ವ್ಯಾಸ ಮಹಾಭಾರತ – ಭಾಗ 69 ಆದಿಪರ್ವ (ಸಂಭವಪರ್ವ) – News Mirchi

ವ್ಯಾಸ ಮಹಾಭಾರತ – ಭಾಗ 69 ಆದಿಪರ್ವ (ಸಂಭವಪರ್ವ)

ಯಯಾತಿ :

ನ ಗ್ರಾಮ್ಯಮುಪಯುಜ್ಜೀತ ಯ ಅರಣ್ಯೋ ಮುನಿರ್ಭವೇತ್ |
ತಥಾಸ್ಯ ವಸತೋರಣ್ಯೇ ಗ್ರಾಮೋ ಭವತಿ ಪೃಷ್ಠತಃ ||

ಅಷ್ಟಕ, ಅರಣ್ಯದಲ್ಲಿ ವಾಸ ಮಾಡುತ್ತಿರುವವ ಗ್ರಾಮದಲ್ಲಿ ಸಿಕ್ಕುವ ಪದಾರ್ಥಗಳನ್ನ ಉಪಭುಂಜಿಸಬಾರದು. ಆದುದರಿಂದ ಅರಣ್ಯದಲ್ಲಿ ವಾಸ ಮಾಡುತ್ತಿರುವ ಮುನಿಗೆ ಗ್ರಾಮವು ಹಿಂದಕ್ಕೆ ಹೋದಂತೆಯೇ ಸರಿ. ಗ್ರಾಮವಾಗಲೀ ಗ್ರಾಮದ ಸುಖವಾಗಲೀ ಅವನ ಕಣ್ಣಿಗೆ ಕಾಣಿಸಬಾರದು. ಒಮ್ಮೆಯೂ ಗ್ರಾಮದ ಸುಖವನ್ನ ನೆನೆಯಲಾರದವನೇ ಮುನಿಯು….

ಅನಗ್ನಿರನಿಕೇತಶ್ಚಾಪ್ಯಗೋತ್ರಚರಣೋ ಮುನಿಃ |
ಕೌಪೀನಾಚ್ಛಾದನಂ ಯಾವತ್ತಾವದಿಚ್ಛೇಚ್ಚ ಚೀವರಮ್ ||
ಯಾವತ್ಪ್ರಾಣಾಭಿಸಂಧಾನ ತಾವದಿಚ್ಛೇಚ್ಚ ಭೋಜನಮ್ |
ತಥಾಸ್ಯ ವಸತೋ ಗ್ರಾಮೇರಣ್ಯಂ ಭವತಿ ಪೃಷ್ಠತಃ ||

ಅಗ್ನಿಯನ್ನು ಬಿಟ್ಟು ಮನೆಯೂ ಇಲ್ಲದೇ ಗೋತ್ರಸೂತ್ರಗಳನ್ನೂ ಬಿಟ್ಟವನನ್ನು ಮುನಿಯೆಂದು ಕರೆಯುತ್ತಾರೆ. ಅಂತಹವನಿಗೆ ಬಟ್ಟೆಯೂ ಬೇಕೆನಿಸುವುದಿಲ್ಲ. ಒಂದು ವೇಳೆ ಬಟ್ಟೆಯನ್ನಪೇಕ್ಷಿಸಿದರೂ ಕೌಪೀನಕ್ಕೆ ಬೇಕಾಗುವಷ್ಟು ಬಟ್ಟೆ ಮಾತ್ರ ಅಪೇಕ್ಷಿಸಿಯಾನು. ಅನುದಿನವೂ ಆತನಿಗೆ ಊಟದ ಆಸೆಯೂ ಇರಲಾರದು. ಇದ್ದರೂ ಅದು ಶರೀರದ ಉಳಿವಿಗಾಗಿ ಅಷ್ಟೇ… ಅಂತಹ ಮುನಿ ಗ್ರಾಮದಲ್ಲಿದ್ದರೂ ಆತನಿಗದು ಅರಣ್ಯದಂತೆಯೇ ತಾನೇ…. ಯಾವನು ಅರಣ್ಯಕ್ಕೂ ಗ್ರಾಮಕ್ಕೂ ವ್ಯತ್ಯಾಸವನ್ನೇ ಗುರುತಿಸುವುದಿಲ್ಲವೋ ಅವನನ್ನ ಬಹೂದಕನೆಂದೂ ಕರೆಯುತ್ತಾರೆ.

