ವ್ಯಾಸ ಮಹಾಭಾರತ – ಭಾಗ 9

ನಾಗಲೋಕವನ್ನು ಸೇರಿದ ಉತ್ತಂಕನು ಸ್ತ್ರೋತ್ರಗಳಿಂದ ಹಲವು ನಾಗರನ್ನು ಸ್ತುತಿಸತೊಡಗಿದನು. ಆಗ ಅಲ್ಲೊಬ್ಬ ಅಶ್ವಾರೋಹಿ ಮಹಾಪುರುಷ ಪ್ರತ್ಯಕ್ಷನಾಗಿ “ನಿನ್ನ ಸ್ತ್ರೋತ್ರಗಳನ್ನು ಕೇಳಿ ಆನಂದಿತನಾದೆ ನಿನಗೇನು ಬೇಕು ಕೇಳು” ಎನ್ನುತ್ತಾನೆ. ಆಗ ಉತ್ತಂಕನು “ಪೂಜ್ಯನೇ, ನನ್ನ ಸ್ತ್ರೋತ್ರಕ್ಕೆ ಪ್ರಸನ್ನನಾಗಿರುವುದಾದರೆ ಈ ಪಾತಾಳದಲ್ಲಿರುವ ಸರ್ಪಗಳೆಲ್ಲವೂ ನನ್ನ ಅಧೀನದಲ್ಲಿರುವಂತೆ ಮಾಡು” ಎಂದನು. ಆಗ ಮಹಾಪುರುಷನು ಆಗಲಿ ಎಂದಾಗ ಹೊಗೆಯಿಂದ ಕೂಡಿರುವ ಅಗ್ನಿಯ ಜ್ವಾಲೆಗಳು ಪಾತಾಳವನ್ನು ಸುಡಲು ಆರಂಬಿಸಿತು… ಅದರ ಕೆನ್ನಾಲಿಗೆಗೆ ತುತ್ತಾಗಿ ಎಲ್ಲಿ ತಾನು ಸತ್ತು ಬಿಡುವೆನೋ ಎಂದು ತಿಳಿದ ತಕ್ಷಕನು ಕೂಡಲೇ ಉತ್ತಂಕನ ಬಳಿ ಬಂದು ಕರ್ಣಾಭರಣಗಳನ್ನು ಹಿಂತಿರುಗಿಸಿ ನನ್ನನ್ನು ಕ್ಷಮಿಸು ಎಂದು ಬೇಡಿಕೊಂಡನು. ಕರ್ಣಾಭರಣಗಳನ್ನು ಪಡೆದವನೇ ಉತ್ತಂಕನು ಸಂತಸ ಪಟ್ಟನು ಆದರೆ ಅದಾಗಲೇ ದಿನ ಮೂರು ಕಳೆದಿತ್ತು. ಇನ್ನುಳಿದ ಕೆಲವೇ ಗಂಟೆಗಳಲ್ಲಿ ತನ್ನ ಗುರುಗಳ ಆಶ್ರಮವನ್ನು ಸೇರಲು ಅಸಾಧ್ಯ ಎನ್ನುವುದು ಅರಿವಾದೊಡನೆ ಮನದಲ್ಲಿ ಬೇಸರಿಸತೊಡಗಿದನು. ಇದನ್ನರಿತ ಅಶ್ವಾರೋಹಿ ಮಹಾಪುರುಷನು “ಅಯ್ಯಾ ಉತ್ತಂಕ ಬೇಸರಗೊಳ್ಳಬೇಡ ನೀನು ಈ ಕುದುರೆಯನ್ನೇರು. ನಿನ್ನ ಗುರುಗಳ ಆಶ್ರಮಕ್ಕೆ ನಾನೇ ಕರೆದುಕೊಂಡು ಹೋಗುತ್ತೇನೆ” ಎಂದನು.

