ವಿಚಾರಣೆಯಿಲ್ಲದೆ ಪೊಲೀಸರನ್ನು ಅಮಾನತು ಮಾಡುವಂತಿಲ್ಲ: ಯೋಗಿ ಸರ್ಕಾರದ ಆದೇಶ

ಉತ್ತರ ಪ್ರದೇಶದ ಪೊಲೀಸರಿಗೆ ಇದು ಒಳ್ಳೆಯ ಸುದ್ದಿ. ಪ್ರಾಥಮಿಕ ವಿಚಾರಣೆಯಿಲ್ಲದೆ, ವಿವರಣೆ ಪಡೆಯದೆ ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ಅಮಾನತು ಮಾಡುವುದು, ರ‌್ಯಾಂಕ್ ನಲ್ಲಿ ಕಡಿತ ಮಾಡುವುದು ಇನ್ನು ಮುಂದೆ ಮಾಡುವಂತಿಲ್ಲ ಎಂದು ಅಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ಜಾರಿ ಮಾಡಿದೆ.

ಬಹುತೇಕ ಪ್ರಕರಣಗಳಲ್ಲಿ ಪೊಲೀಸರಿಂದ ವಿವರಣೆ ಪಡೆಯದೆ ಹಿರಿಯ ಅಧಿಕಾರಿಗಳು ಅಮಾನತು ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಕೆಲವೊಮ್ಮೆ ತಿಂಗಳುಗಳ ಕಾಲ ಯಾವುದೇ ಕಾರಣವಿಲ್ಲದೆ ಪೊಲೀಸರನ್ನು ಹಿರಿಯ ಅಧಿಕಾರಿಗಳು ಅಮಾನತಿನಲ್ಲಿಡುತ್ತಿದ್ದರು ಎಂಬ ಆರೋಪಗಳಿವೆ.

ಪೊಲೀಸ್ ಪೇದೆಯೊಬ್ಬರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇಂತಹ ಅಮಾನತು ಶಿಕ್ಷೆಗಳಿಗೆ ಅಂತ್ಯ ಹಾಡಲು ಯೋಗಿ ಸರ್ಕಾರಕ್ಕೆ ಸೂಚಿಸಿತ್ತು.

ಸೂಕ್ತ ಕಾರಣವಿಲ್ಲದೆ‌ ಕೆಳ ಹಂತದ ಅಧಿಕಾರಿಗಳು ಮತ್ತು ಪೊಲೀಸರನ್ನು ಅಮಾನತು ಮಾಡುವ ಸಂಪ್ರದಾಯಕ್ಕೆ ಯೋಗಿ ಸರ್ಕಾರದ ನಡೆ ಅಂತ್ಯ ಹಾಡುತ್ತದೆ. ಇದೊಂದು ಉತ್ತಮ ಹೆಜ್ಜೆಯಾಗಿದ್ದು, ಪೊಲೀಸರು, ಅಧಿಕಾರಿಗಳು ಪ್ರಾಮಾಣಿಕವಾಗಿ, ನಿರ್ಭಯವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಈ ಹಿಂದೆ ಅಖಿಲೇಶ್ ಸರ್ಕಾರದ ಅವಧಿಯಲ್ಲಿ ಕೋರ್ಟ್ ಆದೇಶದ ಹೊರತಾಗಿಯೂ ಕಡೆಗಣಿಸಲ್ಪಟ್ಟ ಅಧಿಕಾರಿಯೊಬ್ಬರು ಹೇಳಿದ್ದಾರೆ.