ತಾಜ್ ಮಹಲ್ ಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಯೋಗಿ – News Mirchi

ತಾಜ್ ಮಹಲ್ ಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಯೋಗಿ

ಆಗ್ರಾ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಆಗ್ರಾಗೆ ಆಗಮಿಸಿದ್ದು, ತಾಜಮಹಲ್ ಪಶ್ಚಿಮ ದ್ವಾರದ ಬಳಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೆರೆದಿದ್ದ ಜನರು ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸಿದರು. ತಾಜಮಹಲ್ ಬಳಿ ಸುಮಾರು 45 ನಿಮಿಷಗಳ ಕಾಲ ಕಳೆದ ಮುಖ್ಯಮಂತ್ರಿ, ಯೋಗಿ ಜಿಂದಾಬಾದ್ ಎಂದು ಕೂಗುತ್ತಿದ್ದ ಜನರತ್ತ ಕೈ ಬೀಸಿದರು.

ಇತ್ತೀಚೆಗೆ ತಾಜ್ ಮಹಲ್ ಕುರಿತು ಬಿಜೆಪಿ ನಾಯಕರಿಂದ ವಿವಾದಿತ ಹೇಳಿಕೆಗಳು ಬಂದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರ ತಾಜ್ ಮಹಲ್ ಭೇಟಿ ಮಹತ್ವ ಪಡೆದಿದೆ. ಭಾರತೀಯ ಸಂಸ್ಕೃತಿಗೆ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ, ಅದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಬಿಜೆಪಿ ಸಂಸತ್ ಸದಸ್ರ ವಿನಯ್ ಕಟಿಯಾರ್ ಅವರು ‘ತಾಜ್ ಮಹಲ್ ಮೊದಲು ಶಿವನ ದೇವಾಲಯವಾಗಿತ್ತು’ ಎಂದು ಹೇಳಿಕೆ ನೀಡಿದ್ದರು.

ತಮ್ಮ ಪಕ್ಷದ ನಾಯಕರ ಹೇಳಿಕೆಗಳು ವಿವಾದವನ್ನೆಬ್ಬಿಸುತ್ತಿದ್ದಂತೆ ಮಾತನಾಡಿದ್ದ ಆದಿತ್ಯನಾಥ್, ತಾಜ್ ಮಹಲ್ ಅನ್ನು ಭಾರತದ ಹೆಮ್ಮೆ, ಅದು ವಿಶ್ವ ದರ್ಜೆಯ ಸ್ಮಾರಕ ಎಂದು ಗೋರಖ್ ಪುರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಹೇಳಿದ್ದರು. ಈಗ ತಾಜ್ ಮಹಲ್ ಗೆ ಭೇಟಿ ನೀಡುವ ಮೂಲಕ ಇಲ್ಲಿಗೆ ಭೇಟಿ ನೀಡಿದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...