ವ್ಯಾಸ ಮಹಾಭಾರತ – ಭಾಗ 8 – News Mirchi

ವ್ಯಾಸ ಮಹಾಭಾರತ – ಭಾಗ 8

ಉತ್ತಂಕನು ಪೌಷ್ಯ ನಗರಕ್ಕೆ ತೆರಳಿ ಅಲ್ಲಿಯ ರಾಜನ ಬಳಿ ನಿವೇದನೆ ಮಾಡಿಕೊಳ್ಳುತ್ತಾನೆ..

“ರಾಜ ನಾನಿಂದು ಒಬ್ಬ ಯಾಚಕನಾಗಿ ಬಂದಿದ್ದೇನೆ. ನನ್ನ ಗುರುಮಾತೆಗೆ ನಿನ್ನ ಮಡದಿಯ ಬಳಿ ಇರುವ ಕರ್ಣಾಭರಣವನ್ನ ಗುರುದಕ್ಷಿಣೆಯಾಗಿ ಕೊಡಬೇಕೆನ್ನುವ ಸಂಕಲ್ಪ ನನ್ನದು. ತಾವು ದಯಪಾಲಿಸಿದರೆ ನಾನು ಕೃತಾರ್ಥನಾದೇನು”

ಅದಕ್ಕೆ ರಾಜ ಬಹಳ ಖುಷಿಯಿಂದ ಹೇಳುತ್ತಾನೆ.
“ಬ್ರಾಹ್ಮಣೋತ್ತಮರೇ ತಮ್ಮ ಮನದಿಚ್ಛೆ ಈಡೇರಿಸುವ ಭಾಗ್ಯ ನಮಗೊದಗಿಸಿದ್ದೀರಿ ಖಂಡಿತವಾಗಿಯೂ ಇದನ್ನ ಈಡೇರಿಸುತ್ತೇನೆ. ತಾವು ನೇರ ನನ್ನ ಅಂತಃಪುರಕ್ಕೆ ತೆರಳಿ ನನ್ನ ಮಡದಿಯ ಬಳಿ ಕರ್ಣಾಭರಣ ಕೇಳಿ ಪಡೆಯಿರಿ” ಎಂದು ಉತ್ತಂಕನನ್ನು ತನ್ನ ಅಂತಃಪುರಕ್ಕೆ ಕಳಿಸುತ್ತಾನೆ. ಆದರೆ ಅಲ್ಲಿ ಉತ್ತಂಕನಿಗೆ ರಾಣಿ ಕಾಣಸಿಗುವುದೇ ಇಲ್ಲ.

ಇದರಿಂದ ಬೇಸರಗೊಂಡ ಮತ್ತೆ ರಾಜನ ಬಳಿ ಬಂದು
“ಅಯ್ಯಾ… ರಾಣಿ ಕೊಡುವಳೆಂದು ರಾಣಿ ಇಲ್ಲದ ಕಡೆ ಕಳುಹಿಸುವುದು ನ್ಯಾಯವೇ…?” ಅನ್ನುತ್ತಾನೆ.

ಒಂದು ಕ್ಷಣ ದಿಗ್ಬ್ರಾಂತನಾದ ರಾಜ ಆಲೋಚಿಸಿ ಉತ್ತಂಕನ ಬಳಿ ಹೇಳುತ್ತಾನೆ.
“ಬ್ರಾಹ್ಮಣೋತ್ತಮರೇ, ನನ್ನ ಮಡದಿ ಪತಿವೃತೆ. ಅಪವಿತ್ರರಿಗೆ ಅವಳ ದರ್ಶನವಾಗಲಾರದು. ನಿಮ್ಮ ಕರ್ಮಾನುಷ್ಠಾನದಲ್ಲಿ ಏನಾದರೂ ಲೋಪವಾಗಿ ನಿಮಗೆ ಆಕೆಯ ದರ್ಶನವಾಗಿರದೇ ಹೋಗಿರಬಹುದೇನೋ…? ಒಮ್ಮೆ ಯೋಚಿಸಿ ನೋಡಿ”

