ವ್ಯಾಸ ಮಹಾಭಾರತ - ಭಾಗ 63 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 63 ಆದಿಪರ್ವ (ಸಂಭವಪರ್ವ)

ಯಯಾತಿ :
ಭಯೋ ನ ಮುಹ್ಯಾಮ್ಯಷ್ಟಕಾಹಂ ಕದಾಚಿತ್ಸಂತಾಪೋ ಮೇ ಮಾನಸೋ ನಾಸ್ತಿ ಕಶ್ಚಿತ್ |
ಧಾತಾ ಯಥಾ ಮಾಂ ವಿದಧೀತ ಲೋಕೇ ಧ್ರುವಂ ತಥಾಹಂ ಭವತೀತಿ ಮತ್ವಾ ||

ಅಷ್ಟಕ, ಮಾನವನು ಸದಾ ಈ ರೀತಿಯಾಗಿ ಯೋಚಿಸಬೇಕು. ಭಯದಲ್ಲಿ ನಾನು ಭ್ರಾಂತನಾಗುವುದಿಲ್ಲ. ನನ್ನ ಮನಸ್ಸಿಗೆ ಯಾವ ಕಾಲಕ್ಕೂ ಸಂತಾಪವುಂಟಾಗುವುದಿಲ್ಲ. ಈ ಕಷ್ಟಗಳೆಲ್ಲವೂ ಬ್ರಹ್ಮನ ಆದೇಶದಂತೆ ನನ್ನನ್ನ ಆವರಿಸುತ್ತದೆ. ಹಾಗಾಗಿ ಅವನು ಹೇಗೆ ನಿರ್ದೇಶಿಸುತ್ತಾನೋ ಹಾಗೆಯೇ ನನ್ನ ಜೀವನವನ್ನ ಕಳೆಯುತ್ತೇನೆ. ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರೆ ಸುಖ ದುಃಖದ ಆತಂಕವು ದೂರವಾಗುತ್ತದೆ. ಈ ಪ್ರಪಂಚದ ಪ್ರತಿಯೊಂದು ಜೀವವೂ ಬ್ರಹ್ಮನ ಸಂಕಲ್ಪದಿಂದಲೇ ಹುಟ್ಟುತ್ತದೆ ಮತ್ತು ಅವನ ಸಂಕಲ್ಪದಂತೆಯೇ ನಾಶವಾಗುತ್ತದೆ. ಹೀಗೆ ಸುಖ ದುಃಖಗಳ ಅನಿಶ್ಚಿತತೆಯ ಅರಿವಿದ್ದೂ ನಾನೇಕೆ ಸಂತಾಪ ಪಡಲಿ..? ನನ್ನೀ ಅವಸ್ಥೆಗೆ ಕಾರಣವೇನೆಂಬುದೂ ನನಗೀಗ ಗೊತ್ತಿಲ್ಲ. ಇದಕ್ಕೆ ಪರಿಹಾರವೇನೆಂಬುದರ ಅರಿವೂ ನನಗಿಲ್ಲ. ನನ್ನ ಉದ್ಧಾರ ಅಧಃಪತನ ಎರಡೂ ಅವನ ಕೈಯಲ್ಲೇ ಇರುವುದರಿಂದ ಎಲ್ಲ ಸಂತಾಪವನ್ನೂ ಮರೆತು ಬಿಡುತ್ತೇನೆ.

ಅಷ್ಟಕ : ನಿನ್ನ ಮಾತುಗಳೆಲ್ಲವೂ ಧರ್ಮದ ಹಿನ್ನೆಲೆಯಲ್ಲಿಯೇ ಹೇಳಲ್ಪಟ್ಟಿವೆ. ಇಂತಹ ಮಾತುಗಳನ್ನಾಡುವ ನಿನ್ನ ಲೋಕಾನುಭವ ಅದ್ವಿತೀಯ. ನೀನು ಯಾವಯಾವ ಲೋಕಗಳಲ್ಲಿ ಎಷ್ಟೆಷ್ಟು ಸಮಯವಿದ್ದೆ ಎಂದು ತಿಳಿಯುವ ಆಸೆಯಿದೆ. ಹೇಳಬಹುದೇ..?

