ಮೈಕ್ರೋ ಎಟಿಎಂ ಬಳಕೆಗೆ ಮುಂದಾದ ಸರ್ಕಾರ, ಮೈಕ್ರೋ ಎಟಿಎಂ ಎಂದರೇನು? – News Mirchi

ಮೈಕ್ರೋ ಎಟಿಎಂ ಬಳಕೆಗೆ ಮುಂದಾದ ಸರ್ಕಾರ, ಮೈಕ್ರೋ ಎಟಿಎಂ ಎಂದರೇನು?

ಶೀಘ್ರದಲ್ಲೇ, ಭಾರೀ ಪ್ರಮಾಣದಲ್ಲಿ ಮೈಕ್ರೋ ಎಟಿಎಂ ಗಳನ್ನು ತಂದು ನೋಟು ರದ್ದಾದ ನಂತರ ಹಣ ತೆಗೆಯಲು ಮತ್ತು ನೋಟು ಬದಲಿಸಿಕೊಳ್ಳಲು ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳುತ್ತಿದ್ದಾರೆ. ಇವುಗಳಿಂದ ಹಣ ತೆಗೆಯುವುದು ಸುಲಭವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೈಕ್ರೋ ಎಟಿಎಂ ಕುರಿತು ಬಹುತೇಕರಿಗೆ ತಿಳಿದಿಲ್ಲ. ಇಷ್ಟು ದಿನ ಹಣ ತೆಗೆಯಬೇಕೆಂದರೆ ನಮಗೆ ಎಟಿಎಂ (ಆಟೋಮೇಟೆಡ್ ಟೆಲ್ಲರ್ ಮಷೀನ್) ಮಾತ್ರ ಬಳಸಿ ಅಭ್ಯಾಸ. ಮೈಕ್ರೋ ಎಟಿಎಂ ಗಳು ಕಾರ್ಡ್ ಉಜ್ಜುವ ಪೋರ್ಟಬಲ್ ಯಂತ್ರಗಳು. ಇವುಗಳಿಗೆ ಜಿಪಿಆರ್‌ಎಸ್ ಸಂಪರ್ಕವಿರುತ್ತದೆ. ಆದ್ದರಿಂದ ಡೆಬಿಟ್ ಕಾರ್ಡ್ ಉಜ್ಜುತ್ತಿದ್ದಂತೆ ಸಂಬಂಧಿತ ಬ್ಯಾಂಕ್ ಗೆ ಸಂಪರ್ಕ ಪಡೆಯುತ್ತದೆ. ಆಗ ಎಷ್ಟು ಹಣ ವಿತ್ ಡ್ರಾ ಮಾಡಬೇಕೋ ಎಂಟರ್ ಮಾಡಿದರೆ ಅಕೌಂಟ್ ನಿಂದ ಅಷ್ಟು ಮೊತ್ತ ಕಡಿಮೆಯಾಗುತ್ತದೆ. ಆಗ ಆ ಯಂತ್ರ ತಂದ ವ್ಯಕ್ತಿ ಅಷ್ಟು ಮೊತ್ತವನ್ನು ತೆಗೆದುಕೊಡುತ್ತಾನೆ.

ಸಾಮಾನ್ಯವಾಗಿ ಇಂತಹ ಮೈಕ್ರೋ ಎಟಿಎಂ ಗಳನ್ನು ಎಟಿಎಂ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಬಿಸಿನೆಸ್ ಕರೆಸ್ಪಾಂಡೆಂಟ್ಸ್ ಹೊತ್ತೊಯ್ಯುತ್ತಾರೆ. ಶಾಖೆಗಳಿಂದ ದೂರ ಇರುವ ಪ್ರದೇಶಗಳ ಗ್ರಾಹಕರಿಗೆ ಬ್ಯಾಂಕ್ ಸೇವೆಗಳನ್ನು ನೀಡಲು ಇವುಗಳನ್ನು ಮೊದಲು ಆರಂಭಿಸಿದರು. ಆರಂಭದಲ್ಲಿ ಡಿಪಾಸಿಟ್ ಮಾಡಲು ಇವುಗಳಲ್ಲಿ ಅವಕಾಶ ಕಲ್ಪಿಸಿದ್ದರು. ಈಗ ಅಗತ್ಯಕ್ಕೆ ತಕ್ಕಂತೆ ಹಳೆಯ ನೋಟು ಸ್ವೀಕೃತಿ, ಹೊಸ ನೋಟು ನೀಡುವುದು ಮುಂತಾದ ವ್ಯವಹಾರಗಳೂ ಸಹ ನಡೆಸಲು ಅವಕಾಶವಿದೆ.

ಸಾಮಾನ್ಯವಾಗಿ ಒಂದು ಮಾಮೂಲಿ ಎಟಿಎಂ ನಿರ್ವಹಣೆಗೆ ತಿಂಗಳಿಗೆ ಸುಮಾರು ರೂ. 20 ಸಾವಿರದವರೆಗೂ ವೆಚ್ಚವಾಗುತ್ತದೆ. ಬಾಡಿಗೆ, ಟೆಲಿಕಾಂ ಶುಲ್ಕಗಳು, ವಾರ್ಷಿಕ ನಿರ್ವಹಣೆ, ಭದ್ರತಾ ಸಿಬ್ಬಂದಿ ವೆತನ, ವಿದ್ಯುತ್ ಶುಲ್ಕ ಇದರಲ್ಲಿ ಸೇರಿರುತ್ತವೆ.

ಆದರೆ ಮೈಕ್ರೋ ಎಟಿಎಂ ಉಪಕರಣದ ಖರೀದಿ ವೆಚ್ಚ 20 ಸಾವಿರ ರೂಪಾಯಿಯ ಒಳಗೆ ಇರುತ್ತದೆ. ಅದನ್ನು ಕೈಯಲ್ಲಿ ಹೊತ್ತು ಎಲ್ಲಿಗಾದರೂ ಹೋಗಬಹುದು. ನಿರ್ವಹಣಾ ವೆಚ್ಚವಂತೂ ಇಲ್ಲವೇ ಇಲ್ಲ. ಕೇವಲ ಚಾರ್ಜ್ ಮಾಡಿಕೊಂಡರೆ ಸಾಕು. ಇದನ್ನು ಜಿಎಸ್ಎಂ ಸಿಮ್ ನೊಂದಿಗೂ ಕನೆಕ್ಟ್ ಮಾಡಲು ಅವಕಾಶವಿದೆ. ಹಾಗಾಗಿ ಸಿಗ್ನಲ್ ಬರುವ ಪ್ರತಿ ಪ್ರದೇಶಕ್ಕೆ ಒಯ್ಯಬಹುದು. ಆದರೆ ಇದರಲ್ಲಿ ಕೂಡಾ ಕೆಲ ಮಿತಿಗಳಿರುತ್ತವೆ. ಸಂಬಂಧಿತ ಬಿಸಿನೆಸ್ ಕರೆಸ್ಪಾಂಡೆಂಟ್ ಬಳಿ ಎಷ್ಟು ಹಣವಿದೆಯೋ ಅಷ್ಟು ಮಾತ್ರ ಅವರು ನೀಡಲು ಸಾಧ್ಯ.

Click for More Interesting News

Loading...

Leave a Reply

Your email address will not be published.

error: Content is protected !!