ಯೋಗಿ ಆದಿತ್ಯನಾಥ್ - ಸಿದ್ದರಾಮಯ್ಯ ಟ್ವಿಟರ್ ವಾರ್ |News Mirchi

ಯೋಗಿ ಆದಿತ್ಯನಾಥ್ – ಸಿದ್ದರಾಮಯ್ಯ ಟ್ವಿಟರ್ ವಾರ್

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲು ರಾಜ್ಯ ಬಿಜೆಪಿ 75 ದಿನಗಳ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಕರ್ನಾಟಕಕ್ಕೆ ಆಗಮಿಸಿದ್ದರು. ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸುತ್ತಾ ವ್ಯಂಗ್ಯ ಮಾಡಿದ್ದ ಸಿದ್ದರಾಮಯ್ಯ ಅವರ ಟ್ವೀಟ್ ಯೋಗಿ ಮತ್ತು ಸಿದ್ದು ನಡುವೆ ಟ್ವೀಟ್ ವಾರ್ ಗೆ ಕಾರಣವಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸುತ್ತೇನೆ ಎಂದು ಆರಂಭವಾದ ಸಿದ್ದರಾಮಯ್ಯ ಅವರ ಟ್ವೀಟ್ ನಲ್ಲಿ, ನಮ್ಮಿಂದ ನೀವು ತುಂಬಾ ಕಲಿಯಬೇಕಿದೆ. ನೀವು ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ರೇಷನ್ ಅಂಗಡಿಗಳಿಗೆ ಭೇಟಿ ನೀಡಿ. ಇದರಿಂದ ನಿಮ್ಮ ರಾಜ್ಯದಲ್ಲಿ ಹಸಿವಿನಿಂದ ಆಗುತ್ತಿರುವ ಸಾವುಗಳ ಬಗ್ಗೆ ತಿಳಿಯುತ್ತದೆ ಎಂದು ವ್ಯಂಗ್ಯವಾಡಿದ್ದರು.

ಇದರ ಜೊತೆ ಮತ್ತೊಂದು ಟ್ವೀಟ್ ಮಾಡಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮೊದಲು ಜಂಗಲ್ ರಾಜ್ ಸರಿ ಮಾಡಲಿ, ಆಸ್ಪತ್ರೆಯಲ್ಲಿ ಸಾಯುತ್ತಿರುವ ಮಕ್ಕಳನ್ನು ಉಳಿಸಲಿ. ನಂತರ ನಮಗೆ ಬುದ್ದಿ ಹೇಳಲಿ ಎಂದು ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದರು.

ಸಿದ್ದು ಟ್ವೀಟ್ ಸರಿಯಾಗಿ ತಿರುಗೇಟು ನೀಡಿದ ಯೋಗಿ, ‘ನನಗೆ ಸ್ವಾಗತ ಕೋರಿದ ನಿಮಗೆ ವಂದನೆಗಳು, ‘ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್ ಒನ್ ಅಂತ ಕೇಳಿದ್ದೇನೆ. ಇನ್ನು ಕರ್ನಾಟಕದಲ್ಲಿ ಹಲವು ಪ್ರಾಮಾಣಿಕ ಅಧಿಕಾರಿಗಳ ಸಾವು ಮತ್ತು ವರ್ಗಾವಣೆಗಳ ಕುರಿತು ಹೇಳಬೇಕಿಲ್ಲ. ಉತ್ತರ ಪ್ರದೇಶದಲ್ಲಿ ನಿಮ್ಮ ಮಿತ್ರರು ಸೃಷ್ಟಿಸಿರುವ ದುಸ್ಥಿತಿ, ಅರಾಜಕತೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ನವಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರ, ಅಭಿವೃದ್ಧಿ ವಿರೋಧಿ ನೀತಿ ಮತ್ತು ವಿಭಜಿಸುವ ರಾಜಕೀಯಗಳ ಮೂಲಕ 5 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ದಿದೆ ಎಂದು ಆರೋಪಿಸಿದ್ದರು.

ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಸಮಾಜವನ್ನು ಜಾತಿಗಳ ಆಧಾರದಲ್ಲಿ ವಿಭಜಿಸಲು ಹೊರಟಿದೆ ಎಂದು ಆರೋಪಿಸಿದ್ದ ಯೋಗಿ, ಕಾಂಗ್ರೆಸ್ ಪಕ್ಷವು ದೇಶಕ್ಕೆ ಹೊರೆ ಮತ್ತು ಸಮಸ್ಯೆಯಾಗಿದೆ ಎಂದು ಹೇಳಿದ್ದರು.

Loading...
loading...
error: Content is protected !!