ವ್ಯಾಸ ಮಹಾಭಾರತ – ಭಾಗ 67 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 67 ಆದಿಪರ್ವ (ಸಂಭವಪರ್ವ)

ಯಯಾತಿ :
ಚತ್ವಾರಿ ಕರ್ಮಾಣ್ಯಭಯಂಕರಾಣಿ ಭಯಂ ಪ್ರಯಚ್ಛಂತ್ಯಯಥಾಕೃತಾನಿ |
ಮಾನಾಗ್ನಿಹೋತ್ರಮುತ ಮಾನಮೌನಂ ಮಾನೇನಾಧೀತಮುತ ಮಾನಯಜ್ಞಃ ||

ನಾಲ್ಕು ಕರ್ಮಗಳು ಕರ್ತೃವಿಗೆ ಯಾವಾಗಲೂ ಕೇಳಿದವುಗಳನ್ನು ಕೊಡುತ್ತದೆ. ಯಾವಾಗಲೂ ಅವನ ರಕ್ಷಣೆಯಲ್ಲಿಯೇ ಜಾಗರೂಕವಾಗಿರುದ್ದು ಅಭಯಪ್ರಧಾನ ಮಾಡುತ್ತಿರುತ್ತದೆ. ಆದರೆ ಆ ನಾಲ್ಕು ಕರ್ಮಗಳನ್ನೂ ಅಹಂಭಾವ ತೊರೆದು ಮಾಡಬೇಕು. ಅಹಂಭಾವವನ್ನಿಟ್ಟು ಕರ್ಮಗಳನ್ನು ಮಾಡಿದರೆ ಅದೇ ಕರ್ಮಗಳು ಕರ್ತೃವಿಗೆ ಭಯವನ್ನುಂಟುಮಾಡುತ್ತದೆ. ಅಗ್ನಿಹೋತ್ರ, ಮೌನ, ಅಧ್ಯಯನ, ಯಜ್ಞ ಇವುಗಳೇ ಉತ್ಕೃಷ್ಟವಾದ ನಾಲ್ಕು ಕರ್ಮಗಳು.

(ಮಾನಕ್ಕಾಗಿ, ಇತರರನ್ನು ಮೆಚ್ಚಿಸುವ ಸಲುವಾಗಿ ಡಾಂಭಿಕವಾಗಿ ಅಗ್ನಿಹೋತ್ರವನ್ನು ಮಾಡಬಾರದು. ಯಾವುದೇ ವಿಧವಾದ ಡಂಭಾಚಾರ ಆಡಂಬರಗಳನ್ನು ಇಲ್ಲದೇ ಸ್ವಾತ್ಮೋನ್ನತಿಗಾಗಿ ಅಗ್ನಿಹೋತ್ರವನ್ನು ಮಾಡಬೇಕು.  ಕೇವಲ ಮಾತನಾಡದಿರುವುದರಿಂದ ಮೌನಿಯಾಗಲಾರನು. ಮನಸ್ಸನ್ನೂ ಮೌನಗೊಳಿಸಬೇಕು. ಬಾಯಲ್ಲಿ ಮಾತ್ರ ಮಾತನಾಡದೇ ಮನಸ್ಸನ್ನು ಅದು ಹೋದೆಡೆಗೆ ಬಿಡುವುದು ಮೌನವ್ರತವೆನಿಸುವುದಿಲ್ಲ. ಬಾಯಲ್ಲಿ ಮಾತನಾಡದೇ ಕೈಬರವಣಿಗೆ ಕೈಸನ್ನೆಗಳನ್ನು ಮಾಡುವುದೂ ಮೌನವ್ರತ ಎಂದೆನಿಸುವುದಿಲ್ಲ. ಮನಶ್ಚಾಪಲ್ಯದ ಗತಿಯನ್ನು ನಿರೋಧಿಸಿ ಹೃತ್ಕಮಲದಲ್ಲಿರುವ ಪರಮಾತ್ಮನ ಬಳಿಗೆ ಒಯ್ಯುವುದು ಮೌನವ್ರತವೆನಿಸುತ್ತದೆ. ಮೌನ ಅಂದರೆ ಮನನಶೀಲನಾಗಿರುವಿಕೆ.
ವಿದ್ಯೆಯನ್ನು ಕಲಿಯುವುದು ಅಹಂಭಾವದ ದಮನಕ್ಕಾಗಿ. ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳ ನಿಜಸ್ವರೂಪವೇನೆಂಬುದು ವಿದ್ಯಾವಂತನಿಗೆ ಚೆನ್ನಾಗಿ ತಿಳಿದಿರುತ್ತದೆ.

