ವ್ಯಾಸ ಮಹಾಭಾರತ – ಭಾಗ 66 ಆದಿಪರ್ವ (ಸಂಭವಪರ್ವ)

ಅಷ್ಟಕ :

ಯಃ ಸಂಸ್ಥಿತಃ ಪುರುಷೋ ದಹ್ಯತೇ ವಾ ನಿಖನ್ಯತೇ ವಾಪಿ ನಿಕೃಷ್ಯತೇ ವಾ |
ಅಭಾವಭೂತಃ ಸ ವಿನಾಶಮೇತ್ಯ ಕೇನಾತ ನಾ ಚೇತಯತೇ ಪುರಸ್ತಾತ್ ||

ತಾತಾ, ಮಾನಾವನು ಪ್ರಾಣ ಬಿಟ್ಟೊಡನೆ ಚೇತನಾರಹಿತವಾದ ಶರೀರವನ್ನ ಕೆಲವರು ಸುಡುತ್ತಾರೆ,ಇನ್ನೂ ಕೆಲವರು ಹೂಳುತ್ತಾರೆ. ಮತ್ತಿನ್ನು ಕೆಲವರು ಕಾಗೆ, ನರಿ, ರಣಹದ್ದುಗಳಿಗೆ ಆಹಾರವಾಗಿ ಕೊಡುತ್ತಾರೆ. ಹಾಗಾಗಿ ಜೀವನ ಶರೀರವೆಂದೂ ಉಳಿಯುವುದಿಲ್ಲ. ಈ ಶರೀರವನ್ನು ಜೀವನು ತೊರೆದ ನಂತರ ಯಾವ ವಿಧವಾದ ಶರೀರವೂ ಇರುವುದೇ ಇಲ್ಲವೇ..? ಇರುವುದಾದರೆ ಯಾವ ವಿಧವಾದ ಶರೀರವಿರುತ್ತದೆ. …? ಆ ರೀತಿ ಬೇರೊಂದು ವಿಧವಾದ ಶರೀರ ಇರುವುದಾದರೆ ಭೂಮಿಯಲ್ಲಿ ಸಿಗುವ ಶರೀರವನ್ನ ಪ್ರವೇಶಿಸಲು ಹೇಗೆ ಸಾಧ್ಯವಾಗುತ್ತದೆ..? ಭೂಮಿಯಲ್ಲಿ ಸಿಕ್ಕ ಶರೀರವನ್ನು ಪ್ರವೇಶಿಸಿದಾಗ ನಡುವೆ ಸಿಕ್ಕ ಶರೀರವೇನಾಗುತ್ತದೆ..? ಇವುಗಳನ್ನೆಲ್ಲಾ ವಿವರವಾಗಿ ಹೇಳುವೆಯಾ…?

ಯಯಾತಿ :

ಹಿತ್ವಾ ಸೋಸೂನ್ಸುಪ್ತನ್ನಿಷ್ಪನಿತ್ವಾ ಪುರೋಧಾಯ ಸುಕೃತಂ ದುಷ್ಕೃತಂ ವಾ |
ಅನ್ಯಾಂ ಯೋನಿಂ ಪವನಾಗ್ರಾನುಸಾರೀ ಹಿತ್ವಾ ದೇಹಂ ಭಜತೇ ರಾಜಸಿಂಹ ||

ಪುಣ್ಯಾಂ ಯೋನಿಂ ಪುಣ್ಯಕೃತೋ ವ್ರಜಂತಿ ಪಾಪಾಂ ಯೋನಿಂ ಪಾಪಕೃತೋ ವ್ರಜಂತಿ |
ಕೀಟಾಂ ಪತಂಗಾಶ್ಚ ಭವಂತಿ ಪಾಪಾ ನಮೇ ವಿಪಕ್ಷಾಸ್ತಿ ಮಹಾನುಭಾವ ||

ಚತುಷ್ಪಾದಾ ದ್ವಿಪದಾಃ ಷಟ್ಪದಾಶ್ಚ ತಥಾಭೂತಾ ಗರ್ಭಭೂತಾ ಭವಂತಿ |
ಅಖ್ಯಾನಮೇತನ್ನಿಖಿಲೇನ ಸರ್ವಂ ಭೂಯಸ್ತು ಕಿಂ ಪೃಚ್ಛಸಿ ರಾಜಸಿಂಹ ||

