ವ್ಯಾಸ ಮಹಾಭಾರತ – ಭಾಗ 58 ಆದಿಪರ್ವ (ಸಂಭವಪರ್ವ)

ಆಗ ಯಯಾತಿಯು… “ಪೂಜ್ಯರೇ, ಧರ್ಮೈಕಬುದ್ಧಿಯುಳ್ಳ ನನ್ನನ್ನು ವೃಥಾ ಶಾಪಕ್ಕೀಡು ಮಾಡಬೇಡಿ. ನಾನು ಶರ್ಮಿಷ್ಠೆಯಿಂದ ಯಾಚಿತನಾದೆನು. ಯಾಚಕರಿಗೆ ಇಲ್ಲವೆನ್ನುವುದು ಧರ್ಮಸಮ್ಮತವೇ..? ಅವಳ ಬೇಡಿಕೆಯ ಪೂರ್ತಿಗಾಗಿ ಸೇರಿದೆನೇ ಹೊರತು ಕಾಮತೃಪ್ತಿಗಾಗಿ ಖಂಡಿತವಾಗಿಯೂ ಅಲ್ಲ.

ಋತಂ ವೈ ಯಾಚಮಾನಾಯ ನ ದದಾತಿ ಪುಮಾನೃತುಮ್ |
ಭ್ರೂಣಹೇತ್ಯುಚ್ಯತೇ ಬ್ರಹ್ಮನ್ಸ ಇಹ ಬ್ರಹ್ಮವಾದಿಭಿಃ ||

ಋತುಸ್ನಾತೆಯಾದ ಸ್ತ್ರೀಯ ಆಕಾಂಕ್ಷೆಗೆ ಮನ್ನಣೆ ಕೊಡದ ಪುರುಷನಿಗೆ ಭ್ರೂಣ ಹತ್ಯೆಯ ಪಾಪವುಂಟಾಗುವುದೆಂದು ಬ್ರಹ್ಮವಿದರು ಹೇಳುತ್ತಾರೆ.

ಅಭಿಕಾಮಾಂ ಸ್ತ್ರೀಯಂ ಯಶ್ಚ ಗಮ್ಯಾಂ ರಹಸಿ ಯಾಚಿತಃ |
ನೋಪೈತಿ ಸ ಚ ಧರ್ಮೇಷು ಭ್ರೂಣಹೇತ್ಯುಚ್ಯತೇ ಬುಧೈಃ ||

ಕಾಮಿನಿಯಾದ ಮತ್ತು ಧರ್ಮತಃ ರತಿಸುಖಕ್ಕೆ ಯೋಗ್ಯಳಾದ ಸ್ತ್ರೀಯು ರಹಸ್ಯದಲ್ಲಿ ರತಿಸುಖಕ್ಕೆ ಮಾಡುವ ಯಾಚನೆಯನ್ನು ಯಾವನು ತಿರಸ್ಕರಿಸುತ್ತಾನೋ ಅಂತಹವನು ಭ್ರೂಣಹತ್ಯೆ ಮಾಡಿದ ಪಾತಕಿಗೆ ಸಮಾನನೆಂದು ವಿದ್ವಾಂಸರು ಹೇಳುತ್ತಾರೆ.

ಈ ಕಾರಣಕ್ಕಾಗಿಯೇ ನಾನು ಶರ್ಮಿಷ್ಠೆಯ ಯಾಚನೆಯನ್ನು ಮನ್ನಿಸಿದೆನು.

ಆಗ ಶುಕ್ರಾಚಾರ್ಯರು , “ನೀನು ಹೇಳುತ್ತಿರುವುದು ನಿಜವಾದರೂ ನೀನು ನಿನ್ನ ಪತ್ನಿಯ ಅನುಮತಿಯನ್ನ ಪಡೆಯಬೇಕಾಗಿತ್ತಲ್ಲವೇ…?

