ಬರುತ್ತಿದೆ ವಾಟ್ಸಾಪ್ ವೀಡಿಯೋ ಕಾಲಿಂಗ್

ವಾಟ್ಸಾಪ್ ಬಳಕೆದಾರರಿಗೆ ಸಿಹಿ ಸುದ್ದಿ. ವಾಟ್ಸಾಪ್ ನಲ್ಲಿ ವೀಡಿಯೋ ಕಾಲಿಂಗ್ ಸೌಲಭ್ಯವನ್ನು ಶೀಘ್ರದಲ್ಲೇ ಭಾರತದಲ್ಲಿನ ಗ್ರಾಹಕರಿಗೆ ಮೊದಲು ನೀಡಲಿದೆ. ಫೇಸ್ಬುಕ್ ಗೆ ಸೇರಿದ ವಾಟ್ಸಾಪ್ ಅತಿ ಕಡಿಮೆ ಅವಧಿಯಲ್ಲೇ ಸುಮಾರು 16 ಕೋಟಿ ಬಳಕೆದಾರರನ್ನು ಭಾರತ ದೇಶದಲ್ಲಿ ಹೊಂದಿದೆ.

ಕೆಲ ದಿನಗಳಿಂದ ವಾಟ್ಸಾಪ್ ವೀಡಿಯೋ ಕಾಲಿಂಗ್ ಸೇವೆಗಾಗಿ ಕೆಲಸ ಮಾಡುತ್ತಿದ್ದು, ಈ ಸೌಲಭ್ಯವನ್ನು ಭಾರತದಿಂದಲೇ ಆರಂಭಿಸುತ್ತಿರುವುದು ಸಂತೋಷ ತಂದಿದೆ ಎಂದು ಆ ಸಂಸ್ಥೆಯ ವಾಣಿಜ್ಯ ವಿಭಾಗದ ನೀರಜ್ ಅರೋರಾ ಹೇಳಿದ್ದಾರೆ.

ವೀಡಿಯೋ ಕಾಲ್ಸ್ ಗೆ ಮೆಸೇಜ್ ಮತ್ತು ವಾಯ್ಸ್ ಕಾಲ್ಸ್ ಗೆ ಇದ್ದಂತೆ ಭದ್ರತೆ ಇರುತ್ತದೆ ಎಂದರು. ವೀಡಿಯೋ ಕಾಲ್ ನಲ್ಲಿ ಮಾಡುವವರ ಮಾಹಿತಿ ಮೂರನೆಯ ವ್ಯಕ್ತಿಗೆ ತಿಳಿಯದಂತೆ ಎಂಡ್ ಟು ಎಂಡ್ ಎನ್ಕ್ರಿಪ್ಟ್ ಮಾಡುತ್ತೇವೆ ಎಂದು ಅರೋರಾ ಹೇಳಿದರು. ಆದರೆ ವಾಟ್ಸಾಪ್ ವೀಡಿಯೋ ಕಾಲ್ಸ್ ಗಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿಕೊಳ್ಳಬೇಕು ಎಂದರು.