ಯಯಾತಿ : ಭೋಕದಲ್ಲಿ ಅನೇಕ ರಾಜ್ಯಗಳನ್ನು ಗೆದ್ದು ಚಕ್ರವರ್ತಿಯಾಗಿ ಅನೇಕ ಸಹಸ್ರವರ್ಷಗಳ ಜೀವಿಸಿದ್ದೆ. ಆಮೇಲೆ ತಪಸ್ಸು ಮಾಡಿ ಇಂದ್ರಲೋಕವನ್ನ ಸೇರಿದೆ. ಇಂದ್ರಲೋಕಕ್ಕೆ ಸಾವಿರಬಾಗಿಲುಗಳು. ಇಂದ್ರಲೋಕ ಶತಯೋಜನ ವಿಸ್ತೀರ್ಣವುಳ್ಳದಾಗಿತ್ತು. ಅಲ್ಲಿ ಸಹಸ್ರ ವರ್ಷಗಳ ಕಾಲ ಇದ್ದೆ. ಅಲ್ಲಿಂದ ಬ್ರಹ್ಮ ಲೋಕವನ್ನು ಸೇರಿದೆ. ಅಲ್ಲಿಯ ಜೀವನವೂ ಆನಂದದಾಯಕ. ಸಾಮಾನ್ಯ ಮಾನವರಿಗೆ ಆ ಲೋಕ ದಕ್ಕುವುದಿಲ್ಲ. ಅಲ್ಲಿ ಸಹಸ್ರವರ್ಷಗಳ ಕಾಲ ಜೀವನ ನಡೆಸಿ, ವಿಷ್ಣುಲೋಕಕ್ಕೆ ಹೋದೆ. ಅಲ್ಲಿನ ಜೀವನವೂ ಅತ್ಯಂತ ಸುಂದರವಾದದ್ದು. ನಾನು ಯಾವ ಲೋಕಕ್ಕೆ ಹೋದರೂ ದೇವತೆಗಳು ನನ್ನನ್ನ ಗೌರವಿಸುತ್ತಿದ್ದರು. ನಂದನವನದಲ್ಲಿ ಹತ್ತು ಲಕ್ಷ ವರ್ಷಗಳ ಕಾಲ ಇದ್ದೆನು. ಅಲ್ಲಿನ ಸುಖವನ್ನು ವರ್ಣಿಸುವುದು ಅಸಾಧ್ಯ. ಹೀಗೆ ಹತ್ತು ಲಕ್ಷ ವರ್ಷ ಹತ್ತು ಗಳಿಗೆಯಂತೆ ಕಳೆದು ಹೋಯಿತು. ಕೂಡಿಟ್ಟ ಸಂಪಾದನೆ ಮೆಲ್ಲ ಮೆಲ್ಲನೆ ಕರಗುವಂತೆ ನಾನು ಸಂಪಾದಿಸಿದ್ದ ಪುಣ್ಯವೂ ಕರಗಿಬಿಟ್ಟಿತು. ಅದೇ ಸಮಯಕ್ಕೆ ಸರಿಯಾಗಿ ನನ್ನ ಅಹಂಕಾರವು ನನ್ನನ್ನ ಸ್ವರ್ಗದಿಂದ ಹೊರಬರುವಂತೆ ಮಾಡಿತು. ಆದರೆ ಕೊನೆಯ ಕ್ಷಣದಲ್ಲಿ ಇಂದ್ರನನ್ನ ಬೇಡಿಕೊಂಡ ಪರಿಣಾಮವಾಗಿ ಸತ್ಪುರುಷರ ನಡುವೆ ಬೀಳುವಂತಾಯಿತು.

ಅಷ್ಟಕ ಯಯಾತಿಯರ ಸಂವಾದ

ಅಷ್ಟಕ :
ಯದಾವಸೋ ನಂದನೇ ಕಾಮರೂಪೀ ಸಂವತ್ಸರಾಣಾಮಯುತಂ ಶತಾನಾಮ್ |
ಕಿಂ ಕಾರಣಂ ಕಾರ್ತಯುಗಪ್ರಧಾನ ಹಿತ್ವಾ ಚ ತ್ವಂ ವಸುಧಾಮನ್ವಪದ್ಯಃ ||