ಮಿಥ್ಯಾಚಾರಸ್ಯ ಧರ್ಮೇಷು ಚೌರ್ಯಂ ಭವತಿ ನಾಹುಷ ||

ನಹುಷ ಪುತ್ರನೇ ಮಾಡಬಾರದುದನ್ನ ಮಾಡಿ ಅದಕ್ಕೆ ಧರ್ಮದ ಬಣ್ಣವನ್ನ ಬಳಿಯಲು ಹೋದರೆ ಅದು ಧರ್ಮದ ಕಳ್ಳತನವೆನಿಸಿಕೊಳ್ಳುತ್ತದೆ.” ಎಂದನು.

ಶುಕ್ರಾಚಾರ್ಯರ ಈ ಮಾತಿಗೆ ಯಯಾತಿಯ ಬಳಿಯಲ್ಲಿ ಉತ್ತರವಿರಲಿಲ್ಲ. ಹಾಗಾಗಿ ಕೂಡಲೇ ಶುಕ್ರಾಚಾರ್ಯರ ಶಾಪ ಫಲಿಸಿತು. ಯಯಾತಿಯನ್ನ ಮುಪ್ಪು ಆವರಿಸಿತು. ತನ್ನ ದುರವಸ್ಥೆ ಕಂಡ ಯಯಾತಿಯು ಮತ್ತೆ ಶುಕ್ರರ ಬಳಿ ಯಾಚಿಸತೊಡುಗುತ್ತಾನೆ. “ಮಹರ್ಷಿಗಳೇ ನಾನು ಯೌವನದ ಸುಖದಿಂದ ತೃಪ್ತನಾಗಿಲ್ಲ. ದೇವಯಾನಿಯೊಡನೆ ಇನ್ನೂ ಹಲವಾರು ವರ್ಷಗಳ ಕಾಲ ಸುಖ ಪಡೆಯಬೇಕೆಂದಿದ್ದೇನೆ. ದಯವಿಟ್ಟು ನನ್ನ ಮುದಿತನವನ್ನ ದೂರ ಮಾಡಿರಿ.”

ದೇವಯಾನಿಯೊಡನೆ ಸುಖಿಸಬೇಕಿದೆ ಎನ್ನುವ ಮಾತು ಕೇಳಿದ ಕೂಡಲೇ ಶುಕ್ರಾಚಾರ್ಯರಿಗೆ ತನ್ನ ಶಾಪದ ಇನ್ನೊಂದು ಆಯಾಮ ಕಾಣಿಸಿತು…. ಯಯಾತಿಯ ಶಿಕ್ಷೆ ಪರೋಕ್ಷವಾಗಿ ತನ್ನ ಮಗಳನ್ನೂ ಕಾಡುವುದಲ್ಲವೇ ಎಂದು ಯೋಚಿಸಿದರು. ಮತ್ತೆ ಸಾವಧಾನದಿಂದ, “ಮಹಾರಾಜ ನಾನೆಂದೂ ಸುಳ್ಳನ್ನಾಡಿದವನಲ್ಲ. ಹಾಗಾಗಿ ನನ್ನ ಶಾಪ ಫಲಿಸದೇ ಇರದು. ಆ ಶಾಪದ ಕುರುಹುಗಳೆಲ್ಲವೂ ನನ್ನ ಕಣ್ಣ ಮುಂದಿದೆ. ಆದರೂ ಇದರ ಪರಿಹಾರೋಪಾಯವಾಗಿ… ನಿನ್ನ ಮುಪ್ಪನ್ನ ಯಾರಿಗಾದರೂ ಕೊಟ್ಟು ಅವರ ಯೌವನವನ್ನ ನೀನು ಸ್ವೀಕರಿಸಲಾಗುವಂತೆ ನಿನ್ನನ್ನ ಹರಸುತ್ತೇನೆ.”

