ವ್ಯಾಸ ಮಹಾಭಾರತ – ಭಾಗ 64 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 64 ಆದಿಪರ್ವ (ಸಂಭವಪರ್ವ)

ಯಯಾತಿ :

ಇಮಂ ಭೌಮಂ ನರಕಂ ತೇ ಪತಂತಿ ಲಾಲಪ್ಯಮಾನಾ ನರದೇವ ಸರ್ವೇ |
ತೇ ಕಙ್ಕಗೋಮಾಯುಬಲಾಶನಾರ್ಥೇ ಕ್ಷೀಣಾ ವಿವೃದ್ಧಿಂ ಬಹುದಾ ವ್ರಜಂತಿ ||

ನರದೇವನೇ ಅಹಂಭಾವವಿರುವವರೆಗೆ ಪುನರಾವೃತ್ತಿ ತಪ್ಪಿದ್ದಲ್ಲ. ‘ ನಾನು ಸಂಪಾದಿಸುತ್ತೇನೆ, ನಾನು ಯಾಗ ಯಜ್ಞಯಾಗಾದಿಗಳನ್ನು ಮಾಡಿ ಪುಣ್ಯ ಗಳಿಸುತ್ತೇನೆ. ‘ ಎಂಬ ಭಾವನೆಯಿಂದ ಕೆಲಸ ಮಾಡಿದರೆ ಪುಣ್ಯವು ಹಣದಂತೆ ವ್ಯಯಿಸಿಹೋಗುತ್ತದೆ. ಈ ಪ್ರಪಂಚದಲ್ಲಿ ಯಾರು ‘ ನಾನು ‘ ಎಂಬ ಅಹಂಭಾವದಿಂದ ಪುಣ್ಯಕಾರ್ಯವನ್ನಾಗಲೀ ಪಾಪಕಾರ್ಯವನ್ನಾಗಲೀ ಮಾಡುತ್ತಿರುತ್ತಾರೆಯೋ ಅವರಿಗೆ ಪುನರಾವೃತ್ತಿಯೆಂಬುದು ತಪ್ಪಿದ್ದಲ್ಲ. ಪುಣ್ಯ ಸಂಪಾದಿಸಿದವರು ಕ್ಷೀಣಪುಣ್ಯರಾಗುವವರೆಗೆ ಪುಣ್ಯಲೋಕದಲ್ಲಿದ್ದು ಮತ್ತೆ ಭೌಮ ಎಂಬ ಈ ನರಕಕ್ಕೆ ಬರುತ್ತಾರೆ. ಹಲವಾರು ದೇಹಗಳನ್ನ ಧಾರಣೆ ಮಾಡುತ್ತಾರೆ.

ತಸ್ಮಾದೇತದ್ವರ್ಜನೀಯಂ ನರೇಂದ್ರ ದುಷ್ಟಂ ಲೋಕೇ ಗರ್ಹಣೀಯಂ ಚ ಕರ್ಮ ||

ಆದುದರಿಂದ ನರೇಂದ್ರನೇ, ಈ ಭೂಮಿಯ ಮೇಲಿರುವ ಹೊತ್ತಲ್ಲಿ ದುಷ್ಟವಾದ, ನಿಂದ್ಯವಾದ ಕೆಲಸಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು. ನಾನು ಎಂಬ ಅಹಂ ಭಾವವನ್ನ ಬಿಟ್ಟು ಕರ್ಮ ಮಾಡಬೇಕು. ಹೀಗೆ ನಿನಗೆ ಪುನರಾವೃತ್ತಿ ಹೇಗಾಗುತ್ತದೆ ಅನ್ನುವುದನ್ನು ಹೇಳಿದೆ. ಇನ್ನೇನಾದರೂ ಕೇಳುವುದಿದ್ದರೆ ಕೇಳು. ತಿಳಿದುದನ್ನ ಹೇಳುತ್ತೇನೆ.

