ವ್ಯಾಸ ಮಹಾಭಾರತ - ಭಾಗ 60 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 60 ಆದಿಪರ್ವ (ಸಂಭವಪರ್ವ)

ಮಗನಾದ ಪೂರುವಿಗೆ ಪಟ್ಟ ಕಟ್ಟಿ ಯಯಾತಿಯು ಕಾಡಿಗೆ ತೆರಳುತ್ತಾನೆ. ಅಲ್ಲಿ ತನ್ನ ಕೈಯಲ್ಲಾದಷ್ಟು ಹೋಮಹವನಗಳನ್ನ ಮಾಡಿ ಯಜ್ಞೇಶ್ವರನನ್ನ ಸಂಪ್ರೀತಗೊಳಿಸುವ ಕಾಯಕವನ್ನು ಸ್ವಲ್ಪ ಸಮಯದವರೆಗೆ ಮಾಡುತ್ತಾನೆ. ಆತ ಕಾಡಿನಲ್ಲಿದ್ದ ಸಮಯದಲ್ಲಿ ಅತಿಥಿಗಳೇನಾದರೂ ಬಂದರೆ ತನ್ನ ಶಕ್ತ್ಯಾನುಸಾರ ಅತಿಥಿಗಳನ್ನ ಸತ್ಕರಿಸತೊಡಗುತ್ತಾನೆ. ಕಾಡಲ್ಲಿ ಸಿಗುವ ಕಂದ ಮೂಲ ಫಲಗಳನ್ನೇ ಅತಿಥಿಗಳಿಗೆ ಇತ್ತು ಉಳಿದುದನ್ನ ತಾನು ಸ್ವೀಕರಿಸುತ್ತಾನೆ. ಆತ ಮರದಲ್ಲಿದ್ದ ಹಣ್ಣುಗಳನ್ನೆಂದೂ ಕೀಳದೆ ಉದುರಿದ ಹಣ್ಣುಗಳಿಂದಲೇ ತನ್ನ ಹೊಟ್ಟೆ ತುಂಬಿಸುತ್ತಿದ್ದನು. ಮರಗಿಡಗಳು ಒಣಗಿದಾಗ ಭೂಮಿಯ ತಳಭಾಗದಲ್ಲಿ ಸಿಗುತ್ತಿದ್ದ ಗೆಡ್ಡೆ ಗೆಣಸುಗಳನ್ನೇ ಸೇವಿಸತೊಡಗಿದನು.

ಹೀಗೆ ಆತ ಒಂದು ಸಾವಿರ ವರ್ಷಗಳ ಕಠಿಣ ಜೀವನ ಕ್ರಮದ ತಪಸ್ಸನ್ನಾಚರಿಸಿದನು. ಆನಂತರ ಆಹಾರವನ್ನ ತ್ಯಜಿಸಿ ಕೇವಲ ನೀರನ್ನೇ ಕುಡಿದು ಮೂವತ್ತು ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ಆಮೇಲೆ ಮೌನವ್ರತವನ್ನಾಚರಿಸುತ್ತಾ ತನ್ನ ಚಿತ್ತವನ್ನೆಲ್ಲಾ ಭಗವಂತನೆಡೆಗೆ ಹರಿಸಿ ಜೀವನ ಸವೆಸಿದನು. ಆ ತರುವಾಯ ಕೇವಲ ವಾಯುಸೇವನೆ ಮಾಡುತ್ತಾ ಒಂದು ವರ್ಷಗಳ ಸಮಯವನ್ನ ಭಗವತ್ ಧ್ಯಾನದಲ್ಲೇ ಕಳೆದನು. ಕೊನೆಗೆ ಪಂಚಾಗ್ನಿಗಳ ನಡುವೆ.. ಅಂದರೆ ನಾಲ್ಕು ದಿಕ್ಕುಗಳಲ್ಲಿ ಅಗ್ನಿ ಪ್ರತಿಷ್ಠಾಪಿಸಿ ಅದರ ನಡುವೆ ಕುಳಿತು ಮೇಲೆ ಸೂರ್ಯನನ್ನೇ ಅಗ್ನಿಯನ್ನಾಗಿಸುವುದು.. ಹೀಗೆ ಒಂದು ವರ್ಷದ ಕಠೋರ ತಪಸ್ಸನ್ನಾಚರಿಸಿದನು. ಇದಾದ ಬಳಿಕ ಕೇವಲ ಒಂದು ಕಾಲಿನಲ್ಲಿ ನಿಂತು ಆರು ತಿಂಗಳ ಕಾಲ ಘೋರ ತಪಸ್ಸನ್ನ ಮಾಡಿದನು. ಯಯಾತಿಯ ಇಂಥಾ ಕಠಿಣ ತಪಸ್ಸಿನ ಫಲವಾಗಿ ಆತನಿಗೆ ಸ್ವರ್ಗಲೋಕ ಪ್ರಾಪ್ತಿಯಾಯಿತು.