ಉತ್ತಂಕನಿಗೆ ಆಗ ದಾರಿ ಮಧ್ಯದಲ್ಲಿ ನಿಂತುಕೊಂಡೇ ಆಚಮನ ಮಾಡಿದ ತಪ್ಪಿನ ಅರಿವಾಗುತ್ತದೆ. ಕೂಡಲೇ “ನಿಜ ರಾಜನ್ ನನಗೀಗ ನನ್ನ ತಪ್ಪಿನ ಅರಿವಾಗುತ್ತಿದೆ. ಪ್ರಯಾಣ ಮಧ್ಯದಲ್ಲಿ ನಾನು ನಿಂತುಕೊಂಡೇ ಆಚಮನ ಮಾಡಿದ್ದೆ. ಇದೋ ಮತ್ತೊಮ್ಮೆ ಶುಚಿರ್ಭೂತನಾಗಿ ಆಚಮನ ಮಾಡಿ ಬರುತ್ತೇನೆ” ಅನ್ನುತ್ತಾ ಶುಚಿರ್ಭೂತನಾಗಿ ಮತ್ತೊಮ್ಮೆ ಅಂತಃ ಪುರಕ್ಕೆ ತೆರಳುತ್ತಾನೆ.

ಹೀಗೆ ಅಪವಿತ್ರತೆಯನ್ನು ನೀಗಿಸಿ ಹೋದ ಉತ್ತಂಕನಿಗೆ ರಾಣಿಯ ದರ್ಶನವಾಗುತ್ತದೆ. ಅವಳಲ್ಲಿ ಉತ್ತಂಕ ತನ್ನ ಮನದಿಚ್ಛೆಯನ್ನು ಹೇಳಿಕೊಳ್ಳಲು ಆಕೆ ಸಂತಸಪಡುತ್ತಾ ಹೇಳುತ್ತಾಳೆ.

“ಮಹಾತ್ಮರೇ ಸತ್ಪಾತ್ರರಿಗೆ ದಾನ ಮಾಡುವ ಯೋಗ ಎಲ್ಲರಿಗೂ ಲಭಿಸುವುದಿಲ್ಲ ಅಂಥದ್ದರಲ್ಲಿ ತಾವು ತಾವಾಗೇ ಬಂದು ದಾನ ಬಯಸುತ್ತಿರುವುದು ನನ್ನ ಪುಣ್ಯವೇ ಸರಿ… ಆದರೆ ಒಂದು ಮಾತು ನಾಗರಾಜ ತಕ್ಷಕನು ಈ ಕರ್ಣಾಭರಣಗಳನ್ನು ಅಪಹರಿಸಲು ನಿರಂತರ ಯತ್ನಿಸುತ್ತಿದ್ದಾನೆ. ಆತನಿಂದ ಇದನ್ನು ರಕ್ಷಿಸಿಕೊಂಡು ತಮ್ಮ ಗುರುಮಾತೆಗೆ ಇದನ್ನು ತಲುಪಿಸಿ.”

ಉತ್ತಂಕನು ಸಂತೋಷಗೊಂಡು ಅವಳ ಸೂಚನೆಗಳನ್ನು ಒಪ್ಪಿ ಕರ್ಣಾಭರಣಗಳನ್ನು ಸ್ವೀಕರಿಸುತ್ತಾನೆ.

ಹೀಗೆ ಕರ್ಣಾಭರಣಗಳನ್ನು ಹಿಡಿದುಕೊಂಡು ಹೊರಟ ಉತ್ತಂಕನಿಗೆ ಮಾರ್ಗ ಮಧ್ಯದಲ್ಲಿ ಯಾವುದೋ ಒಬ್ಬ ವ್ಯಕ್ತಿ ತನ್ನನ್ನ ಹಿಂಬಾಲಿಸುತ್ತಿರುವುದಾಗಿ ಭಾಸವಾಗುತ್ತಿತ್ತು. ಆದರೂ ಹೆಚ್ಚಿಗೆ ಯೋಚಿಸದೆ ವೇಗವಾಗಿ ತನ್ನ ಗುರುಗಳ ಆಶ್ರಮದತ್ತ ಹೆಜ್ಜೆ ಹಾಕತೊಡಗಿದನು ಈ ನಡುವೆ ಉತ್ತಂಕನು ಕರ್ಮಾನುಷ್ಠಾನಕ್ಕೆಂದು ನದಿಯ ಬಳಿಯ ತೆರಳುವಾಗ ಕರ್ಣಾಭರಣಗಳನ್ನು ದಡದಲ್ಲಿ ತೆಗೆದಿಟ್ಟು ನದಿಗೆ ತೆರಳಿದನು. ಇದೇ ಕ್ಷಣಕ್ಕಾಗಿ ಕಾಯುತ್ತಿದ್ದ ನಾಗರಾಜ ತಕ್ಷಕನು ಆ ಕರ್ಣಾಭರಣಗಳನ್ನು ಅಪಹರಿಸಿ ಅಲ್ಲಿಂದ ಪರಾರಿಯಾದನು.