ಅಷ್ಟಕ :

ಯದಾ ತು ತಾನ್ವಿತುದಂತೇ ವಯಾಂಸಿ ತಥಾ ಗೃಧ್ರಾಃ ಶಿತಿಕಂಠಾಃ ಪತಂಗಾಃ |
ಕಥಂ ಭವಂತಿ ಕಥಮಾಭವಂತಿ ನ ಭೌಮಮನ್ಯಂ ನರಕಂ ಶೃಣೋಮಿ ||

ಮಹಾರಾಜ, ಮೊದಲು ವಯಸ್ಸು ನಮ್ಮ ಶರೀರವನ್ನ ತಿಂದು ಜೀರ್ಣಿಸಿಬಿಡುತ್ತದೆ. ಆಮೇಲೆ ವಯಸ್ಸು ತಿಂದುಳಿಸಿದ ಜೀರ್ಣವಾದ ಪ್ರಾಣರಹಿತವಾದ ಈ ದೇಹವನ್ನು ರಣಹದ್ದುಗಳೋ ಕ್ರಮಿಕೀಟಗಳೋ ತಿಂದು ಬಿಡುತ್ತವೆ. ಆಮೇಲೆ ಅತ ನಾಮಾವಶೇಷವಾಗುತ್ತಾನೆ. ಕೇವಲ ಆತನ ಹೆಸರು ಅಲ್ಪಕಾಲದವರೆಗೆ ಪ್ರಚಲಿತದಲ್ಲಿರುತ್ತದೆ. ಭೌತಿಕವಾಗಿ ಯಾವ ಅವನ ಯಾವ ಕುರುಹೂ ಉಳಿಯುವುದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಅವಸಾನಾನಂತರದಲ್ಲಿ ಆ ಮಾನವನು ಎಲ್ಲಿ ಹೇಗಿರುತ್ತಾನೆ..? ಮತ್ತೆ ಹೇಗೆ ಬರುತ್ತಾನೆ..? ಭೂಮಿಯ ಮೇಲೆ ಭೌಮ ಅನ್ನುವ ನರಕವೂ ಇದೆಯೇ..?

ಯಯಾತಿ:

ಊರ್ಧ್ವಂ ದೇಹಾತ್ಕರ್ಮಣಾ ಜೃಮ್ಭಮಾಣಾದ್ವಕ್ತಂ ಪೃಥಿವ್ಯಾಮನುಸಂಚರಂತಿ |
ಇಮಂ ಭೌಮಂ ನರಕಂ ತೇ ಪತಂತಿ ನಾವೇಕ್ಷಂತೇ ವರ್ಷಪೂಗಾನನೇಕಾನ್ ||

ಶರೀರದ ವಿನಾಶದಿಂದ ಜೀವನ ವಿನಾಶವಾಗಲಾರದು. ಹರಿದು ಹೋದ ಅಂಗಿಯನ್ನು ಕಳಚಿಹಾಕುವಂತೆ ಜೀರ್ಣವಾದ ಈ ಶರೀರವನ್ನು ಕಾಲನಿಯಮಕ್ಕೆ ಅನುಸಾರವಾಗಿ ಜೀವನು ತೊರೆದು ಹೋಗುತ್ತಾನೆ. ಅಂಗಿಯ ವಿನಾಶದಿಂದ ಹೇಗೆ ಅಂಗಿ ತೊಟ್ಟುಕೊಂಡವನು ನಾಶವಾಗುವುದಿಲ್ಲವೋ ಹಾಗೆಯೇ ಜೀರ್ಣಶರೀರದ ವಿನಾಶದಿಂದ ಶರೀರದಲ್ಲಿರುವ ಜೀವನು ನಾಶಹೊಂದುವುದಿಲ್ಲ. ಪ್ರಪಂಚದಲ್ಲಿ ತಾನು ಮಾಡಿದ ಕರ್ಮ ಫಲದಿಂದ ಅನುಲಿಪ್ತನಾದ ಆ ಜೀವನು ಅಶರೀರನಾದರೂ ಭೂಮಿಯನ್ನು ಬಿಟ್ಟು ಹೋಗುವುದಿಲ್ಲ. ಭೂಮಿಯ ಮೇಲೆಯೇ ಮತ್ತೂ ವಿಶೇಷವಾಗಿ ತಾನು ಹುಟ್ಟಿ ಬೆಳೆದು, ಜೀವನ ನಡೆಸಿದ ಸ್ಥಳದಲ್ಲಿಯೇ ಸಂಚರಿಸುತ್ತಿರುತ್ತಾನೆ.
( ನಿಯಮಿತಕಾಲದಲ್ಲಿ ಅವನು ಪುನಃ ತನ್ನ ಕರ್ಮಫಲಾನುಸಾರವಾಗಿ ಪ್ರಾಣಿಗಳ ಗರ್ಭದಲ್ಲಿ ಬೀಳುತ್ತಾನೆ. ಇದು ಅವನ ಇಚ್ಛೆಗೆ ಸೇರಿದ್ದಾಗಿರುವುದಿಲ್ಲ. ಅವನ ಕರ್ಮಫಲವು ಅವನನ್ನು ಯಥಾಯೋಗ್ಯವಾದ ಯೋನಿಗಳಲ್ಲಿ ಬೀಳಿಸುತ್ತದೆ. ಸೂಕ್ಷ್ಮರೂಪದಲ್ಲಿರುವಾಗ ತಾನಾರು…? ತಾನೆಲ್ಲಿದ್ದೇನೆ…? ಎಂಬುದೆಲ್ಲವನ್ನೂ ತಿಳಿದಿರುತ್ತಾನೆ. ಸೂಕ್ಷ್ಮರೂಪದಿಂದ ಶಿಶುರೂಪನಾಗಿ ತಾಯಿಯ ಗರ್ಭದಿಂದ ಭೌಮನರಕಕ್ಕೆ ಬಿದ್ದೊಡನೆ ಅವನಿಗೆ ಪೂರ್ವಜನ್ಮದ ವಿಸ್ಮರಣೆಯಾಗುತ್ತದೆ. ತಾನು ಹಿಂದೆ ಅನೇಕಾನೇಕ ಜನ್ಮಗಳನ್ನು ತಾಳಿ ಮಾಡಿದ್ದ ಪಾಪ ಪುಣ್ಯಕರ್ಮಗಳೆಲ್ಲವನ್ನೂ ಸಂಪೂರ್ಣವಾಗಿ ಮರೆತುಬಿಡುತ್ತಾನೆ. ಪುನಃ ನಾನು ನನ್ನದು ನಮ್ಮವರು ಎನ್ನುವ ಅಭಿಮಾನದಿಂದಲೇ ಜೀವನವನ್ನು ಆರಂಭಿಸುತ್ತಾನೆ. )