  • No items.

ಯಯಾತಿಯ ಸ್ವರ್ಗವನ್ನ ಸೇರಿದಾಗ ಅಲ್ಲಿನ ದೇವತೆಗಳೆಲ್ಲರೂ ಆತನ ತಪಸ್ಸಿನ ಸಾಧನೆಗೆ ಆತನನ್ನ ಗೌರವಿಸಿದರು. ಆತನೂ ಅವರ ಗೌರವಾದಾರಗಳನ್ನ ಸ್ವೀಕರಿಸುತ್ತಾ ಅನೇಕ ವರ್ಷಗಳ ಕಾಲ ಅಲ್ಲಿಯೇ ವಾಸವಾಗಿದ್ದನು.

ಹೀಗಿರಲು ಒಮ್ಮೆ ಇಂದ್ರನು ಯಯಾತಿಯ ಜೊತೆ ಸಂಭಾಷಣೆಯಲ್ಲಿದ್ದಾಗ,
“ರಾಜೇಂದ್ರನೇ ನೀನು ನಿನ್ನ ಮಗನಿಗೆ ಪಟ್ಟಾಭಿಷೇಕ ಮಾಡುವ ಹೊತ್ತಿನಲ್ಲಿ ಆತನ ಬಳಿ ಏನು ಹೇಳಿದೆ …?” ಎಂದು ಕೇಳುತ್ತಾನೆ.

ಅದಕ್ಕೆ ಯಯಾತಿಯು,
“ಗಂಗಾ ಯಮುನೆಯರ ಮಧ್ಯದಲ್ಲಿರುವ ದೇಶಗಳೆಲ್ಲವೂ ನಿನ್ನದೇ ಅದರಾಚೆಗಿನ ದೇಶಗಳನ್ನ ನಿನ್ನ ಸಹೋದರರು ಆಳಲೆಂದು ಹೇಳಿ ನಾನು ಅರಣ್ಯಕ್ಕೆ ಹೊರಟು ಬಂದೆನು ದೇವೇಂದ್ರಾ. ” ಎಂದನು.

ಆಗ ಇಂದ್ರನು. “ಹೇ ರಾಜೇಂದ್ರ ನಿನ್ನ ಮಗ ರಾಜನಾಗುವ ಹೊತ್ತಿನಲ್ಲಿ ಆತನಿಗೆ ಅದೇನು ಹಿತವಚನ ಹೇಳಿದೆ….? ನನಗೂ ಕೇಳಬೇಕೆಂಬ ಆಸೆ. ಹೇಳುವೆಯಾ…?” ಎನ್ನುತ್ತಾನೆ. ಆಗ ಯಯಾತಿಯು,
ಆಗಲಿ ದೇವೇಂದ್ರ,