ಇತ್ತ ಗುರುಪತ್ನಿಯು ಕರ್ಣಾಭರಣಗಳಿಗಾಗಿ ಕಾಯುತ್ತಲಿದ್ದು ಇನ್ನೂ ಬಾರದ ಉತ್ತಂಕನನ್ನು ನೆನೆದು ಶಪಿಸುವಷ್ಟರಲ್ಲಿ ಉತ್ತಂಕನು ಆಶ್ರಮದತ್ತ ಬಂದು ಗುರುಮಾತೆಗೆ ಕರ್ಣಾಭರಣಗಳನ್ನು ಕೊಟ್ಟನು. ಕರ್ಣಾಭರಣಗಳನ್ನು ಪಡೆದ ಆಕೆ ಅತ್ಯಂತ ಖುಷಿಗೊಂಡು ಅವನನ್ನು ಆಶೀರ್ವದಿಸಿದಳು.

ಕರ್ಣಾಭರಣಗಳನ್ನು ತರುವುದಕ್ಕೆ ಏಕೆ ಇಷ್ಟು ತಡವಾಯಿತು…? ಎಂದು ಉತ್ತಂಕನ ಗುರುಗಳು ಕಾರಣ ಕೇಳಲು ಉತ್ತಂಕನು ತಾನು ಪಟ್ಟ ಕಷ್ಟವನ್ನು ಹೇಳಿಕೊಳ್ಳುತ್ತಾನೆ. ಮತ್ತು ಉತ್ತಂಕನು ನ್ಯಾಯ ಮಾರ್ಗದಲ್ಲಿ ನಡೆದ ನನ್ನ ಜೀವನದಲ್ಲಿ ಯಾಕೆ ಹೀಗಾಯಿತು ಎಂದು ಗುರುಗಳನ್ನು ಪ್ರಶ್ನಿಸುತ್ತಾನೆ

ಆಗ ಗುರುಗಳು ಅವನಿಗೆ ಆ ಘಟನೆಗಳ ರಹಸ್ಯ ತಿಳಿಸುತ್ತಾರೆ.
“ಉತ್ತಂಕ ನಿನಗೆ ಸಿಕ್ಕ ಅಶ್ವಾರೋಹಿ ಮಹಾಪುರುಷನೇ ಪರ್ಜನ್ಯ ದೇವ. ಆ ಅಶ್ವವೇ ಅಗ್ನಿ. ನೀನು ಆಶ್ರಮದಿಂದ ಹೊರಟಾಗ ದಾರಿಯಲ್ಲಿ ಸಿಕ್ಕಿದ ಎತ್ತು ಸಾಕ್ಷಾತ್ ಐರಾವತ. ವೃಷಭಾರೋಹಿ ಇನ್ನಾರು ಅಲ್ಲ ಅದು ಸಾಕ್ಷಾತ್ ಇಂದ್ರ ದೇವ. ನೀನು ಪ್ರಾಶನ ಮಾಡಿದ ಸಗಣಿ ಗಂಜಲಗಳು ಅಮೃತ ಸಮಾನ. ಆ ಅಮೃತವನ್ನು ಪಾನ ಮಾಡಿದುದರಿಂದಲೇ ನಿನಗೆ ನಾಗಲೋಕದಲ್ಲಿನ ವಿಷಮಯ ವಾತಾವರಣದಲ್ಲಿ ಉಸಿರಾಡಲು ಸಾಧ್ಯವಾಗಿದ್ದು. ಇಂದ್ರದೇವನು ನನ್ನ ಮಿತ್ರನಾಗಿರುವುದರಿಂದ ನಿನ್ನ ಮೇಲೆ ಆತ ಕೃಪೆ ತೋರಿ ನಿನಗೆ ಕರ್ಣಾಭರಣ ಸಿಕ್ಕುವಂತೆ ಮಾಡಿದ. ಇಂದಿಗೆ ನೀನು ಕೊಡಬೇಕಾಗಿದ್ದ ಗುರುದಕ್ಷಿಣೆಯನ್ನೂ ಕೊಟ್ಟಂತಾಯಿತು… ಇನ್ನು ನೀನು ಸ್ವತಂತ್ರನು ನಿನಗೆ ಕಲ್ಯಾಣವಾಗಲಿ” ಎಂದನು.
ಗುರುಗಳ ಆಶೀರ್ವಾದ ಪಡೆದ ಉತ್ತಂಕ ಮನದೊಳಗೇ ನಾಗರಾಜ ತಕ್ಷಕನ ಮೇಲೆ ಬಹಳ ಕ್ರೋಧಿತನಾಗಿದ್ದನು… ಹಾಗೇ ಯೋಜನೆಯನ್ನು ಮನದಲ್ಲೇ ರೂಪಿಸುತ್ತಾ ನೇರವಾಗಿ ಹಸ್ತಿನಾಪುರದತ್ತ ಹೆಜ್ಜೆ ಹಾಕತೊಡಗಿದನು….

