ವ್ಯಾಸ ಮಹಾಭಾರತ – ಭಾಗ 65 ಆದಿಪರ್ವ (ಸಂಭವಪರ್ವ) – News Mirchi
We are updating the website...

ವ್ಯಾಸ ಮಹಾಭಾರತ – ಭಾಗ 65 ಆದಿಪರ್ವ (ಸಂಭವಪರ್ವ)

ಅಷ್ಟಕ :

ಯದೇನಸಸ್ತೇ ಪತತಸ್ತುದಂತಿ ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ |
ಕಥಂ ಭವಂತಿ ಕಥಮಾಭವಂತಿ ಕಥಂಭೂತಾ ಗರ್ಭಭೂತಾ ಭವಂತಿ ||

ಜೀವರು ಮಾಡಿದ ಯಾವ ಪಾಪದ ಕಾರಣದಿಂದಾಗಿ ಮೇಲಿನ ಲೋಕದಿಂದ ಕೆಳಗೆ ಬೀಳುವ ಇವರನ್ನು ಭಯಂಕರವಾದ ತೀಕ್ಷ್ಣವಾದ ಕೋರೆದಾಡೆಗಳನ್ನು ಧರಿಸಿರುವ ಭೌಮರಾಕ್ಷಸರು ಹಿಂಸಿಸುತ್ತಾರೆ..? ಅಷ್ಟು ಮೇಲಿನಿಂದ ಜೀವರು ಕೆಳಕ್ಕೆ ಬಿದ್ದರೆ ನಾಶವಾಗುವುದಿಲ್ಲವೇ.? ಈ ಜೀವರಿಗೆ ಇಂದ್ರಿಯಗಳ ಸಂಬಂಧವು ಹೇಗೆ ಕಲ್ಪಿತವಾಗುತ್ತದೆ? ಈ ಜೀವರು ಗರ್ಭಕೋಶವನ್ನು ಪುನಃ ಹೇಗೆ ಸೇರಿಕೊಳ್ಳುತ್ತಾರೆ? ”

ಯಯಾತಿ :
ಅಸ್ರಂ ರೇತಃ ಪುಷ್ಪಫಲಾನುಪೃಕ್ತಮನ್ವೇತಿ ತದ್ವೈ ಪುರುಷೇಣ ಸೃಷ್ಟಮ್ |
ಸ ವೈ ತಸ್ಯಾ ರಜ ಆಪದ್ಯತೇ ವೈ ಸ ಗರ್ಭಭೂತಃ ಸಮುಪೈತಿ ತತ್ರ ||
ವನಸ್ಪತೀನೋಷಧೀಶ್ಚಾವಿಶಂತಿ ಆಪೋ ವಾಯುಂ ಪೃಥಿವೀಂ ಚಾನ್ತರಿಕ್ಷಮ್ |
ಚತುಷ್ಪದಂ ದ್ವಿಪದಂ ಚಾಪಿ ಸರ್ವಮೇವಮ್ಭೂತಾ ಗರ್ಭಭೂತಾ ಭವಂತಿ ||

