ವ್ಯಾಸ ಮಹಾಭಾರತ – ಭಾಗ 68 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 68 ಆದಿಪರ್ವ (ಸಂಭವಪರ್ವ)

ಯಯಾತಿ

ಧರ್ಮಾಗತಂ ಪ್ರಾಪ್ಯ ಧನಂ ಯಜೇತ ದದ್ಯಾತ್ಸದೈವಾತಿಥೀನ್ಭೋಜಯೇಚ್ಛ |
ಅನಾದದಾನಶ್ಚ ಪರೈರದತ್ತಂ ಸೈಷಾ ಗೃಹಸ್ಥೋಪನಿಷತ್ಪುರಾಣೀ ||

ಬಹುಪುರಾತನವಾದ ಗೃಹಸ್ಥ ಧರ್ಮದ ರಹಸ್ಯಮಯವಾದ ಸ್ವರೂಪವು ಹೀಗಿದೆ : ಧರ್ಮವಿಹಿತವಾದ ಮಾರ್ಗದಲ್ಲಿ ಅರ್ಜಿಸಿದ ಹಣದಿಂದಲೇ ಯಜ್ಞ ಯಾಗಾದಿಗಳನ್ನು ಮಾಡಬೇಕು. ದಾನ ಮಾಡಬೇಕು ಮತ್ತು ಆಗಮಿಸಿದ ಅತಿಥಿ ಅಭ್ಯಾಗತರಿಗೆ ಭೋಜನವಿಟ್ಟು ಸತ್ಕರಿಸಬೇಕು. ಕೈಯೆತ್ತಿ ಕೊಡಲ್ಪಡದ ಇತರರ ವಸ್ತುಗಳನ್ನು ಉಪಯೋಗಿಸಿಕೊಳ್ಳಬಾರದು. ಇದಿಷ್ಟು ಗೃಹಸ್ಥನು ಅನುಸರಿಸಬೇಕಾದ ಸಾಮಾನ್ಯ ನಿಯಮಗಳು.

ಸ್ವವೀರ್ಯಜೀವೀ ವೃಜಿನಾನ್ನಿವೃತ್ತೋ ದಾತಾ ಪರೇಭ್ಯೋ ನ ಪರೋಪತಾಪೀ |
ತಾದೃಂಗ್ಮನಿಃ ಸಿದ್ಧಿಮುಪೈತಿ ಮುಖ್ಯಾಂ ವಸನ್ನರಣ್ಯೇ ನಿಯತಾಹಾರಚೇಷ್ಟಃ ||

ಮುನಿಯಾದವನು ( ವಾನಪ್ರಸ್ಥನು ) ಇತರರಿಂದ ಭಿಕ್ಷೆಯನ್ನು ಬೇಡಬಾರದು. ಅರಣ್ಯದಲ್ಲಿಯೇ ವಾಸ ಮಾಡಬೇಕು. ಅಲ್ಲಿ ಸಿಗುವ ಗೆಡ್ಡೆ ಗೆಣಸುಗಳನ್ನು ಸ್ವಪ್ರಯತ್ನದಿಂದಲೇ ತಂದು ಸ್ವೀಕರಿಸಬೇಕು. ಯಾವ ವಿಧವಾದ ಪಾಪಕಾರ್ಯಗಳನ್ನೂ ಮಾಡಬಾರದು. ಪ್ರಾಣಿಹಿಂಸೆಯನ್ನು ಮಾಡಬಾರದು. ಸ್ವಶಕ್ತಿಯಿಂದ ಗಳಿಸಿದ ಆಹಾರವನ್ನು ಇತರರಿಗೂ ಹಂಚಿ ತಾನುಣ್ಣಬೇಕು. ನಿಯತಾಹಾರ-ವಿಹಾರನಾಗಿರಬೇಕು. ವ್ಯರ್ಥವಾಗಿ ಕಾಲಹರಣ ಮಾಡದೇ ಹೆಚ್ಚು ಕಾಲ ಧ್ಯಾನದಲ್ಲಿಯೇ ಕಳೆಯಬೇಕು. ಇಂತಹವನು ಮುನಿ ಎನಿಸಿಕೊಳ್ಳವನು. ಈ ನಿಯಮಗಳ ಪಾಲನೆಯಿಂದಲೇ ಮುನಿಯಾದವನಿಗೆ ಎಲ್ಲ ಒಳ್ಳೆಯ ಲೋಕಗಳೂ ದೊರೆಯುವುದು.

ಅಶಿಲ್ಪಜೀವೀ ಗುಣವಾಂಶ್ಚೈವ ನಿತ್ಯಂ ಜಿತೇಂದ್ರಿಯಃ ಸರ್ವತೋ ವಿಪ್ರಯುಕ್ತಃ |
ಅನೋಕಶಾಯೀ ಲಘುರಲ್ಪಪ್ರಚಾರಶ್ಚರಂದೇಶಾನೇಕಚರಃ ಸ ಭಿಕ್ಷುಃ ||

ಜೀವಿಕೆಗಾಗಿ ಯಾವ ವೃತ್ತಿಯನ್ನೂ ಅವಲಂಬಿಸಿರಬಾರದು. ಸರ್ವಸದ್ಗುಣಸಂಪನ್ನನಾಗಿರಬೇಕು. ಜಿತೇಂದ್ರಿಯನಾಗಿರಬೇಕು. ಪ್ರಾಪಂಚಿಕ ವ್ಯವಹಾರಗಳಲ್ಲಿ ವಿರಕ್ತನಾಗಿರಬೇಕು ಗೃಹಸ್ಥರ ಮನೆಗಳಲ್ಲಿ ಮಲಗಬಾರದು. ಮಲಗುವ ಸ್ಥಳವು ನಿಯತವಾಗಿರಕೂಡದು. ದ್ಏವಸ್ಥಾನ ಚಾವಡಿ, ಮರದಡಿಗಳಲ್ಲಿಯೇ ಮಲಗಬೇಕು. ತನ್ನದೆಂಬ ಪದಾರ್ಥವೇನೂ ಇರಬಾರದು. ಸ್ವಲ್ಪ ಸ್ವಲ್ಪ ದೂರ ಪ್ರಯಾಣ ಮಾಡುತ್ತಲೇ ಇರಬೇಕು. ಒಂದು ಜಾಗದಲ್ಲಿ ಒಂದು ದಿನಕ್ಕಿಂತ ಹೆಚ್ಚು ಕಾಲ ತಂಗಬಾರದು. ಇದೇ ರೀತಿಯಲ್ಲಿ ಪ್ರಪಂಚ ಪರ್ಯಟನವನ್ನು ಮಾಡಬೇಕು. ಇಂತಹವನು ಭಿಕ್ಷು ಎಂದು ಕರೆಯಲ್ಪಡುತ್ತಾನೆ.

ರಾತ್ರ್ಯಾ ಯಯಾ ವಾಭಿಜಿತಾಶ್ಚ ಲೋಕಾ ಭವಂತಿ ಕಾಮಾಭಿಜಿತಾಃ ಸುಖಾಶ್ಚ |
ತಾಮೇವ ರಾತ್ರಿಂ ಪ್ರಯತೇತ ವಿದ್ವಾನರಣ್ಯಸಂಸ್ಥೋ ಭವಿತುಂ ಯತಾತ್ಮಾ ||

ಕಾಮೋಪಭೋಗಗಳನ್ನು ಅನುಭವಿಸುವ ಸಾಮರ್ಥ್ಯವಿರಬೇಕು. ಅಂತಹ ಉತ್ತಮಸ್ಥಿತಿಯಲ್ಲಿರುವಾಗ ಪ್ರಾಪಂಚಿಕವಾದ ಸುಖೋಪಭೋಗಗಳು ಅಶಾಶ್ವತಗಳೆಂದು ಅನುಭವದಿಂದಲೂ ಮತ್ತು ವೇದ ಶಾಸ್ತ್ರಗಳ ಅಧ್ಯಯನದಿಂದಲೂ ಮನಗಂಡು ಸುಖೋಪಭೋಗಗಳ ಮತ್ತು ಐಶ್ವರ್ಯದ ಪರಿತ್ಯಾಗಕ್ಕೆ ಸಂಕಲ್ಪಿಸಬೇಕು. ಪ್ರಾಪಂಚಿಕಸೌಖ್ಯದ ಪರಿಮಿತಿಯಿಷ್ಟೇ ಎಂಬುದನ್ನು ಯಾವ ರಾತ್ರಿಯಲ್ಲಿ ಜಿಜ್ಞಾಸುವು ತಿಳಿದುಕೊಳ್ಳುವನೋ, ಇನ್ನೂ ಹತ್ತಾರು ವರ್ಷಗಳು ಸಾಂಸಾರಿಕ ಸುಖದಲ್ಲಿದ್ದು ಅಪಾರವಾದ ಐಶ್ವರ್ಯವನ್ನೂ ಗಳಿಸುತ್ತಾ ಹೋಗುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಕಂಡುಕೊಳ್ಳುವನೋ ಅಂದಿನ ರಾತ್ರಿಯೇ ಜಿತೇಂದ್ರಿಯನಾದವನು, ವಿದ್ವಾಂಸನಾದವನು ಮನೆ ಮಠ ಹೆಂಡತಿ ಮಕ್ಕಳು ಐಶ್ವರ್ಯ ಎಲ್ಲವನ್ನೂ ಪರಿತ್ಯಜಿಸಿ ಕಾಡಿಗೆ ಹೊರಟು ಬಿಡಬೇಕು. ಕಾಡಿಗೆ ಹೋಗಿ ಮುನಿಯಾಗಲು ನಿರ್ಧರಿಸಿಬಿಡಬೇಕು. ಒಂದು ದಿನ ಮುಂದಕ್ಕೆ ತಳ್ಳಿದರೂ ಇಲ್ಲಸಲ್ಲದ ಬಂಧನಗಳು ಮನುಷ್ಯನನ್ನು ಕಟ್ಟಿ ಹಾಕಿಬಿಡುತ್ತದೆ. ” ಯದಹರೇವ ವಿರಜೇತ್ ತದಹರೇವ ಪ್ರವ್ರಜೇತ್- ಎಂದಿನ ದಿನ ಸಂಸಾರದಲ್ಲಿ ವಿರಕ್ತಿ ಉಂಟಾಗುವುದೋ ಅಂದಿನ ದಿನವೇ ಸಂಸಾರವನ್ನು ಬಿಟ್ಟು ಬಿಡಬೇಕು ಎಂಬ ಉಪನಿಷತ್ತಿನ ವಚನವೂ ಇದನ್ನೇ ಹೇಳುತ್ತದೆ.

ದಶೈವ ಪೂರ್ವಾಂದಶ ಚಾಪರಾಂಶ್ಚ ಜ್ಞಾತೀನಥಾತ್ಮಾನಮಥೈ ಕವಿಂಶಮ್ |
ಅರಣ್ಯವಾಸೀ ಸುಕೃತೇ ದಧಾತಿ ವಿಮುಚ್ಯಾರಣ್ಯೇ ಸ್ವಶರೀರಧಾತೂನ್ ||

ಅಂತಹವನಿಂದ ವಂಶವೇ ಪಾವನವಾಗುತ್ತದೆ. ಅರಣ್ಯವಾಸಿಯಾದವನು ಯಥಾವಿದಿಯಾಗಿ ಸಂನ್ಯಾಶ್ರಮದಲ್ಲಿದ್ದುಕೊಂಡು ಅಲ್ಲಿಯೇ ಅವಸಾನ ಹೊಂದಿದರೆ ತಾನು ಅರ್ಜಿಸಿದ ಮಹಾಪುಣ್ಯದಿಂದ ತನ್ನ ಹಿಂದಿನ ಹತ್ತು ತಲೆಮಾರಿನವರನ್ನೂ ಮತ್ತು ತನ್ನ ಮುಂದಿನ ಹತ್ತು ತಲೆಮಾರನ್ನೂ ಮತ್ತು ತನ್ನನ್ನೂ ಸೇರಿಸಿಕೊಂಡು ಒಟ್ಟು ಇಪ್ಪತ್ತೊಂದು ತಲೆಮಾರಿನವರನ್ನು ಪುಣ್ಯವಂತರನ್ನಾಗಿ ಮಾಡುತ್ತಾನೆ.

