ವ್ಯಾಸ ಮಹಾಭಾರತ - ಭಾಗ 59 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 59 ಆದಿಪರ್ವ (ಸಂಭವಪರ್ವ)

ತಂದೆಯಿಂದ ಮರಳಿ ಯೌವನವನ್ನು ಪಡೆದ ಪೂರುವು ಸರ್ವಾಂಗ ಸುಂದರನಾಗಿ ಕಂಗೊಳಿಸ ತೊಡಗುತ್ತಾನೆ. ಆತನಿಗೆ ಪಟ್ಟಾಭಿಷೇಕ ಮಾಡುವುದಾಗಿ ಯಯಾತಿಯು ಡಂಗುರ ಸಾರಿಸಿ.. ಸಿದ್ಧತೆ ಮಾಡಲು ತನ್ನ ಆಸ್ಥಾನಿಕರಲ್ಲಿ ಹೇಳುತ್ತಾನೆ. ಇದನ್ನ ಕೇಳಿದ ರಾಜ್ಯದ ನಾಲ್ಕೂ ವರ್ಣಗಳ ಪ್ರಮುಖರು ಯಯಾತಿಯನ್ನ ಭೇಟಿ ಮಾಡಲು ಬಂದು,

“ಮಹಾರಾಜ, ಪಟ್ಟಮಹಿಷಿ ದೇವಯಾನಿಯ ಹಿರಿಮಗನನ್ನ ಅಲಕ್ಷಿಸಿ ಶರ್ಮಿಷ್ಠೆಯ ಕಿರಿಯಮಗನಿಗೆ ಪಟ್ಟಕಟ್ಟುವುದು ಸಂಪ್ರದಾಯವೂ ಅಲ್ಲ, ಧರ್ಮಸಮ್ಮತವೂ ಅಲ್ಲ. ಯಾವುದಾದರೂ ಕಾರಣಗಳಿಂದ ಹಿರಿಯ ಮಗ ಯೋಗ್ಯನಲ್ಲದೇ ಹೋದಾಗ ಜ್ಯೇಷ್ಠತೆಗೆ ಅನುಗುಣವಾಗಿ ಪಟ್ಟ ಕಟ್ಟಬೇಕೆ ಹೊರತು ನೇರವಾಗಿ ಕಿರಿಯವನಿಗೆ ಪಟ್ಟ ಕಟ್ಟುವುದು ನ್ಯಾಯಯುತವಲ್ಲ. ಹಾಗಾಗಿ ತಾವು ತಮ್ಮ ಆದೇಶವನ್ನ ಮರು ಪರಿಶೀಲಿಸಿಸುವುದು ಯೋಗ್ಯ ಎನ್ನುವುದು ನಮ್ಮೆಲ್ಲರ ಅಭಿಪ್ರಾಯವಾಗಿದೆ.” ಎಂದರು.

ಆಗ ಯಯಾತಿಯು,
“ಪ್ರಜೆಗಳೇ ನೀವು ಹೇಳಿದಂತೆ ಇದು ಸಂಪ್ರದಾಯಬದ್ಧವಾದುದಲ್ಲ.. ನಿಜ, ಆದರೆ ನಾನು ಈ ರೀತಿ ನಿರ್ಣಯ ಕೈಗೊಳ್ಳಲು ಕಾರಣವಿದೆ.

ಪ್ರತಿಕೂಲಃ ಪಿತುರ್ಯಶ್ಚ ನ ಸ ಪುತ್ರಃ ಸತಾಂ ಮತಃ |

ತಂದೆಯ ಮಾತನ್ನು ನಡೆಸಿಕೊಡದ ಮಗನು, ಮಗನೇ ಅಲ್ಲವೆಂದು ಧರ್ಮಜ್ಞರು ಹೇಳುತ್ತಾರೆ.

ಮಾತಾಪಿತ್ರೋರ್ವಚನಕೃದ್ಧಿತಃ ಪಥ್ಯಶ್ಚಯಃ ಸುತಃ |
ಸ ಪುತ್ರಃ ಪುತ್ರವದ್ಯಶ್ಚ ವರ್ತತೇ ಪಿತೃಮಾತೃಷು ||

ಮಾತಪಿತರ ಮಾತುಗಳನ್ನ ನಡೆಸಿಕೊಡುವವನು, ಅವರ ಸುಖವನ್ನು ಬಯಸುವವನು, ಅವರ ಇಚ್ಛೆಯನ್ನ ಈಡೇರಿಸುವವನೇ ನಿಜವಾದ ಮಗನಾಗುತ್ತಾನೆ.