ಕೃತಯುಗದ ರಾಜರುಗಳಲ್ಲಿ ಪ್ರಧಾನನಾದವನೇ, ಇಚ್ಛಾನುಸಾರವಾಗಿ ಮನಬಂದಂತೆ ರೂಪಗಳನ್ನು ಪಡೆಯುವ ಸಾಮರ್ಥ್ಯವಿದ್ದ ನೀನು ಲಕ್ಷ ವರ್ಷಗಳ ಕಾಲ ನಂದನವನದಲ್ಲಿ ಸುಖದಿಂದ ಕಾಲಕಳೆಯುತ್ತಿದ್ದೆಯಲ್ಲವೇ…? ಯಾವ ಕಾರಣದಿಂದ ಸುಖಮಯವಾದ ನಂದನವನವನ್ನು ಬಿಟ್ಟು ಬರಬೇಕಾಯಿತು…? ನೀನು ಭೂಮಿಯ ಮೇಲೆ ಬೀಳಲು ಕಾರಣವೇನು..? ಎಲ್ಲ ವಿಷಯಗಳನ್ನೂ ವಿವರಿಸಿ ಹೇಳು..? ಕೇಳಲು ನಾವು ಉತ್ಸುಕರಾಗಿದ್ದೇವೆ.

ಯಯಾತಿ : ರಾಜರ್ಷಿಗಳೇ ಈಗಾಗಲೇ ನಾನು ಎಲ್ಲವನ್ನೂ ಹೇಳಿದ್ದೇನಲ್ಲವೇ…?

ಜ್ಞಾತಿಃ ಸುಹೃತ್ಸ್ವಜನೋ ವಾ ಯಥೇಹ ಕ್ಷೀಣೇ ವಿತ್ತೇ ತ್ಯಜತೇ ಮಾನವೈರ್ಹಿ |
ತಥಾ ತತ್ರ ಕ್ಷೀಣಪುಣ್ಯಂ ಮನುಷ್ಯಂ ತ್ಯಜಂತಿ ಸದ್ಯಃ ಸೇಶ್ವರಾ ದೇವಸಂಘಾಃ ||

ಮಾನವರು ಕ್ಷೀಣವಿತ್ತರಾದ( ಐಶ್ವರ್ಯ ಕಳೆದುಕೊಂಡ) ಅಣ್ಣತಮ್ಮಂದಿರನ್ನೂ ಸುಹೃದಯರನ್ನೂ ಪತ್ನೀ ಪುತ್ರರನ್ನೂ ಪರಿತ್ಯಜಿಸುವಂತೆ( ಔದಾಸೀನ್ಯದಿಂದ ನೋಡುವಂತೆ) ಇಂದ್ರಪ್ರಮುಖರಾದ ದೇವತೆಗಳು ಕ್ಷೀಣಪುಣ್ಯನಾದವನನ್ನ ಒಡನೆಯೇ ಪುಣ್ಯಲೋಕದಿಂದ ಕೆಳಕ್ಕೆ ತಳ್ಳಿ ಬಿಡುತ್ತಾರೆ.

ಅಷ್ಟಕ :

ತಸ್ಮಿನ್ಕಥಂ ಕ್ಷೀಣಪುಣ್ಯಾ ಭವಂತಿ ಸಮ್ಮುಹ್ಯತೇ ಮೇತ್ರ ಮನೋತಿಮಾತ್ರಮ್ |
ಕಿಂವಾ ವಿಶಿಷ್ಟಾಃ ಕಸ್ಯ ಧಾಮೋಪಯಾಂತಿ ತದ್ವೈ ಬ್ರೂಹಿ ಕ್ಷೇತ್ರವಿತ್ತ್ವಂ ಮತೋ ಮೇ ||

ಮಹಾನುಭಾವನೇ ನೀನಾಡುವ ಮಾತುಗಳಿಂದ ನಾನು ನಿನ್ನನ್ನ ಆತ್ಮಜ್ಞಾನಿಯೆಂದೇ ತಿಳಿದಿರುತ್ತೇನೆ. ನೀನು ಹೇಳಿದುದು ನನಗಿನ್ನೂ ಸರಿಯಾಗಿ ಅರ್ಥವಾಗಿಲ್ಲ. ನೀನು ಹೇಳುತ್ತಿರುವ ವಿಷಯದಲ್ಲಿ ನನ್ನ ಮನಸ್ಸು ಬಹುವಾಗಿ ಮೋಹಗೊಂಡಿದೆ. ದೇವಲೋಕದಲ್ಲಿ ಮಾನವನ ಪುಣ್ಯವು ಹೇಗೆ ಕ್ಷೀಣಿಸುತ್ತದೆ..? ವಿಶಿಷ್ಟರಾದವರು ಯಾವ ಕರ್ಮವನ್ನು ಮಾಡುತ್ತಾರೆ…? ಯಾವ ಪುಣ್ಯಲೋಕಗಳನ್ನು ಅವರು ಹೊಂದುತ್ತಾರೆ..?

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!