ಆಧುನಿಕ ಚೀನಾ ಬಂದೂಕುಗಳ ಎದುರು ನಿಲ್ಲಬಲ್ಲವೇ ನಮ್ಮ ಹಳೆ ಬಂದೂಕುಗಳು?

ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ದೇಶಗಳ ಸೈನಿಕರ ನಡುವೆ ಘರ್ಷಣೆಗಳು, ಅತ್ತ ಚೀನಾ ಕಡೆಯಿಂದ ಎಚ್ಚರಿಕೆ, ಇತ್ತ ಭಾರತದಿಂದ ದಿಟ್ಟ ಪ್ರತಿಕ್ರಿಯೆ. ಯುದ್ಧಕ್ಕೆ ನಾವು ಸಿದ್ಧ ಎಂಬಂತೆ ಎರಡೂ ರಾಷ್ಟ್ರಗಳು ಮಾತನಾಡುತ್ತಿವೆ. ಆದರೆ ಒಂದು ವೇಳೆ ಚೀನಾ ಏನಾದರೂ ಯುದ್ಧಕ್ಕೆ ಮುಂದಾದರೆ ಅವರ ಸೈನಿಕರ ಬಳಿ ಇರುವ ಅತ್ಯಾಧುನಿಕ ಬಂದೂಕುಗಳಿಗೆ ಎದುರು ಭಾರತೀಯ ಸೈನಿಕರ ಬಳಿ ಇರುವ ಹಳೇ ಬಂದೂಕುಗಳು ನಿಲ್ಲಬಲ್ಲವೇ ಎಂಬು ಪ್ರಶ್ನೆಗಳು ಉದ್ಭವಿಸುತ್ತಿವೆ.

1988 ರಲ್ಲಿ ಪರಿಚಯಿಸಿದ ಇನ್ಸಾಸ್ ಅಥವಾ “ಇಂಡಿಯನ್ ಸ್ಮಾಲ್ ಆರ್ಮಸ್ ಸಿಸ್ಟ್ಸ್ ರೈಫಲ್ಸ್” ಬಂದೂಕುಗಳನ್ನೇ ಇಂದು ನಮ್ಮ ಸೈನಿಕರು ನಂಬಿಕೊಂಡಿದ್ದಾರೆ. ಅವು ತುಂಬಾ ಹಳತಾದವು. ಈ ಬಂದೂಕುಗಳು ಆಗಾಗ ಜಾಮ್ ಆಗುತ್ತಿರುತ್ತವೆ, ಬುಲೆಟ್ ಇಡುವ ಮ್ಯಾಗಜಿನ್ ಗಳು ಬಿರುಕುಬಿಡುತ್ತಿವೆ, ಸಿಯಾಚಿನ್ ನಲ್ಲಿ ಇವುಗಳಿಂದ ಜೀವ ಒತ್ತೆಯಿಟ್ಟು ತುಂಬಾ ಕಷ್ಟಪಡಬೇಕಾಯಿತು ಎಂದು ಭಾರತೀಯ ಸೈನಿಕರು ತಮ್ಮ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರು. ಚತ್ತೀಸಘಡದಲ್ಲಿ ನಕ್ಸಲರನ್ನು ಈ ಇನ್ಸಾಸ್ ಬಂದೂಕುಗಳಿಂದ ಎದುರಿಸಲು ಕಷ್ಟಸಾಧ್ಯವಾಯಿತು, ಆಧುನಿಕ ಬಂದೂಕುಗಳನ್ನು ನೀಡಿ ಎಂದು ಅರೆ ಸೇನಾ ಪಡೆಗಳ ಮೊರೆ ಅರಣ್ಯ ರೋಧನವಾಯಿತು. ಮತ್ತೊಂದು ಆಶ್ಚರ್ಯವೆಂದರೆ ನಕ್ಸಲರೇ ಎಕೆ-47 ಬಂದೂಕು ಬಳಸುತ್ತಿದ್ದಾರೆ. ಕಾಶ್ಮೀರದಲ್ಲಿ ಕೂಡಾ ಈ ಹಳೇ ರೈಫಲ್ ಗಳಿಂದ ಉಗ್ರರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಸೈನಿಕರು ಈಗಾಗಲೇ ಮನವಿ ಮಾಡುತ್ತಲೇ ಇದ್ದಾರೆ.