ಷಷ್ಟಿಂ ಸಹಸ್ರಾಣಿ ಪತಂತಿ ವ್ಯೋಮ್ನಿ ತಥಾ ಅಶೀತಿಂ ಪರಿವತ್ಸರಾಣಿ |
ತಾನ್ವೈ ತುದಂತಿ ಪತತಃ ಪ್ರಪಾತಂ ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ ||

ಅವರವರ ಕರ್ಮಾನುಸಾರವಾಗಿ ಭೌತಿಕ ಶರೀರ ತೊರೆದು ಜೀವರು ಅರವತ್ತು ಸಾವಿರ ವರುಷಗಳ ಕಾಲ ಅಥವಾ ಎಂಬತ್ತು ಸಾವಿರ ವರ್ಷಗಳ ಕಾಲ ಸ್ವರ್ಗಾದಿ ಲೋಕಗಳಲ್ಲಿರಬಹುದು. ಪುಣ್ಯಫಲವು ಮುಗಿಯಿತೆಂದರೆ ಅವರು ಭೌಮವೆಂಬ ನರಕದಲ್ಲಿ ಬೀಳುತ್ತಾರೆ, ಅಂದರೆ ಭೂಮಿಯಲ್ಲಿ ಜನ್ಮ ತಾಳುತ್ತಾರೆ. ಅಂತ್ಯವೆಂಬುದೇ ಇಲ್ಲದಿರುವ ಭೌಮನರಕದಲ್ಲಿ ಬೀಳುತ್ತಿರುವಾಗಲೇ ಆ ನರಕದಲ್ಲಿರುವ ಭಯಂಕರವಾದ ತೀಕ್ಷ್ಣವಾದ ಕೋರೆದಾಡೆಗಳನ್ನು ಹೊಂದಿರುವ ರಾಕ್ಷಸರು ಜೀವನನ್ನು ಪೀಡಿಸಲು ಪ್ರಾರಂಭಿಸುತ್ತಾರೆ. ( ಇಲ್ಲಿ ರಾಕ್ಷಸರೆಂದರೆ ಸಮಸ್ತ ಬಂಧುಗಳು ಎಂದು ವ್ಯಾಖ್ಯಾನಕಾರರು ಅಬಿಪ್ರಾಯ ಪಡುತ್ತಾರೆ.)

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...