ಅಷ್ಟಕನು ಪುನಃ ಪ್ರಶ್ನಿಸುತ್ತಾನೆ :

ಕತಿಸ್ವಿದೇವ ಮುನಯಂ ಕತಿ ಮೌನಾನಿ ಚಾಪ್ಯುತ |
ಭವಂತೀತಿ ತದಾಚಕ್ಷ್ವ ಶ್ರೋತುಮಿಚ್ಛಾಮಹೇ ವಯಮ್ ||

ತಾತ ಲೋಕದಲ್ಲಿ ಎಷ್ಟು ವಿಧವಾದ ಮುನಿಗಳಿದ್ದಾರೆ ಮತ್ತು ಎಷ್ಟು ವಿಧವಾದ ಮುನಿವ್ರತಗಳಿವೆಯೆಂಬುದನ್ನು ದಯಮಾಡಿ ತಿಳಿಸು.

ಯಯಾತಿ :

ಅರಣ್ಯೇ ವಸತೋ ಯಸ್ಯ ಗ್ರಾಮೋ ಭವತಿ ಪೃಷ್ಠತಃ |
ಗ್ರಾಮೋ ವಾ ವಸತೋರಣ್ಯಂ ಸ ಮುನಿಃ ಸ್ಯಾಜ್ಜನಾಧಿಪ ||

ಅಷ್ಟಕ, ಅರಣ್ಯದಲ್ಲಿ ವಾಸ ಮಾಡುತ್ತಿರುವ ಯಾವನಿಗೆ ಗ್ರಾಮವು ಹಿಂದೆಯೇ ಇರುವುದೋ ಮತ್ತು ಗ್ರಾಮದಲ್ಲಿ ವಾಸ ಮಾಡುತ್ತಿರುವ ಯಾವನಿಗೆ ಅರಣ್ಯವು ತನ್ನ ಹಿಂದೆಯೇ ಇರುವುದೋ ಅಂತಹವನನ್ನು ಮುನಿಯೆನ್ನುತ್ತಾರೆ.

ಅಷ್ಟಕ :

ಕಥಂಸ್ವಿದ್ವಸತೋರಣ್ಯೇ ಗ್ರಾಮೋ ಭವತಿ ಪೃಷ್ಠತಃ |
ಗ್ರಾಮೋ ವಾ ವಸತೋರಣ್ಯಂ ಕಥಂ ಭವತಿ ಪೃಷ್ಠತಃ ||

ತಾತ ಮರಗಿಡಗಳಿಂದಲೂ ನಾನಾವಿಧವಾದ ಮೃಗಗಳಿಂದಲೂ ಕೂಡಿರುವ ಅರಣ್ಯದಲ್ಲಿ ವಾಸಿಸುವವನ ಹಿಂಭಾಗದಲ್ಲಿ ಗ್ರಾಮವಿರುವುದೆಂತು…? ಗ್ರಾಮದಲ್ಲಿ ವಾಸ ಮಾಡುತ್ತಿರುವವನ ಹಿಂಭಾಗದಲ್ಲಿ ಅರಣ್ಯವಾದರೂ ಹೇಗಿರುತ್ತದೆ…? ಒಂದು ವೇಳೆ ಇರುವುದಾಗಿ ಭಾವಿಸಿದರೂ ಆತ ಮುನಿ ಹೇಗಾಗುತ್ತಾನೆ…?

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...