ಯಯಾತಿ :

ಯಸ್ತು ಕಾಮಾನ್ಪರಿತ್ಯಜ್ಯ ತ್ಯಕ್ತಕರ್ಮಾ ಜಿತೇಂದ್ರಿಯಃ |
ಅತಿಷ್ಠೇಚ್ಚ ಮುನಿರ್ಮೌನಂ ಸ ಲೋಕೇ ಸಿದ್ಧಿಮಾಪ್ನುಯಾತ್ ||

ಯಾವನು ಎಲ್ಲಾ ಕಾಮನೆಗಳನ್ನು ಬಿಟ್ಟು, ಕಾಮನೆಗಳನ್ನ ಪೂರೈಸುವ ಕರ್ಮಗಳನ್ನೂ ಬಿಟ್ಟು, ಅದರ ಕರ್ಮಫಲವನ್ನೂ ತ್ಯಜಿಸಿ, ಜಿತೇಂದ್ರಿಯನಾಗಿ ಮೌನವ್ರತವನ್ನಾಚರಿಸುತ್ತಾನೋ ಅಂತಹವನು ಮೋಕ್ಷ ಸಿದ್ಧಿಯನ್ನ ಗಳಿಸುತ್ತಾನೆ.

ದೌತದಂತಂ ಕೃತ್ತನಖಂ ಸದಾ ಸ್ನಾತಮಲಂಕೃತಮ್ |
ಅಸಿತಂ ಸಿತಕರ್ಮಾಣಂ ಕಸ್ತಮರ್ಹತಿ ನಾರ್ಚಿತುಮ್ ||

ಶುದ್ಧವಾದ ದಂತಪಂಕ್ತಿಗಳುಳ್ಳವನಾಗಿಯೂ, ಸೊಗಸಾದ ರೀತಿಯಲ್ಲಿ ಬೆರಳುಗಳ ಉಗುರನ್ನ ಕತ್ತರಿಸಿದವನಾಗಿಯೂ, ತ್ರಿಕಾಲಗಳಲ್ಲಿ ಸ್ನಾನಾದಿಗಳನ್ನು ಮಾಡಿ ಯಮ ನಿಯಮಾದಿಗಳನ್ನನುಸರಿಸುವನಾಗಿಯೂ, ಶೀತೋಷ್ಣಗಳನ್ನು ಸಹಿಸಿಕೊಂಡಿದ್ದರ ಪರಿಣಾಮವಾಗಿ ಕಪ್ಪು ಬಣ್ಣಕ್ಕೆ ತಿರುಗಿದವನಾಗಿಯೂ, ಯಾವಾಗಲೂ ಪುಣ್ಯಕಾರ್ಯಗಳನ್ನೇ ಮಾಡುತ್ತಿರುವ ಮುನಿಯನ್ನ ಪೂಜಿಸದಿರಲು ಮನವಾದರೂ ಹೇಗಾಗುತ್ತದೆ…?