ಹಸ್ತಿನಾಪುರವನ್ನು ತಲುಪಿದೊಡನೆಯೇ ಉತ್ತಂಕನು ನೇರವಾಗಿ ಜನಮೇಜಯನಲ್ಲಿಗೆ ತೆರಳಿದನು ಅಲ್ಲಿ ರಾಜನ ಆತಿಥ್ಯವನ್ನು ಸ್ವೀಕರಿಸುತ್ತಾ…

“ರಾಜನ್ ಮಹಾನ್ ಕಾರ್ಯಮಾಡಬೇಕಾಗಿರೋ ನೀನು ಆ ಕಾರ್ಯದ ಪರಿವೆಯೇ ಇಲ್ಲದೆ ಸುಮ್ಮನಿರುವುದು ನನಗೇಕೋ ಅಸಮಾಧಾನ ತಂದಿದೆ” ಎಂದನು

ಇದಕ್ಕೆ ಜನಮೇಜಯ
“ಪೂಜ್ಯರೇ… ಪ್ರಜಾಪರಿಪಾಲನೆಯಲ್ಲಿ ನನ್ನಿಂದೇನಾದರೂ ಲೋಪವಾಯಿತೇ…”
ಉತ್ತಂಕ : ಇಲ್ಲ, ಪ್ರಜಾಪರಿಪಾಲನೆಯಲ್ಲಿ ನಿನ್ನಿಂದೇನೂ ಅಪಚಾರವಾಗಿಲ್ಲ ಆದರೆ ನಿನ್ನ ತಂದೆಯ ಹಂತಕನ ಬಗ್ಗೆ ಸುಮ್ಮನಿರುವುದು ನನಗೇನೋ ಅಸಮಾಧಾನವನ್ನುಂಟುಮಾಡಿದೆ. ರಾಜರ್ಷಿಗಳ ಪರಿಪಾಲನೆ ಮಾಡುವ ಕರ್ತವ್ಯಕ್ಕೆ ಬದ್ಧನಾಗಿದ್ದ ನಿನ್ನ ತಂದೆ ಪರೀಕ್ಷಿತನನ್ನ ತಕ್ಷಕನು ಕೊಂದಿದ್ದರೂ ನೀನು ಸುಮ್ಮನಿರುವೆಯಲ್ಲಾ… ನಿನಗೆ ನಿನ್ನ ತಂದೆಯ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಬೇಕು ಅಂತನಿಸುವುದಿಲ್ಲವೇ
ಜನಮೇಜಯ : ಹಾ… ಇದು ನಿಜವೇ ನನ್ನ ತಂದೆಯನ್ನು ತಕ್ಷಕನು ಕಚ್ಚಿ ಕೊಂದದ್ದೇ…???
ಎನ್ನುತ್ತಾ ತನ್ನ ಮಂತ್ರಿಗಳ ಜೊತೆ ಸತ್ಯವನ್ನು ಹೇಳಿ ಎನ್ನುತ್ತಾನೆ…

ಮಂತ್ರಿಗಳು ನಿಜವನ್ನು ಹೇಳಲು ಜನಮೇಜಯ ಆಕ್ರೋಶಿತನಾಗುತ್ತಾನೆ.
ಉತ್ತಂಕನು “ನಿನ್ನ ಪ್ರತೀಕಾರ ಈಡೇರಲು ನೀನು ಸರ್ಪಯಾಗ ಮಾಡು” ಎನ್ನುತ್ತಾನೆ…

ಮುಂದುವರಿಯುತ್ತದೆ…….
– ಗುರುಪ್ರಸಾದ್ ಆಚಾರ್ಯ