ಅಕ್ರೋಧನಃ ಕ್ರೋಧನೇಭ್ಯೋ ವಿಶಿಷ್ಟಸ್ತಥಾ ತಿತಿಕ್ಷುರತಿತಿಕ್ಷೋರ್ವಿಶಿಷ್ಟಃ |
ಅಮಾನುಷೇಭ್ಯೋ ಮಾನುಷಾಶ್ಚ ಪ್ರಧಾನಾ ವಿದ್ವಾಂಸ್ತಥೈವಾವಿದುಷಃ ಪ್ರಧಾನಃ ||

ಕೋಪವಿಲ್ಲದವನು ಕೋಪಿಷ್ಠನಿಗಿಂತಲೂ ಉತ್ತಮನೆನಿಸುವನು. ಹಾಗೆಯೇ ಕ್ಷಮಾಶೀಲನು ಸಹನೆಯಿಲ್ಲದವನಿಗಿಂತಲೂ ಉತ್ತಮನೆನಿಸುವನು. ಮನುಷ್ಯೇತರ ಪ್ರಾಣಿಗಳಿಗಿಂತಲೂ ಮನುಷ್ಯ ಉತ್ತಮನೆನಿಸುವನು. ಮೂರ್ಖರಿಗಿಂತಲೂ ತಿಳುವಳಿಕೆಯುಳ್ಳವನು ಉತ್ತಮನೆನಿಸುವನು.

ಅಕ್ರುಶ್ಯಮಾನೋ ನಾಕ್ರೋಶೇನ್ಮನ್ಯುರೇವ ತಿತಿಕ್ಷತಃ |
ಅಕ್ರೋಷ್ಟಾರಂ ನಿರ್ದಹತಿ ಸುಕೃತಂ ಚಾಸ್ಯ ವಿಂದತಿ ||

ಅಪರಾಧವನ್ನೆಸಗಿದವನಿಗೆ ಪ್ರತೀಕಾರ ಮಾಡದವನೇ ವಿವೇಕಿಯು. ಕೋಪದ ವಿಷಯವಾಗಿ ಹೇಳುವುದಾದರೆ ಒಬ್ಬನ ಕೋಪವು ಅವನನ್ನೇ ಸುಟ್ಟು ಹಾಕುತ್ತದೆ. ಕೋಪವು ಹೃದಯವನ್ನು ಹೊಕ್ಕೊಡನೆಯೇ ಮಾನವನು ಬಹಳ ಸಂಕಟ ಪಡುತ್ತಾನೆ. ಆದ್ದರಿಂದ ಕೋಪವು ತನಗೆ ಆಶ್ರಯ ಕೊತ್ತವನನ್ನ ಸುಟ್ಟುಹಾಕುತ್ತದೆಯೆಂಬುದು ನಿಶ್ಚಯವಾಯಿತು. ಎರಡನೆಯದಾಗಿ ಯಾರ ಮೇಲೆ ಕೋಪಗೊಳ್ಳುವನೋ ಅವನು ಕೋಪಿಷ್ಠನ ಕೋಪಕ್ಕೆ ಪ್ರತಿಯಾಗಿ ತಾನೂ ಕೋಪಿಷ್ಠನಾಗದೇ ಸೈರಣೆಯನ್ನು ತಾಳಿದರೆ ಕೋಪಿಷ್ಠನಲ್ಲಿರುವ ಸತ್ಕರ್ಮಫಲಗಳೆಲ್ಲವೂ ಸೈರಣೆಯಿಂದಿರುವವನ್ನೇ ಬಂದು ಸೇರಿಕೊಳ್ಳುತ್ತದೆ. ಧರ್ಮಸೂಕ್ಷ್ಮವು ಹೀಗಿರುವುದರಿಂದ ಎದುರಾಳಿಯು ಕೋಪದಿಂದ ಎಂತಹ ಅಪರಾಧವನ್ನೆಸಗಿದರೂ ಸೈರಣೆಯಿಂದಿರುವುದೇ ಸೂಕ್ತವಾಗಿದೆ.

