ಬಣ್ಣದ ಅಕ್ಷರಗಳಲ್ಲಿ ಸ್ಟೇಟಸ್ ಈಗ ವಾಟ್ಸಾಪ್ ನಲ್ಲಿ ಲಭ್ಯ

ಕೆಲ ದಿನಗಳಿಂದ ವಾಟ್ಸಾಪ್ ತನ್ನ ಬೀಟಾ ವರ್ಷನ್ ನಲ್ಲಿ ಪರೀಕ್ಷಿಸಿದ ಬಣ್ಣದ ಸ್ಟೇಟಸ್ ವೈಶಿಷ್ಟ್ಯವನ್ನು, ಇದೀಗ ಆಂಡ್ರಾಯ್ಡ್ ಮತ್ತು ಐಫೋನ್ ಆಪ್ ಗಳಿಗೆ ಬಿಡುಗಡೆ ಮಾಡಿದೆ. ಇದೇ ರೀತಿಯ ಫೀಚರ್ ಅನ್ನು ಈ ಹಿಂದೆಯೇ ಫೇಸ್ಬುಕ್ ಆಂಡ್ರಾಯ್ಡ್ ಆಪ್ ಗಳಲ್ಲಿ ನೀಡಿದೆ.

ಬಣ್ಣದ ಅಕ್ಷರಗಳಲ್ಲಿ ಸ್ಟೇಟಸ್ ಬರೆಯುವ ಈ ಫೀಚರ್ ಬಗ್ಗೆ ವಾಟ್ಸಾಪ್ ಖಚಿತಪಡಿಸಿದೆ. ಆದರೆ ಎಲ್ಲಾ ಬಳಕೆದಾರರಿಗೆ ಈಗಲೇ ಈ ಹೊಸ ವಾಟ್ಸಾಪ್ ಫೀಚರ್ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲ ಬಳಕೆದಾರರು ಈಗ ಇದು ಲಭ್ಯವಾಗಬಹುದು, ಉಳಿದ ಗ್ರಾಹಕರಿಗೆ ಈ ಕುರಿತು ಶೀಘ್ರದಲ್ಲಿಯೇ ನೋಟಿಫಿಕೇಷನ್ ಬರಬಹುದು.

ಐಫೋನ್ ಬಳಕೆದಾರರಿಗೆ ಕ್ಯಾಮೆರಾ ಐಕಾನ್ ಪಕ್ಕದಲ್ಲಿ ಪೆನ್ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಸ್ಟೇಟಸ್ ಬರೆಯುವ ಆಯ್ಕೆ ಕಾಣುತ್ತದೆ. ನಿಮಗಿಷ್ಟವಾದ ಅಕ್ಷರ, ಎಮೋಜಿ, ಮತ್ತು ಹಿನ್ನೆಲೆ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಟೇಟಸ್ ಬರೆದ ನಂತರ ಹಸಿರು ಬಣ್ಣದ ಬಾಣದ ಗುರುತನ್ನು ಒತ್ತುವ ಮೂಲಕ ಟೆಕ್ಸ್ಟ್ ಸ್ಟೇಟಸ್ ಕಳುಹಿಸಬಹುದು. ಆಗ ನಿಮ್ಮ ಎಲ್ಲಾ ಸ್ನೇಹಿತರು ನಿಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ನೋಡಬಹುದು.

ಆಂಡ್ರಾಯ್ಡ್ ಗ್ರಾಹಕರಿಗೆ ಕೆಳಬಾಗದ ಸ್ಟೇಟಸ್ ಟ್ಯಾಬ್ ನಲ್ಲಿ ಕ್ಯಾಮೆರಾ ಐಕಾನ್ ಮೇಲೆ ಫ್ಲೋಟಿಂಗ್ ಪೆನ್ ಐಕಾನ್ ಕಾಣುತ್ತದೆ.