ಡಿಸೆಂಬರ್ 30 ರ ನಂತರವೂ ವಿತ್ ಡ್ರಾ ಮಿತಿಯಲ್ಲಿ ಸಡಿಲಿಕೆ ಅನುಮಾನ

ನವದೆಹಲಿ: ಬ್ಯಾಂಕುಗಳಿಂದ ನಗದು ವಿತ್ ಡ್ರಾ ಮಾಡಲು ವಿಧಿಸಿರುವ ಮಿತಿಗಳು ಡಿಸೆಂಬರ್ 30 ರ ನಂತರವೂ ಮುಂದುವರೆಯಬಹುದು ಎಂದು ಹೇಳಲಾಗುತ್ತಿದೆ. ಕರೆನ್ಸಿ ಮುದ್ರಣಾಲಯಗಳು, ರಿಸರ್ವ್ ಬ್ಯಾಂಕುಗಳು ಅಗತ್ಯವಿದ್ದಷ್ಟು ನಗದನ್ನು ಸರಬರಾಜು ಮಾಡಲು ಅಸಾಧ್ಯವಾಗಿರುವುದೇ ಇದಕ್ಕೆ ಕಾರಣ.

ಸದ್ಯ ಎಟಿಎಂ, ಬ್ಯಾಂಕುಗಳಿಂದ ವಾರಕ್ಕೆ ರೂ.24,000, ಪ್ರತಿದಿನ 2,500 ವಿತ್ ಡ್ರಾ ಮಾಡುವ ಅವಕಾಶ ಕಲ್ಪಿಸಿದರೂ, ಬ್ಯಾಂಕುಗಳು ನಗದು ಕೊರತೆಯ ಕಾರಣ ಅಷ್ಟು ಮೊತ್ತವನ್ನು ಖಾತೆದಾರರಿಗೆ ನೀಡಲು ವಿಫಲವಾಗುತ್ತಿವೆ. ನಗದು ಲಭ್ಯತೆಯನ್ನು ಆಧರಿಸಿ ಸ್ವಲ್ಪ ಮೊತ್ತವನ್ನು ಮಾತ್ರ ನೀಡುತ್ತಿವೆ.

ನೋಟು ರದ್ದಾದ ನಂತರ ಕೇಳಿರುವ 50 ದಿನಗಳ ಕಾಲಾವಕಾಶ ಮುಗಿಯುತ್ತಾ ಬಂದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿಯೂ ವಿತ್ ಡ್ರಾ ಮೇಲೆ ನಿರ್ಬಂಧಗಳು ಮುಂದುವರೆಯಬಹುದು ಎಂದು ಬ್ಯಾಂಕುಗಳು ಹೇಳುತ್ತಿವೆ. ನಗದು ಸರಬರಾಜಿನಲ್ಲಿ ಏರಿಕೆ ಕಂಡರೆ ಮಾತ್ರ ನಿರ್ಬಂಧ ಸಡಿಲಿಸಬಹುದು ಎಂದು ಹೇಳುತ್ತಿದ್ದಾರೆ.