್ವಾಮಿಯು ನನಗೂ ಸ್ವಾಮಿಯೇ ತಾನೇ ಸಖಿಯ ಪತಿಯನ್ನ ನನ್ನ ಪತಿ ಎಂದುಕೊಳ್ಳುವುದರಲ್ಲಿ ಭಯವೇಕೆ. ನಾನು ನಿನಗಿಂತಲೂ ಹೆಚ್ಚು ಅವರನ್ನು ಪೂಜಿಸುತ್ತೇನೆ.” ಎನ್ನುತ್ತಾಳೆ.

ಅವಳ ಮಾತಿಗೆ ಉತ್ತರಿಸಲು ದೇವಯಾನಿಗೆ ಸಾಧ್ಯವಾಗುವುದಿಲ್ಲ. ಅದೇ ಹೊತ್ತಿಗೆ ಯಯಾತಿಯೂ ಅಲ್ಲಿಗೆ ಬರುತ್ತಾನೆ. ಆಗ ದೇವಯಾನಿಯು ಪತಿಯ ಬಗ್ಗೆ ಕೋಪಿಸುತ್ತಾ,” ಮಹಾರಾಜ ನನಗೆ ಮೋಸ ಮಾಡಿ ಬಲು ದೊಡ್ಡ ತಪ್ಪು ಮಾಡಿದಿರಿ… ನಾನೊಂದು ಕ್ಣಣವೂ ಇಲ್ಲಿರಲಾರೆ. ನನ್ನ ತಂದೆಯ ಬಳಿ ಎಲ್ಲವನ್ನೂ ಹೇಳುತ್ತೇನೆ.” ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ.

ದೇವಯಾನಿ ಒಂದೆಡೆ ಕೋಪಿಸುತ್ತಾ ಇನ್ನೊಂದೆಡೆಯಲ್ಲಿ ದುಃಖಿಸುತ್ತಾ ನೇರವಾಗಿ ತನ್ನ ತಂದೆಯ ಬಳಿ ಬಂದಳು. ಅವಳನ್ನ ಸಮಾಧಾನ ಪಡಿಸುವ ಸಲುವಾಗಿಯೇ ಯಯಾತಿಯೂ ಅವಳ ಹಿಂದೆಯೇ ಶುಕ್ರಾಚಾರ್ಯರ ಆಶ್ರಮಕ್ಕೆ ಬಂದು ಶುಕ್ರಾಚಾರ್ಯರಿಗೆ ವಿನೀತನಾಗಿ ನಮಸ್ಕರಿಸಿ ನಿಂತನು. ದೇವಯಾನಿಯೋ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳ ರೋಧನ ಸಹಿಸಲಾಗದೆ ಶುಕ್ರಾಚಾರ್ಯರು,

“ಪುತ್ರೀ, ಏನಾಯಿತಮ್ಮಾ ಯಾಕಾಗಿ ಈ ರೀತಿ ಅಳುತ್ತಿರುವೆ..? ನಿನ್ನ ದುಃಖಕ್ಕೆ ಕಾರಣವೇನು ಹೇಳು ಮಗಳೇ..” ಎಂದನು.

ಆಗ ದೇವಯಾನಿ, “ಅಪ್ಪಾ ಧರ್ಮದ ಮೇಲೆ ಅಧರ್ಮ ವಿಜಯ ಸಾಧಿಸಿಬಿಟ್ಟಿತಪ್ಪಾ.. ನೀಚರು ಸತ್ಪುರುಷರ ಮೇಲೆ ಪ್ರಭುತ್ವ ಸಾಧಿಸಿಬಿಟ್ಟರಪ್ಪಾ. ನನ್ನ ದಾಸಿಯಾದ ಶರ್ಮಿಷ್ಠೆಯು ನನ್ನ ಪತಿಯಿಂದಲೇ ಮೂರು ಮಕ್ಕಳನ್ನ ಪಡೆದಿರುವಳಪ್ಪಾ, ನನಗಾದರೋ ಎರಡೇ ಮಕ್ಕಳು. ಈ ರೀತಿಯಾಗಿ ನನಗಿಂತಲೂ ಆಕೆಯೇ ಮೇಲಾಗಿಬಿಟ್ಟಳು. ಧರ್ಮಾತ್ಮ ಎಂದೆನಿಸಿಕೊಂಡ ನನ್ನ ಪತಿಯೂ ನನಗೆ ಮೋಸ ಮಾಡಿ ಲೋಕಮರ್ಯಾದೆಯನ್ನೂ ಮೀರಿ ಬಿಟ್ಟರಪ್ಪಾ.” ಎಂದು ಮತ್ತೆ ಅಳತೊಡಗಿದಳು…

ಅವಳ ಮಾತುಗಳನ್ನ ಕೇಳಿ ಕೋಪದಿಂದ ಬುಸುಗುಡುತ್ತಾ ಶುಕ್ರಾಚಾರ್ಯರು ಯಯಾತಿಯ ಸ್ಪಷ್ಟೀಕರಣಕ್ಕೂ ಕಾಯದೆ, “ಎಲವೋ ಯಯಾತಿ, ಧರ್ಮಜ್ಞನಾಗಿದ್ದೂ ಕಾಮತೃಪ್ತಿಗಾಗಿ ಅಧರ್ಮವನ್ನೆಸಗಿ, ನನ್ನ ಮಗಳಿಗೆ ಅನ್ಯಾಯವೆಸಗಿದೆ ನಿನಗೆ ಈಗಲೇ ವೃದ್ಧಾಪ್ಯ ಬರಲಿ” ಎಂದು ಶಪಿಸಿಯೇ ಬಿಟ್ಟರು.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...
error: Content is protected !!