ಯಜ್ಞವನ್ನು ಮಾಡುವುದೂ ಮನುಷ್ಯನಿಗೆ ಒಂದು ಶ್ರೇಷ್ಠ ಕರ್ಮ. ಸ್ವರ್ಗಕಾಮನಾದವನು ಯಜ್ಞಮಾಡಿ ಸ್ವರ್ಗವನ್ನು ಪಡೆಯಬಹುದು. ಆದರೆ ಇತರರ ವಿನಾಶಕ್ಕಾಗಿ ಯಜ್ಞ ಮಾಡಬಾರದು. ಶತ್ರುಗಳ ವಿನಾಶಕ್ಕೆಂದು ಯಜ್ಞಮಾಡಿದರೆ ಶತ್ರುಗಳು ವಿನಾಶವಾಗುವುದು ನಿಶ್ಚಿತ. ಆದರೆ ಶತ್ರುಗಳನ್ನು ಕ್ಷತ್ರಿಯ ಧರ್ಮದಂತೆ ಯುದ್ಧಮಾಡಿಯೇ ನಾಶಮಾಡಬೇಕು. ಆತ್ಮೋದ್ಧಾರಕ್ಕೆ ಮಾತ್ರವೇ ಯಜ್ಞ ಮಾಡಬೇಕು. ಇತರರ ನಾಶಕ್ಕಾಗಿ ಯಜ್ಞ ಮಾಡಿದರೆ ಅದರ ಪರಿಣಾಮ ಆ ಕ್ಷಣಕ್ಕೆ ನಮಗೆ ಅನುಕೂಲಕರದಂತಿದ್ದರೂ ಕಡೆಯಲ್ಲಿ ಅದು ನಮಗೆ ದುಷ್ಪರಿಣಾಮವನ್ನ ಮಾಡುತ್ತದೆ.

ಯಯಾತಿ :
ನ ಮಾನಮಾನ್ಯೋ ಮುದಮಾದದೀತ ನ ಸಂತಾಪಂ ಪ್ರಾಪ್ನುಯಾಚ್ಚಾವಮಾನಾತ್ |
ಸಂತಃ ಸತಃ ಪೂಜಯಂತೀಹ ಲೋಕೇ ನಾಸಾಧವಃ ಸಾಧುಬುದ್ಧಿಂ ಲಭಂತೇ ||