ಯಯಾತಿ : ಸಾವಿರ ವರುಷಗಳ ನಿಮ್ಮ ಯೌವನವನ್ನು ನನಗೆ ಕೊಡಬಲ್ಲಿರಾ ಎಂದಾಗ ಅವರ್ಯಾರೂ ಕೊಡಲಿಲ್ಲ. ಆ ಹೊತ್ತಿನಲ್ಲಿ ನನ್ನ ಮನದಾಸೆಯನ್ನ ಈಡೇರಿಸಿದ್ದು ನನ್ನ ಕಿರಿಯ ಮಗನೇ.. ನನ್ನ ಪಾಲಿನ ವೃದ್ಧಾಪ್ಯವನ್ನ ಸಹಸ್ರವರ್ಷಗಳ ಕಾಲ ಆತ ಅನುಭವಿಸಿದ್ದಾನೆ. ಹೀಗಾಗಿ ನಾನೇ ಮಾತು ಕೊಟ್ಟಂತೆ ಈ ರಾಜ್ಯಕ್ಕೆ ಅವನೇ ಉತ್ತರಾಧಿಕಾರಿ. ಅದೂ ಅಲ್ಲದೆ ಈ ವಿಚಾರವನ್ನು ಶುಕ್ರಾಚಾರ್ಯರಲ್ಲೂ ಹೇಳಿದ್ದೆ. ಅವರ ಅನುಮತಿಯೂ ಸಿಕ್ಕಿತ್ತು. ಹಾಗಾಗಿ ಪ್ರಜೆಗಳೇ ತಾವು ನಿರಾಳರಾಗಿರಿ.

ಯಯಾತಿಯು ಹೀಗೆ ವಿಸ್ತಾರವಾಗಿ ತನ್ನ ನಿರ್ಣಯದ ಕುರಿತು ಹೇಳಿದಾಗ, ಅದರಲ್ಲೂ ಶುಕ್ರಾಚಾರ್ಯರ ಸಹಮತ ಇದೆಯೆಂದು ತಿಳಿದಾಗ ವರ್ಣ ಪ್ರಮುಖರು ನಿರಾತಂಕರಾದರು. ಅವರು ವಿನೀತರಾಗಿ,
“ಮಹಾರಾಜ ತಮ್ಮ ನಿರ್ಣಯವು ಧರ್ಮ ಸಮ್ಮತವಾಗಿದೆ.

ಯಃ ಪುತ್ರೋ ಗುಣಸಂಪನ್ನೋ ಮಾತಾಪಿತ್ರೋರ್ಹಿತಃ ಸದಾ |
ಸರ್ವಮರ್ಹತಿ ಕಲ್ಯಾಣಂ ಕನೀಯಾನಪಿ ಸತ್ತಮಃ ||

ತಂದೆತಾಯಿಯರ ಮಾತನ್ನ ನಡೆಸಿಕೊಡುವವನೇ ಸತ್ಪುತ್ರನೆನಿಸಿಕೊಳ್ಳುತ್ತಾನೆ. ಆತನು ರಾಜ್ಯ ಕೋಶಾದಿಗಳನ್ನ ಸ್ವೀಕರಿಸಲು ಅರ್ಹನೆನಿಸುತ್ತಾನೆ. ಅಂತೆಯೇ ನಿಮ್ಮ ಮಾತನ್ನ ನಡೆಸಿಕೊಟ್ಟ ಪೂರುವು ಪಟ್ಟಾಭಿಷಿಕ್ತನಾಗಲು ಯೋಗ್ಯನಾಗಿದ್ದಾನೆ. ಅಲ್ಲದೆ ಶುಕ್ರಾಚಾರ್ಯರೇ ಇದನ್ನ ಸಮ್ಮತಿಸಿರುವಾಗ ನಾವೇನು ಹೇಳಲು ಸಾಧ್ಯ. ” ಎಂದು ಸಂತೋಷದಿಂದ ಪಟ್ಟಾಭಿಷೇಕದ ಸಿದ್ಧತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪೂರುವಿಗೆ ರಾಜ್ಯ ವಹಿಸಿಕೊಟ್ಟ ಬಳಿಕ ಯಯಾತಿಯು ಕಾಡಿಗೆ ತೆರಳುತ್ತಾನೆ.