ಮೇಲಿನಿಂದ ಕೆಳಕ್ಕೆ ಬೀಳುವಾಗ ಜೀವನು ಸೂಕ್ಷ್ಮರೂಪದಲ್ಲಿದ್ದು ಜಲರೂಪನಾಗಿರುವನು. ನೀರಿನ ರೂಪವಾಗಿರಲು ಕಾರಣವೇನೆಂದರೆ ಕೆಳಗೆ ಬೀಳುವ ಜೀವನು ದುಃಖಿಸುತ್ತಾನಲ್ಲವೇ..? ಆದುದರಿಂದ ದುಃಖಸೂಚಕವಾದ ಅಶ್ರುವಾಗಿ ಜೀವನು ಉಳಿಯುವನು. ನೀರು ಓಷಧಿಲತೆಗಳ ಮೇಲೆ ಬಿದ್ದಾಗ ಓಷಧಿಲತೆಗಳು ಅದನ್ನು ಹೀರಿಕೊಳ್ಳುವವು. ಮಾನವನಾಗಲೀ ಪಶು ಪಕ್ಷಿಗಳಾಗಲೀ ಆ ಓಷಧಿಲತೆಗಳನ್ನು ಸೇವಿಸುವುದರಿಂದ ವೀರ್ಯವು ಉತ್ಪನ್ನವಾಗುವುದು. ಈ ವೀರ್ಯವು ಋತುಕಾಲದಲ್ಲಿ ಸ್ರೀಯರಲ್ಲಿ ಸೇರಿದರೆ ಗರ್ಭವು ಉತ್ಪನ್ನವಾಗುವುದು. ಆದರೆ ಜೀವನಿಗೆ ಇಷ್ಟೊಂದು ಅವಸ್ಥಾಭೇದಗಳಿದ್ದರೂ ಅವನ ಕರ್ಮಗಳು ಅವನನ್ನು ಅಂಟಿಕೊಂಡು ಬರುತ್ತದೆಯೇ ಎಂಬ ಸಂಶಯವು ಮೂಡುತ್ತದೆಯಲ್ಲವೇ…? ಯಾವುದಾದರೂ ಒಂದು ಬೀಜವನ್ನು ತೆಗೆದುಕೊಳ್ಳೋಣ ಅದರಲ್ಲಿ ವಾಸನೆಯೂ ಇರುವುದಿಲ್ಲ. ಆದ್ರೆ ಭೂಮಿಯಲ್ಲಿ ಹಾಕಿದ ನಂತರ ಗಿಡವಾಗಿ ಅದು ಬೆಳೆಯುತ್ತದೆ. ಬೀಜದಲ್ಲಿದ್ದ ಸೂಕ್ಷ್ಮರೂಪದ ವಾಸನೆ ಹೊರಹೊಮ್ಮುತ್ತದೆ. ಆ ವಾಸನೆ ಕೇವಲ ಭೂಮಿಯಿಂದಾಗಿ ಬಂದಿದ್ದು ಎಂದು ಹೇಳಲಾಗುವುದಿಲ್ಲ. ಹಾಗಿದ್ದಲ್ಲಿ ಒಂದು ಹೂವು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯ ಸುಗಂಧ ಪಸರಿಸಬೇಕಿತ್ತು… ಹಾಗಿರುವುದಿಲ್ಲವಾದ ಕಾರಣ ಅದು ಬೀಜದಲ್ಲಿರುವ ಸುಗಂಧವಾಗಿರುತ್ತದೆ…. ಇದೇ ರೀತಿ ಕರ್ಮಫಲಗಳು ಜೀವನನ್ನು ಅಂಟಿಕೊಂಡೇ ಇರುತ್ತದೆ. ಅವನ ಕರ್ಮಾನುಸಾರವಾಗಿ ಮಾನವರಲ್ಲಿ, ಚತುಷ್ಪಾದಿಯಲ್ಲಿ, ದ್ವಿಪಾದಿಯಲ್ಲಿ ಷಟ್ಪಾದಿಯಲ್ಲಿ ಅಷ್ಟಪಾದಿಯಲ್ಲಿ ಅನೇಕಪಾದಿಯಲ್ಲಿ ಮುಂತಾದ ಯೋನಿಗಳಲ್ಲಿ ಹುಟ್ಟಬೇಕೆಂಬ ನಿಯಮ ಇರುತ್ತದೆ. ಅದರಂತೆ ಪ್ರಪಂಚದ ಸಕಲ ಪ್ರಾಣಿಗಳೂ ಹುಟ್ಟಿ ಸಾಯುತ್ತದೆ.

ಅಷ್ಟಕ :

ಅನ್ಯದ್ವಪುರ್ವಿದಧಾತೀಹ ಗರ್ಭಮುತಾಹೋಸ್ವಿತ್ಸ್ವೇನ ಕಾಯೇನ ಯಾತಿ |
ಆಪದ್ಯಮಾನೋ ನರಯೋನಿಮೇತಾಮಾಚಕ್ಷ್ವ ಮೇ ಸಂಶಯಾತ್ಪ್ರಬ್ರಮೀಮಿ ||

ಶರೀರಾಭೇದಾಭಿಸಮುಚ್ಛ್ರಯಂ ಚ ಚಕ್ಷುಃಶ್ರೋತ್ರೇ ಲಭತೇ ಕೇನ ಸಂಜ್ಞಾಮ್ |
ಏತತ್ತತ್ತ್ವಂ ಸರ್ವಮಾಚಕ್ಷ್ವ ಪೃಷ್ಟಃ ಕ್ಷೇತ್ರಜ್ಞಂ ತ್ವಾಂ ತಾತ ಮನ್ಯಾಮ ಸರ್ವೇ ||