ನಾರುನ್ತುದಃ ಸ್ಯಾನ್ನ ನೃಶಂಸವಾದೀ ನ ಹೀನತಃ ಪರಮಭ್ಯಾದೀತ |
ಯಯಾಸ್ಯ ವಾಚಾ ಪರ ಉದ್ವೀಜೇತ ನ ತಾಂ ವದೇದುಷತೀಂ ಪಾಪಲೋಕ್ಯಾಮ್ ||

ಕೆಟ್ಟ ಮಾತುಗಳಿಂದ ಅಥವಾ ಚುಚ್ಚು ಮಾತುಗಳಿಂದ ಮತ್ತೊಬ್ಬರ ಮನಸ್ಸನ್ನು ನೋಯಿಸಬಾರದು. ಹೀನಕೃತ್ಯಗಳಿಂದ ಶತ್ರುಗಳನ್ನ ಗೆಲ್ಲಬಾರದು. ಇತರರ ಮನಸ್ಸನ್ನು ಉದ್ವೇಗಗೊಳಿಸುವ ಪಾಪಿಷ್ಠರಾಡುವ ಮಾತುಗಳನ್ನೆಂದಿಗೂ ಆಡಬಾರದು.

ಅರುನ್ತುದುಂ ಪುರುಷಂ ತೀಕ್ಷ್ಣವಾಚಂ ವಾಕ್ಕಣ್ಟಕೈರ್ವಿತುದಂತಂ ಮನುಷ್ಯಾನ್ |
ವಿದ್ಯಾದಲಕ್ಷ್ಮೀಕತಮಂ ಜನಾನಾಂ ಮುಖೇ ನಿಬದ್ಧಾಂ ನಿಋತಿಂ ವಹಂತಂ ||

ಮುಳ್ಳಿಗಿಂತಲೂ ತೀಕ್ಷ್ಣವಾಗಿ ಪರರ ಮನವನ್ನು ನೋಯಿಸುವ ಮಾತುಗಳನ್ನು ಆಡುವವನ ಬಾಯಲ್ಲಿ ಯಾವಾಗಲೂ ರಾಕ್ಷಸನ ಆವಿರ್ಭಾವವಿರುವುದೆಂದು ಹೇಳುವರು. ರಾಕ್ಷಸನಿರುವೆಡೆ ಶ್ರೇಯಸ್ಸಿಗೆ ಅವಕಾಶವೆಲ್ಲಿಯದು. ?

ಸದ್ಭಿಃ ಪುರಸ್ತಾದಭಿಪೂಜಿತಃ ಸ್ಯಾತ್ಸದ್ಭಿಸ್ತಥಾ ಪೃಷ್ಠತೋ ರಕ್ಷಿತಃ ಸ್ಯಾತ್ |
ಸದಾಸತಾಮತಿವಾದಾಂಸ್ತಿತಿಕ್ಷೇತ್ಸತಾಂ ವೃತ್ತಂ ಚಾದದೀತಾರ್ಯವೃತ್ತಃ ||

ನಾವು ಯಾವಾಗಲೂ ಸತ್ಪುರುಷರನ್ನೂ, ಧಾರ್ಮಿಕರನ್ನೂ, ತ್ಯಾಗಿಗಳನ್ನೂ ಆದರ್ಶ ಪುರುಷರನ್ನಾಗಿ ಭಾವಿಸಬೇಕು. ನಮ್ಮ ಕ್ರಿಯೆಗಳೆಲ್ಲವನ್ನೂ ಅಂತಹ ಸತ್ಪುರುಷರ ಕಾರ್ಯಗಳಿಗೆ ಹೋಲಿಸಿ ನಮ್ಮಲ್ಲಿ ಅಳಿದುಳಿದಿರುವ ಲೋಪದೋಷಗಳನ್ನು ತಿದ್ದಿಕೊಳ್ಳಬೇಕು. ನೀಚಪುರುಷರ ದುರ್ವಚನಗಳನ್ನು ನಿರ್ಲಕ್ಷಿಸಬೇಕು.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!