—————-

ಯಯಾತಿಯಿಂದ ತನ್ನ ಮಾತು ಕೇಳದ ಮಕ್ಕಳಿಗೆ ಸಿಕ್ಕ ಶಾಪ

ಮೊದಲನೇ ಮಗ ಯದುವಿಗೆ ” ನಿನ್ನ ಮಕ್ಕಳಾರೂ ರಾಜರಾಗದಿರಲಿ. ”

ಎರಡನೆಯವ ತುರ್ವಸುವಿಗೆ ” ನಿನ್ನ ಸಂತಾನವು ನಶಿಸಲಿ. ಸಂಕೀರ್ಣ ಜಾತಿಯ ದುರಾಚಾರಿಗಳ ವಿಲೋಮಜಾತಿಯ, ಮಾಂಸ ಭಕ್ಷಕರ, ಗುರುಪತ್ನೀಸಮಾಗಮವನ್ನೂ ಸಹ ಮಾಡಲು ಹಿಂಜರಿಯದ ಕೇವಲ ಪಶುಪಕ್ಷಿಯಂತೆ ಜೀವನ ನಡೆಸುವ ಮ್ಲೇಚ್ಛ ಜಾತಿಗೆ ನೀನು ರಾಜನಾಗು ”

ಮೂರನೆಯವ ದ್ರುಹ್ಯುವಿಗೆ ” ರಥಸಂಚಾರಕ್ಕೆ ಅಯೋಗ್ಯವಾದ, ಸರಿಯಾದ ದಾರಿಯಿಲ್ಲದ, ಹಳ್ಳಕೊಳ್ಳಗಳೂ, ಬೆಟ್ಟಗುಡ್ಡಗಳೂ ಇರುವ ಪ್ರದೇಶಕ್ಕೆ ನೀನು ರಾಜನಾಗಿರುವೆಯೇ ಹೊರತು ನಿನ್ನ ಅಧಿಕಾರವೇನೂ ಆ ರಾಜ್ಯದಲ್ಲಿ ನಡೆಯದಿರಲಿ ”
ನಾಲ್ಕನೆಯವನಾದ ಅನುವಿಗೆ ” ನಿನ್ನನ್ನ ವೃದ್ಧಾಪ್ಯವು ಈಗಲೇ ಆವರಿಸಲಿ. ನಿನ್ನ ಮಕ್ಕಳೆಲ್ಲರೂ ಯೌವನಕ್ಕೆ ಕಾಲಿಟ್ಟೊಡನೆಯೇ ಸತ್ತು ಹೋಗಲಿ. ಇದೂ ಅಲ್ಲದೇ ನನ್ನ ಶಾಪದಿಂದ ಉಂಟಾಗುವ ವೃದ್ಧಾಪ್ಯದ ಕಾರಣದಿಂದ ನೀನು ಮಾಡಲೆತ್ನಿಸುವ ಯಜ್ಞ ಯಾಗಾದಿಗಳೂ, ಹೋಮ ಹವನಗಳೂ ಯಾವುದೂ ನಿನ್ನಿಂದ ನಡೆಯದಿರಲಿ. ” ಎಂದು ಶಾಪವನ್ನೀಯುತ್ತಾನೆ…

ತಂದೆಯ ಶಾಪ ಪಡೆದ ಯದುವಿನಿಂದ ಯಾದವರು ಜನಿಸುತ್ತಾರೆ…. ತುರ್ವಸುವಿನಿಂದ ಯವನರು ಜನಿಸುತ್ತಾರೆ. ದ್ರುಹ್ಯುವಿನಿಂದ ಭೋಜರೂ, ಅನುವಿನಿಂದ ಮ್ಲೇಚ್ಛರೆಂಬುವವರು ಜನಿಸುತ್ತಾರೆ. ಪೂರುವಿನ ವಂಶದಲ್ಲಿಯೇ ಜನಮೇಜಯನು ಹುಟ್ಟುತ್ತಾನೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!