ಪಾನ್ ಕಾರ್ಡ್ ಮತ್ತು ಆದಾಯ ತೆರಿಗೆ ಬಗ್ಗೆ ನಿಮಗೆಷ್ಟು ಗೊತ್ತು? – News Mirchi

ಪಾನ್ ಕಾರ್ಡ್ ಮತ್ತು ಆದಾಯ ತೆರಿಗೆ ಬಗ್ಗೆ ನಿಮಗೆಷ್ಟು ಗೊತ್ತು?

ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಗಳಿಸುವ ಆದಾಯದಲ್ಲಿ ಶೇಖಡಾವಾರು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕು. ಇದನ್ನು ಆದಾಯ ತೆರಿಗೆ ಎನ್ನುತ್ತಾರೆ. ಇದು ಸಂಸತ್ತು ರಚಿಸಿದ ಆದಾಯ ತೆರಿಗೆ ಕಾಯ್ದೆಯಡಿ ಬರುತ್ತದೆ. ಆದಾಯ ತೆರಿಗೆ ಇಲಾಖೆ ಕಂದಾಯ ಇಲಾಖೆ, ಹಣಕಾಸು ಸಚಿವಾಲಯ, ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ವ್ಯಕ್ತಿ ಅಥವಾ ಸಂಸ್ಥೆ ಗಳಿಸಿದ ಆದಾಯದಲ್ಲಿ ನಿಗಧಿಪಡಿಸಿದ ಶೇಖಡಾವಾರು ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕು. ಇದನ್ನು ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಎಂದು ಕರೆಯಲಾಗುತ್ತದೆ ಮತ್ತು ಪ್ರತಿ ವರ್ಷದ ಜುಲೈನಲ್ಲಿ ಮಾಡಬೇಕಾಗುತ್ತದೆ.

ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಗಳಿಸಿದ ಆದಾಯವನ್ನು ಆದಾಯ ತೆರಿಗೆ ಲೆಕ್ಕ (ಕ್ಯಾಲ್ಯುಕ್ಲೇಟಿಂಗ್ ಇನ್ಕಮ್ ಟ್ಯಾಕ್ಸ್) ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಏಪ್ರಿಲ್ 1, 2015 ರಿಂದ ಮಾರ್ಚ್ 31, 2016 ಒಂದು ಆರ್ಥಿಕ ವರ್ಷ(ಫೈನಾನ್ಷಿಯಲ್ ಇಯರ್), ಇದನ್ನು ಪ್ರೀವಿಯಸ್ ಇಯರ್ ಅಂತಲೂ ಕರೆಯುತ್ತಾರೆ.

ಮೇಲೆ ತಿಳಿಸಿರುವಂತೆ ಪ್ರೀವಿಯಸ್ ಇಯರ್ ನಂತರ ಬರುವ 12 ತಿಂಗಳುಗಳನ್ನು ಅಸ್ಸೆಸ್ಮೆಂಟ್ ಇಯರ್(ಮೌಲ್ಯಮಾಪನ ವರ್ಷ) ಎಂದು ಕರೆಯುತ್ತಾರೆ. ಈ ಕಾಲಾವಧಿಯಲ್ಲಿ ಹಿಂದಿನ ವರ್ಷದ ಆದಾಯ ತೆರಿಗೆಯನ್ನು ಪಾವತಿಸಬೇಕಿರುತ್ತದೆ.

ಉದಾಹರಣೆಗೆ: 2015-16 ಫೈನಾನ್ಷಿಯಲ್ ಇಯರ್(ಆರ್ಥಿಕ ವರ್ಷ) ಆದರೆ 2016-17 ಅಸ್ಸೆಸ್ಮೆಂಟ್ ಇಯರ್(ಮೌಲ್ಯಮಾಪನ ವರ್ಷ) ಆಗುತ್ತದೆ. ಹಿಂದಿನ 2015-16 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯ ತೆರಿಗೆಯನ್ನು 2016-17 ರಲ್ಲಿ ಪಾವತಿಸಬೇಕಿರುತ್ತದೆ.

ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್)

ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಎನ್ನುವುದು ಆದಾಯ ತೆರಿಗೆ ಇಲಾಖೆ ನೀಡುವ ಹತ್ತು ಅಂಕಿಗಳ ಕಾರ್ಡ್ ಆಗಿದ್ದು, ಇದು ಭಾರತೀಯ ನಾಗರೀಕನ ಅಧಿಕೃತ ಗುರುತಿನ ಪುರಾವೆಯೂ ಆಗಿದೆ.