ಎಕೆ-47 ರೈಫಲ್

ನಕ್ಸಲರಿಂದ, ಉಗ್ರರಿಂದ ಸ್ವಾಧೀನಪಡಿಸಿಕೊಂಡ ಕೆಲ ಎಕೆ-47 ರೈಫಲ್ ಗಳನ್ನು ಭಾರತದ ಪ್ಯಾರಾಮಿಲಿಟರಿ ನಕ್ಸಲರು ಮತ್ತು ಉಗ್ರರ ವಿರುದ್ಧವೇ ಬಳಸುತ್ತಾ ಬರುತ್ತಿದ್ದಾರೆ. ರಷ್ಯಾ ತಯಾರಿಸಿದ ಈ ರೈಫಲ್ ಗಳನ್ನು ಕಲಾಷ್ನಿಕೋವ್ ರೈಫಲ್ಸ್ ಎಂದೂ ಕೂಡಾ ಕರೆಯುತ್ತಾರೆ. ಈ ಬಂದೂಕುಗಳಲ್ಲಿ ಶೇಖಡಾವಾರು ಎರ್ರರ್ ಅತಿ ಕಡಿಮೆ 0.02 ಇರುವುದರಿಂದ ಭಾರತೀಯ ಸೈನಿಕರು, ಹಿರಿಯ ಸೇನಾಧಿಕಾರಿಗಳು ಈ ಬಂದೂಕುಗಳೇ ಬೇಕೆಂದು ಸರ್ಕಾರಕ್ಕೆ ತುಂಬಾ ಹಿಂದೆಯೇ ಮೊರೆಯಿಟ್ಟಿದ್ದಾರೆ. ಆಗ ಸ್ಪಂದಿಸಿದ್ದ ಭಾರತ ಸರ್ಕಾರ 2010 ರಿಂದ 2013 ರ ನಡುವೆ 67 ಸಾವಿರ ಎಕೆ-47 ಬಂದೂಕುಗಳನ್ನು ಆಮದು ಮಾಡಿಕೊಂಡಿತ್ತು. 3 ಲಕ್ಷ ಸಿ.ಆರ್.ಪಿ.ಎಫ್, 13 ಲಕ್ಷ ಭಾರತೀಯ ಸೈನಿಕರಿಗೆ 67 ಸಾವಿರ ಬಂದೂಕುಗಳು ಆಮದು ಮಾಡಿಕೊಂಡರೆ ಯಾವ ಬೆಟಾಲಿಯನ್ ಗೆ ಸರಿಹೋಗುತ್ತವೆ.

ಇನ್ಸಾಸ್ ಬಂದೂಕುಗಳಲ್ಲಿ ಎರ್ರರ್ ಶೇಖಡಾವಾರು 3

ಭಾರತೀಯ ಸೈನಿಕರು ಸದ್ಯ ಬಳಸುತ್ತಿರುವ ಇನ್ಸಾಸ್ ಬಂದೂಕುಗಳಲ್ಲಿ ಎರ್ರರ್ ಶೇಖಡಾವಾರು 3 ರಷ್ಟಿದೆ. ಆದ್ದರಿಂದಲೇ ನಮ್ಮ ಸೈನಿಕರು ಎಕೆ-47 ರೈಫಲ್ ಗಳಿಗೆ ಒತ್ತಾಯಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಬೇಕಿದ್ದ ರೈಫಲ್ ಗಳನ್ನು ನಾವೇ ತಯಾರಿಸಿಕೊಳ್ಳಬೇಕೆಂಬ ಗುರಿಯೊಂದಿಗೆ ಭಾರತ ಸರ್ಕಾರ ಇನ್ಸಾಸ್ ರೈಫಲ್ ಗಳನ್ನು ಅಭಿವೃದ್ಧಿಗೊಳಿಸಿದೆ. ಇದಕ್ಕಾಗಿ 50 ಕೋಟಿ ಡಾಲರ್ ಗಳಿಗೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿದೆ. ನಿಧಿಗಳ ದುರುಪಯೋಗವೂ ನಡೆದಿದೆ ಎಂಬ ಆರೋಪಗಳೂ ಇವೆ. ಮತ್ತೊಂದೆ ಕಡೆ ದೇಶೀಯವಾಗಿ ಬಂದೂಕುಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ಭಾಗವಾಗಿ ಡಿ.ಆರ್.ಡಿ.ಒ ಕಳೆದ ವರ್ಷ ಅಭಿವೃದ್ಧಿಪಡಿಸಿದ ಎಕ್ಸ್ ಕ್ಯಾಲಿಬರ್ ರೈಫಲ್ ಗಳನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಇಲ್ಲವೆಂಬ ಕಾರಣಗಳಿಂದ ಸೇನೆ ತಿರಸ್ಕರಿಸಿತ್ತು. ಪಶ್ಚಿಮ ಬಂಗಾಳದಲ್ಲಿನ ಇಷಾಪುರ್ ರೈಫಲ್ ಫ್ಯಾಕ್ಟರಿಯಲ್ಲಿ ಮತ್ತೊಂದು ರೀತಿಯ ರೈಫಲ್ ಗಳನ್ನೂ ಜೂನ್ ತಿಂಗಳಲ್ಲಿ ಸೇನೆ ತಿರಸ್ಕರಿಸಿತ್ತು.