ಯಾರೋ ಕೆಲವರು ಇಂದು ನಮ್ಮನ್ನ ಯಾವುದೋ ಕಾರಣಕ್ಕಾಗಿ ಹೊಗಳಿದರೆಂದು ಹಿಗ್ಗಬಾರದು. ಅಂತೇಯೇ ಇಂದು ನಮ್ಮನ್ನು ಅವಮಾನಿಸಿದರೆಂದು ಕುಗ್ಗಲೂಬಾರದು. ಲೋಕದಲ್ಲಿ ಮಾನಾಪಮಾನಗಳೆರಡೂ ಕ್ಷಣಿಕವಾದವುಗಳು. ಶಾಶ್ವತವಾಗಿ ಉಳಿಯತಕ್ಕದ್ದಲ್ಲ. ಸತ್ಪುರುಷರಾವರು ಸತ್ಪುರುಷರಾದವರನ್ನು ಗೌರವಿಸುತ್ತಾರೆಂಬುದು ನಿಜ. ಅದು ಅವರ ಸ್ವಭಾವವೂ ಆಗಿರುತ್ತದೆ. ಅದರಿಂದಾಗಿ ಹಿಗ್ಗುವ ಕಾರಣವಿಲ್ಲ. ದುಷ್ಟಾತ್ಮರಾದವರು ಸಾಧುಬುದ್ದಿಯುಳ್ಳವರನ್ನು ಅಥವಾ ಸತ್ಪುರುಷರನ್ನ ಎಂದಿಗೂ ಗೌರವಿಸುವುದಿಲ್ಲ. ಸತ್ಪುರುಷರಲ್ಲಿರುವ ಗುಣಗಳನ್ನೂ ದೋಷವೆಂದೇ ಭಾವಿಸುತ್ತಾರೆ. ಅಥವಾ ಅವರಲ್ಲಿಯೂ ಇರಬಹುದಾದ ಚಿಕ್ಕದೊಂದು ದೋಷವನ್ನು ದೊಡ್ಡದಾಗಿ ಭಾವಿಸಿ ತೆಗಳುತ್ತಾರೆ. ಇಂತಹವರ ತೆಗಳಿಕೆಯಿಂದ ವಿವೇಕಿಯಾದವನು ಕುಗ್ಗಬಾರದು. ಹೀಗಿರುವುದು ನಮ್ಮ ಆತ್ಮೋದ್ಧಾರದ ಹಾದಿಯನ್ನು ಸುಗಮವನ್ನಾಗಿಸುತ್ತದೆ.

ಇತಿ ದದ್ಯಾಮಿತಿ ಯಜ ಇತ್ಯಧೀಯ ಇತಿ ವ್ರತಮ್ |
ಇತ್ಯೇತಾನಿ ಭಯಾನ್ಯಾಹುಸ್ತಾನಿ ವರ್ಜ್ಯಾನಿ ಸರ್ವಶಃ ||

ನಾನು ಈ ರೀತಿಯಲ್ಲಿ ಅಪಾರವಾದ ಐಶ್ವರ್ಯವನ್ನು ದಾನ ಕೊಟ್ಟೆನು, ನಾನು ಈ ಪ್ರಕಾರ ಯಜ್ಞಮಾಡಿದೆನು, ಇಷ್ಟೊಂದು ಅಧ್ಯಯನ ಮಾಡಿದೆನು, ಇಷ್ಟೊಂದು ವ್ರತೋಪಾಸನೆ ಮಾಡಿದೆನು .. ಹೀಗೆ ಅಹಂಕಾರಪೂರ್ವಕವಾಗಿ ಭಾವಿಸಿಕೊಳ್ಳುವುದನ್ನ ತ್ಯಜಿಸಬೇಕು, ಕೇವಲ ಮಾತಿನಲ್ಲಿ ಹೇಳದೇ ಇರುವುದು ಮಾತ್ರವಲ್ಲ ಮನಸ್ಸಿನಲ್ಲಿಯೂ ಭಾವಿಸಕೂಡದು. ನಮ್ಮ ಸತ್ಕಾರ್ಯದ ಫಲ ಈ ಅಹಂಭಾವದಿಂದ ಸರ್ವನಾಶವಾಗುವುದು.

ಯೇ ಚಾಶ್ರಯಂ ವೇದಯಂತೇ ಪುರಾಣಂ ಮನೀಷೀಣೋ ಮಾನಸಮಾರ್ಗರುದ್ಧಮ್ |
ತದ್ವಃ ಶ್ರೇಯಸ್ತೇನ ಸಂಯೋಗಮೇತ್ಯ ಪರಾಂ ಶಾಂತಿಂ ಪ್ರಾಪ್ನುಯುಃ ಪ್ರೇತ್ಯ ಚೇಹ ||