“ಸ್ವಪ್ನದಲ್ಲಿ ನಾವು ಯಾವ ಶರೀರವನ್ನು ಹೊಂದಿರುತ್ತೇವೆ ಎಂದು ಸ್ಪಷ್ಟವಾಗಿ ಹೇಳಲಾಗದು. ಆದರೆ ಅಲ್ಲಿ ನಾವು ಹಾರುತ್ತೇವೆ, ಕುಣಿಯುತ್ತೇವೆ, ನೀರಿನಲ್ಲಿ ಮುಳುಗುತ್ತೇವೆ. ಕೆಲವೊಮ್ಮೆ ರತಿಸುಖವನ್ನೂ ಅನುಭವಿಸುತ್ತೇವೆ. ಹಾಗಿದ್ದೂ ಆ ಅನುಭವಗಳನ್ನು ಒದಗಿಸುವ ಶರೀರ ಯಾವುದು ಎಂದು ಹೇಳಲಾರೆವು. ಇದೇ ರೀತಿಯಲ್ಲಿ ಪ್ರಾಣ ಕಳೆದುಕೊಂಡ ಜೀವನಿಗೆ ಸ್ವಪ್ನದಲ್ಲಿನ ಶರೀರದಂತಹಾ ಒಂದು ಶರೀರ ದೊರೆಯುತ್ತದೆ. ಯಾವ ರೀತಿ ಸ್ವಪ್ನ ಮುಗಿದೊಡನೆ ಜೀವ ನಮ್ಮ ಶರೀರವನ್ನು ಪ್ರವೇಶಿಸುತ್ತಾನೋ ಅದೇ ರೀತಿಯಾಗಿ ಜೀವನು ಹೊಸ ಶರೀರವನ್ನು ಪ್ರವೇಶಿಸುವನು.

ಯಯಾತಿ : ಲೋಕಾಂತರಕ್ಕೆ ಜೀವನು ಪ್ರಾಣಸಹಿತನಾಗಿಯೇ ಹೋಗುತ್ತಾನೆ. ಆದರೆ ಸೂಕ್ಷ್ಮಶರೀರದಲ್ಲಿರುತ್ತಾನೆ. ಆ ಶರೀರದಲ್ಲಿ ಕೇವಲ ಪುಣ್ಯ ಪಾಪಗಳ ಫಲವಿರುತ್ತದೆ. ಪುಣ್ಯ ಪಾಪಗಳ ಫಲದಿಂದ ಕೂಡಿದ ಜೀವನು ಗಾಳಿಯಲ್ಲಿ ಚಲಿಸುತ್ತಿರುತ್ತಾನೆ. ಆತನಿಗೆ ಕರ್ಮಾನುಸಾರವಾಗಿ ಲೋಕದಲ್ಲಿ ಸ್ಥಾನವೊಂದು ಕಲ್ಪಿತವಾಗಿರುತ್ತದೆ. ಆ ಸ್ಥಾನ ಸಿಗುವವರೆಗೆ ಆತ ಗಾಳಿಯಲ್ಲಿಯೇ ಚಲಿಸುತ್ತಿರುತ್ತಾನೆ. ಸಾವಿರಾರು ಹಸುಗಳಿದ್ದರೂ ಕರುವು ತನ್ನ ತಾಯಿಯನ್ನೇ ಸೇರುವಂತೆ ಪಾಪ ಪುಣ್ಯಗಳಿಂದ ಆವೃತ್ತನಾದ ಜೀವನು ಅವನಿಗಾಗಿ ಕಲ್ಪಿತವಾದ ಸ್ಥಾನವನ್ನೇ ಸೇರುತ್ತಾನೆ.
ಪುಣ್ಯಕರ್ಮಗಳನ್ನ ಮಾಡಿದವ ಪುಣ್ಯಾತ್ಮನಾಗಿ ಜನ್ಮತಾಳುತ್ತಾನೆ. ಪಾಪಕರ್ಮಗಳನ್ನ ಮಾಡಿದವ ಪಾಪಿಷ್ಠನಾಗಿ ಹುಟ್ಟುತ್ತಾನೆ. ಬಹಳ ಪಾಪಿಷ್ಠರಾದವರು ಹುಳುಗಳಾಗಿಯೂ, ನಾಲ್ಕು ಕಾಲುಗಳುಳ್ಳ ಪ್ರಾಣಿಗಳಾಗಿಯೂ ಇತರ ಪ್ರಾಣಿಗಳಾಗಿಯೂ ಹುಟ್ಟುತ್ತಾನೆ.
( ಶ್ರುತಿ ಮಾಕ್ಯವೂ ಇದನ್ನೇ ಪ್ರತಿಪಾದಿಸುತ್ತದೆ.
ಅನ್ಯಂ ನವತರಂ ಕಲ್ಯಾಣತರಂ ರೂಪಂ ಕುರುತೇ
ಪಿತ್ರ್ಯಂ ವಾ ಗಾಂಧರ್ವಂ ವಾ ದೈವಂ ವಾ ಪ್ರಾಜಾಪತ್ಯಂ ವಾ ಬ್ರಾಹ್ಮಂ ವಾ )