ಕರ್ಮಾನುಷ್ಠಾನ ಮುಗಿಸಿ ಬರುವ ಹೊತ್ತಿಗೆ ತಕ್ಷಕನು ಕರ್ಣಾಭರಣಗಳನ್ನು ಕದ್ದೊಯ್ಯುತ್ತಿರುವುದನ್ನು ಕಂಡ ಉತ್ತಂಕ ತಡಮಾಡದೆ ಅವನನ್ನು ಹಿಂಬಾಲಿಸತೊಡಗಿದನು. ಇನ್ನೇನು ಮನುಷ್ಯ ರೂಪದಲ್ಲಿದ್ದ ತಕ್ಷಕನನ್ನು ಹಿಡಿದುಬಿಟ್ಟ ಅನ್ನುವಷ್ಟರಲ್ಲಿ ತಕ್ಷಕನು ರೂಪ ಧರಿಸಿ ಹತ್ತಿರದಲ್ಲಿದ್ದ ಬಿಲವನ್ನು ಪ್ರವೇಶಿಸಿ ನಾಗಲೋಕವನ್ನು ಸೇರಿದನು. ಉತ್ತಂಕನು ತನ್ನ ಛಲವನ್ನು ಬಿಡದೆ ತನ್ನ ಪಲಾಶ ದಂಡದಿಂದ ಆ ಬಿಲವನ್ನು ಅಗೆಯ ತೊಡಗಿದನು ಆದರೆ ದುರ್ಬಲವಾದ ಪಲಾಶ ದಂಡದಿಂದ ಶೀಘ್ರವಾಗಿ ಅಗೆಯುವುದು ಸಾಧ್ಯವಾಗುತ್ತಿರಲಿಲ್ಲ. ಆದರೂ ಛಲ ಬಿಡದ ಉತ್ತಂಕನ ಸಾಹಸವನ್ನ ಕಂಡ ಇಂದ್ರನ ತನ್ನ ವಜ್ರಾಯುಧದ ಶಕ್ತಿಯನ್ನು ಆ ಪಲಾಶ ದಂಡಕ್ಕೆ ನೀಡಿದನು. ಹೀಗೆ ಶಕ್ತಿ ಪಡೆದ ಪಲಾಶ ದಂಡದಿಂದಾಗಿ ಉತ್ತಂಕನು ನಾಗಲೋಕದ ಪ್ರವೇಶದ್ವಾರಕ್ಕೆ ಬಂದು ನಿಂತನು ಆದರೆ ನಾಗಲೋಕ ಬಹುದೊಡ್ಡದಾಗಿತ್ತು ಹಲವು ಬಗೆಯ ನಾಗಗಳಿದ್ದವು ಅಲ್ಲಿ ತಕ್ಷಕನು ಹುಡುಕುವುದು ಸವಾಲಿನ ಕೆಲಸವಾಗಿತ್ತು.

ಮುಂದೇನಾಯಿತು…? ಉತ್ತಂಕನು ತಕ್ಷಕನನ್ನು ಹಿಡಿದನೇ ಕರ್ಣಾಭರಣಗಳು ಸಿಕ್ಕಿತೇ…? ಅನ್ನುವುದನ್ನ ಮುಂದಿನ ಭಾಗದಲ್ಲಿ ನೋಡೋಣ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache