ವ್ಯಾಸ ಮಹಾಭಾರತ - ಭಾಗ 6 |News Mirchi

ವ್ಯಾಸ ಮಹಾಭಾರತ – ಭಾಗ 6

ಈ ಉತ್ತಂಕನ ಗುರುಗಳು ವೇದ. ಅವರು ಸರ್ವಜ್ಞತ್ವವನ್ನು ಗುರುಗಳ ಸೇವೆಯನ್ನು ಮಾಡುವುದರ ಮೂಲಕ ಪಡೆದವರಾಗಿದ್ದರು. ಆದರೆ ಮುಂದೆ ಅವರೇ ಗುರುಗಳಾದಾಗ ತಾವು ಕಷ್ಟಪಟ್ಟಂತೆ ತಮ್ಮ ಶಿಷ್ಯರು ಕಷ್ಟ ಪಡದಿರಲಿ ಅನ್ನುವ ಕಾರಣಕ್ಕೆ ತಮ್ಮ ಶಿಷ್ಯಂದಿರಿಗೆ ಯಾವುದೇ ಸೇವಾ ಕಾರ್ಯವನ್ನೂ ಹೇಳದೆಯೇ ಪಾಠವನ್ನ ಹೇಳಿಕೊಡುತ್ತಿದ್ದರು.

ಒಮ್ಮೆ ಈ ವೇದರು ಜನಮೇಜಯ ಮಾಡುತ್ತಿದ್ದ ಯಜ್ಞ ನಿರ್ವಹಣೆಗಾಗಿ ಆಶ್ರಮ ಬಿಟ್ಟು ಹೋಗಬೇಕಾದ ಪ್ರಸಂಗ ಒದಗಿ ಬಂತು. ತಮ್ಮ ಕೆಲಸವನ್ನು ಶಿಷ್ಯರಿಗೆ ಹೇಳಲು ಇಷ್ಟವಿಲ್ಲದೇ ಹೋದರೂ ಕೂಡಾ ಪರಿಸ್ಥಿತಿಯ ಒತ್ತಡದಿಂದಾಗಿ ತನ್ನ ನೆಚ್ಚಿನ ಶಿಷ್ಯ ಉತ್ತಂಕನಿಗೆ “ಮನೆಯಲ್ಲಿ ಯಾವ ಕೆಲಸವನ್ನು ಮಾಡಬೇಕಿದ್ದರೂ ಉದಾಸೀನವಿಲ್ಲದೇ ಮಾಡು” ಎಂದು ಆಜ್ಞಾಪಿಸಿ ಯಜ್ಞ ಶಾಲೆಗೆ ಹೊರಟರು… ಉತ್ತಂಕನೂ ಗುರುಗಳ ಆಜ್ಞೆಯನ್ನು ಮನಸಾ ಪಾಲಿಸಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದನು….

ಈ ಉತ್ತಂಕನು ಗುರುಗಳ ಆದೇಶವನ್ನು ಚಾಚೂ ತಪ್ಪದೇ ಪಾಲಿಸತೊಡಗಿದನು. ಒಂದು ದಿನ ಗುರುಗಳ ಆಶ್ರಮದಲ್ಲಿದ್ದ ಸ್ತ್ರೀಯರು ಉತ್ತಂಕನನ್ನು ಕೂಗಿ ಹೇಳಿದರು :
“ಬಹಿಷ್ಠೆಯಾಗಿದ್ದ ನಿನ್ನ ಗುರುಪತ್ನಿಯು ಇಂದು ಋತುಸ್ನಾನ ಮಾಡಿರುವಳು. ನಿನ್ನ ಗುರುಗಳಾದರೋ ಪರಸ್ಥಳಕ್ಕೆ ಹೋಗಿರುವುದರಿಂದ ಗುರುಗಳ ಪತ್ನಿಯು ಋತುಕಾಲವು ನಿಷ್ಫಲವಾಗಿ ಹೋಗುವುದೆಂಬ ಚಿಂತೆಯಲ್ಲಿದ್ದಾರೆ. ಹಾಗಾಗಿ ಗುರುಗಳ ಆಜ್ಞೆಯನ್ನು ಪಡೆದಿರುವ ನೀನು ಅವರ ಋತುಕಾಲ ನಿಷ್ಫಲವಾಗದಂತೆ ವರ್ತಿಸುವುದು ಸಾಧುವಾಗಿದೆ.” ಎಂದರು.

ಅದಕ್ಕುತ್ತರವಾಗಿ ಉತ್ತಂಕನು ಹೇಳಿದನು :
“ಮಾತೆಯರೇ, ನಿಮ್ಮ ಮಾತಿನಂತೆ ಈ ಅಕಾರ್ಯವನ್ನೆಂದಿಗೂ ನಾನು ಮಾಡುವುದಿಲ್ಲ. ನಿಮ್ಮ ಮಾತಿಗೆ ಮರುಳಾಗಿ ಇಂಥಾ ಹೇಯ ಕೃತ್ಯ ನಾನು ಮಾಡುವುದಿಲ್ಲ. ನಾನು ಇಂಥಾ ಅಧರ್ಮ ಕಾರ್ಯ ಮಾಡಲು ಗುರುಗಳಿಂದ ಆಜ್ಞೆಯನ್ನು ಪಡೆದಿಲ್ಲ.” ಎನ್ನುತ್ತಾ ತನ್ನ ದೈನಂದಿನ ಕಾರ್ಯದಲ್ಲಿ ತೊಡಗಿದನು.

ತನ್ನ ಯಾತ್ರೆಯಿಂದ ಬಂದ ಉತ್ತಂಕನ ಗುರುಗಳಾದ ವೇದ, ಈ ಘಟನೆಗಳನ್ನೆಲ್ಲಾ ತಿಳಿದು ತನ್ನ ಶಿಷ್ಯನ ಧರ್ಮಾಧರ್ಮ ವಿವೇಚನೆಗೆ ತಲೆದೂಗಿ… ಆತನನ್ನು ಬಳಿ ಕರೆದು ಹೇಳಿದರು..
“ವತ್ಸಾ… ನಿನಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಿಕೊಡಲಿ..? ನೀನು ನಿನ್ನ ಆಶ್ರಮ ಧರ್ಮಾನುಸಾರ ನನ್ನ ಮನ ಮೆಚ್ಚುವಂತೆ ಶುಶ್ರೂಷೆಮಾಡಿರುವೆ. ಇದರಿಂದಾಗಿ ನಮ್ಮಿಬ್ಬರಲ್ಲಿ ಪರಸ್ಪರ ಪ್ರೀತಿಯು ಆವಿರ್ಭವಿಸಿದೆ. ನಿನ್ನ ಸಕಲಭೀಷ್ಟಗಳೂ ಈಡೇರಲಿ. ನೀನಿನ್ನು ನಿನ್ನ ಇಚ್ಛೆಯಿದ್ದ ಕಡೆ ಹೋಗಬಹುದು…

ಅದಕ್ಕುತ್ತರವಾಗಿ ಉತ್ತಂಕ ಏನು ಹೇಳಿದ….???? ಮುಂದಿನ ಭಾಗದಲ್ಲಿ ನೋಡೋಣ..

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!