ಹೆಚ್ಚು ಪುಣ್ಯವಂತನು ನವನೂತನವಾಗಿಯೂ, ಮಂಗಳಕರವಾಗಿಯೂ ಇರುವ ರೂಪವನ್ನು ಹೊಂದುತ್ತಾನೆ. ಪಿತೃ, ಗಂಧರ್ವ, ದೇವ, ಪ್ರಜಾಪತ್ಯ, ಬ್ರಹ್ಮಲೋಕಗಳಿಗೆ ತನ್ನ ಪುಣ್ಯಕ್ಕೆ ಅನುಗುಣವಾಗಿ ಅನುಕ್ರಮವಾಗಿ ಹೋಗುತ್ತಾನೆ. ಈ ರೀತಿಯಾಗಿ ಜೀವನ ಕರ್ಮಫಲವೇ ಆತನ ಮುಂದಿನ ಸ್ಥಾನವನ್ನ ನಿರ್ಧರಿಸುತ್ತದೆ. ಅಷ್ಟಕ ಇಷ್ಟು ವಿಷಯವನ್ನ ಹೇಳಿದ್ದೇನೆ ಇನ್ನೇನಾದರೂ ಕೇಳುವುದಿದ್ದರೆ ಕೇಳು.

ಅಷ್ಟಕ :

ಕಿಂಸ್ವಿತ್ಕೃತ್ವಾ ಲಭತೇ ತಾತ ಲೋಕಾನ್ಮರ್ತ್ಯಃ ಶ್ರೇಷ್ಠಾಂಸ್ತಪಸಾ ವಿದ್ಯಯಾ ವಾ |
ತನ್ಮೇ ಪೃಷ್ಟಃ ಶಂಸ ಸರ್ವಂ ಯಥಾವಚ್ಭುಭಾಲ್ಲೋಕಾನ್ಯೇನ ಗಚ್ಛೇತ್ಕೃಮೇಣ ||

ತಾತ, ಮನುಷ್ಯನು ಯಾವ ಪುಣ್ಯ ಕರ್ಮವನ್ನು ಮಾಡಿದರೆ ಪುಣ್ಯ ಲೋಕವು ಲಭಿಸುತ್ತದೆ..? ವಿದ್ಯಾರ್ಜನೆಯಿಂದ ಪುಣ್ಯಲೋಕ ಲಭಿಸುವುದೇ…? ಅಥವಾ ತಪಸ್ಸಿನಿಂದ ಪುಣ್ಯಲೋಕ ಪ್ರಾಪ್ತಿಯಾಗುವುದೇ…? ಅನುಕ್ರಮವಾಗಿ ಪುಣ್ಯಲೋಕವನ್ನು ಪಡೆಯಬೇಕಾದರೆ ಯಾವ ಮಾರ್ಗವನ್ನು ಅನುಸರಿಸಬೇಕು…? ಇವೆಲ್ಲದರ ಬಗ್ಗೆ ಸವಿವರವಾಗಿ ತಿಳಿಸು.