ತಂದೆಯೇ ನಾವೆಲ್ಲರೂ ನಿನ್ನನ್ನು ಕ್ಷೇತ್ರಜ್ಞನೆಂದೇ ಭಾವಿಸಿರುವೆವು. ನೀವು ಹೇಳುತ್ತಾ ಹೋದಂತೆಲ್ಲಾ ಹೊಸ ಹೊಸ ಸಂಶಯಗಳು ಮೂಡುತ್ತಿದೆ. ಸೂಕ್ಷ್ಮರೂಪದಲ್ಲಿರುವ ಜೀವನು ಪುನಃ ಗರ್ಭ ಪ್ರವೇಶಿಸಿ ಹೊರ ಬರುವಾಗ ತನ್ನ ಮೊದಲಿನ ರೂಪವನ್ನೇ ಪಡೆಯುತ್ತಾನೋ ಅಥವಾ ಬೇರೆಯೇ ವಿಧವಾದ ರೂಪವನ್ನ ಪಡೆಯುತ್ತಾನೋ. ರೇತಸ್ಸಿನಲ್ಲಿ ಲುಪ್ತವಾಗಿರುವ ಅಂಗಾಂಗಗಳು ಹೇಗೆ ಸ್ಪಷ್ಟಗೊಳ್ಳುವವು. ಮತ್ತು ಕಿವಿ ಕಣ್ಣುಗಳೇ ಮೊದಲಾದ ಇಂದ್ರಿಯಗಳಿಗೆ ಗಂಧರಸಗ್ರಹಣ ಶಕ್ತಿ, ಶ್ರವಣ ಶಕ್ತಿ, ದರ್ಶನ ಶಕ್ತಿಗಳು,ಸ್ಪರ್ಶನ ಶಕ್ತಿಗಳು ಹೇಗೆ ಉಂಟಾಗುವುದು…?

ಯಯಾತಿ :

ವಾಯುಃ ಸಮುತ್ಕರ್ಷತಿ ಗರ್ಭಯೋನಿಮೃತೌ ರೇತಃ ಪುಷ್ಪರಸಾನುಪೃಕ್ತಮ್ |
ಸ ತತ್ರ ತನ್ಮಾತ್ರಕೃತಾಧಿಕಾರಃ ಕ್ರಮೇಣ ಸಂವರ್ಧಯತೀಹ ಗರ್ಭಮ್ ||

ಸ ಜಾಯಮಾನೋ ವಿಗೃಹೀತಮಾತ್ರಃ ಸಂಜ್ಞಾಮಧಿಷ್ಠಾಯ ತತೋ ಮನುಷ್ಯಃ |
ಸ ಶ್ರೋತ್ರಾಭ್ಯಾಂ ವೇದಯತೀಹ ಶಬ್ದಂ ಸ ವೈ ರೂಪಂ ಪಶ್ಯತಿ ಚಕ್ಷುಷಾ ಚ ||

ಪ್ರಾಣೇನ ಗಂಧಂ ಜಿಹ್ವಾಯಧೋ ರಸಂ ಚ ತ್ವಚಾ ಸ್ಪರ್ಶಂ ಮನಸಾ ವೇದ ಭಾವಮ್ |
ಇತ್ಯಷ್ಟಕೇಹೋಪಹಿತಂ ಹಿ ವಿದ್ಧಿ ಮಹಾತ್ಮನಾಂ ಪ್ರಾಣಭೃತಾಂ ಶರೀರೇ ||

ಪುಷ್ಪರಸದಿಂದ ಕೂಡಿರುವ ರೇತಸ್ಸನ್ನು ವಾಯುವು ಋತು ಸಮಯದಲ್ಲಿ ಸ್ತ್ರೀಯರ ಗರ್ಭದೊಳಕ್ಕೆ ಸೆಳೆಯುತ್ತದೆ. ಆ ನಂತರದಲ್ಲಿ ಅದೇ ವಾಯುವು ಗರ್ಭಗತವಾದ ಆ ರೇತಸ್ಸನ್ನು ಅನುಕ್ರಮವಾಗಿ ವೃದ್ಧಿಪಡಿಸುತ್ತದೆ. ಜೀವನ ಸೂಕ್ಷ್ಮರೂಪವಾದ ಈ ರೇತಸ್ಸು ಪ್ರಾಣಿ ಗರ್ಭವನ್ನ ಸೇರುವುದೋ ಮಾನವನ ಗರ್ಭವನ್ನ ಸೇರುವುದೋ ಅಥವಾ ಇನ್ನಿತರ ಗರ್ಭವೋ ಅನ್ನುವುದು ಆತನ ಹಿಂದಿನ ಕರ್ಮಫಲ ನಿರ್ಧರಿಸುತ್ತದೆ.

