ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲಾಗುವುದು : ಬಿಎಸ್ ವೈ – News Mirchi

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲಾಗುವುದು : ಬಿಎಸ್ ವೈ

ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುವ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ಅಪೇಕ್ಷೆಯಂತೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ 150 ಪ್ಲಸ್ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರು ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆಯ ಲಾಂಛನ ಹಾಗೂ ಯಾತ್ರೆ ಸಾಗುವ ಮಾರ್ಗ, ಸಭೆಗಳ ವಿವರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ದಕ್ಷ ಜನಪರ ಸ್ವಚ್ಛ ಆಡಳಿತ ನೀಡುವ ಬದ್ಧತೆಯೊಂದಿಗೆ ದೇಶದ ಇತಿಹಾಸದಲ್ಲೇ ಅತಿ ದೊಡ್ಡದಾದ ಪರಿವರ್ತನಾ ರ್ಯಾಲಿಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಇಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಪ್ರತಿ ಕಾಮಗಾರಿಗಳಿಗೂ ಶೇ. 20 ರಿಂದ 25 ರಷ್ಟು ಕಮೀಷನ್ ಪಡೆಯಲಾಗುತ್ತಿದೆ. ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಮಿತಿ ಮೀರಿದೆ. ಕಲ್ಲಿದ್ದಲು ಹಗರಣ ಸೇರಿದಂತೆ ಹಲವು ಹಗರಣಗಳ ದಾಖಲೆಗಳನ್ನು ಬಿಜೆಪಿ ಈಗಾಗಲೇ ಬಿಡುಗಡೆ ಮಾಡಿದೆ. ಪರಿವರ್ತನಾ ಯಾತ್ರೆಯ ಸಂದರ್ಭದಲ್ಲೂ ಜನರಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳನ್ನು ಮನವರಿಕೆ ಮಾಡಲಾಗುವುದು ಎಂದರು.

ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನ ಆದೇಶವನ್ನು ಉಲ್ಲಂಘಿಸಿ ಖಾಸಗಿ ಕಂಪೆನಿಯ ಪರವಾಗಿ ಕೆಪಿಸಿಎಲ್ ದಂಡ ಕಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಲ್ಲಿದ್ದಲು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಖಾಸಗಿ ಕಂಪೆನಿಯೇ ದಂಡ ಭರಿಸಬೇಕು ಎಂದು ಹೇಳಿದ್ದರೂ ಕೆಪಿಸಿಎಲ್ ಹಣ ಭರಿಸಿದೆ. ಇಷ್ಟಿದ್ದರೂ ಸುಪ್ರೀಂ ಕೋರ್ಟ್ ನ ಆದೇಶದಂತೆ ದಂಡ ಕಟ್ಟಲಾಗಿದೆ ಎಂಬ ಇಂಧನ ಸಚಿವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಇದು ಅಪ್ಪಟ ಸುಳ್ಳು ಎಂದು ಅವರು ದೂರಿದರು.

Get Latest updates on WhatsApp. Send ‘Add Me’ to 8550851559

Loading...