ಯಯಾತಿ :

ತಪಶ್ಚ ದಾನಂ ಚ ಶಮೋ ದಮಶ್ಚ ಹ್ರೀರಾರ್ಜವಂ ಸರ್ವಭೂತಾನುಕಂಪಾ |
ಸ್ವರ್ಗಸ್ಯ ಲೋಕಸ್ಯ ವದಂತಿ ಸಂತೋ ದ್ವಾರಾಣಿ ಸಪ್ತೈವ ಮಹಾಂತಿ ಪುಂಸಾಮ್ |
ನಶ್ಯಂತಿ ಮಾನೇನ ತಮೋಭಿಭೂತಾಃ ಪುಂಸಃ ಸದೈವೇತಿ ವದಂತಿ ಸಂತಃ ||

ಅಷ್ಟಕ, ಸ್ವರ್ಗದ ಪ್ರಾಪ್ತಿಗೆ ಏಳು ಮಾರ್ಗಗಳನ್ನ ಸತ್ಪುರುಷರು ತೋರಿಸುತ್ತಾರೆ. ತಪಸ್ಸು, ದಾನ,ಶಮ, ದಮ, ಲಜ್ಜೆ, ಋಜುತ್ವ ಮತ್ತು ಸರ್ವಭೂತಾನುಕಂಪ ಇವೇ ಏಳು ಸ್ವರ್ಗದ ಬಾಗಿಲುಗಳು. ಈ ಏಳು ಮಾರ್ಗದಲ್ಲಿ ಯಾವುದರ ಮೂಲಕವಾದರೂ ಸಾಗಿ ಸ್ವರ್ಗ ಗಳಿಸಬಹುದು. ಆದರೆ ಈ ಮಾರ್ಗ ಮೂಲಕ ಸಾಗುವವರಿಗೆ ಅಹಂಭಾವವಿರಬಾರದು. ಅಹಂಕಾರವೆಂಬುದು ಗಾಡಾಂಧಕಾರ. ಅಹಂಕಾರಕ್ಕೊಳಗಾದವನು ಬಲು ಬೇಗ ವಿನಾಶವಾಗುತ್ತಾನೆ. ತಪಸ್ಸೆನ್ನುವುದೂ ಕೂಡಾ ಅಹಂಕಾರದಿಂದಾಗಿ ನಾಶವಾಗಿ ಹೋಗುತ್ತದೆ.

ಅಧೀಯಾನಃ ಪಂಡಿತಂ ಮನ್ಯಮಾನೋ ಯೋ ವಿದ್ಯಯಾ ಹಂತಿ ಯಶಃ ಪರೇಷಾಮ್ |
ತಸ್ಯಾಂತವಂತಶ್ಚ ಭವಂತಿ ಲೋಕಾ ನ ಚಾಸ್ಯ ತದ್ಬ್ರಹ್ಮ ಫಲಂ ದದಾತಿ ||

ವಿದ್ಯೆಗೆ ತಕ್ಕ ವಿನಯವಿರಬೇಕೆನ್ನುವುದು ನೀತಿಯೇ ಆಗಿದ್ದರೂ ಅದನ್ನಾಚರಿಸುವವರು ಕಡಿಮೆಯೇ. ಮನುಷ್ಯನಿಗೆ ವಿದ್ಯಾಸಂಪತ್ತು ದೊರೆತಂತೆಲ್ಲಾ ಅಹಂಕಾರ ಹೆಚ್ಚಾಗುವುದುಂಟು. ಯಾವನು ತಾನು ಕಲಿತ ವಿದ್ಯೆಗಾಗಿ ಅಹಂಕಾರಪಡುವನೋ… ಇತರರು ಬಹಳ ಕಷ್ಟದಿಂದ ಪಡೆದ ಯಶಸ್ಸನ್ನು ತನ್ನ ವಿದ್ಯೆಯಿಂದ ಅಪಹರಿಸಲು ಪ್ರಯತ್ನಿಸುವನೋ ಅಂತಹವನಿಗೆ ಎಂದಿಗೂ ಪುಣ್ಯಲೋಕವು ದೊರಕುವುದಿಲ್ಲ. ಬ್ರಹ್ಮವಿದ್ಯೆಯನ್ನು ಕೇವಲ ಅಧ್ಯಯನ ಮಾತ್ರ ಮಾಡುವುದರಿಂದ ಅದರ ಫಲವು ದೊರಕುವುದಿಲ್ಲ. ಆ ಅಧ್ಯಯನದ ಸಾಧನೆಯ ಹೊರತಾಗಿಯೂ ಬ್ರಹ್ಮವಸ್ತುವಿನ ದರ್ಶನವಾಗುವುದಿಲ್ಲ.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