ಗರ್ಭಿಣಿ ಮಹಿಳೆಯನ್ನು ಮಂಚದ ಮೇಲೆ ಮಲಗಿಸಿ 8 ಕಿ.ಮೀ ದೂರದ ಆಸ್ಪತ್ರೆಗೆ ಹೊತ್ತೊಯ್ದ ವೈದ್ಯ

ಮಲ್ಕಾನ್ ಗಿರಿ(ಒಡಿಶಾ): ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯರನ್ನು ಮಂಚದ ಮೇಲೆ ಮಲಗಿಸಿ ಅವರ ಸಂಬಂಧಿಕರು ಅಥವಾ ಕುಟುಂಬ ಸದಸ್ಯರು ಆಸ್ಪತ್ರೆಗೆ ಹೊತ್ತೊಯ್ದ ಘಟನೆಗಳು ಇತ್ತೀಚಿಗೆ ಹೆಚ್ಚಾಗಿ ವರದಿಯಾಗುತ್ತಿವೆ. ಆದರೆ ವೈದ್ಯರೇ ಸ್ವತಃ ಮಂಚದ ಮೇಲೆ ಮಲಗಿಸಿದ್ದ ತನ್ನ ಪೇಷೆಂಟ್ ಅನ್ನು ಹೊತ್ತು ಆಸ್ಪತ್ರೆಗೆ ಕರೆದೊಯ್ದ ಘಟನೆ ಅಪರೂಪ. ಇಂತಹ ಘಟನೆ ಒಡಿಶಾದ ಮಲ್ಕನ್ ಗಿರಿಯಲ್ಲಿ ನಡೆದಿದೆ.

ಮಹಿಳೆಯೊಬ್ಬರು ಹೆರಿಗೆ ನೋವು ಅನುಭವಿಸುತ್ತಿದ್ದ ವಿಷಯ ತಿಳಿದು ಆಸ್ಪತ್ರೆಯ ವೈದ್ಯರೊಬ್ಬರು ಕುಗ್ರಾಮವೊಂದಕ್ಕೆ ತೆರಳಿದರು. ನೋವು ತೀವ್ರವಾಗಿದ್ದು ಮತ್ತು ರಕ್ತ ಸ್ರಾವವಾಗುತ್ತಿದ್ದ ಕಾರಣ ತಡ ಮಾಡದೆ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದರು. ಹೀಗಾಗಿ ಹೆರಿಗೆಯೇನೋ ಸುಲಭವಾಗಿ ಆಯಿತು. ಆದರೆ ಆಕೆಯ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇದನ್ನರಿತ ವೈದ್ಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಆದರೆ ಕುಗ್ರಾಮದಲ್ಲಿ ಆಕೆಯನ್ನು ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಆಕೆಯನ್ನು ಹೊತ್ತೊಯ್ಯಲು ಗ್ರಾಮಸ್ಥರು ಚಿಂತೆಗೆ ಬಿದ್ದರು.

ಹೀಗಾಗಿ ವೈದ್ಯರೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆ ಮಹಿಳೆಯ ಪತಿ, ಮತ್ತೆ ಕೆಲವರ ಜೊತೆಗೂಡಿ ರೋಗಿಯನ್ನು ಮಂಚದ ಮೇಲೆ ಮಲಗಿಸಿ ಸುಮಾರು 8 ಕಿ.ಮೀ ದೂರ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದರು. ಕೂಡಲೇ ಚಿಕಿತ್ಸೆ ಲಭಿಸಿದ್ದರಿಂದ ಈಗ ತಾಯಿ ಮಗು ಆರೋಗ್ಯವಾಗಿದ್ದಾರೆ.