ಗರ್ಭಿಣಿ ಎಂದು ನಂಬಿಸಿ, ಖರೀದಿಸಿದ ಮಗುವನ್ನು ಗಂಡನ ಕೈಗಿತ್ತಳು! – News Mirchi
ಸಾಂದರ್ಭಿಕ ಚಿತ್ರ

ಗರ್ಭಿಣಿ ಎಂದು ನಂಬಿಸಿ, ಖರೀದಿಸಿದ ಮಗುವನ್ನು ಗಂಡನ ಕೈಗಿತ್ತಳು!

ಚೆನ್ನೈನಲ್ಲಿ ಮಹಿಳೆಯೊಬ್ಬಳು ಗರ್ಭಿಣಿಯಾಗದಿದ್ದರೂ ಮಗುವಿಗೆ ಜನ್ಮ ನೀಡಿದಂತೆ ನಾಟಕವಾಡಿದ್ದಾಳೆ. ಪತಿ ಮತ್ತು ಮನೆಯವರನ್ನು ಗರ್ಭಿಣಿ ಎಂದು ನಂಬಿಸಿ ಮಗುವಿಗೆ ಜನ್ಮ ನೀಡಿದಂತೆ ನಾಟಕವಾಡಿದ ಪತ್ನಿಯ ಬಣ್ಣ ಕೊನೆಗೂ ಬಯಲಾಗಿದೆ.

ಚೆನ್ನೈನ ಕೀಳ್ಪಾಕ್ಕಂನ ಪೊಲೀಸ್ ಕಮೀಷನರ್ ಆಗಿ ಕೆಲಸ ಮಾಡಿ ನಿವೃತ್ತರಾದ ಸೋಮನ್ ಎಂಬುವವರ ಪುತ್ರ ಯೋಗೇಶ್ವರನ್ ಮತ್ತು ಪದ್ಮನಿ ಎಂಬುವವರಿಗೆ 2016 ರಲ್ಲಿ ಮದುವೆ ಆಗಿತ್ತು. ಆದರೆ ಪದ್ಮಿನಿಯನ್ನು ಕಂಡರೆ ಗಂಡನಿಗೆ ಇಷ್ಟವಿರಲಿಲ್ಲ, ಜೊತೆಗೆ ಆತನ ತಂದೆ ತಾಯಿಗಳೂ ಸೊಸೆಯನ್ನು ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದರು ಎನ್ನಲಾಗಿದೆ.

ಮಗು ಹುಟ್ಟಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗಬಹುದು ಎಂದು ಯಾರೋ ನೀಡಿದ ಸಲಹೆಯನ್ನು ನಂಬಿದ ಪದ್ಮಿನಿ, ಗಂಡ ಮತ್ತು ಅತ್ತೆ ಮಾವನನ್ನು ತಾನು ಗರ್ಭಿಣಿಯಲ್ಲದಿದ್ದರೂ ಗರ್ಭಿಣಿ ಎಂದು ನಂಬಿಸಿದಳು. ಅವರಿಗೆ ಅನುಮಾನ ಬರದಂತೆ ಆಗಾಗ ತನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಪರೀಕ್ಷೆ ಮಾಡಿಸಿಕೊಳ್ಳಲು ಹೋಗುತ್ತಿದ್ದಳು. ಒಮ್ಮೆಯೂ ಅತ್ತೆ ಮನೆಯವರ ಜೊತೆ ಹೋಗಿದ್ದಿಲ್ಲ. ಹೀಗೆ ಒಂಬತ್ತು ತಿಂಗಳು ಆರಂಭವಾಗುತ್ತಲೇ ಸೀಮಂತ ಶಾಸ್ತ್ರವನ್ನೂ ಮಾಡಿದರು. ನೋಡಿದವರು ಪದ್ಮಿನಿ ಗರ್ಭಿಣಿಯಂತೆ ಕಾಣುತ್ತಿಲ್ಲ ಎಂದು ಅನುಮಾನ ವ್ಯಕ್ತಿಪಡಿಸಿದರೂ, ತಮ್ಮ ವಂಶದಲ್ಲಿ ಹೀಗೆ ಹೊಟ್ಟೆ ಒಳಗೇ ಇರುತ್ತದೆ ಎಂದು ಪದ್ಮಿನಿಯ ತಾಯಿ ಕಥೆ ಕಟ್ಟಿದಳು. ನಂತರ ಮಗಳನ್ನು ಹೆರಿಗೆಗೆ ತವರಿಗೆ ಕರೆದೊಯ್ದಳು.

ಕಳೆದ ಬುಧವಾರ ತನಗೆ ಹೆಣ್ಣು ಮಗು ಹುಟ್ಟಿದೆ ಎಂದು ಪದ್ಮಿನಿ ತನ್ನ ಗಂಡನಿಗೆ ಫೋನ್ ಮಾಡಿ ಹೇಳಿದ್ದಳು. ಮಗುವನ್ನು ನೋಡಲು ಹೋದ ಯೋಗೇಶ್ವರನ್ ಮತ್ತು ಆತನ ತಂದೆ ತಾಯಿಗಳಿಗೆ ಮಗುವನ್ನು ನೋಡಿ ಅನುಮಾನ ಮೂಡಿದೆ. ಆಗ ತಾನೆ ಹುಟ್ಟಿದ ಮಗುವು ನಾಲ್ಕು ತಿಂಗಳ ವಯಸ್ಸಿನ ಮಗುವಿನಂತೆ ಕಾಣುತ್ತಿತ್ತು. ಪತ್ನಿಯ ವರ್ತನೆಯನ್ನು ನೋಡಿದ ಮೇಲೆ ತನ್ನ ಅನುಮಾನ ಇನ್ನೂ ಬಲಗೊಂಡಿತು. ಕೂಡಲೇ ಯೋಗೀಶ್ವರನ್ ಪೊಲೀಸರಿಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆಗ ಸತ್ಯ ಬಾಯಿ ಬಿಟ್ಟ ಪದ್ಮಿನಿ, ಅಪರಿಚಿತರ ಬಳಿ ಮಗುವನ್ನು ಖರೀದಿಸಿದ್ದಾಗಿ ಹೇಳಿದ್ದಾಳೆ. ಮಕ್ಕಳಿಗಾಗಿ ಗಂಡ, ಅತ್ತೆ ಮಾವನವರ ಕಿರುಕುಳ ತಾಳಲಾರದೆ ತಾನು ಈ ಕೆಲಸ ಮಾಡಿದ್ದಾಗಿ ಆಕೆ ಹೇಳಿದ್ದಾಳೆ.

Loading...