ದೂರು ನೀಡಲು ಹೊರಟವನಿಗೆ ಪೊಲೀಸರು ನೀಡಿದ ಶಾಕ್!

ಮುಂಬೈ: ಕಾರು ಅಪಘಾತ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಹೋದ ಸಾಫ್ಟ್’ವೇರ್ ಎಂಜಿನಿಯರ್ ಒಬ್ಬರಿಗೆ ವಿಶೇಷ ಅನುಭವವಾಗಿದೆ. ದೂರು ನೀಡಲು ಬಂದ ದಿನ ಆತನ ಹುಟ್ಟು ಹಬ್ಬವೆಂದು ಅರಿತ ಪೊಲೀಸರು ಅಂದೇ ಕೇಕ್ ತರಿಸಿ ಆತನಿಗೆ ಠಾಣೆಯಲ್ಲಿಯೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರಿಂದಾಗಿ ದೂರು ನೀಡಲು ಬಂದಾತ ಆಶ್ಚರ್ಯದ ಜೊತೆಗೆ ಸಂತೋಷಗೊಂಡಿದ್ದಾನೆ.

ಈ ಘಟನೆಯು ಮುಂಬೈಯ ಸಕಿನಕಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಸಾಫ್ಟ್ವೇರ್ ಇಂಜಿನಿಯರ್ ಅನೀಶ್ ಜೈನ್ (28) ತನ್ನ ಹೊಸ ಕಾರಿನಲ್ಲಿ ತೆರಳುತ್ತಿದ್ದಾಗ ಒಂದು ಟೆಂಪೋ ಡಿಕ್ಕಿ ಹೊಡೆದಿತ್ತು. ಈ ಕುರಿತು ದೂರು ಸಲ್ಲಿಸಲು ಟೆಂಪೋ ಡ್ರೈವರ್ ಜೊತೆ ಠಾಣೆಗೆ ಆಗಮಿಸಿದ ಅನೀಶ್ ವಿವರಗಳನ್ನು ನೀಡಿದರು. ದೂರು ನೀಡಿದ ದಿನವೇ (ಅಕ್ಟೋಬರ್ 14) ಅನೀಶ್ ಹುಟ್ಟಿದ ದಿನ ಎಂದು ಅರಿತ ಅಧಿಕಾರಿಗಳು, ಕೇಕ್ ತರಿಸಿ ಅಲ್ಲೇ ಹುಟ್ಟು ಹಬ್ಬ ಆಚರಿಸಿದರು.

ಕಾಯುವಂತೆ ತಿಳಿಸಿದ್ದರು

ಈ ಕುರಿತು ಪ್ರತಿಕ್ರಿಯಿಸಿರುವ ಅನೀಶ್, “ಅಂದು ನಾನು ದೂರು ನೀಡಲು ಹೋಗಿದ್ದೆ, ಸ್ವಲ್ಪ ಹೊತ್ತು ಕಾಯುವಂತೆ ಪೊಲೀಸರು ಹೇಳಿದ್ದರು. ಅಂದು ನಾನು ಹುಟ್ಟಿದ ದಿನವಾದ್ದರಿಂದ ಸ್ವಲ್ಪ ತಡವಾಗುತ್ತಿದ್ದುದಕ್ಕೆ ಬೇಸರಗೊಂಡಿದ್ದೆ, ಆದರೆ ಠಾಣೆಯಲ್ಲಿಯೇ ಹುಟ್ಟು ಹಬ್ಬ ಆಚರಣೆ ನಡೆಯುತ್ತದೆಂದು ನಿರೀಕ್ಷಿಸಿರಲೇ ಇಲ್ಲ ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559