ಅತ್ಯಾಚಾರ ನಡೆಸಲು ಮುಂದಾದವನ ಮರ್ಮಾಂಗ ಕತ್ತರಿಸಿದ ಯುವತಿ

ತಿರುವನಂತಪುರಂ: ತನ್ನ ಮೇಲೆ ಅತ್ಯಾಚಾರಕ್ಕೆ ಮುಂದಾದ ವ್ಯಕ್ತಿಯೊಬ್ಬ ಮರ್ಮಾಂಗವನ್ನೇ ಯುವತಿಯೊಬ್ಬಳು ಕತ್ತರಿಸಿದ ಘಟನೆ ಕೇರಳದ ಕೊಲ್ಲಂನಲ್ಲಿ ಶುಕ್ರವಾರ ನಡೆದಿದೆ. 23 ವರ್ಷದ ಯುವತಿ ತನ್ನ ಪೋಷಕರೊಂದಿಗೆ ಕೊಲ್ಲಂನ ಗಣೇಶಾನಂದ ತೀರ್ಥಪದ ಸ್ವಾಮಿ ಅಲಿಯಾಸ್ ಹರಿಸ್ವಾಮಿ ಎಂಬಾತನ ಆಶ್ರಮದಲ್ಲಿ ವಾಸವಿದ್ದಾಳೆ. ಗಣೇಶಾನಂದನನ್ನು ಅಪಾರವಾಗಿ ನಂಬಿದ್ದ ಯುವತಿಯ ಪೋಷಕರು ಆತನ ಸೇವೆ ಮಾಡುತ್ತಿದ್ದರು. ಆದರೆ ಕಪಟಿ ಸ್ವಾಮಿ ಆ ಯುವತಯ ಮೇಲೆಯೇ ವಕ್ರ ದೃಷ್ಟಿ ಬೀರಿದ್ದ. ಕಳೆದ ಕೆಲ ದಿನಗಳಿಂದ ಆತ ಆ ಯುವತಿಗೆ ಲೈಂಗಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದ.

ಕಳೆದೆರಡು ದಿನಗಳಿಂದ ಆತನ ಕಿರುಕುಳ ಮಿತಿಮೀರಿತ್ತು. ಶುಕ್ರವಾರ ರಾತ್ರಿ ಯುವತಿ ಒಂಟಿಯಾಗಿದ್ದ ಸಮಯ ನೋಡಿದ ಆತ, ಆ ಯುವತಿಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಬೇಡವೆಂದು ಎಷ್ಟು ಗೋಗರೆದರೂ ಆತ ಕೇಳ ಕಾರಣ ಬೇರೆ ದಾರಿ ಕಾಣದ ಯುವತಿ, ತನ್ನನ್ನು ರಕ್ಷಿಸಿಕೊಳ್ಳಲು ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ನಂತರ ನಡೆದ ಘಟನೆಯನ್ನೆಲ್ಲಾ ವಿವರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಫೋಸ್ಕೋ ಕಾಯ್ದೆಯಡಿ ಅತ್ಯಾಚಾರಕ್ಕೆ ಮುಂದಾದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತ ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪರಿಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಯುವತಿಯ ಮೇಲೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅತ್ಯಾಚಾರ ಯತ್ನ ನಡೆಸಿದ ಹರಿಸ್ವಾಮಿಗೂ ಆಶ್ರಮಕ್ಕೂ ಯಾವುದೇ ಸಂಬಂಧವಿಲ್ಲ, 15 ವರ್ಷಗಳ ಹಿಂದೆ ಆಶ್ರಮದಲ್ಲಿದ್ದ ವ್ಯಕ್ತಿ ನಂತರ ಆಶ್ರಮ ತೊರೆದಿದ್ದ ಎಂದು ಆಶ್ರಮಗಳ ಮೂಲಗಳು ಹೇಳಿವೆ.