1962 ರಲ್ಲಿ ಚೀನಾದೊಂದಿಗೆ ನಡೆದ ಯುದ್ಧದಲ್ಲಿ ಭಾರತೀಯ ಸೈನಿಕರು ಪ್ರಾಚೀನಕಾಲದ 303 ಬೋಲ್ಟ್ ಯಾಕ್ಷನ್ ರೈಫಲ್ ಗಳನ್ನು ಬಳಸಿದ್ದರು. ಆ ಬಂದೂಕುಗಳು ಕೂಡಾ ಆಗಿನ ಕಾಲಕ್ಕೆ ಹಳತಾಗಿದ್ದವು. ಅದೇ ಚೀನಾ ಸೈನಿಕರು ತಮ್ಮ ದೇಶ ಅಭಿವೃದ್ಧಿಗೊಳಿಸಿದ ಎಕೆ-47 ಹೋಲುವ ಬಂದೂಕುಗಳನ್ನು ಬಳಸಿ ನಮ್ಮ ಸೈನಿಕರನ್ನು ಸುಲಭವಾಗಿ ಮಣಿಸಿದ್ದರು. ಇದನ್ನು ಮೊದಲ ಗುಣಪಾಠವನ್ನಾಗಿ ತೆಗೆದುಕೊಂಡ ಭಾರತ ಸರ್ಕಾರ ಸೇನೆಗಾಗಿ ಹೊಸ ರೈಫಲ್ ತಯಾರಿಸಲು ತೀರ್ಮಾನಿಸಿತ್ತು. ಈ ಜವಾಬ್ದಾರಿಯನ್ನು ಬಂಗಾಳದಲ್ಲಿನ ಇಷಾಉರ್ ರೈಫಲ್ ಫ್ಯಾಕ್ಟರಿಗೆ ವಹಿಸಲಾಗಿತ್ತು. ಬೆಲ್ಜಿಯಂ ಸೈನಿಕರು ಬಳಸುತ್ತಿರುವ ಎಫ್ಎನ್ ಫಾಲ್ ರೈಫಲ್ ಗಳ ವಿನ್ಯಾಸವನ್ನು ಕಾಪಿ ಮಾಡಿ 7.62 ಎಂ.ಎಂ ಸೆಲ್ಫ್ ಲೋಡಿಂಗ್ ರೈಫಲ್ ಗಳನ್ನು ಆ ಫ್ಯಾಕ್ಟರ್ ತಯಾರಿಸಿತ್ತು. ಅದರೆ ಅವೂ ಕೂಡ ತುಂಬಾ ದಿನಗಳು ಉಳಿಯಲಿಲ್ಲ. 1970 ದಶಕದ ಅಂತ್ಯಕ್ಕೆ ಅವುಗಳ ಕಾಲಾವಧಿ ಮುಗಿದಿತ್ತು.

2014 ರ ನಂತರ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ರಕ್ಷಣಾ ಕ್ಷೇತ್ರಕ್ಕೆ ವಿಶೇಷ ಆಸಕ್ತಿ ವಹಿಸಿ ಭಾರೀ ಪ್ರಮಾಣದಲ್ಲಿ ಬಡ್ಜೆಟ್ ನಲ್ಲಿ ಹಣ ಮೀಸಲಿಟ್ಟರೂ, ಅದು ಯುದ್ಧ ವಿಮಾನಗಳು, ಡ್ರೋನ್ ವಿಮಾನಗಳು ಮೇಲೆಯೇ ಹೆಚ್ಚು ಶ್ರದ್ಧೆ ವಹಿಸಲಾಗುತ್ತಿದೆ. ಇನ್ಸಾಸ್ ರೈಫಲ್ ಗೆ ಪರ್ಯಾಯ ರೈಫಲ್ ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.