ವ್ಯಾಸ ಮಹಾಭಾರತ – ಭಾಗ 7

ಉತ್ತಂಕನು ವಿನೀತನಾಗಿ ತನ್ನ ಗುರುಗಳಿಗೆ ಹೇಳುತ್ತಾನೆ.
“ಗುರುಗಳೇ ನಾನು ಇಲ್ಲಿಂದ ತೆರಳುವ ಮುನ್ನ ತಾವು ತಮ್ಮ ಗುರುದಕ್ಷಿಣೆ ಏನು…? ಎಂಬುದನ್ನು ಹೇಳಿ ನನ್ನನ್ನ ಪುನೀತರನ್ನಾಗಿ ಮಾಡಿ.

ಯಶ್ವಾಧರ್ಮೇಣ ವೈ ಬ್ರೂಯಾದ್ಯಶ್ಚಾಧರ್ಮೇಣ ಪೃಚ್ಛತಿ |
ತಯೋರನ್ಯತರಃ ಪ್ರೈತಿ ವಿದ್ವೇಷಂ ಚಾಧಿಗಚ್ಛತಿ

ಯಾರು ಸಂಪ್ರದಾಯಕ್ಕೆ ವಿರುದ್ಧವಾಗಿ ವಿದ್ಯೆಯನ್ನು ಕಲಿಸುವರೋ, ಯಾರು ಸಂಪ್ರದಾಯಕ್ಕೆ ವಿರುದ್ಧವಾಗಿ ವಿದ್ಯೆಯನ್ನು ಕಲಿಯುವರೋ ಆ ಗುರು ಶಿಷ್ಯರಲ್ಲಿ ಯಾರಾದರೊಬ್ಬರು ಸಾಯುವರು ಅಥವಾ ಅವರಿಬ್ಬರಲ್ಲಿ ಪರಸ್ಪರ ದ್ವೇಷವಾದರೂ ಬೆಳೆಯುತ್ತದೆ ಅನ್ನುವ ಉಕ್ತಿಯಿದೆ. ಈ ಕಾರಣದಿಂದಾಗಿ ಇಲ್ಲಿಂದ ಹೊರಡುವ ಮುನ್ನ ಗುರುದಕ್ಷಿಣೆಯನ್ನು ಕೊಡಬೇಕೆಂಬುದು ನನ್ನ ಆಸೆ. ತಮ್ಮ ಇಷ್ಟದ ವಸ್ತುವನ್ನು ಗುರುದಕ್ಷಿಣೆಯಾಗಿ ಕೊಡಬೇಕೆನ್ನುವ ಮನಸಿದೆ. ಹಾಗಾಗಿ ತಮಗಿಷ್ಟವಾದ ವಸ್ತು ಯಾವುದೆಂದು ತಿಳಿಸಿ, ಎಂದನು.

ಉತ್ತಂಕನ ಗುರುಗಳು ಗುರುದಕ್ಷಿಣೆ ಏನು ಎಂಬುದನ್ನು ನಿನ್ನ ಗುರುಮಾತೆಯ ಬಳಿ ಕೇಳು ಎಂದು ಹೇಳಿ ಕಳುಹಿಸಿದ ನಂತರ ಉತ್ತಂಕನು ನೇರವಾಗಿ ಗುರುಮಾತೆಯ ಬಳಿ ಹೋಗಿ ತಮ್ಮ ಇಷ್ಟದ ವಸ್ತು ಯಾವುದು…? ಎಂದು ಕೇಳುತ್ತಾನೆ. ಅದಕ್ಕವಳು “ಮಗು… ಪೌಷ್ಯರಾಜನ ಮಡದಿಯ ಬಳಿ ಅದ್ಭುತವಾದ ಕರ್ಣಾಭರಣಗಳಿವೆ. ನೀನದನ್ನು ಯಾಚಿಸಿ ತರಬೇಕು. ಇಂದಿಗೆ ನಾಲ್ಕು ದಿನಗಳ ತರುವಾಯ ಮಂಗಳ ದಿನವೊಂದರಂದು ಆ ಕರ್ಣಾಭರಣಗಳನ್ನ ಧರಿಸಿ ಬ್ರಾಹ್ಮಣರನ್ನು ಸತ್ಕರಿಸುವ ಬಯಕೆ ನನ್ನದು. ನನ್ನ ಬಯಕೆಯ ಈಡೇರಿಕೆಯೇ ನೀನು ನಮಗೆ ಕೊಡುವ ಗುರುದಕ್ಷಿಣೆ. ನೀನಿದನ್ನು ಈಡೇರಿಸುವೆಯಾ” ಎಂದಳು.

ಅದಕ್ಕವನು ಖಂಡಿತಾ ಪ್ರಯತ್ನಿಸುತ್ತೇನೆ ಎನ್ನುತ್ತಾ ನೇರವಾಗಿ ಪೌಷ್ಯನ ಪಟ್ಟಣಕ್ಕೆ ಪ್ರಯಾಣ ಬೆಳೆಸಿದನು.

ಆತನ ಪ್ರಯಾಣದ ಮಧ್ಯದಲ್ಲಿ ಎತ್ತರವಾದ ಎತ್ತಿನ ಮೇಲೆ ಕುಳಿತಿದ್ದ ಬೃಹದಾಕಾರದ ಪುರುಷನೊಬ್ಬನು ಸಿಕ್ಕಿದನು. ಆತನು ಉತ್ತಂಕನನ್ನು ತಡೆದು ನಿಲ್ಲಿಸಿ “ನಿನ್ನ ಕಾರ್ಯಸಿದ್ಧಿಯಾಗಬೇಕಾದರೆ ಈ ಎತ್ತಿನ ಸಗಣಿ ಗಂಜಲಗಳನ್ನು ಭಕ್ಷಣ ಮಾಡಿ ಮುಂದೆ ಹೋಗು” ಎಂದನು. ಆದರೆ ಅದನ್ನು ಭಕ್ಷಣ ಮಾಡಿ ಹೋಗಲು ಉತ್ತಂಕನಿಗೆ ಮನಸಾಗಲಿಲ್ಲ. ಕೂಡಲೇ ಆ ವೃಷಭಾರೋಹಿಯು… ಈ ಹಿಂದೆ ನಿನ್ನ ಗುರುಗಳೂ ಇದರ ಭಕ್ಷಣ ಮಾಡಿದ್ದರು ಎಂದನು. ಈ ಮಾತನ್ನು ಕೇಳಿದೊಡನೆ ಉತ್ತಂಕನು ಹಿಂಜರಿಯದೆ ಸಗಣಿ ಗಂಜಲದ ಪ್ರಾಶನ ಮಾಡಿ ನಿಂತುಕೊಂಡೇ ಶುದ್ಧಾಚಮನ ಮಾಡಿ ಪೌಷ್ಯ ನಗರದತ್ತ ಹೆಜ್ಜೆ ಹಾಕಿದನು…

ಪೌಷ್ಯ ನಗರದಲ್ಲೇನಾಯಿತು…? ಆತನಿಗೆ ಕರ್ಣಾಭರಣಗಳು ಸಿಕ್ಕಿದವೇ…. ಇದನ್ನ ಮುಂದಿನ ಭಾಗದಲ್ಲಿ ನೋಡೋಣ…

-ಗುರುಪ್ರಸಾದ್ ಆಚಾರ್ಯ

Related News

Loading...

Leave a Reply

Your email address will not be published.

error: Content is protected !!