( ಸೂಕ್ಷ್ಮರೂಪವಾದ ರೇತಸ್ಸು ಗರ್ಭದಲ್ಲಿರುವಾಗ ಅನುಕ್ರಮವಾಗಿ ಯಾವ ಯಾವ ವಿಕಾರಗಳನ್ನು ಹೊಂದುವುದೆಂಬ ವಿಷಯವಾಗಿ ನಿರುಕ್ತವನ್ನು ತಿಳಿದವರು ಹೀಗೆ ಹೇಳುತ್ತಾರೆ )

ಶುಕ್ರಾತಿರೇಕೇ ಪುಮಾನ್ಭವತಿ | ಶೋಣಿತಾತಿರೇಕೇ ಸ್ತ್ರೀ ಭವತಿ | ದ್ವಾಭ್ಯಾಂ ಸಮೇನ ನಪುಂಸಕೋ ಭವತಿ | ಶುಕ್ರಭಿನ್ನೇನ ಯಮೋ ಭವತಿ | ಏಕರಾತ್ರೋಷಿತಂ ಕಲಲಂ ಭವತಿ | ಪಂಚರಾತ್ರಾದ್ಬುದ್ಬುದಾಃ | ಸಪ್ತರಾತ್ರಾತ್ಪೇಶೀ | ದ್ವಿಸಪ್ತರಾತ್ರಾದರ್ಬುದಃ | ಪಂಚವಿಂಶತಿರಾತ್ರಃ ಸ್ವಸ್ಥಿತೋ ಘನೋ ಭವತಿ |
ಮಾಸಮಾತ್ರಾತ್ಕಠಿನೋ ಭವತಿ | ದ್ವಿಮಾಸಾಭ್ಯಂತರೇ ಶಿರಃ ಸಂಪದ್ಯತೇ | ಮಾಸತ್ರಯೇಣ ಗ್ರೀವಾವ್ಯಾದೇಶಃ | ಮಾಸಚತುಷ್ಟಯೇನ ತ್ವಗ್ವ್ಯಾದೇಶಃ | ಪಂಚಮ ಮಾಸೇ ನಖರೋಮವ್ಯಾದೇಶಃ | ಷಷ್ಠೇ ಮುಖನಾಸಿಕಾಕ್ಷಿಶೋತ್ರಂ ಚ ಸಂಭವತಿ | ಸಪ್ತಮೇ ನವಮೇ ಚಲನಸಮರ್ಥೋ ಭವತಿ | ಅಷ್ಟಮೇ ಬುದ್ಧ್ಯಾಧ್ಯವಸತಿ | ನವಮೇ ಸರ್ವಾಂಗಸಂಪೂರ್ಣೋ ಭವತಿ |

ಗರ್ಭದಲ್ಲಿ ಸೇರುವ ಶುಕ್ರ-ಶೋಣಿತಗಳ ಸಂಯೋಜನೆಯಲ್ಲಿ ವೀರ್ಯವು ಹೆಚ್ಚಾಗಿದ್ದರೆ ಗಂಡು ಮಗುವು ಹುಟ್ಟುತ್ತದೆ. ಶೋಣಿತವು ಹೆಚ್ಚಾಗಿದ್ದರೆ ಹೆಣ್ಣು ಮಗುವಾಗುತ್ತದೆ. ಎರಡೂ ಸಮವಾಗಿದ್ದರೆ ನಪುಂಸಕ ಶಿಶುವು ಹುಟ್ಟುತ್ತದೆ. ಶುಕ್ರವು ಒಡೆದಿದ್ದರೆ ಅವಳೀ ಮಕ್ಕಳು ಹುಟ್ಟುತ್ತಾರೆ.