ಆಗ ಯಯಾತಿಯು ಸಂತೋಷದಿಂದ, “ಧನ್ಯನಾದೆ ಮಹರ್ಷಿಗಳೇ, ನನ್ನ ಮಕ್ಕಳಲ್ಲಿ ಯಾರು ನನ್ನ ವೃದ್ಧಾಪ್ಯವನ್ನ ಸ್ವೀಕರಿಸಿ ತನ್ನ ಯೌವನವನ್ನ ಕೊಡುತ್ತಾರೋ ಅವರಿಗೇ ನನ್ನ ರಾಜ್ಯವನ್ನ ಕೊಡುತ್ತೇನೆ. ಆತನೇ ಮುಂದೆ ಧರ್ಮಾತ್ಮನಾಗಿ ಈ ರಾಜ್ಯವನ್ನಾಳುವಂತೆ ಅನುಗ್ರಹಿಸಿ.” ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಶುಕ್ರರು ಆಗಲಿ ಎನ್ನುತ್ತಾರೆ.

(ಶಾಪ ಸಿಕ್ಕ ನಂತರ ತನ್ನ ವೃದ್ಧಾಪ್ಯವನ್ನ ಮಕ್ಕಳಲ್ಲಿ ವಿನಿಮಯ ಮಾಡಿಕೊಳ್ಳುವ ಕುರಿತಾದ ಕತೆ ಈ ಹಿಂದೆ ಹೇಳಿ ಆಗಿದೆ…)

ಪೂರುವಿನಿಂದ ಯೌವನ ಪಡೆದ ಯಯಾತಿ ಕೇವಲ ಸುಖೋಪಭೋಗಗಳಲ್ಲೇ ಕಾಲ ಕಳೆಯಲಿಲ್ಲ…ಆತ ಧರ್ಮ ಹಾದಿಯನ್ನೆಂದೂ ತೊರೆಯಲೂ ಇಲ್ಲ . ರಾಜನು ಮಾಡಬೇಕಾದ ನಿತ್ಯ ನೈಮಿತ್ತಿಕ ಅನುಷ್ಠಾನಗಳನ್ನೆಲ್ಲಾ ಪಾಲಿಸುತ್ತಿದ್ದನು. ದೇವತೆಗಳನ್ನೂ ಸಂತೃಪ್ತಿಗೊಳಿಸುತ್ತಿದ್ದನು. ಆದರೆ ಜೊತೆ ತನ್ನ ಪತ್ನಿಯರ ಜೊತೆಯೂ ಸುಖಿಸುತ್ತಿದ್ದನು. ಕಾಲಾನುಸಾರವಾಗಿ ಒಮ್ಮೆ ವಿಶ್ವಾಚೀ ಎನ್ನುವ ಅಪ್ಸರೆಯೊಡನೆಯೂ ಸುಖಿಸಿದನು. ಕಾಲ ಕಳೆದು ತಾನು ಪಡೆದಿದ್ದ ಸಹಸ್ರ ವರ್ಷಗಳ ಯೌವನದ ಸಮಯ ಮುಗಿಯುತ್ತಾ ಬಂದರೂ ಯಯಾತಿಗೆ ಸುಖೋಪಭೋಗಗಳ ಮೇಲಿನ ಆಸೆ ಕಡಿಮೆಯಾಗಲಿಲ್ಲ. ಆತನು ತನ್ನ ಮಗನಾದ ಪೂರುವನ್ನು ಕರೆಯಿಸಿ..