ಪಾನ್ ಕಾರ್ಡ್ ಈ ಕೆಳಗಿನ ಸಂದರ್ಭಗಳಲ್ಲಿ ಬೇಕಾಗುತ್ತದೆ.

1. ನೀವು ಆದಾಯ ತೆರಿಗೆ ಪಾವತಿಸುವಾಗ
2. ಬ್ಯಾಂಕ್ ಖಾತೆ ಅಥವಾ ಡಿಮ್ಯಾಟ್ ಖಾತೆ ತೆರೆಯುವಾಗ
3. ದೂರವಾಣಿ ಸಂಪರ್ಕ ಮತ್ತು ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ
4. ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆಗೆ ನೋಂದಾಯಿಸಿಕೊಳ್ಳುವಾಗ
5. ವಾಹನ ಖರೀದಿ ಮತ್ತು ಮಾರಾಟ ಮಾಡುವಾಗ
6. ರೂ. 50 ಸಾವಿರಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಜಮಾ ಮಾಡುವಾಗ.
7. ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವಾಗ
8. ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಸುವಾಗ
9. ರೂ. 25 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಿದೇಶೀ ಹಣವನ್ನು ವಿನಿಮಯ ಮಾಡಿಕೊಳ್ಳುವಾಗ

ಮೇಲಿನ ಸಂದರ್ಭಗಳಲ್ಲಿ ನಿಮಗೆ ಪಾನ್ ಕಾರ್ಡ್ ಅವಶ್ಯಕತೆ ಇರುತ್ತದೆ.

ಒಂದಕ್ಕಿಂದ ಹೆಚ್ಚು ಪಾನ್ ಕಾರ್ಡ್ ಹೊಂದುವುದು ಶಿಕ್ಷಾರ್ಹ ಅಪರಾಧ

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ನೀವು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ರೂ. 10,000 ವರೆಗೂ ದಂಡ ವಿಧಿಸುವ ಸಾಧ್ಯತೆ ಇದ್ದು ಜೈಲುವಾಸವನ್ನೂ ಅನುಭವಿಸಬೇಕಾಗಿ ಬರಬಹುದು. ಒಂದಕ್ಕಿಂತ ಹೆಚ್ಚು ಪಾನ್ ಸಂಖ್ಯೆ ಹೊಂದಿದ್ದರೆ, ಯಾವುದಾದರೂ ಒಂದನ್ನು ಮಾತ್ರ ನೀವು ತೆರಿಗೆ ಇಲಾಖೆಯಲ್ಲಿ ನೀಡಿ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಪಾನ್ ಕಾರ್ಡ್ ದುರುಪಯೋಗ ತಡೆಯಲೆಂದೇ ಕೇಂದ್ರ ಸರ್ಕಾರ ಈಗ ಪಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುತ್ತಿದೆ.

ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟಿನಲ್ಲಿ ನೋಡಬಹುದು. ಒಂದು ವೇಳೆ ನೀವು ಖಾಸಗಿ ಏಜೆಂಟರ ಮೂಲಕ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ, ಸರ್ಕಾರದ ವೆಬ್ಸೈಟ್ ನಲ್ಲಿ ನಿಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ.

ಪಾನ್ ಕಾರ್ಡ್ ಹೊಂದಿರುವ ಮಾತ್ರಕ್ಕೆ ನೀವು ಆದಾಯ ತೆರಿಗೆ ಪಾವತಿಸಬೇಕು ಅಂತೇನಿಲ್ಲ. ನಿಮ್ಮ ಆದಾಯವು ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆದಿದೆ ಎಂದಾಗ ಪಾವತಿಸಲು ಅನುಕೂಲವಾಗುತ್ತದೆ.

ಪಾನ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಫಾರ್ಮ್-49ಎ ತುಂಬಿ ವಿಳಾಸ ಪುರಾವೆಯನ್ನು (ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ) ನಕಲನ್ನು ಲಗತ್ತಿಸಿ ಪಾನ್ ಕಾರ್ಡ್ ಗಾಗಿ ಸಲ್ಲಿಸಬಹುದು. ಫಾರ್ಮ್ -49ಎ ಅನ್ನು ಕೆಳಗಿನ ವೆಬ್ಸೈಟಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

www.tin-nsdl.com

http://www.incometaxindia.gov.in/Pages/form-pan.aspx

ನೀವು ಐಟಿ ಪಾನ್ ಮತ್ತು ಟಿನ್ ಸರ್ವೀಸ್ ಸೆಂಟರ್ ಗಳಲ್ಲೂ ಈ ಅರ್ಜಿಗಳನ್ನು ಪಡೆಯಬಹುದು.

Loading...