ಗರ್ಭದಲ್ಲಿ ಸೇರಿದ ರೇತಸ್ಸು ಮೊದಲನೆಯ ರಾತ್ರಿಯು ಕಳೆದ ನಂತರ ಕಲಲ ರೂಪವಾಗಿರುತ್ತದೆ.
ಐದು ರಾತ್ರಿಗಳು ಕಳೆದರೆ ನೊರೆಯ ರೂಪವಾಗಿರುತ್ತದೆ.
ಏಳುರಾತ್ರಿಗಳು ಕಳೆದ ನಂತರ ಪೇಶಿ ( ಮಾಂಸದ ಮುದ್ದೆ ) ರೂಪಕ್ಕೆ ಬರುತ್ತದೆ.
ಹದಿನಾಲ್ಕು ರಾತ್ರಿಗಳು ಕಳೆದ ನಂತರ ಅರ್ಭುದರೂಪಕ್ಕೆ ಬರುತ್ತದೆ.
ಇಪ್ಪತ್ತೈದು ರಾತ್ರಿಗಳು ಕಳೆದ ನಂತರ ಘನರೂಪವಾಗಿರುತ್ತದೆ.
ಮಾಸವು ಕಳೆದೊಡನೆ ಕಲ್ಲಿನಂತೆ ಕಠಿಣವಾಗುತ್ತದೆ. ಎರಡು ಮಾಸದೊಳಗೆ ತಲೆಯ ರಚನೆಯಾಗುತ್ತದೆ.
ಮೂರು ತಿಂಗಳೊಳಗಾಗಿ ಕತ್ತು ಹುಟ್ಟುವುದು.
ನಾಲ್ಕು ತಿಂಗಳೊಳಗೆ ಚರ್ಮವು ಹೊದಿಸಲ್ಪಡುವುದು.
ಐದನೆಯ ಮಾಸದಲ್ಲಿ ಉಗುರು ಕೂದಲುಗಳು ಹುಟ್ಟುವುದು.
ಆರನೇ ಮಾಸದಲ್ಲಿ ಮುಖ, ಕಣ್ಣು, ಮೂಗು, ಕಿವಿಗಳ ರಚನೆಯಾಗುವುದು.
ಏಳನೇ ತಿಂಗಳಲ್ಲಿ ಚಲನಾ ಸಾಮರ್ಥ್ಯ ಬರುವುದು.
ಎಂಟನೆಯ ತಿಂಗಳಲ್ಲಿ ಬುದ್ಧಿಯ ಸಂಯೋಗವಾಗುವುದು.
ಬಂಭತ್ತನೆಯ ತಿಂಗಳಲ್ಲಿ ಚೇತನನು ಸರ್ವಾಂಗ ಸಂಪೂರ್ಣನಾಗುತ್ತಾನೆ.
ಬುದ್ಧಿಯ ಸಂಯೋಗವಾದೊಡನೆಯೇ ಸಕಲೇಂದ್ರಿಯಗಳೂ ಚೇತನಗೊಂಡಂತೆ ತಮ್ಮ ತಮ್ಮ ಶಕ್ತಿಯನ್ನು ಪಡೆದುಕೊಳ್ಳುವುದು. )

ಬಳಿಕ ಮನುಷ್ಯನು ಎಲ್ಲ ಅವಯವಗಳನ್ನು ಪಡೆದುಕೊಂಡು ಹುಟ್ಟುತ್ತಲೇ ತನ್ನೆರಡು ಕಿವಿಗಳಿಂದಲೂ ಶಬ್ದವನ್ನು ಕೇಳುವ ಸಾಮರ್ಥ್ಯವನ್ನು ಪಡೆಯುತ್ತಾನೆ. ಕಣ್ಣುಗಳಿಂದ ಹೊರಗಿನ ದೃಶ್ಯವನ್ನು ನೋಡುವ ಶಕ್ತಿಯನ್ನು ಪಡೆಯುತ್ತಾನೆ. ಮೂಗಿನಿಂದ ಆಘ್ರಾಣಸಾಮರ್ಥ್ಯವನ್ನೂ, ಚರ್ಮದಿಂದ ಸ್ಪರ್ಶಗ್ರಹಣಶಕ್ತಿಯನ್ನೂ ಮನಸ್ಸಿನಿಂದ ಭಾವವನ್ನು ತಿಳಿದುಕೊಳ್ಳುತ್ತಾನೆ. ಅಷ್ಟಕ ಈ ರೀತಿಯಾಗಿ ಸೂಕ್ಷ್ಮರೂಪವಾದ ಜೀವವು ಪ್ರಾಣಧಾರಿಗಳಾದ ಮಹಾತ್ಮರ ಶರೀರದಲ್ಲಿ ಸೇರಿಕೊಳ್ಳುತ್ತದೆ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Contact for any Electrical Works across Bengaluru

Loading...
error: Content is protected !!