“ಮಗನೇ ಸಹಸ್ರ ವರ್ಷಗಳ ಸಾಂಸಾರಿಕ ಸುಖೋಪಭೋಗಗಳನ್ನ ಅನುಭವಿಸಿಯೂ ನನ್ನ ಆಸೆಗಳು ಮುಗಿದಿವೆ ಎಂದು ಯೋಚಿಸಬೇಡ. ಆಸೆ ಮತ್ತು ಸಂತೃಪ್ತಿ ಇವೆರಡೂ ಪರಸ್ಪರ ವಿರುದ್ಧ ಪದಗಳು. ಒಂದು ಆಸೆಯು ಈಡೇರಿದಾಗ ಇನ್ನೊಂದು ಆಸೆ ಹುಟ್ಟಿಕೊಳ್ಳುವುದೇ ವಿನಹ ಸಂತೃಪ್ತಿಯೆಂದೂ ಕಾಣಿಸುವುದಿಲ್ಲ. ಯಜ್ಞಕ್ಕೆ ತುಪ್ಪ ಸುರಿಯುವುದರಿಂದ ಅಗ್ನಿ ಮತ್ತಷ್ಟು ಪ್ರಜ್ವಲಿಸುತ್ತದೆಯೇ ಹೊರತು ಆರಿ ಹೋಗುವುದಿಲ್ಲ. ಅದೇ ರೀತಿ ಆಸೆಗಳೆಂದಿಗೂ ಮುಗಿಯುವುದೇ ಇಲ್ಲ. ಒಂದು ಆಸೆ ಈಡೇರಿದಾಗ ಮತ್ತೊಂದು ಚಿಗುರುತ್ತದೆ. ಪ್ರಪಂಚದ ಎಲ್ಲ ವಸ್ತುಗಳು ಸಿಕ್ಕರೂ ಮಾನವನ ಆಸೆ ಈಡೇರುವುದಿಲ್ಲ ಆತ ಆಗಸದತ್ತ ಮನಸು ಹಾಯಿಸಿ ಅದನ್ನ ಬಯಸಲು ತೊಡಗುತ್ತಾನೆ. ಮೊದಲಿಗೆ ಮಾನವನು ಆಸೆಗಳನ್ನ ತೊರೆಯಬೇಕು ಆದರೆ ಆಸೆಯನ್ನ ತೊರೆಯುವುದು ಅಷ್ಟು ಸುಲಭವಲ್ಲ.

ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ |
ಯೋಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್ ||

ದುರ್ಮತಿಗಳಿಗೆ ಆಸೆಯನ್ನ ತ್ಯಜಿಸುವುದು ಅಸಾಧ್ಯವಾದ ಕೆಲಸವೇ ಆಗಿದೆ. ಯಾಕೆಂದರೆ ಈ ಶರೀರ ಜೀರ್ಣವಾಗಿ ಹೋದರೂ ಆಸೆಗಳು ಜೀರ್ಣವಾಗುವುದಿಲ್ಲ. ಆಸೆ ಎನ್ನುವುದು ಮಾನವನ ಪಾಲಿಗೆ ಮಾರಕ ರೋಗವಿದ್ದಂತೆ. ಅಂತಹ ಆಸೆಯನ್ನ ತ್ಯಜಿಸಿದವನೇ ಪರಮಸುಖಿಯು.

ಹಾಗಾಗಿ ಸಜ್ಜನರು ಆಸೆಯನ್ನ ತ್ಯಜಿಸಬೇಕೆ ಹೊರತು ಅದನ್ನ ಪೂರೈಸಿಕೊಳ್ಳಲು ಅನುವಾಗಬಾರದು. ಮಗನೇ ಇನ್ನಾದರೂ ನಾನು ಈ ಅಸೆಗಳನ್ನ ತ್ಯಜಿಸಿ ಭಗವಂತನ ಧ್ಯಾನ ಮಾಡಬೇಕೆಂದಿರುವೆ. ನಾನು ಕೊಟ್ಟ ಮಾತಿನಂತೆ ನನ್ನ ರಾಜ್ಯ ಕೋಶಾದಿಗಳೆಲ್ಲವೂ ನಿನ್ನದೇ ಆಗಲಿವೆ.

ಮುಂದುವರೆಯುತ್ತದೆ..

– ಗುರುಪ್ರಸಾದ್ ಆಚಾರ್ಯ

Loading...
error: Content is protected !!