ಪ್ರಿಯಕರನನ್ನು ಮದುವೆಯಾಗಲು ತನ್ನ ಕಿಡ್ನಿಯನ್ನೇ ಮಾರಲು ಹೊರಟ ಮಹಿಳೆ

ಮದುವೆ ಮಾಡಿಕೊಳ್ಳಲು ಹಣಕ್ಕಾಗಿ ಒತ್ತಾಯಿಸಿದ ಪ್ರಿಯಕರನಿಗಾಗಿ ತನ್ನ ಒಂದು ಕಿಡ್ನಿಯನ್ನೇ ಮಾರಲು ಮಹಿಳೆಯೊಬ್ಬಳು ಮುಂದಾಗಿದ್ದು ವರದಿಯಾಗಿದೆ. ಈಗಾಗಲೇ ಮದುವೆಯಾಗಿದ್ದು ಡೈವೋರ್ಸ್ ಆಗಿರುವ ಬಿಹಾರದ ಮಹಿಳೆಯೊಬ್ಬರು ಕಿಡ್ನಿ ಮಾರಲು ಮುಂದಾದವರು. ತನ್ನ ಪ್ರಿಯಕರ ಆಕೆಯನ್ನು ಮದುವೆಯಾಗಲು 1.8 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದೇ ಆಕೆ ಈ ಯತ್ನಕ್ಕೆ ಮುಂದಾಗಲು ಕಾರಣ.

ಕಿಡ್ನಿ ಮಾರಲು ದೆಹಲಿಯ ಆಸ್ಪತ್ರೆಗೆ ಹೋದ ಆಕೆಯನ್ನು ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದಾಳೆಂದು ಅನುಮಾನಿಸಿದ ಆಸ್ಪತ್ರೆ ವೈದ್ಯರು ಮಹಿಳಾ ಸಹಾಯವಾಣಿ 181 ಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ದೆಹಲಿ ಮಹಿಳಾ ಆಯೋಗದ ಸದಸ್ಯರು ಆಸ್ಪತ್ರೆ ಧಾವಿಸಿದರು.

ತನಗೆ ವಿಚ್ಛೇದನ ಸಿಕ್ಕ ನಂತರ ತಂದೆ ತಾಯಿಯೊಂದಿಗೆ ವಾಸವಿದ್ದ ಮಹಿಳೆಗೆ, ನೆರೆಮನೆಯ ವ್ಯಕ್ತಿಯೊಂದಿಗೆ ಪ್ರೀತಿಯಾಗಿತ್ತು. ಆದರೆ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಿಯಕರ ತನ್ನ ಮದುವೆಯಾಗುತ್ತಾನೆ ಎಂಬ ವಿಶ್ವಾಸದಿಂದ ಮನೆ ಬಿಟ್ಟು ಉತ್ತರ ಪ್ರದೇಶದ ಮೊರಾದಾಬಾದ್ ಗೆ ತೆರಳಿದ್ದೆ. ಆದರೆ ಹಣ ನೀಡಿದರೆ ಮಾತ್ರ ಮದುವೆಯಾಗುವುದಾಗಿ ಪ್ರಿಯಕರ ಹೇಳಿದ್ದ ಎಂದು ಮಹಿಳೆ ಹೇಳಿದ್ದಾಳೆ.

[ಇದನ್ನೂ ಓದಿ: ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಿಸಿದ ಟ್ರಂಪ್]

ಹೀಗಾಗಿ ಅನ್ಯಮಾರ್ಗವಿಲ್ಲದ ಮಹಿಳೆ ದೆಹಲಿಗೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಕಿಡ್ನಿ ಮಾರಲು ಮುಂದಾಗಿದ್ದಳು. ಆಕೆಗೆ ಬುದ್ದಿ ಹೇಳಿದ ಮಹಿಳಾ ಆಯೋಗದ ಸದಸ್ಯರು, ಪ್ರಿಯಕರನ ವಿರುದ್ಧ ದೂರು ನೀಡಲು ಸಲಹೆ ನೀಡಿದರು. ಆದರೆ ಇದಕ್ಕೆ ನಿರಾಕರಿಸಿದ ಮಹಿಳೆ ಬಿಹಾರದಲ್ಲಿನ ತನ್ನ ಪೋಷಕರ ಬಳಿಗೆ ಹಿಂದಿರುಗಿದ್ದಾಳೆ. ಹೀಗಾಗಿ ಘಟನೆಯ ವಿವರಗಳನ್ನು ಬಿಹಾರದ ಮಹಿಳಾ ಆಯೋಗಕ್ಕೆ ದೆಹಲಿ ಮಹಿಳಾ ಆಯೋಗ ವರ್ಗಾಯಿಸಿ, ಆಕೆಗೆ ನೆರವು ನೀಡಿ, ಆಕೆಯ ಪ್ರಿಯಕರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

Get Latest updates on WhatsApp. Send ‘Add Me’ to 8550851559