ಮನಸ್ಸಿನ ಮಾರ್ಗವನ್ನು ಪ್ರತಿರೋಧಿಸುವುದರಿಂದ ಅಥವಾ ಮನಸ್ಸಿನ ಸ್ವೇಚ್ಛಾಪ್ರವರ್ತನೆಯನ್ನು ಪ್ರತಿರೋಧಿಸುವುದರಿಂದ ಮಾತ್ರವೇ ಪುರಾಣಪುರುಷನಾದ ಚಿನ್ಮಯಬ್ರಹ್ಮನ ದರ್ಶನವಾಗುತ್ತದೆ. ಈ ಸತ್ಯವನ್ನು ಅರಿತು ಆ ಮಾರ್ಗದಲ್ಲೇ ನಡೆದಾಗ ಮಾತ್ರ ಇಹದಲ್ಲಿಯೂ ಬ್ರಹ್ಮಾನಂದವನ್ನ ಪಡೆಯಬಹುದು. ಅಂತಹ ಸತ್ಪುರುಷರಿಗೆ ಅವಸಾನಾನಂತರದಲ್ಲಿ ಪುನರಾವೃತ್ತಿರಹಿತವಾದ ಪುಣ್ಯಲೋಕ ದೊರಕುತ್ತದೆ. ಆ ಮಾರ್ಗವೇ ನಿಮಗೂ ಶ್ರೇಯಸ್ಕರವಾದುದು.

ಅಷ್ಟಕನು ಮುಂದೆ ಆಶ್ರಮ ಧರ್ಮಗಳ ವಿಷಯವಾಗಿ ಪ್ರಶ್ನೆ ಮಾಡುತ್ತಾನೆ.

ಚರಂಗೃಹಸ್ಥ ಕಥಮೇತಿ ಧರ್ಮಾನ್ಕಥಂ ಭಿಕ್ಷುಃ ಕಥಮಾಚಾರ್ಯಕರ್ಮಾ |
ವಾನಪ್ರಸ್ಥಂ ಸತ್ಪಥೇ ಸಂನಿವಿಷ್ಟೋ ಬಹೂನ್ಯಸ್ಮಿನ್ಸಮ್ಪ್ರತಿ ವೇದಯಂತಿ ||

ತಾತ, ವೇದಜ್ಞರಾದವರು ಉತ್ತಮಲೋಕಗಳನ್ನು ಪಡೆಯಲು ನಾನಾವಿಧವಾದ ಕರ್ಮಗಳನ್ನು ಹೇಳುತ್ತಾರೆ. ಅನೇಕ ವಿಧವಾದ ವ್ರತಗಳನ್ನೂ ಹೇಳುತ್ತಾರೆ. ವ್ರತಾನಾಮುತ್ತಮಂ ವ್ರತಂ ಎಂದು ಪ್ರತಿಯೊಂದು ವ್ರತಕ್ಕೂ ಹೇಳುತ್ತಾರೆ. ಈ ಅಸಂಖ್ಯಾತವ್ರತಗಳಲ್ಲಿ ಮತ್ತು ಕರ್ಮಗಳಲ್ಲಿ ಯಾವುದು ಅತ್ಯುತ್ತಮವಾದದ್ದು..? ಎಂದು ನಿರ್ಧರಿಸುವುದೇ ಕಷ್ಟವಾಗಿದೆ. ಆದುದರಿಂದ ಯಾವ ಆಶ್ರಮದವರು ಯಾವ ಕರ್ಮವನ್ನು ಮಾಡಿದರೆ ಉತ್ತಮಲೋಕವು ಪ್ರಾಪ್ತವಾಗುವುದೆಂದು ಹೇಳುವಿರಾ? ಗೃಹಸ್ಥಾಶ್ರಮದಲ್ಲಿದ್ದುಕೊಂಡು ಯಾವ ಕರ್ಮಗಳನ್ನು ಮಾಡುವುದರಿಂದ ಪುಣ್ಯಲೋಕವನ್ನ ಪಡೆಯುತ್ತಾನೆ..? ಅಂತೆಯೇ ಆಚಾರ್ಯರ ಸೇವೆಯಲ್ಲಿ ನಿರತರಾಗಿರೋ ಬ್ರಹ್ಮಾಚಾರಿಗಳೂ ವಾನಪ್ರಸ್ಥದಲ್ಲಿರುವವರೂ ಸಂನ್ಯಾಸಿಗಳೂ ಯಾವ ಯಾವ ಕರ್ಮಗಳನ್ನು ಮಾಡಿ ಉತ್ತಮ ಲೋಕ ಸಂಪಾದಿಸಬಲ್ಲರು. ಇವೆಲ್ಲವನ್ನೂ ವಿವರವಾಗಿ ತಿಳಿಸುವೆಯಾ…?