( ಈ ಶ್ಲೋಕಕ್ಕೆ ವ್ಯಾಖ್ಯಾನಕಾರರು.. ಇನ್ನೊಂದು ಅರ್ಥವನ್ನೂ ಹೇಳುತ್ತಾರೆ… ಪರಿಶುದ್ಧವಾದ ಆಹಾರವನ್ನು ಸ್ವೀಕರಿಸದೇ ಹೋದಾಗ ಹಲ್ಲುಗಳು ದುರ್ಗಂಧವನ್ನ ಬೀರುತ್ತದೆ.. ಹಾಗಾಗಿ ಯಾವನು ಪರಿಶುದ್ಧ ಅಹಾರವನ್ನು ಸ್ವೀಕರಿಸುವನೋ ಅವನು ದೌತದಂತಂ. ಚಿವುಟುವಿಕೆ ಪರಚುವಿಕೆಗೆ ಮುಂತಾದ ಹಿಂಸಾತ್ಮಕ ಕಾರ್ಯಗಳಿಗೇನೆ ನಾವು ಉಗುರನ್ನ ಬಳಸುವುದು. ಪ್ರಾಣಿಗಳೂ ಆಕ್ರಮಣಕ್ಕೆ ಹೆಚ್ಚಾಗಿ ಉಗುರನ್ನೇ ಬಳಸೋದು. ಹೀಗಾಗಿ ಉಗುರು ಅನ್ನೋದು ಹಿಂಸೆಗೆ ಪ್ರಚೋದಕ ಹಾಗಾಗಿ ಕತ್ತನಖಂ ಅಂದರೆ ಹಿಂಸೆಯನ್ನ ತ್ಯಜಿಸಿದವ ಎಂದರ್ಥ. ಸದಾ ಸ್ನಾತಂ ಅಂದರೆ ಸದಾ ಸ್ನಾನ ಮಾಡುವವನು ಅನ್ನುವುದಕ್ಕಿಂತಲೂ ಮನಸ್ಸನ್ನ ಪರಿಶುದ್ದವಾಗಿಟ್ಟವ ಎಂದಾಗುತ್ತದೆ. ಅಂದರೆ ದೇಹದ ಕೊಳೆಯನ್ನ ತೊಳೆದರೆ ಮನಸಿನ ಕೊಳೆ ಹೋಗಲಾರದು. ಮನಸ್ಸನ್ನ ಸತ್ ಚಿಂತನೆಯ ನೀರಿನಿಂದ ಸದಾ ತೊಳೆಯುವವ.. ಇನ್ನು ಅಲಂಕೃತ ಅಂದರೆ ಬಾಹ್ಯವಾಗಿ ಅಲಂಕರಿಸುವುದಲ್ಲ.. ತಪಸ್ಸಿನ ತೇಜಸ್ಸಿನಿಂದ ತನ್ನನ್ನು ತಾನು ಅಲಂಕರಿಸುವುದು.. )

ಯಯಾತಿ :
ತಪಸಾ ಕರ್ಶಿತಃ ಕ್ಷಾಮಃ ಕ್ಷೀಣಮಾಂಸಾಸ್ಥಿಶೋಣಿತಃ |
ಸ ಚ ಲೋಕಮಿಮಂ ಜಿತ್ವಾ ಲೋಕಂ ವಿಜಯತೇ ಪರಮ್ ||

ಮುನಿಯಾದವನಿಗಿರುವ ಶಕ್ತಿ ಅಪಾರವಾದುದು. ಅವನು ತಪಸ್ಸನ್ನ ಮಾಡಿ ದೇಹವನ್ನ ಶೋಷಿಸಿಬಿಟ್ಟಿರುತ್ತಾನೆ. ಅವನ ಮಾಂಸ ಮೂಳೆ ರಕ್ತಗಳೆಲ್ಲವೂ ಕ್ಷೀಣಿಸಿರುತ್ತದೆ. ಚರ್ಮವೂ ಗಾಳಿ ಬಿಸಿಲು ಮಳೆಗಳಿಗೆ ಸಿಕ್ಕಿ ಸುಕ್ಕಾಗಿ ಹೋಗಿರುತ್ತದೆ. ಅಂತಹವನು ಅರಿಷ್ಡ್ವರ್ಗಗಳಿಂದ ಕೂಡಿರುವ ಈ ಲೋಕವನ್ನ ಜಯಿಸುವುದಲ್ಲದೇ ಉತ್ತಮೋತ್ತಮವಾದ ಇತರ ಲೋಕಗಳನ್ನೂ ಜಯಿಸುತ್ತಾನೆ.

ಯದಾ ಭವತಿ ನಿರ್ದ್ವಂದ್ವೋ ಮುನಿರ್ಮೌನಂ ಸಮಾಸ್ಥಿತಃ |
ಅಥ ಲೋಕಮಿಮಂ ಜಿತ್ವಾ ಲೋಕಂ ವಿಜಯತೇ ಪರಮ್ ||

ಮುನಿಯು ಯಾವಾಗಲೂ ನಿರ್ದ್ವಂದ್ವನಾಗಿರಬೇಕು. ಇಲ್ಲಿ ದ್ವಂದ್ವಗಳೆಂದರೆ ಶೀತ ಉಷ್ಣ, ಸುಖ ದುಃಖ, ಸೋಲು ಗೆಲುವು, ಹೊಗಳಿಕೆ ತೆಗಳಿಕೆ…. ಮುನಿಯಾದವನು ಶೀತ ಕಾಲದಲ್ಲಿ ಕೊರೆಯುವ ನೀರಿನಲ್ಲಿ ನಿಂತು ತಪವನ್ನಾಚರಿಸುತ್ತಾನೆ… ಉಷ್ಣಕಾಲದಲ್ಲಿ ಪಂಚಾಗ್ನಿಗಳ ನಡುವೆ ತಪವನ್ನಾಚರಿಸುತ್ತಾನೆ… ಹೀಗೆ ಅಸಾಧ್ಯವಾದದ್ದನ್ನ ಅತಿಕ್ರಮಿಸುತ್ತಾನೆ… ಸುಖ ಬಂದಾಗ ಹಿಗ್ಗುವುದೂ ಇಲ್ಲ ದುಃಖ ಬಂದಾಗ ಕುಗ್ಗುವುದೂ ಇಲ್ಲ ಸೋಲು ಗೆಲುವು ಹೊಗಳಿಕೆ ತೆಗಳಿಕೆ ಹೀಗೆ ಹಲವು ದ್ವಂದ್ವಗಳನ್ನ ಮೀರಿ ನಿಲ್ಲುತ್ತಾನೆ. ಸಾಮಾನ್ಯ ಮಾನವನಿಗೆ ಇದು ಬಹಳ ಕಷ್ಟ. ಹೀಗೆ ದ್ವಂದ್ವಗಳನ್ನ ಮೀರಿ ಮೌನವ್ರತವನ್ನಾಚರಿಸೋ ಮುನಿಯು ಸಕಲ ಲೋಕವನ್ನೂ ಜಯಿಸುತ್ತಾನೆ.

ಅಸ್ಯೇನ ತು ಯದಾಹಾರಂ ಗೋವನ್ಮೃಗಯತೇ ಮುನಿಃ |
ಅಥಾಸ್ಯ ಲೋಕಃ ಸರ್ವೋಯಂ ಸೋಮೃತತ್ವಾಯ ಕಲ್ಪತೇ ||

ಯಾವನು ತನ್ನ ದಿನನಿತ್ಯದ ಆಹಾರವೇನೆಂಬ ವಿವೇಚನೆಯಿಲ್ಲದೆ ಹಸುವಿನಂತೆ ಸಿಕ್ಕಿದ ಕಾಲದಲ್ಲಿ ಸಿಕ್ಕಷ್ಟು ಆಹಾರವನ್ನು ತಿಂದು ಸುಮ್ಮನಿರುವನೋ ಮತ್ತು ನಿದ್ದೆ ಮಾಡುತ್ತಲೇ ತಾಯಿಯ ಮೊಲೆಹಾಲನ್ನ ಕುಡಿಯುವ ಮಗುವಿನಂತೆ ರುಚಿಯ ವಿಷಯವಾಗಿ ಸ್ವಲ್ಪವೂ ಯೋಚಿಸದೇ ಇರುವನೋ ಅವನು ಪ್ರಪಂಚದ ಆತ್ಮಗಳೆಲ್ಲವೂ ತನ್ನಲ್ಲಿರುವುದೆಂದೂ ತಾನು ಪ್ರಪಂಚದ ಆತ್ಮಗಳೆಲ್ಲದರಲ್ಲಿಯೂ ಇರುವೆನೆಂದೂ ಸಾಧನಾನುಭವವನ್ನು ಪಡೆದು ಅಮೃತತ್ವವನ್ನು ಹೊಂದುತ್ತಾನೆ.

