ಪ್ರಬಲ ಅಣ್ವಸ್ತ್ರ ತಯಾರಿಕೆಯಲ್ಲಿ ಪಾಕ್: ಅಮೆರಿಕ ವಿಜ್ಞಾನಿಗಳು ಹೇಳುವಂತೆ

ಪಾಕಿಸ್ತಾನ ದೊಡ್ಡ ಪ್ರಮಾಣದಲ್ಲಿ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಅಮೆರಿಕದ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಈಗಾಗಲೇ ಸುಮಾರು 130 ರಿಂದ 140 ಕ್ಷಿಪಣಿಗಳನ್ನು ಪಾಕ್ ತಯಾರಿಸಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕ ಜಾರಿ ಮಾಡಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಎಫ್-16 ಫೈಟರ್ ಗಳ ಮೂಲಕ ನ್ಯೂಕ್ಲಿಯರ್ ಸಿಡಿತಲೆಗಳನ್ನು, ಮಿರಾಜ್ ಫೈಟರ್ ಗಳಿಂದ ರಾಡ್ ಏರ್ ಲಾಂಚ್ ಕ್ರೂಸ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯಗಳನ್ನು ಅಳವಡಿಸಿದೆ ಎಂದು ಹೇಳಿದ್ದಾರೆ.

ಗೂಗಲ್ ಮ್ಯಾಪ್ಸ್ ಮೂಲಕ ಹತ್ತು ಪಾಕಿಸ್ತಾನಿ ನ್ಯೂಕ್ಲಿಯರ್ ನೆಲೆಗಳನ್ನು ಪರಿಶೀಲಿಸಿದ ನಂತರ ಅಮೆರಿಕ ವಿಜ್ಞಾನಿಗಳು ಹಲವು ಕುತೂಹಲಕರ ವಿಷಯಗಳನ್ನು ಹೇಳಿದ್ದಾರೆ. ಕರಾಚಿಗೆ ಪಶ್ಚಿಮಕ್ಕೆ ಇರುವ ಮಸ್ರೂರ್ ವಾಯುನೆಲೆಯಲ್ಲಿ ಎಫ್-16 ಜೆಟ್ ಗಳಿಗೆ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಶಕ್ತಿ ಸಾಮರ್ಥ್ಯಗಳನ್ನು ಮೇಲ್ದರ್ಜೆಗೇರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕನ್ ವಿಜ್ಞಾನಿಗಳು ಪರಿಶೀಲಿಸಿದ ಹತ್ತು ಬೇಸ್ ಗಳಲ್ಲಿ ಐದು ಗ್ಯಾರಿಸನ್ಸ್(ಸೈನಿಕ ಸ್ಥಾವರಗಳು), ಎರಡು ಬೇಸ್‌ಗಳು ಇವೆ ಎಂಬುದಾಗಿ ತಿಳಿಸಿದ್ದಾರೆ.

ಈ ಬೇಸ್‌ಗಳಲ್ಲಿ ಅಣ್ವಸ್ತ್ರಗಳನ್ಮು ಬಳಸಿ 100 ಕಿಮೀ ವ್ಯಾಪ್ತಿಯೊಳಗಿನ ಗುರಿಯನ್ನು ಪಾಕ್ ಭೇದಿಸಬಲ್ಲಬಹುದಂತೆ. ಪಾಕಿಸ್ತಾನ ಬಳಸುತ್ತಿರುವ ತಂತ್ರಜ್ಞಾನವೆಲ್ಲಾ ಚೀನಾಗೆ ಸೇರಿದ್ದೆಂದು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಇಸ್ಲಾಮಾಬಾದ್‌ನಲ್ಲಿನ ಪಾಕಿಸ್ತಾನಿ ನ್ಯಾಷನಲ್ ಡೆವಲಪ್ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಶಾಹೀನ್-2, ಬಾಬರ್ ಮಿಸ್ಸೈಲ್ಸ್ ತಯಾರಿಸಲಾಗುತ್ತಿದೆಯಂತೆ. ಪಾಕಿಸ್ತಾನ ಕ್ರಮೇಣ ಭಾರತಕ್ಕೆ ಸರಿಸಾಟಿಯಾಗಿ ಆಯುಧಗಳನ್ನು ತಯಾರಿಸುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.