ಯಯಾತಿ :
ಆಹೂತಾಧ್ಯಾಯೀ ಗುರುಕರ್ಮಸ್ವಚೋದ್ಯಃ ಪೂರ್ವೋತ್ಥಾಯೀ ಚರಮಂ ಚೋಪಶಾಯೀ |
ಮೃದುರ್ದಾಂತೋ ಧೃತಿಮಾನಪ್ರಮತ್ತಃ ಸ್ವಾಧ್ಯಾಯಶೀಲಃ ಸಿದ್ಧ್ಯತಿ ಬ್ರಹ್ಮಚಾರೀ ||

ಅಷ್ಟಕ ಬ್ರಹ್ಮಾಚಾರಿಗೆ ಗುರುಶುಶ್ರೂಷೆಯೇ ಉತ್ತಮವಾದ ವ್ರತ. ಅವನಿಗೆ ಅದಕ್ಕಿಂತಲೂ ಉತ್ಕೃಷ್ಟವಾದ ಬೇರೆ ವ್ರತವೇ ಇರುವುದಿಲ್ಲ. ಬ್ರಹ್ಮಚರ್ಯದಲ್ಲಿರುವಾಗ ಆತ ಕೆಲವು ನಿಯಮಗಳನ್ನು ಪಾಲಿಸಬೇಕು. ಶಿಷ್ಯನು ಯಾವಾಗಲೂ ಗುರುಗಳ ಮನೆಯಲ್ಲಿದ್ದುಕೊಂಡು ಭಿಕ್ಷಾನ್ನದಿಂದ ಜೀವಿಸಬೇಕು. ಗುರುಗಳು ಕರೆಯದೆಯೇ ಪಾಠಕ್ಕೆ ಹೋಗಬಾರದು. ಗುರುಗಳು ಸೌಮನಸ್ಯದಿಂದ ಕರೆದ ವೇಳೆಯಲ್ಲಿ ಪಾಠಕ್ಕೆ ಹೋಗಬೇಕು. ಆದರೆ ಗುರುಗಳಿಗೆ ಮಾಡಬೇಕಾದ ಶುಶ್ರೂಷೆಯನ್ನು ಹೇಳಿಸಿಕೊಳ್ಳದೆಯೇ ಮಾಡಬೇಕು. ಗುರುಗಳು ಏಳುವುದಕ್ಕಿಂತಲೂ ಮೊದಲೇ ಏಳಬೇಕು. ರಾತ್ರಿಯ ವೇಳೆಯಲ್ಲಿ ಗುರುಗಳು ಮಲಗಿದ ನಂತರ ಶಿಷ್ಯನು ಮಲಗಬೇಕು. ಮೃದುಸ್ವಭಾವದವನಾಗಿರಬೇಕು. ಕಠಿಣವಾದ ಪ್ರಕೃತಿಯವನಾಗಿರಬಾರದು. ಯಾರ ಮೇಲೆಯೂ ಯಾವ ಕಾರಣದಿಂದಲೂ ಕೋಪಿಸಿಕೊಳ್ಳಬಾರದು. ಜಿತೇಂದ್ರಿಯನಾಗಿರಬೇಕು. ಸರ್ವದಾ ಅಧ್ಯಯನಶೀಲನಾಗಿರಬೇಕು. ಕ್ಷಣಕಾಲ ವ್ಯರ್ಥ ಮಾಡದೇ ವಿದ್ಯಾರ್ಜನೆಯನ್ನ ಮಾಡುತ್ತಿರಬೇಕು. ಈ ನಿಯಮದಿಂದಿರುತ್ತಾ ವಿದ್ಯೆಯನ್ನು ಕಲಿತರೆ ಆತ ಮಹಾಧಾರ್ಮಿಕನಾಗುತ್ತನೆ. ಅಂತಹವನಿಗೆ ಎಲ್ಲಾ ವಿದ್ಯೆಗಳು ಸಿದ್ಧಿಸುವುದು.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...