ಅಷ್ಟಕ :
ಕತರಸ್ತ್ವನಯೋಃ ಪೂರ್ವಂ ದೇವಾನಾಮೇತಿ ಸಾತ್ಮತಾಮ್ |
ಉಭಯೋರ್ಧಾವತೋ ರಾಜನ್ಸೂರ್ಯಾಚಂದ್ರಮಸೋರಿವ ||

ತಾತ ಸೂರ್ಯಚಂದ್ರರಂತೆ ಹಗಲಿರುಳೂ ಪರಮಪದಕ್ಕಾಗಿ ಸಾಧನೆಮಾಡುವ ಜ್ಞಾನಿಗಳಲ್ಲಿ ಮತ್ತು ಯೋಗಿಗಳಲ್ಲಿ ಮೊದಲು ಯಾರು ಸಿದ್ಧಿಯನ್ನು ಪಡೆಯುವರು…?

ಯಯಾತಿ :
ಅನಿಕೇತೋ ಗೃಹಸ್ಥೇಷು ಕಾಮವೃತ್ತೇಷು ಸಂಯತಃ |
ಗ್ರಾಮ ಏವ ವಸನ್ಭಿಕ್ಷುಸ್ತಯೋಃ ಪೂರ್ವತರಂ ಗತಃ ||

ಅವಾಪ್ಯ ದೀರ್ಘಮಾಯುಸ್ತು ಯಃ ಪ್ರಾಪ್ತೋ ವಿಕೃತಿಂ ಚರೇತ್ |
ತಪ್ಯತೇ ಯದಿ ತತ್ಕೃತ್ವಾ ಚರೇತ್ಸೋನ್ಯತ್ತಪಸ್ತತಃ ||
ಅಷ್ಟಕ ಮೇಲೆ ಹೇಳಿದವರಲ್ಲಿ ಭಿಕ್ಷುಗಳನ್ನು ಜ್ಞಾನಿಗಳೆಂದು ಪರಿಗಣಿಸಬೇಕು. ಭಿಕ್ಷುವು ವೇದೋಪನಿಷತ್ತುಗಳ ಸಾರವನ್ನು ಸಂಪೂರ್ಣವಾಗಿ ತಿಳಿದವನಾಗಿ ಪ್ರಕೃತಿ, ಬ್ರಹ್ಮ, ಸಂಸಾರ ಈ ವಿಷಯಗಳಲ್ಲಿ ಖಚಿತವಾದ ಅಬಿಪ್ರಾಯವನ್ನು ಹೊಂದಿರುತ್ತಾನೆ. ಅವನು ಗೃಹಸ್ಥರ ಮಧ್ಯದಲ್ಲಿದ್ದರೂ ಅವನ ಮನಸ್ಸೆಲ್ಲವೂ ಸಚ್ಚಿದಾನಂದಸ್ವರೂಪನಲ್ಲಿಯೇ ನೆಲೆಸಿರುತ್ತದೆ. ಗ್ರಾಮದಲ್ಲಿದ್ದರೂ ಯಾವ ವಿಧವಾದ ಸಂಸಾರವಾಸನೆಯೂ ಅಂಟುವುದಿಲ್ಲ. ಅವನನ್ನು ಸುತ್ತುವರಿದಿರುವ ಜ್ಞಾನಾಗ್ನಿಯು ಯಾವ ಸಂಪರ್ಕವೂ ಆಗದಂತೆ ಕಾಯುತ್ತಿರುತ್ತದೆ. ಅಂತಹವನು ಯೋಗಿಗಿಂತಲೂ ಮೊದಲು ಪರಮ ಪದವನ್ನ ಪಡೆಯುವನು. ಯೋಗಿಯಾದವನೂ ಪರಮ ಪದವನ್ನ ಪಡೆಯುವುದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಪ್ರಕೃತಿ, ಬ್ರಹ್ಮ ಸಂಸಾರ ಇವುಗಳ ಕುರಿತಾದ ನಿರ್ದಿಷ್ಟವಾದ ಜ್ಞಾನವಿರುವುದಿಲ್ಲ. ಅವನು ಸಾಧನಾಜೀವಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಇವುಗಳನ್ನು ದಾಟಿ ಸಮಾಧಿಯ ಅವಸ್ಥೆಯನ್ನ ಹೊಂದಬೇಕು. ಅದೂ ಅಲ್ಲದೆ ಸಾಧನೆಯ ಮಧ್ಯದಲ್ಲಿ ಹಲವಾರು ಅನಿರ್ವಾಚ್ಯಶಕ್ತಿಗಳು ಅವನಲ್ಲುಂಟಾಗುತ್ತದೆ. ಪರಬ್ರಹ್ಮನ ಸಾಯುಜ್ಯ ಸಾಮೀಪ್ಯ ಸಾರೂಪ್ಯಾದಿಗಳ ವಿಷಯವಾಗಿ ತಿಳುವಳಿಕೆ ಇಲ್ಲದ ಯೋಗಿಯು ಮಧ್ಯಕಾಲದಲ್ಲಿ ಉಂಟಾಗುವ ಆಶ್ಚರ್ಯಕರವಾದ ಘಟನೆಗಳಿಗೆ ಮನಸೋತಲ್ಲಿ ಅವನು ಯೋಗಭ್ರಷ್ಟನಾಗುವನು. ಮುಂದಿನ ಜನ್ಮದಲ್ಲಿಯೂ ಅವನು ಶ್ರೋತ್ರಿಯರ ಮನೆಯಲ್ಲಿ ಹುಟ್ಟಿ ಯೋಗವನ್ನು ಮುಂದುವರಿಸಬೇಕು. ಒಂದು ವೇಳೆ ತನಗೆ ಮಧ್ಯಕಾಲದಲ್ಲಿ ಸಿಕ್ಕ ಶಕ್ತಿಯನ್ನು ದುರುಪಯೋಗಪಡಿಸಿದರೆ ಅವನಿಗೆ ಮೋಕ್ಷವೆಂಬುದು ಜನ್ಮಜನ್ಮಾಂತರಗಳಲ್ಲಿಯೂ ಸಿಕ್ಕಲಾರದು. ಆದರೆ ಭಿಕ್ಷುವು ಅಥವಾ ಜ್ಞಾನಿಯು ಸಂಸಾರದ ಮಧ್ಯದಲ್ಲೇ ಇದ್ದರೂ ಕಳಂಕರಹಿತನಾಗಿರುತ್ತಾನೆ. ಅವನ ಸಾಧನೆಗೆ ಕಾಲ ದೇಶ ವರ್ತಮಾನಗಳ ವಿವೇಚನೆಯಿಲ್ಲ. ಯಾವಾಗಲೂ ಅವನ ಮನಸ್ಸು ಪರಬ್ರಹ್ಮನಲ್ಲಿಯೇ ಲೀನವಾಗಿರುವುದು. ಯಾವ ವಸ್ತುವನ್ನು ಕಂದರೂ ಅವನಿಗೆ ಪರಬ್ರಹ್ಮನ ರೂಪವೇ ಕಾಣುವುದು.

ಮುಂದುವರೆಯುತ್ತದೆ…

– ಗುರುಪ್ರಸಾದ್ ಆಚಾರ್ಯ

Loading...